“ಗೋಡ್ಸೆಯನ್ನು ಪೂಜಿಸುವ, ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಕೆಲವು ಸಂಘಟನೆಗಳು ಇವೆ. ಅದನ್ನು ನೋಡುವಾಗ ಗಾಂಧೀವಾದ ಸೋತು ಬಿಟ್ಟಿದೆಯಾ ಅಂತ ಅನ್ನಿಸುತ್ತದೆ. ಸಾವರ್ಕರ್ ಅವರ ಫಿಲಾಸಫಿ ಕೊನೆಗೆ ತಲುಪುವುದು ಮೂಲಭೂತವಾದಕ್ಕೆ. ಮೂಲಭೂತವಾದ ನಮ್ಮ ದೇಶದ ಸಿದ್ಧಾಂತವಲ್ಲ. ಸಾವಿರಾರು ವರ್ಷಗಳಿಂದ ರಾಜ ಮಹಾರಾಜರು ಇದ್ದರೂ ಮೂಲಭೂತವಾದಿಗಳಾಗಿರಲಿಲ್ಲ. ಮೂಲಭೂತವಾದ ಯುರೋಪಿಯನ್ ಸಿದ್ಧಾಂತ. ಗಾಂಧಿ ಸಾಂಪ್ರದಾಯವಾದಿ ಅಷ್ಟೇ ಅಲ್ಲ, ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ಎಲ್ಲರನ್ನೂ ಸೇರಿಸಿಕೊಳ್ಳಬೇಕು, ಚರ್ಚೆಯಾಗಬೇಕು ಎಂದು ಬಯಸಿದ್ದರು. ಹಾಗಾಗಿ ಗೋಡ್ಸೆ ಮನಸ್ಥಿತಿಗೆ ಗಾಂಧಿ ಸಿದ್ಧಾಂತ, ಚಿಂತನೆಯೇ ಉತ್ತರ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬುಧವಾರ ಜಾಗೃತ ಕರ್ನಾಟಕ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಹೊರತಂದಿರುವ ಧೀರೇಂದ್ರ ಕೆ. ಝಾ ಅವರ Gandhis Assassin ಕೃತಿಯ ಕನ್ನಡಾನುವಾದ ಗಾಂಧಿ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ ಪುಸ್ತಕ (ಕನ್ನಡ ಅನುವಾದ ಪ್ರೊ ಎ ನಾರಾಯಣ ಮತ್ತು ಮನೋಜ್‌ಕುಮಾರ್ ಗುದ್ದಿ) ಬಿಡುಗಡೆ ಮಾಡಿ ಮಾತನಾಡಿದರು.
“ಸಾವರ್ಕರ್ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದಿದ್ದರು. ಆದರೆ ಅದು ಧಾರ್ಮಿಕವಾಗಿಯಲ್ಲ, ಸಾಂಸ್ಕೃತಿಕವಾಗಿ. ಅಂದ್ರೆ ಹಿಂದೂಗಳ ಪ್ರಾಬಲ್ಯವೇ ಇರಬೇಕು. ಉಳಿದವರೆಲ್ಲರೂ ಎರಡನೇ ದರ್ಜೆಯ ವ್ಯಕ್ತಿಗಳಾಗಿ ನಮ್ಮ ಅಧೀನದಲ್ಲಿಯೇ ಇರಬೇಕು ಎಂಬ ಘನ ಉದ್ದೇಶ. ಅದಕ್ಕೆ ಏನು ಬೇಕಾದರೂ ಮಾಡಲು ರೆಡಿ. ಹಿಂದೂ ರಾಷ್ಟ್ರ ಮಾಡುವ ಉದ್ದೇಶದಿಂದ ಎಂತಹ ಪಾಪ ಕೃತ್ಯಗಳನ್ನಾದರೂ ಮಾಡಬಹುದು. ಎಲ್ಲೋ ಒಂದು ಕಡೆ ಘನ ಉದ್ದೇಶಕ್ಕಾಗಿ, ತ್ಯಾಗ ಮಾಡುತ್ತಿದ್ದೇವೆ ಎಂಬುದು ಅವರ ಭಾವನೆ. ಗೋಡ್ಸೆಗೆ ಕೂಡಾ ಅದೇ ಚಿಂತನೆ ಇತ್ತು. ಅವನ ತಯಾರಿ ಹೇಗಿತ್ತು ಅಂದ್ರೆ ಗಾಂಧಿ ಕೊಲೆ ಮಾಡಿ ದೇಶ ಉಳಿಸುತ್ತಿದ್ದೇನೆ. ಹಿಂದೂ ರಾಷ್ಟ್ರ ಕಟ್ಟಲು ನನ್ನ ತ್ಯಾಗ ಎಂದುಕೊಂಡಿದ್ದ” ಎಂದರು.
“ಈಗಲೂ ಎಲ್ಲಾ ಕಡೆ ಅದೇ ನಡೆಯುತ್ತಿದೆ. ಹಿಂದೂ ರಾಷ್ಟ್ರ ಮಾಡಲು ಯಾವ ಹೀನ ಕೃತ್ಯ ಮಾಡಲೂ ರೆಡಿ ಇದ್ದಾರೆ. ಗೋದ್ರಾ ಹತ್ಯಾಕಾಂಡ ನೋಡಿದ್ದೇವೆ. ಅನೇಕ ಗೋರಕ್ಷಕರು ಮಾಡುವ ಹಿಂಸೆ ನೋಡುತ್ತಿದ್ದೇವೆ. ಯಾಕಷ್ಟು ಧೈರ್ಯದಿಂದ ಮಾಡುತ್ತಿದ್ದಾರೆ, ಅವರಿಗೆ ಅದು ತಪ್ಪು ಅಂತ ಯಾಕೆ ಅನ್ನಿಸುವುದಿಲ್ಲ ಎಂದರೆ, ಅವರ ಯೋಚನೆ ಏನಂದ್ರೆ, ದೇಶಕ್ಕಾಗಿ- ಹಿಂದೂ ರಾಷ್ಟ್ರಕ್ಕಾಗಿ, ಒಂದು ಘನ ಉದ್ದೇಶಕ್ಕಾಗಿ ದೇಶಸೇವೆ ಮಾಡುತ್ತಿದ್ದೇವೆ ಎಂದುಕೊಂಡಿದ್ದಾರೆ. ಈ ರೀತಿ ಮಾಡಲು ಮಾನಸಿಕವಾಗಿ ಅವರನ್ನು ತಯಾರು ಮಾಡುತ್ತಿರುವುದು ಎಲ್ಲದಕ್ಕೂ ಮೂಲ ಕಾರಣವಾಗುತ್ತದೆ. ಅದು ರಾಜಕೀಯವಾಗಿಯೂ ಇರಬಹುದು” ಎಂದರು.
“ಕಾಂಗ್ರೆಸ್ ಪಕ್ಷವನ್ನೇ ಉದಾಹರಣೆಗೆ ತೆಗೆದುಕೊಂಡರೆ, ನಮಗೆಲ್ಲ ಸಿಖ್ ಗಲಭೆ ಬಗ್ಗೆ ಗಿಲ್ಟ್ ಇದೆ. ತಪ್ಪು ಮಾಡಿದ ಭಾವನೆ ಇರುತ್ತದೆ. ನಮ್ಮ ಸರ್ಕಾರ, ಮುಖಂಡರು ಸರಿ ಮಾಡಿಲ್ಲ ಅನ್ನಿಸುತ್ತದೆ. ಆದರೆ ಮೂಲಭೂತವಾದಿಗಳಿಗೆ ಹಾಗಿಲ್ಲ, ನಮ್ಮ ಉದ್ದೇಶ ಸಫಲವಾದರೆ ಸಾಕು. ಭ್ರಷ್ಟಾಚಾರ ಇರಬಹುದು, ಸರ್ಕಾರಗಳನ್ನು ಬೀಳಿಸುವುದು, ಆಪರೇಷನ್ ಕಮಲ, ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಇರಬಹುದು, ಅದೆಲ್ಲದಕ್ಕೂ ಅವರಿಗೆ ಕಾರಣ ಇರುತ್ತದೆ. ಅದು ಏನೆಂದರೆ ‘ನಾವು ಹಿಂದೂ ರಾಷ್ಟ್ರ ಮಾಡುವುದಕ್ಕೆ ಹೀಗೆ ಮಾಡಲೇ ಬೇಕಾಗುತ್ತದೆ. ಚುನಾವಣೆಗಳನ್ನು ಗೆಲ್ಲೇಬೇಕಾಗುತ್ತದೆ. ಸರ್ಕಾರ ಹೇಗಾದರೂ ರಚನೆ ಮಾಡಲೇಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ಆಗಿರುವ ಅನ್ಯಾಯ ಸರಿ ಮಾಡಲು ಇದೆಲ್ಲ ಮಾಡಲೇಬೇಕು’ ಎಂಬುದು. ಅಂತಹ ಮನಸ್ಥಿತಿಯನ್ನು ಮೂಲಭೂತವಾದ ಸಿದ್ದಾಂತ ಕೊಡುತ್ತದೆ” ಎಂದು ವಿಶ್ಲೇಷಣೆ ಮಾಡಿದರು.
“ಎಲ್ಲವೂ ದ್ವೇಷದ ಸಿದ್ದಾಂತದ ಮೇಲೆ ನಿಂತಿದೆ. ಎಲ್ಲದಕ್ಕೂ ಮುಸ್ಲೀಮರು ಕಾರಣ ಅನ್ನೋದು. ಈ ಯೋಚನೆಯ ಜೊತೆ ಇರುವವರು ಅವರು ಏನೇ ಮಾಡಿದರೂ ಒಪ್ಪುತ್ತಾರೆ. ವಿರೋಧಿಸುವವರನ್ನು ಕೇವಲ ವಿರೋಧಿಗಳು ಎಂದು ನೋಡುತ್ತಿಲ್ಲ, ಶತ್ರುಗಳ ತರ ಕಾಣುತ್ತಾರೆ. ಅವರನ್ನು ಮುಗಿಸಬೇಕು ಅಂತಾರೆ. ದೇಶದ್ರೋಹಿಗಳು ಅಂತಾರೆ, ಪಾಕಿಸ್ತಾನಿಗಳು ಅಂತಾರೆ. ನನಗೂ ಅರ್ಧ ಪಾಕಿಸ್ತಾನಿ ಎಂದು ಹೇಳಿಬಿಟ್ಟಿದ್ದಾರೆ. ಹಾಗೆ ಹೇಳಿದರೆ ಅದರ ಅರ್ಥ ಏನು ನೀನು ಈ ದೇಶದ ಜೊತೆಗಿಲ್ಲ, ನಿನ್ನ ರಾಷ್ಟ್ರಪ್ರೇಮದ ಬಗ್ಗೆ ಅನುಮಾನವಿದೆ ಎಂದರ್ಥ. ಹೀಗಾಗಿ ದೇಶದ ಶತ್ರುಗಳು ಎಂದು ಬಿಂಬಿಸುತ್ತಾರೆ. ಕಳೆದ ಚುನಾವಣೆ ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಮೊನ್ನೆಯ ಚುನಾವಣೆಯಲ್ಲಿ ಬೇರೆ ತರಹದ ಫಲಿತಾಂಶ ಬಂದಿದ್ದಿದ್ರೆ ಈ ತರಹದ ಕಾರ್ಯಕ್ರಮ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಇಂತಹ ಚರ್ಚೆ, ಸಭೆಗಳು ಇನ್ನೂ ಹೆಚ್ಚು ಹೆಚ್ಚು ಆಗಬೇಕು. ಕೌಂಟರ್ ನರೇಟಿವ್ ಕಟ್ಟಬೇಕು. ಅದು ಈಗಲೇ ಶುರುವಾಗಿದೆ ಎಂಬುದಕ್ಕೆ ಕಳೆದ ಚುನಾವಣೆ ಸಾಕ್ಷಿ” ಎಂದರು.