- ‘ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಅರಿವಿದೆ, ಪರಿಹರಿಸುತ್ತೇವೆ’
- ಚಿತ್ರದುರ್ಗದಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು
ಬರ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ. ಶೀಘ್ರವೇ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅವುಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ವಾಮಿ ತಿಳಿಸಿದರು.
ಚಿತ್ರದುರ್ಗದಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರೈತರು, ಎಫ್ ಪಿ.ಒ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.
“ರೈತರಿಗೆ ಮೊದಲು ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ವಿತರಣೆ ಯೋಜನೆ ಜಾರಿಗೊಳಿಸಿದ್ದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ ಇದನ್ನು 5 ಲಕ್ಷ ರೂ. ಗಳಿಗೆ ವಿಸ್ತರಿಸಿದ್ದಾರೆ. 15 ಲಕ್ಷ ರೂ. ವರಗೆ ಶೇ.3 ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸಿತ್ತು. ಇದೀಗ ಮತ್ತೆ ನಾವು ನೀಡಿದ್ದ ಆಶ್ವಾಸನೆಗಳಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ ಹತ್ತಿರವಾದಂತೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದರ ರೂ. 200 ಇಳಿಸಿದ ಸರ್ಕಾರ
ರಾಜ್ಯಾದ್ಯಂತ ಬರ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸಿದರು. ಚಿತ್ರದುರ್ಗ ತಾಲ್ಲೂಕಿಗೆ ಮೊದಲು ಭೇಟಿ ಮಾಡಿದ ಸಚಿವರು ದೊಡ್ಡ ಸಿದ್ಧವನಹಳ್ಳಿ, ಲಕ್ಷಿಸಾಗರ ಗ್ರಾಮಗಳಲ್ಲಿ ರೈತರ ಅಹವಾಲು, ಅಭಿಪ್ರಾಯ ಆಲಿಸಿದರು. ಬರ ಪೀಡಿತ ಜೋಳ, ರಾಗಿ ಬೆಳೆ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಸಾವಯವ ಕೃಷಿ, ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆಯನ್ನು ಕೃಷಿ ಸಚಿವರು ಪರಿಶೀಲಿಸಿದರು.
ನಂತರ ಕೃಷಿ ಸಚಿವರು ಚಳ್ಳಕೆರೆ ತಾಲೂಕಿನ, ಜುಂಜರಗುಂಟೆ ವ್ಯಾಪ್ತಿಯಲ್ಲಿ ತಿಮ್ಮಣ್ಣನಹಳ್ಳಿ ಶೇಂಗಾ ಬೆಳೆ ಹಾನಿ ಪ್ರದೇಶ, ಚೋಳೂರಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾದ ನಂತರ ಆಗಿರುವ ಬೆಳೆ ಪರಿವರ್ತನೆ ಪ್ರದೇಶ ವೀಕ್ಷಣೆ ಮಾಡಿ ರೈತರೊಂದಿಗೆ ಚರ್ಚೆ ನಡೆಸಿದರು.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ರಘು ಮೂರ್ತಿ, ವಿರೇಂದ್ರ ಪಪ್ಪಿ, ಕೃಷಿ ಇಲಾಖೆ ಆಯುಕ್ತ ಬಿ ವೈ ಪಾಟೀಲ್, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಕೃಷಿ ನಿರ್ದೇಶಕ ಡಾ ಜಿ ಟಿ ಪುತ್ರ ಮತ್ತಿತರರು ಹಾಜರಿದ್ದರು.