ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತ ಬೇಡಿಕೆಯನ್ನು ಸರ್ಕಾರ ಸ್ವೀಕರಿಸಿದ್ದು, ಪರಿಶೀಲನೆಯಲ್ಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ಹೇಳಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಸತೀಶ್‌ಕೃಷ್ಣ ಸೈಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಮಂಜೂರಾಗಿದ್ದ ನಾಲ್ಕು ತಜ್ಞ ವೈದ್ಯರು ಹಾಗೂ ಮೂರು ಉಪ ಮುಖ್ಯ ವೈದ್ಯಾಧಿಕಾರಿ ಹುದ್ದೆಗಳು ಸೇರಿದಂತೆ ಒಟ್ಟು ಏಳು ಹುದ್ದೆಗಳನ್ನು ಪ್ರಾಧ್ಯಾಪಕರು, ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳನ್ನಾಗಿ ಮರುಪದನಾಮೀಕರಿಸಿ ಆದೇಶಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಜೂರಾಗಿರುವ ಹುದ್ದೆಗಳಿಗೆ ಈಗಾಗಲೇ 2 ಬಾರಿ ನೇರ ಸಂದರ್ಶನ ಕರೆಯಲಾಗಿದ್ದು, ಯಾವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿರುವುದಿಲ್ಲ. ಆದ್ದರಿಂದ ಸದರಿ ಹುದ್ದೆಗಳನ್ನು ಮತ್ತೊಮ್ಮೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಅನುಮತಿ ನೀಡಲಾಗಿದೆ” ಎಂದು ಸಚಿವ ಪಾಟೀಲ್ ಅವರು ವಿವರಿಸಿದರು.