ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

ಸಾಮಾನ್ಯವಾಗಿ ಸಮಾನತೆಯ ಮಾತು ಎತ್ತಿದರೆ ಟೀಕೆಗಳು ಶುರುವಾಗುತ್ತವೆ. ಒಂದು ಚಪಾತಿ ಗಂಡ, ಮತ್ತೊಂದು ಚಪಾತಿ ಹೆಂಡತಿ ಮಾಡಿದರೆ ಆಯ್ತು, ಸಮಾನತೆ ಬಂದುಬಿಡುತ್ತದೆ ಎಂಬ ಕುಹಕಗಳೂ ಕೇಳಿಬರುತ್ತವೆ. ಹಾಗಾದರೆ ನಿಜವಾದ ‘ಸಮಾನತೆ’ ಅಂದರೇನು?

ನರಿಗೂ ಕೊಕ್ಕರೆಗೂ ಸ್ನೇಹ ಬೆಳೆಯುತ್ತದೆ. ಹೀಗೇ ಮಾತುಕತೆ ನಡೀತಾ ಇರುವಾಗ ನರಿ ಕೊಕ್ಕರೆಯನ್ನು ತನ್ನ ಮನೆಗೆ ಊಟಕ್ಕೆ ಕರೆಯುತ್ತದೆ. ಕೊಕ್ಕರೆ ನರಿಯ ಮನೆಗೆ ಬಂದಾಗ ಘಮಘಮ ಪರಿಮಳ ಬರುತ್ತಿರುತ್ತದೆ. ಕೊಕ್ಕರೆ ಊಟಕ್ಕೆ ಸಿದ್ಧವಾದಾಗ, ನರಿ ಸಮತಳದ ತಟ್ಟೆಯಲ್ಲಿ ಪಾಯಸ ನೀಡುತ್ತದೆ. ಪಾಪ, ಕೊಕ್ಕರೆಗೆ ತನ್ನ ಉದ್ದ ಕೊಕ್ಕಿನಿಂದ ಆ ಪಾಯಸ ತಿನ್ನಲು ಸಾಧ್ಯವೇ ಆಗುವುದಿಲ್ಲ. ಕೊಕ್ಕರೆಗೆ ಅವಮಾನವಾಗುತ್ತದೆ, ಸಿಟ್ಟು ಬರುತ್ತದೆ. ಏನೂ ಹೇಳದೆ, ತನ್ನ ಮನೆಗೆ ನರಿಯನ್ನು ಊಟಕ್ಕೆ ಕರೆಯುತ್ತದೆ. ನರಿ ಬಂದಾಗ ಕೊಕ್ಕರೆ ಒಂದು ಉದ್ದ ಕತ್ತಿನ ಹೂಜಿಯಲ್ಲಿ ನರಿಗೆ ಊಟ ನೀಡುತ್ತದೆ. ನರಿ ತಿನ್ನಲಾರದೆ ಚಡಪಡಿಸುತ್ತದೆ. ಇದು ಪಂಚತಂತ್ರದ ಒಂದು ಕತೆ. ಸಮಾನತೆಯ ಪರಿಕಲ್ಪನೆಯನ್ನು ಅರ್ಥ ಮಾಡಿಸಲು ಈ ಕತೆಯನ್ನು ಬಳಸುವುದನ್ನು ಗಮನಿಸಿದ್ದೇನೆ. ಸರಿ, ಇಬ್ಬರಿಗೂ ತಟ್ಟೆಯಲ್ಲಿ ನೀಡಿದರೆ ಸಮಾನತೆ ಬರುತ್ತದೆಯೇ? ಅಥವಾ ಇಬ್ಬರಿಗೂ ಹೂಜಿಯಲ್ಲಿ ನೀಡಿದರೆ ಸಮಾನತೆ ಬರುತ್ತದೆಯೇ? ಇಲ್ಲವಲ್ಲ… ನರಿಗೆ ತಟ್ಟೆಯಲ್ಲೂ ಕೊಕ್ಕರೆಗೆ ಹೂಜಿಯಲ್ಲೂ ಕೊಟ್ಟರೆ ಇಬ್ಬರೂ ತಿನ್ನುವುದು ಸಾಧ್ಯ. ಅದಕ್ಕಾಗಿ ಇಲ್ಲಿ ಸಮಾನತೆ ಎಂಬುದು ಊಟ ನೀಡುವ ಪರಿಕರದಲ್ಲಿ ಅಲ್ಲ ಇರುವುದು; ಬದಲಿಗೆ, ಇಬ್ಬರೂ ತಿನ್ನುವುದಕ್ಕೆ ಸಾಧ್ಯವಾಗುವುದರಲ್ಲಿ. ಅಂದರೆ, ಅದರ ಪರಿಣಾಮದಲ್ಲಿ ಇರುವುದು.

ಪುರುಷಪ್ರಧಾನ ಜೀವನಶೈಲಿಯಾಗಲೀ, ಅಧಿಕಾರ ಸಂಬಂಧಿತ ಯಾವುದೇ ಶ್ರೇಣಿಕೃತ ವ್ಯವಸ್ಥೆ ಇರಲಿ – ಇವನ್ನು ಅಲುಗಾಡಿಸಿ ಸಮಾನತೆಯ ಆಶಯವನ್ನು ಚಿಗುರಿಸುವ ಚಿಂತನೆ ಮಾಡುವಾಗ ‘ಸಮಾನತೆ-ಸಮತೆ’ ಎಂಬ ಪರಿಕಲ್ಪನೆ ಬಂದೇ ಬರುತ್ತದೆ. ಸಮಾನತೆ ಎಂಬುದು ನಮ್ಮ ಸಂವಿಧಾನದ ದೊಡ್ಡ ಆಶಯವೂ ಹೌದು. ಸಮಾಜವು, ಮಹಿಳೆಯರನ್ನು, ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಮತ್ತು ಬೈನರಿ ಅಲ್ಲದವರನ್ನು ದುರ್ಬಲರು ಅಥವಾ ಪುರುಷರಿಗಿಂತ ಕಡಿಮೆ ಎಂದು ಪರಿಗಣಿಸುತ್ತ ಬಂದಿದೆ. ಇದರ ಪರಿಣಾಮವಾಗಿ ಎಲ್ಲರಿಗೂ ಅವರವರ ಸಾಮರ್ಥ್ಯವನ್ನು ಹೊರಗೆಡಹುವ ಅವಕಾಶವೇ ಸರಿಯಾಗಿ ಸಿಗಲಿಲ್ಲ. ಈ ರೀತಿಯಾಗಿ ಅವಕಾಶವಂಚಿತರಾದ ಸಮುದಾಯಕ್ಕೆ ಸಮಾನತೆ ಸಿಗಬೇಕು. ಇಲ್ಲಿ ‘ಸಮಾನತೆ’ ಅಂದರೆ, ಎಲ್ಲರೂ ಸುರಕ್ಷಿತವಾಗಿ ಇರಬೇಕು, ಆರೋಗ್ಯವಾಗಿರಬೇಕು, ಯಶಸ್ಸು ಅನುಭವಿಸಲು ಸಾಧ್ಯವಾಗಬೇಕು. ಪ್ರತಿಯೊಬ್ಬ ವ್ಯಕ್ತಿ ಅಥವಾ ಜನರ ಗುಂಪಿಗೆ ಒಂದೇ ರೀತಿಯ ಸಂಪನ್ಮೂಲಗಳು ಅಥವಾ ಅವಕಾಶಗಳು ಸಿಗಬೇಕು ಅನ್ನುವುದು. ‘ಸಮತೆ’ ಅಂದರೆ, ಪ್ರತಿಯೊಬ್ಬ ವ್ಯಕ್ತಿಯ ವಿಭಿನ್ನ ಹಿನ್ನೆಲೆಯನ್ನು ಗುರುತಿಸುತ್ತ, ಅವರಿಗೆ ಸಮಾನ ಫಲಿತಾಂಶ ಸಿಗುವ ರೀತಿಯಲ್ಲಿ ಅವರವರಿಗೆ ಅಗತ್ಯವಿರುವ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ನಿಯೋಜಿಸುವುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉದಾಹರಣೆಗೆ, ಕೆಲಸದ ಸ್ಥಳ ತೆಗೆದುಕೊಳ್ಳೋಣ. ಯಾವುದೇ ಲಿಂಗದವರಾಗಲೀ ಅವರವರ ಕಾರ್ಯಕ್ಷಮತೆಯನ್ನು ತೋರಿಸಬೇಕು, ಅದಕ್ಕೆ ತಕ್ಕಂತೆ ನಿಗದಿತ ಸಂಭಾವನೆ ಪಡೆಯಬೇಕು. ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅಭಿವ್ಯಕ್ತಿಸಬೇಕಾದರೆ ಅವರಿಗೆ ಕೆಲವು ವಿಶೇಷ ಸೌಕರ್ಯಗಳು ಇರಲೇಬೇಕಾಗುತ್ತದೆ. ಮುಟ್ಟು, ಗರ್ಭಧಾರಣೆ, ಹೆರಿಗೆ, ಬಾಣಂತನ – ಹೆಣ್ಣಿನ ದೇಹದಲ್ಲಿ ನಡೆಯುವ ಜೈವಿಕ ಪ್ರಕ್ರಿಯೆಗಳು. ಇವನ್ನು ಅನುಭವಿಸುತ್ತಲೇ ತಾವು ವಹಿಸಿಕೊಂಡ ಕೆಲಸವನ್ನೂ ಮಾಡಬೇಕಾಗುತ್ತದೆ. ಈ ಜೈವಿಕ ಕ್ರಿಯೆಗಳನ್ನು ನಿಭಾಯಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು ವ್ಯವಸ್ಥೆಯ ಜವಾಬ್ದಾರಿ ಆಗುತ್ತದೆ. ನಮ್ಮ ವ್ಯವಸ್ಥೆಗಳು ಇವನ್ನು ಮಾಡದೆಹೋದರೆ ಮಹಿಳೆಯರಿಗೆ ಸಮರ್ಥವಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಒಟ್ಟಿನಲ್ಲಿ ಎಲ್ಲರಿಗೂ ಉದ್ಯೋಗವಕಾಶ ಕೊಟ್ಟ ಮಾತ್ರಕ್ಕೆ ಸಮಾನತೆ ಸಿಗುವುದಿಲ್ಲ. ಅವರವರ ಅಗತ್ಯಕ್ಕೆ ತಕ್ಕಂತೆ ಬೆಂಬಲ ಕೊಡಬೇಕಾಗುತ್ತದೆ. ಹೀಗೆ ಬೆಂಬಲ ನೀಡುವ ಪ್ರಕ್ರಿಯೆಯನ್ನು ‘ಸಮತೆಯ ನಡೆ’ ಎನ್ನಬಹುದು. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಕ್ಷಮತೆಯನ್ನು ತೋರಿಸಬೇಕಾದರೆ ಸುರಕ್ಷಿತ ವಾತಾವರಣ ಇರುವುದು ಕೂಡ ಮುಖ್ಯವಾಗುತ್ತದೆ. ಅದಕ್ಕಾಗಿ ಲೈಂಗಿಕ ಕಿರುಕುಳ ತಡೆಯುವುದು ಅನಿವಾರ್ಯ ಹೆಜ್ಜೆ. ಲೈಂಗಿಕ ಕಿರುಕುಳ ತಡೆ ಸಮಿತಿ ರಚಿಸಿ, ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಕೂಡ ಸಮತೆಯತ್ತ ಒಂದು ಪ್ರಮುಖ ನಡೆ.

ಸಮಾನತೆಯ ವಾತಾವರಣ ಮನೆಯಿಂದಲೇ ನಿರ್ಮಾಣವಾಗಬೇಕು ಎಂಬುದನ್ನು ಎಷ್ಟು ಹೇಳಿದರೂ ಕಡಿಮೆಯೇ. ಸಮಾನತೆಯ ಮಾತು ಎತ್ತಿದರೆ ಟೀಕೆಗಳು ಶುರುವಾಗುತ್ತವೆ. ಒಂದು ಚಪಾತಿ ಗಂಡ, ಮತ್ತೊಂದು ಚಪಾತಿ ಹೆಂಡತಿ ಮಾಡಿದರೆ ಸಾಕು, ಸಮಾನತೆ ಬಂದುಬಿಡುತ್ತದೆ ಎಂಬ ಮಾತುಗಳೂ ಕೇಳಿಬರುತ್ತವೆ. ನಿಜವಾಗಿಯೂ ಮನೆಯಲ್ಲಿ ಇರಬೇಕಾಗಿರುವುದು ಪರಸ್ಪರ ಗೌರವದ ಸಂಬಂಧ. ಯಾವುದೇ ಮನೆಗೆಲಸವನ್ನು, ಸಂಪಾದನೆಯ ಕೆಲಸವನ್ನು ಯಾರೂ ಕೂಡ ಮಾಡಬಹುದಾದ ಮತ್ತು ನ್ಯಾಯಯುತವಾಗಿ ಸಂಪನ್ಮೂಲಗಳು, ಸೌಕರ್ಯಗಳು ಹಂಚಿಕೆ ಆಗಬಹುದಾದ ವಾತಾವರಣವೇ ಮುಖ್ಯ.

ಯಾವುದೇ ಸಾಮಾಜಿಕ ಶ್ರೇಣಿಕರಣದ ಸಂದರ್ಭದಲ್ಲೂ ಸಮತೆಯ ಪರಿಕಲ್ಪನೆ ಬಹಳ ಅಗತ್ಯ. ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದರಲ್ಲಿ ನಾನಾ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶ ಇದೆ. ಇದು ಸಮಾನತೆಯ ಆಶಯ. ಆದರೆ, ಬಹಳ ಹಿಂದುಳಿದ ಪ್ರದೇಶಗಳಿಂದ ಬರುವ ಮಕ್ಕಳಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ, ಇನ್ನೂ ಏನೇನೋ ಸಾಮರ್ಥ್ಯಗಳು ಬೆಳೆಯುವ ಅವಕಾಶ ಸಿಗದೆ ಅಡಗಿಕೊಂಡಿರುತ್ತವೆ. ಇಂತಹ ಸಂದರ್ಭದಲ್ಲಿ ಕಾಲೇಜು ತೆರೆಯುವ ಮೊದಲೇ ಅಥವಾ ಆರಂಭಿಕ ದಿನಗಳಲ್ಲಿ ಈ ಮಕ್ಕಳ ಸಾಮರ್ಥ್ಯ ಅಭಿವೃದ್ಧಿಗಾಗಿ ವಿಶೇಷ ಸೌಲಭ್ಯಗಳನ್ನು ಮಾಡುತ್ತಾರೆ. ಇದು ಸಮತೆಯ ಆಶಯ. ಹೀಗೆ ಮಾಡಿದರೆ ಮಾತ್ರ ಅವರು ಅಲ್ಲಿಯ ಕಲಿಕೆಯ ಪ್ರಕ್ರಿಯೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸುವುದು ಸಾಧ್ಯವಾಗುತ್ತದೆ. ಇಲ್ಲವಾದರೆ, ಸಮಾನ ಅವಕಾಶ ಸಿಕ್ಕಿದರೂ ಅಂತಹ ಜಾಗಗಳಲ್ಲಿ ಏಗಲಾರದೆ ಕುಸಿಯುವ ಹಾಗೆ ಆಗುತ್ತದೆ. ಜಾತಿ, ವರ್ಗ, ಲಿಂಗ, ಪ್ರದೇಶಗಳಿಗೆ ಸಂಬಂಧಿಸಿದಂತೆ ಈ ಅಡೆತಡೆಗಳು ರೂಪುಗೊಂಡಿರುತ್ತವೆ. ಮಹಿಳೆಯರ ಅಥವಾ ಯಾವುದೇ ವಂಚಿತ ಸಮುದಾಯದ ಐತಿಹಾಸಿಕ ಮತ್ತು ಸಾಮಾಜಿಕ ಅನನುಕೂಲತೆಗಳನ್ನು ಸರಿದೂಗಿಸಲು ತಂತ್ರ ಮತ್ತು ಕ್ರಮಗಳನ್ನು ಕಂಡುಕೊಳ್ಳುವುದೇ ಸಮತೆಯ ದಾರಿ.

ನೇರ ಸಮಾನತೆಯ ದೃಷ್ಟಿಯಿಂದ ನೋಡಿದರೆ, ಅನೇಕ ಸಾರಿ, ಸಮತೆಯ ಹೆಸರಿನಲ್ಲಿ ನಡೆಯುವ ಪ್ರಕ್ರಿಯೆಗಳು ಅನೇಕರಿಗೆ ತಾರತಮ್ಯವಾಗಿ ಕಾಣುತ್ತವೆ. ಆಳವಾದ ಸಾಮಾಜಿಕ, ಆರ್ಥಿಕ, ರಾಜಕೀಯ ಗ್ರಹಿಕೆ ಇಲ್ಲದೆಹೋದಾಗ ಮೀಸಲಾತಿಯೂ ತಾರತಮ್ಯವಾಗಿ ಕಾಣುತ್ತದೆ. ಇದನ್ನು ವಿವರಿಸುವುದಕ್ಕೆ ಧನಾತ್ಮಕ ಪಕ್ಷಪಾತ ಅಥವಾ ಧನಾತ್ಮಕ ಆದ್ಯತೆ (ಪಾಸಿಟಿವ್ ಡಿಸ್ಕ್ರಿಮಿನೇಶನ್) ಎಂಬ ಪರಿಕಲ್ಪನೆ ಬಳಸುತ್ತಾರೆ. ಅಂದರೆ, ನೇರನೋಟಕ್ಕೆ ಪಕ್ಷಪಾತದ ಹಾಗೆ ಕಂಡರೂ ಇದು ಸಾಮಾಜಿಕ ಸುದುದ್ದೇಶದಿಂದ, ಧನಾತ್ಮಕ ಉದ್ದೇಶದಿಂದ ಮಾಡಿರುವ ಆದ್ಯತೆ ಎಂದು ಹೇಳಬಹುದು. ಸಮತೆಯ ಬಗ್ಗೆ ಹೇಳುವುದು ಸುಲಭ, ಅದನ್ನು ಬದುಕಿನಲ್ಲಿ ಅಳವಡಿಸುವುದು ಸುಲಭಸಾಧ್ಯವಲ್ಲ. ನಮ್ಮ ಸುತ್ತುಮುತ್ತಲೂ ಇರುವ ತಾರತಮ್ಯಗಳ ಸ್ವರೂಪದ ಬಗ್ಗೆ ಸರಿಯಾದ ಅರಿವು ಮತ್ತು ಪ್ರಾಮಾಣಿಕವಾದ ಕಾಳಜಿ ಇದ್ದರೆ ನಮ್ಮ ಬದುಕಿನಲ್ಲೂ ಅದು ಅಭಿವ್ಯಕ್ತವಾಗುತ್ತದೆ.

ಸಮತೆಯ ನಡೆ ಎಂಬುದು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣ ವಿಚಾರ. ಸಮತೆಯ ಆಶಯದ ಹಿಂದೆ ವೈವಿಧ್ಯತೆಯನ್ನು ಗುರುತಿಸುವ, ಗೌರವಿಸುವ ಹಾಗೂ ಒಳಗೊಳ್ಳಿಸುವ ಸಿದ್ಧಾಂತವಿದೆ. ನ್ಯಾಯಸಮ್ಮತವಾದ, ನಿಷ್ಪಕ್ಷಪಾತವಾಗಿರುವ ನಿಲುವು ಇದೆ. ವೈವಿಧ್ಯತೆ ಎಂಬುದು ಚಿಂತನೆಯಲ್ಲಿ ಹೊಸತನ, ಸೃಜನಶೀಲತೆಯನ್ನು ತರಬಲ್ಲದು. ಯಾವ್ಯಾವುದೋ ಕಾರಣಕ್ಕಾಗಿ ಸಾಮಾಜಿಕ ಸ್ತರಗಳಲ್ಲಿ ಹಿಂದುಳಿದಿರುವ ಮಹಿಳೆಯರು ಜೊತೆಜೊತೆಗೆ ಹೆಜ್ಜೆ ಹಾಕಬೇಕೆಂದರೆ ಸಮಾನತೆಯನ್ನು ನಿಜರೂಪದಲ್ಲಿ ಒದಗಿಸುವ ಸಮತೆಯ ಭಾವ, ನಡೆ ಖಂಡಿತವಾಗಿಯೂ ಬೇಕಾಗುತ್ತದೆ. ಹಾಗೆ ಅವಕಾಶಗಳನ್ನು ತೆರೆಯುವಾಗ ಏನೋ ಮಹಾ ಉಪಕಾರ ಮಾಡುವ ತೆರದಲ್ಲಿ, ಅಯ್ಯೋ ಪಾಪ ಎನ್ನುವ ತೆರದಲ್ಲಿ ಮಾಡದೆ – ಹೀಗೆ ಮಾಡದೆಹೋದರೆ ನಾವು ಮತ್ತು ನಮ್ಮ ಸಮಾಜ ಸುಂದರವಾದದ್ದೇನನ್ನೋ, ಅನನ್ಯವಾಗಿರುವ ಏನನ್ನೋ ಕಳೆದುಕೊಳ್ಳುತ್ತೇವೆ ಎಂಬ ತೆರದಲ್ಲಿ ಇರಬೇಕು. ಆಗ ಮಾತ್ರ ಸಮಾನತೆ ಎಂಬುದು ನಿಜಕ್ಕೂ ಸಾಕಾರವಾಗಲು ಸಾಧ್ಯ. ಎಲ್ಲರೂ ಅವರವರ ಕನಸುಗಳನ್ನು ನಿರಾಳವಾಗಿ ಬೆನ್ನು ಹತ್ತಲು ಸಾಧ್ಯ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

1 COMMENT

  1. ಧನ್ಯವಾದಗಳು ಸಮತೆ ಸಮಾನತೆ ಅರ್ಥ ವಿವರಣೆ…. ಅದೆಷ್ಟು ದಿನಗಳಿಂದ ಕಾಡಿದ ಈ ವಿಷಯಗಳು…ಲೇಖನ ಓದಿ ಖುಷಿಯಾಯಿತು…. ಸಮತೆ ಸಮಾನತೆ ಎರಡು ಒಂದೇ ಎಂದು ವಾದಿಸಿ ಕೆಲವರಿಗೆ ಇದು ಸರಳ ಪರಿಚಯ ತ್ಯಾಕ್ಸ …

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...