ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಲಿರುವ ಅಧಿಸೂಚನೆ ಪ್ರಕಾರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಹೊಸ ವರ್ಷದ ಕೊಡುಗೆ ನೀಡಿದೆ.
ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ನೀಡಿ, ಒಂದು ಬಾರಿಗೆ ಮಾತ್ರ ಅನ್ವಯಿಸಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಸಭೆಯ ನಂತರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಈ ಮಾಹಿತಿ ಹಂಚಿಕೊಂಡರು.
“2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ಸಿ ಹೊರಡಿಸಲಿರುವ ಅಧಿಸೂಚನೆಯಡಿ ಅರ್ಹ ಅಭ್ಯರ್ಥಿಗಳು ಒಂದು ಬಾರಿಗೆ ಮಾತ್ರ ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕೊರೋನಾ ಸಾಂಕ್ರಾಮಿಕ ಪಿಡುಗು ಹಾಗೂ ನೇಮಕ ವಿಳಂಬದಿಂದ ಅರ್ಹ ಅಭ್ಯರ್ಥಿಗಳು ವಯೋಮಿತಿ ಕಾರಣಕ್ಕೆ ವಂಚಿತರಾಗಲಿದ್ದಾರೆ ಎಂಬ ಆತಂಕವನ್ನು ಸರ್ಕಾರ ಕೊನೆಗಾಣಿಸಿದೆ. ಸಾಮಾನ್ಯ ವರ್ಗ- 35 ರಿಂದ 38, ಪ್ರವರ್ಗ 2ಎ, 2ಬಿ, 3ಎ, 3ಬಿ- 38 ರಿಂದ 41, ಎಸ್ಟಿ, ಪ್ರವರ್ಗ-1: 40 ರಿಂದ 43 ವರ್ಷಕ್ಕೆ ವಯೋಮಿತಿ ಏರಿಕೆ ಮಾಡಿದೆ” ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ಕನ್ನಡ ಭಾಷಾ ನಾಮಫಲಕ
ನಾಮಫಲಕದಲ್ಲಿ ಶೇ.50 ಕನ್ನಡ, ಉಳಿದ ಶೇ.50 ಅನ್ಯಭಾಷೆಗೆ ಅವಕಾಶ ಕಲ್ಪಿಸಿದ್ದ ನಿಯಮಕ್ಕೆ ತಿದ್ದುಪಡಿ ತಂದು, ಶೇ.60ರಷ್ಟು ಕನ್ನಡ, ಮಿಕ್ಕ ಶೇ.40ರಷ್ಟು ಅನ್ಯ ಭಾಷೆ ಬಳಕೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಸಂಬಂಧಿಸಿದ ನಿಯಮಕ್ಕೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024ಕ್ಕೆ ಅನುಮೋದನೆ ನೀಡುವ ಈ ಮೂಲಕ ಕನ್ನಡ ಪರ ಹೋರಾಟಗಾರರನ್ನು ಸಂತೈಸಲು, ನಾಡು-ನುಡಿಗೆ ಕಟಿಬದ್ಧವೆಂಬ ಸಂದೇಶವನ್ನು ಸರ್ಕಾರ ಸಾರಿದೆ.
ಇದನ್ನು ಓದಿದ್ದೀರಾ? ಸಾರಿಗೆ ನಿಗಮಗಳ ₹581 ಕೋಟಿ ಮೋಟಾರು ವಾಹನ ತೆರಿಗೆ ಬಾಕಿ: ವಿನಾಯಿತಿ ನೀಡಿದ ಸಚಿವ ಸಂಪುಟ ಸಭೆ
ವನ್ಯಪ್ರಾಣಿ ಜನ್ಯ ಉತ್ಪನ್ನ: ಹಿಂದಿರುಗಿಸುವ ಗಡುವು ವಿಸ್ತರಣೆ
ರಾಜ್ಯಾದ್ಯಂತ ತೀವ್ರ ವಿವಾದ, ಚರ್ಚೆಗೆ ಗ್ರಾಸವಾಗಿದ್ದ ವನ್ಯಪ್ರಾಣಿ ಜನ್ಯ ಉತ್ಪನ್ನಗಳ ವಿಷಯದಲ್ಲಿ ಅಂತಿಮ ತೆರೆ ಎಳೆಯಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ಉತ್ಪನ್ನಗಳನ್ನು ಸರ್ಕಾರಕ್ಕೆ ಆದ್ಯಾರ್ಪಣೆ (ಸರೆಂಡರ್) ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಹುಲಿ ಉಗುರು, ಆನೆದಂತ ಇತ್ಯಾದಿ ವನ್ಯಜೀವಿಗಳ ಉತ್ಪನ್ನಗಳನ್ನು ತಮ್ಮ ಬಳಿ ಇಟ್ಟುಕೊಂಡವರು ಸ್ವಯಂಪ್ರೇರಿತವಾಗಿ ಸರ್ಕಾರಕ್ಕೆ ಒಪ್ಪಿಸಲು ಮತ್ತಷ್ಟು ಕಾಲಾವಕಾಶ ದೊರೆತಂತಾಗಿದೆ.