- ‘ಮೋದಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕನಿಷ್ಠ 500 ರೂ. ಇಳಿಸಬೇಕಿತ್ತು’
- ‘ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಉಚಿತ ಯೋಜನೆ ಘೋಷಣೆಯಾಗಬಹುದು’
ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಗಿಮಿಕ್ ಮಾಡಲು ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ದರ ಇಳಿಸಿದೆ. ಡಿಸೆಂಬರ್ ವೇಳೆಗೆ ಲೋಕಸಭಾ ಚುನಾವಣೆ ನಡೆಯುವ ಸಂಭವವಿದೆ. ಆದ್ದರಿಂದ ದರ ಇಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವರ್ಷದ ಕೊನೆಗೆ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಷ್ಟರೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ದರಗಳನ್ನು ಇಳಿಸಬಹುದು. ಹಾಗೆಯೇ ಕೆಲವು ಉಚಿತ ಯೋಜನೆ ಘೋಷಣೆ ಆಗಬಹುದು” ಎಂದರು.
“ಸಿಲಿಂಡರ್ ದರವನ್ನು ಈಗಾಗಲೇ ಕೇಂದ್ರ ಸರ್ಕಾರ ಸಾವಿರ ರೂಪಾಯಿ ಹೆಚ್ಚಿಸಿದೆ. ಈಗ ಕೇವಲ 200 ರೂಪಾಯಿ ಇಳಿಸಿದರೆ ಏನು ಉಪಯೋಗ? ಮೋದಿ ಅವರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕನಿಷ್ಠ 500 ರೂ. ಇಳಿಸಬೇಕಿತ್ತು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
“ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಅದರಂತೆ ಈಗಾಗಲೇ ಮೂರು ಯೋಜನೆ ಜಾರಿಯಾಗಿದ್ದು, ಇಂದು ನಾಲ್ಕನೇ ಯೋಜನೆ ಗೃಹಲಕ್ಷ್ಮೀಗೆ ಚಾಲನೆ ಸಿಕ್ಕಿದೆ. ಈ ಗ್ಯಾರಂಟಿ ಯೋಜನೆಗಳಿಂದ ಬಡವರು, ದೀನ ದಲಿತರು, ಮಧ್ಯಮ ವರ್ಗ ಸೇರಿ ಜನಸಾಮಾನ್ಯರಿಗೆ ಅನುಕೂಲವಾಗಿದೆ” ಎಂದರು.
“ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನದಿಂದ ಹತಾಶೆಗೊಂಡಿರುವ ಬಿಜೆಪಿ, ಇನ್ನಿಲ್ಲದ ಆರೋಪಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧೋಗತಿಗೆ ಹೋಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರ ಸೇರಿ ರಾಜ್ಯದಲ್ಲಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.