ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
‘ಎಕ್ಸ್’ನಲ್ಲಿ ಕಾಂಗ್ರೆಸ್‌ನ ಅಧಿಕೃತ ಖಾತೆಯಲ್ಲಿ ಬಂದಿರುವ ವಿಷಯಗಳು ಮತ್ತು ಪೋಸ್ಟ್‌ಗಳ ಬಗ್ಗೆ ತಿಳಿದು ಮತ್ತು ನೋಡಿ ನಮ್ಮ ಕಕ್ಷಿದಾರರಿಗೆ ಆಘಾತವಾಗಿದೆ ಎಂದು ಗಡ್ಕರಿ ಅವರ ವಕೀಲ ಬಲೇಂದು ಶೇಖರ್ ಹೇಳಿದ್ದಾರೆ.
“ಖರ್ಗೆ ಮತ್ತು ರಮೇಶ್ ಅವರು ಉದ್ದೇಶಪೂರ್ವಕವಾಗಿ ಗಡ್ಕರಿಯವರು ‘ದಿ ಲಾಲನ್‌ಟಾಪ್’ ವೆಬ್‌ಪೋರ್ಟಲ್‌ಗೆ ನೀಡಿದ ಸಂದರ್ಶನದ 19 ಸೆಕೆಂಡ್‌ಗಳ ವೀಡಿಯೊ ತುಣುಕನ್ನು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ. ಅವರ ಮಾತಿನ ಸಂದರ್ಭೋಚಿತ ಉದ್ದೇಶ ಮತ್ತು ಆ ಮಾತಿನ ಅರ್ಥವನ್ನು ಮರೆಮಾಚಿದ್ದಾರೆ” ಎಂದು ವಕೀಲರು ಹೇಳಿದ್ದಾರೆ.
“ಸಾರ್ವಜನಿಕರ ದೃಷ್ಟಿಯಲ್ಲಿ ಗಡ್ಕರಿ ಅವರ ಕುರಿತು ಗೊಂದಲ, ಅಪಖ್ಯಾತಿ ಸೃಷ್ಟಿಸುವ ಏಕೈಕ ಉದ್ದೇಶ ಮತ್ತು ದುರುದ್ದೇಶದಿಂದ ಈ ರೀತಿ ಮಾಡಲಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಗಳಿಸಲು ಸಜ್ಜಾಗಿರುವ ಬಿಜೆಪಿ ಒಗ್ಗಟ್ಟಿನಲ್ಲಿ ಬಿರುಕುಗಳನ್ನು ಸೃಷ್ಟಿಸುವ ವ್ಯರ್ಥ ಪ್ರಯತ್ನ ಮಾಡಲಾಗಿದೆ” ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.
ಆಯ್ದ ಹಿಂದಿ ಶೀರ್ಷಿಕೆಯೊಂದಿಗೆ ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಆ ತುಣಕನ್ನು ಹಂಚಿಕೊಳ್ಳಲಾಗಿದೆ: “ಆಜ್ ಗಾಂವ್, ಮಜ್ದೂರ್ ಔರ್ ಕಿಸಾನ್ ದುಖೀ ಹೈ. ಗಾಂವ್ ಮೇ ಅಚ್ಚೆ ರಸ್ತಾ ನಹೀ ಹೈ, ಪೀನೆ ಕೆ ಲಿಯೇ ಶುದ್ಧ್ ಪಾನಿ ನಹೀ ಹೈ, ಅಚ್ಚೆ ಆಸ್ಪತಲ್ ನಹೀ ಹೈ, ಅಚ್ಚೆ ಸ್ಕೂಲ್ಸ್ ನಹೀ ಹೈ (ಗ್ರಾಮಗಳು, ಕಾರ್ಮಿಕರು ಮತ್ತು ರೈತರು ಇಂದು ಅತೃಪ್ತರಾಗಿದ್ದಾರೆ. ಹಳ್ಳಿಗಳಿಗೆ ರಸ್ತೆಗಳಿಲ್ಲ, ಕುಡಿಯುವ ನೀರು, ಒಳ್ಳೆಯ ಆಸ್ಪತ್ರೆಗಳು ಮತ್ತು ಶಾಲೆಗಳಿಲ್ಲ) – ಮೋದಿ ಸರ್ಕಾರದ ಮಂತ್ರಿ ನಿತಿನ್ ಗಡ್ಕರಿ” ಎಂದು ಕಾಂಗ್ರೆಸ್ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
“ಖರ್ಗೆ ಮತ್ತು ರಮೇಶ್ ಅವರು ಗಡ್ಕರಿಯವರ ಸಂದರ್ಶನದ ಸಂಪೂರ್ಣ ವಿಷಯಗಳ ಬಗ್ಗೆ ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ವೀಡಿಯೊದ ಸಣ್ಣ ತುಣುಕನ್ನು ಪೋಸ್ಟ್ ಮಾಡಿ ಗಡ್ಕರಿ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸಲಾಗಿದೆ. ಸಂದರ್ಶನದ ಸಂದರ್ಭದಲ್ಲಿ ಅವರು ಮಾತನಾಡಿದ್ದ ಮಾತಿನ ಅರ್ಥವನ್ನು ಮರೆಮಾಚಿದ್ದಾರೆ” ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
“ಈ ನೋಟಿಸ್‌ನ ಮೂಲಕ ನಿಮ್ಮ ‘ಎಕ್ಸ್’ ಖಾತೆಯಿಂದ ಗಡ್ಕರಿ ವಿರುದ್ಧದ ಪೋಸ್ಟ್‌ಅನ್ನು ತೆಗೆದುಹಾಕಲು/ಅಳಿಸುವಂತೆ ನಿಮಗೆ ಸೂಚನೆ ನೀಡುತ್ತಿದ್ದೇವೆ. ನೋಟಿಸ್‌ಅನ್ನು ಸ್ವೀಕರಿಸಿದ ಮೂರು ದಿನಗಳ ಒಳಗೆ ನಮ್ಮ ಕಕ್ಷಿದಾರರಿಗೆ ಲಿಖಿತವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಾರೆ, ಮುಂದಿನ ಕ್ರಮ ಜರುಗಿಸದೆ ಬೇರೆ ದಾರಿ ಇಲ್ಲ” ಎಂದು ಗಡ್ಕರಿ ಪರ ವಕೀಲರು ಹೇಳಿದ್ದಾರೆ.