ಗಾಝಾದಲ್ಲಿ ‘ಅಲ್‌ಝಝೀರಾ’ ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ. ಇಸ್ರೇಲ್ ಕೃತ್ಯವನ್ನು ‘ನರಮೇಧ’/’ಜನಾಂಗೀಯ ಹತ್ಯೆ’ ಎಂದು ಟೀಕಿಸಿದ್ದಾರೆ. ಪ್ರಿಯಾಂಕಾ ಅವರ ಆಕ್ರೋಶವು ಇಸ್ರೇಲ್ ರಾಯಭಾರ ಕಚೇರಿ ಮತ್ತು ಕಾಂಗ್ರೆಸ್‌ನ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಿಯಾಂಕಾ ಟೀಕೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಾಯಭಾರಿ, ‘ಪ್ರಿಯಾಂಕಾ ಹೇಳಿಕೆಯು ನಾಚಿಕೆಗೇಡಿನ ವಂಚನೆ’ ಎಂದು ಕರೆದಿದೆ. ಆದರೆ, ವಿದೇಶಾಂಗ ಸಚಿವಾಲಯ ಮೌನಕ್ಕೆ ಜಾರಿದ್ದು, ಮೂಕಪ್ರೇಕ್ಷಕನಾಗಿದೆ.
ಇಸ್ರೇಲ್ ಅನ್ನು ಗಾಜಾದಲ್ಲಿ “ನರಮೇಧ” ಎಸಗುತ್ತಿದೆ ಮತ್ತು ಗಾಜಾ ಜನರನ್ನು ಹಸಿವಿನಿಂದ ಸಾಯಿಸುತ್ತಿದೆ ಎಂದು ಟೀಕಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಎಕ್ಸ್ ಪೋಸ್ಟ್ ‘ನಾಚಿಕೆಗೇಡಿನ ವಂಚನೆ’ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ಹೇಳಿದ್ದಾರೆ, ಇದನ್ನು ಹಳೆಯ ಪಕ್ಷವು “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಕರೆದಿದೆ.
ಪತ್ರಕರ್ತನ ಹತ್ಯೆಯನ್ನು ಖಂಡಿಸಿ, ಮಂಗಳವಾರ (ಆಗಸ್ಟ್ 12) ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕಾ, “ಇಸ್ರೇಲ್ ಸರ್ಕಾರವು ನರಮೇಧವನ್ನು ನಡೆಸುತ್ತಿದೆ. ಗಾಜಾ ಪಟ್ಟಿಯಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿರುವ ಇಸ್ರೇಲ್, 18,430 ಮಕ್ಕಳು ಸೇರಿದಂತೆ 60,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ” ಎಂದು ಹೇಳಿದ್ದಾರೆ.
“ಇಸ್ರೇಲ್ ದಾಳಿಯು ನೂರಾರು ಮಕ್ಕಳನ್ನು ಹಸಿವಿನಿಂದ ಕೊಂದಿದೆ. ಲಕ್ಷಾಂತರ ಜನರನ್ನು ಹಸಿವಿನಿಂದ ಕೊಲ್ಲುವ ಬೆದರಿಕೆ ಹಾಕುತ್ತಿದೆ. ಭಾರತ ಸರ್ಕಾರದ ಮೌನವು ‘ನಾಚಿಕೆಗೇಡಿನ’ ಸಂಗತಿಯಾಗಿದೆ. ಮೌನ ಮತ್ತು ನಿಷ್ಕ್ರಿಯತೆಯಿಂದ ಈ ಅಪರಾಧಗಳನ್ನು ಖಂಡಿಸದೇ ಇರುವುದು ಕೂಡ ಸ್ವತಃ ಅಪರಾಧವೇ ಆಗಿದೆ” ಎಂದ ಪ್ರಿಯಾಂಕಾ ಟೀಕಿಸಿದ್ದಾರೆ.
ಪ್ರಿಯಾಂಕಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿರುವ ಇಸ್ರೇಲ್‌ನ ರಾಯಭಾರಿ ರುವೆನ್ ಅಜರ್, “ನಿಮ್ಮ ವಂಚನೆ ನಾಚಿಕೆಗೇಡಿನ ಸಂಗತಿ” ಎಂದಿದ್ದಾರೆ.
“ಹಮಾಸ್‌ನ ನಾಗರಿಕರ ಹಿಂದೆ ಅಡಗಿರುವ ಘೋರ ದಾಳಿಕೋರರು ಸ್ಥಳಾಂತರಕ್ಕೆ ಎದುರು ನೋಡುತ್ತಿರುವ ಅಥವಾ ಸಹಾಯಕ್ಕಾಗಿ ಪ್ರಯತ್ನಿಸುವ ಜನರ ಮೇಲೆ ಗುಂಡು ಹಾರಿಸಿದ್ದಾರೆ. ಅವರ ದಾಳಿಗಳು ಗಾಜಾದಲ್ಲಿ ಮಾನವ ಜೀವಗಳ ಭೀಕರ ನಷ್ಟಕ್ಕೆ ಕಾರಣವಾಗಿದೆ” ಎಂದು ಹಮಾಸ್ ಹೋರಾಟಗಾರರನ್ನೇ ಅಜರ್ ಹೊಣೆ ಮಾಡಿದ್ದಾರೆ.
“ಇಸ್ರೇಲ್ ಪ್ರದೇಶಕ್ಕೆ ಬರುತ್ತಿದ್ದ ಎರಡು ಮಿಲಿಯನ್ ಟನ್ ಆಹಾರದ ನೆರವನ್ನು ವಶಕ್ಕೆ ಪಡೆಯಲು ಹಮಾಸ್ ಮಾಡದಿ ಪ್ರಯತ್ನದಿಂದಾಗಿ, ಅವರಲ್ಲಿ ಹಸಿವು ಉಂಟಾಗಿದೆ. ಕಳೆದ 50 ವರ್ಷಗಳಲ್ಲಿ ಗಾಜಾ ಜನಸಂಖ್ಯೆಯು 450% ರಷ್ಟು ಹೆಚ್ಚಾಗಿದೆ. ಅಲ್ಲಿ ನರಮೇಧ ನಡೆದಿಲ್ಲ. ಹಮಾಸ್ ಹೇಳುವ ಸಂಖ್ಯೆಯನ್ನು ಪಗಣಿಸಬೇಡಿ” ಎಂದಿದ್ದಾರೆ.
ಅಜರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸಿದೆ ಎಂದು ಪಕ್ಷದ ಸಂವಹನ ಉಸ್ತುವಾರಿ ಮತ್ತು ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. “ಮೋದಿ ಸರ್ಕಾರವು ರಾಯಭಾರಿಯ ಪ್ರತಿಕ್ರಿಯೆಗೆ ಗಂಭೀರ ಕ್ರಮ ಅಥವಾ ಆಕ್ಷೇಪಣೆಯನ್ನು ತೆಗೆದುಕೊಳ್ಳಬಹುದೆಂದು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಆದರೂ, ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅಜರ್ ಹೇಳಿಕೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇಸ್ರೇಲ್‌ನ ಕ್ರಮಗಳನ್ನು ನರಮೇಧವೇ ಆಗಿದೆ” ಎಂದು ರಮೇಶ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ಅಧ್ಯಕ್ಷ ಪವನ್ ಖೇರಾ, “ವಿಶ್ವಾದ್ಯಂತ ನರಮೇಧದ ಆರೋಪ ಹೊತ್ತಿರುವ ಇಸ್ರೇಲ್‌ನ ರಾಯಭಾರಿಯೊಬ್ಬರು ಭಾರತೀಯ ಸಂಸತ್ತಿನ ಹಾಲಿ ಸದಸ್ಯರನ್ನು ಗುರಿಯಾಗಿಸಿಕೊಂಡು ಟೀಕಿಸುವುದು ಅಸಹನೀಯ. ಇದು ಭಾರತೀಯ ಪ್ರಜಾಪ್ರಭುತ್ವದ ಘನತೆಗೆ ನೇರ ಅವಮಾನ” ಎಂದಿದ್ದಾರೆ.
2023ರ ಅಕ್ಟೋಬರ್ 7ರಂದು ಆರಂಭವಾದ ಹಮಾಸ್-ಇಸ್ರೇಲ್ ಸಂಘರ್ಷದಲ್ಲಿ ಈವರೆಗೆ ಇಸ್ರೇಲ್ ಸುಮಾರು 61,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರನ್ನು ಕೊಂದಿದೆ.
ವಿಶ್ವಸಂಸ್ಥೆಯ ವಿಶೇಷ ಸಮಿತಿ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ವಿದ್ವಾಂಸರು ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣ, ಕ್ರೌರ್ಯವನ್ನು ನರಮೇಧಕ್ಕೆ ಹೋಲಿಸಿದ್ದಾರೆ.
ಅಜರ್ ಅವರ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಭಾರತ, ಕಳೆದ ತಿಂಗಳ ಕೊನೆಯಲ್ಲಿ ಗಾಜಾದಲ್ಲಿ ‘ಕದನ ವಿರಾಮವನ್ನು ಜಾರಿಗೆ ತರಬೇಕು’ ಎಂದು ಹೇಳಿತು. ಗಾಜಾದ ಜನರು “ಆಹಾರ ಮತ್ತು ಇಂಧನದ ತೀವ್ರ ಕೊರತೆ, ಅಸಮರ್ಪಕ ವೈದ್ಯಕೀಯ ಸೇವೆಗಳು ಮತ್ತು ಶಿಕ್ಷಣದ ಪ್ರವೇಶದ ಕೊರತೆಯಿಂದ ಪ್ರತಿದಿನ ಬಳಲುತ್ತಿದ್ದಾರೆ” ಎಂದು ಸರ್ಕಾರವು ಗಮನಸೆಳೆದಿತ್ತು.