ಕೇಂದ್ರ ಸರ್ಕಾರದ ಅನ್ಯಾಯ ಪ್ರಶ್ನಿಸಿ ಫೆ.7ಕ್ಕೆ ದೆಹಲಿಯಲ್ಲಿ ಪ್ರತಿಭಟನೆ: ಡಿ ಕೆ ಶಿವಕುಮಾರ್ ಘೋಷಣೆ

Date:

Advertisements

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ಹಣ ನಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಫೆ. 7 ರಂದು ರಾಜ್ಯ ಸರಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಪ್ರತಿಭಟನೆ ಸ್ಥಳವಕಾಶದ ಬಗ್ಗೆ ಕೆಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ” ಎಂದರು.

“ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಮ್ಮ ಮೂಲಭೂತ ಹಕ್ಕು. ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಲಿರುವ ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು. ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದು ಹೇಳಿದರು.

“ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ನಿನ್ನೆ ಬಜೆಟ್ ಅನ್ನು ನಾವೆಲ್ಲ ಗಮನಿಸಿದ್ದೇವೆ. ಕೇವಲ ನಿನ್ನೆಯ ಬಜೆಟ್ ಮಾತ್ರವಲ್ಲ. ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್‌ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುದಾನ ಕೂಡ ಸರಿಯಾಗಿ ನೀಡಿಲ್ಲ

“14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯಕ್ಕೆ 4.71% ಪಾಲು ನೀಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು 3.64% ಗೆ ಇಳಿಸಲಾಗಿದೆ. ಇದರಿಂದಾಗಿ ನಮಗೆ ಐದು ವರ್ಷಕ್ಕೆ 62 ಸಾವಿರ ಕೋಟಿಯಷ್ಟು ಹಣ ಕಡಿಮೆಯಾಗಿದೆ. ಇನ್ನು ವಿವಿಧ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಘೋಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ” ಎಂದು ವಿವರಿಸಿದರು.

“ಬಿಜೆಪಿ ಸರ್ಕಾರ ಇದ್ದಾಗ ಡಬಲ್ ಇಂಜಿನ್ ಸರ್ಕಾರದಿಂದ ನಮಗೆ ಲಾಭ ಆಗಿರಬಹುದು ಎಂದು ಭಾವಿಸಿದ್ದೆವು. ಆದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದಾಗ ನಮ್ಮ ರಾಜ್ಯಕ್ಕೆ 62 ಸಾವಿರ ಕೋಟಿ ನಷ್ಟವಾಗಿದೆ. ಇದನ್ನು ಹೇಗೆ ಅರಗಿಸಿಕೊಳ್ಳುವುದು? ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಡಬಲ್ ಆಗಿದ್ದರೂ ರಾಜ್ಯದ ಪಾಲಿನ ಅನುದಾನ ಮಾತ್ರ ಹೆಚ್ಚಳವಾಗಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು-  Scroll.in ಗೆ ಅಭಿನಂದನೆ!

ಈ ಹೋರಾಟಕ್ಕೆ ದೇವೇಗೌಡರಿಗೆ ಆಹ್ವಾನ ನೀಡುತ್ತೀರಾ ಎಂದು ಕೇಳಿದಾಗ, “ಕರ್ನಾಟಕ ರಾಜ್ಯದ ಹಿತ ಕಾಯುವ ಬಗ್ಗೆ ಭಕ್ತಿ, ಭಾವನೆ ಯಾರಿಗೆಲ್ಲಾ ಇದೆಯೋ ಅವರೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಪಕ್ಷದ ಸಭೆ ವಿಚಾರವಾಗಿ ಕೇಳಿದಾಗ, “ಸಂಸತ್ ಚುನಾವಣೆ ಅಭ್ಯರ್ಥಿಗಳನ್ನು ಅಂತಿಮ ಮಾಡಬೇಕು, ನಾವು ಎಲ್ಲರ ಅಭಿಪ್ರಾಯ ಪಡೆದಿದ್ದೇವೆ. ವೀಕ್ಷಕರಿಂದ ಅಭಿಪ್ರಾಯ ಪಡೆದಿದ್ದೇವೆ. ಕಾರ್ಯಕರ್ತರಿಗೂ ಸೂಕ್ತ ನಿರ್ದೇಶನ ನೀಡಿದ್ದೇವೆ” ಎಂದು ತಿಳಿಸಿದರು.

ಆಲೋಚನೆಗಳು ಸಹಜ

ಡಿ.ಕೆ. ಸುರೇಶ್ ಅವರ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕರು ಕ್ಷಮೆಯಾಚನೆಗೆ ಆಗ್ರಹಿಸುತ್ತಿರುವ ಬಗ್ಗೆ ಕೇಳಿದಾಗ, “ನಾನು ಭಾರತೀಯ. ಹುಟ್ಟತ್ತಾ ಭಾರತೀಯನಾಗಿದ್ದೇನೆ. ಸಾಯುವಾಗಲೂ ಭಾರತೀಯನಾಗಿ ಸಾಯುತ್ತೇನೆ. ಭಾರತ ಅಖಂಡ ದೇಶ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಭಾರತವೊಂದೆ. ಬಿಜೆಪಿ ಈ ವಿಚಾರ ರಾಜಕೀಯಗೊಳಿಸುತ್ತಿದೆ. ಸಂಸದ ಸುರೇಶ್ ವರು ಬಿಜೆಪಿ ಸರ್ಕಾರದಿಂದ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿದ್ದಾರೆ. ಹೀಗೆ ಅನ್ಯಾಯ ಮುಂದುವರಿದರೆ ಮುಂದೆ ಇಂತಹ ಆಲೋಚನೆಗಳು ಬರಬಹುದು” ಎಂದು ಎಚ್ಚರಿಕೆ ನೀಡಿದರು.

“ಬಿಜೆಪಿಯವರು ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಲಾಗದೇ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ರಾಜ್ಯದ 27 ಸಂಸದರು ಒಂದು ದಿನವೂ ಪ್ರಧಾನಮಂತ್ರಿ, ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡಿಲ್ಲ. ಬೊಮ್ಮಾಯಿ ಅವರಾಗಲಿ, ಯಡಿಯೂರಪ್ಪ ಅವರಾಗಲಿ ರಾಜ್ಯದ ಬಗ್ಗೆ ತಮ್ಮ ನಾಯಕರ ಜತೆ ಮಾತನಾಡಿಲ್ಲ. ಅವರು ತಮ್ಮ ಸಮಸ್ಯೆಗಳಲ್ಲೇ ಮುಳುಗಿದ್ದಾರೆ. ಇವರ ಅವಧಿಯಲ್ಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯವಾಗಿದೆ ಎಂಬುದನ್ನು ದಾಖಲೆಗಳು ಹೇಳುತ್ತಿವೆ” ಎಂದು ಸ್ಪಷ್ಟನೆ ನೀಡಿದರು.

ಮೇಕೆದಾಟು ವಿಚಾರದಲ್ಲಿ ಎಲ್ಲಾ ಸಂಸದರು ಧ್ವನಿ ಎತ್ತಲಿ

ಮೇಕೆದಾಟು ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, “ಮೇಕೆದಾಟು ವಿಚಾರವಾಗಿ ಕರ್ನಾಟಕಕ್ಕೆ ಹೊಸ ಆಯಾಮ ಶುರುವಾಗಿದೆ. ನಿನ್ನೆ ಸಭೆಯಲ್ಲಿ ಮತಗಳನ್ನು ಹಾಕಲಾಗಿದೆ. ತಾಂತ್ರಿಕ ಸಮಿತಿಗೆ ತೀರ್ಮಾನವಾಗಿದೆ. ನಮ್ಮ ನೀರು ನಮ್ಮ ಹಕ್ಕು. ಅದನ್ನು ಬಳಸಿಕೊಂಡು ಅವರ ಪಾಲಿನ ನೀರನ್ನು ಖಂಡಿತವಾಗಿಯೂ ನೀಡುತ್ತೇವೆ. ಈ ವಿಚಾರವಾಗಿ ನಾವು ಅವರಿಗೆ ಮನದಟ್ಟು ಮಾಡುತ್ತೇವೆ. ಕೇಂದ್ರ ಸರ್ಕಾರ ಕೂಡ ಪರಿಸರ ಇಲಾಖೆ ಅನುಮತಿ ನೀಡಿ ಸಹಕಾರ ನೀಡಬೇಕಾಗುತ್ತದೆ. ಎಲ್ಲ ಸಂಸದರು ಒಟ್ಟಾಗಿ ಧ್ವನಿ ಎತ್ತಲಿ ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ದೇವೇಗೌಡರ ಸ್ಥಿತಿ ನೋಡಿದರೆ ನನಗೂ ಭಯವಾಗುತ್ತದೆ

ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಳ್ಳಬಾರದಿತ್ತು, ಅವರು ಪಕ್ಷದ ಶಾಲು ಹಾಕಿಕೊಳ್ಳಬೇಕಿತ್ತು. ನಾನು ಕೇಸರಿ ಶಾಲು ಹಾಕುವುದಿಲ್ಲ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಬಿಜೆಪಿ ವಕ್ತಾರರಾಗಿದ್ದಾರೆ. ದೇವೇಗೌಡರಿಗೆ ಇಷ್ಟು ನೋವು ತರುತ್ತಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ದೇವೇಗೌಡರ ಸಿದ್ಧಾಂತವನ್ನು ನಾನು ಕಂಡಿದ್ದೇನೆ. ಮಕ್ಕಳಿಗಾಗಿ ಅವರು ಏನೆಲ್ಲಾ ಮಾಡಬೇಕು. ನನಗೆ ವಯಸ್ಸಾದ ಮೇಲೆ ನಮ್ಮ ಮನೆಗಳಲ್ಲಿ ಯಾವೆಲ್ಲಾ ಸಮಸ್ಯೆಗಳು ಬರುತ್ತವೆಯೋ ಗೊತ್ತಿಲ್ಲ. ಇದನೆಲ್ಲಾ ನೋಡಿದರೆ ನನಗೂ ಭಯವಾಗುತ್ತದೆ. ಪರಿಸ್ಥಿತಿ ನಾವು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಬೇಕಾಗುವಂತೆ ಮಾಡುತ್ತದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ” ಎಂದು ತಿಳಿಸಿದರು.

ಕುಮಾರಸ್ವಾಮಿ ಕುಟುಂಬದವರು ಕಲ್ಲು ಹೊಡೆದಿರುವ ಪಟ್ಟಿ ನೀಡಲೇ

ಕನಕಪುರದಲ್ಲಿ ಕಲ್ಲು ಹೊಡೆಯುವವರನ್ನು ಶಾಸಕರು ಸಂಸದರನ್ನಾಗಿ ಮಾಡಿದರೆ ದೇಶ ಒಡೆಯುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕನಕಪುರದ ಜನರನ್ನು ಕೇಳಿ. ಅವರು ಅವರ ಮನೆಯವರೂ ಕಲ್ಲು ಹೊಡೆಯುತ್ತಿದ್ದರಲ್ಲ. ಅದರ ಪಟ್ಟಿ ನೀಡಲಾ? ಎಲ್ಲ ಪಟ್ಟಿ ನೀಡಲು ಕಳೆದ ಅಧಿವೇಶನದಲ್ಲಿ ಕದುಕುಳಿತಿದ್ದೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧಿಕಾರ ಹಂಚಿಕೆ ಕುರಿತು ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ: ಡಿ ಕೆ ಶಿವಕುಮಾರ್

ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ....

ವಿದ್ಯಾರ್ಥಿ ಕಣ್ಣಲ್ಲಿ ಗಾಂಧೀಜಿ ಬಯಸಿದ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆ

ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು...

ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಎಂದಿಗೂ ಆದರ್ಶಪ್ರಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಕ್ಟೋಬರ್ 2ರಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ...

Download Eedina App Android / iOS

X