- ಕ್ಷೇತ್ರಗಳ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಅಂತಿಮಗೊಳಿಸಲು ಸೂಚನೆ
- ಶಾಸನಬದ್ಧ ಸಂಸ್ಥೆಗಳನ್ನು ಚುನಾವಣೆ ನಡೆಸದೇ ಬಿಡಲಾಗದು: ಹೈಕೋರ್ಟ್
ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ನಾಲ್ಕು ವಾರದೊಳಗೆ ಕ್ಷೇತ್ರಗಳ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿ ಅಂತಿಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ನಿಗದಿತ ಅವಧಿಯೊಳಗೆ ರಾಜ್ಯ ಸರ್ಕಾರ ಚುನಾವಣೆಗೆ ಅಗತ್ಯವಿರುವ ಮೀಸಲಾತಿ ಪಟ್ಟಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ವಿವರ ಸಲ್ಲಿಸಿಲ್ಲ ಎಂದು ಆರೋಪಿಸಿ ಚುನಾವಣಾ ಆಯೋಗ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ಹೊರಾಳೆ ಮತ್ತು ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ.
ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕ್ಷೇತ್ರ ಪುನರ್ ವಿಂಗಡಣೆ ಕುರಿತಂತೆ ಸೀಮಾ ನಿರ್ಣಯ ಆಯೋಗ ಇನ್ನೂ ವರದಿ ಸಲ್ಲಿಸಿಲ್ಲ. ಹಾಗೆ ಮೀಸಲಾತಿ ನಿಗದಿ ಕುರಿತು ಸಮಿತಿ ವರದಿ ನೀಡಿದ್ದು ಅದರ ಪರಿಶೀಲನೆ ಮಾಡಲಾಗುತ್ತಿದೆ. ಹೀಗಾಗಿ ಇನ್ನೂ ಹತ್ತು ವಾರಗಳ ಕಾಲಾವಕಾಶ ನೀಡುವಂತೆ” ಕೋರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?
ಇದನ್ನು ತಿರಸ್ಕರಿಸಿದ ನ್ಯಾಯಪೀಠ, “ಶಾಸನಬದ್ಧ ಸಂಸ್ಥೆಗಳನ್ನು ಚುನಾವಣೆ ನಡೆಸದೇ ಬಿಡಲಾಗದು. ಈ ವಿಷಯದಲ್ಲಿ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಇನ್ನು ಮುಂದೆ ಇದು ಸಾಧ್ಯವಿಲ್ಲ. ಮುಂದಿನ ಒಂದು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಕೋರ್ಟ್‌ಗೆ ವರದಿ ಸಲ್ಲಿಸಬೇಕು. ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು” ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.