- ಇಂಧನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಜಾರ್ಜ್
- ಗೃಹಜ್ಯೋತಿ ಯೋಜನೆಯ ನಿಯಮದಲ್ಲಿ ಹೊಸ ಮಾರ್ಪಾಡು
ಹೊಸ ಮನೆ ಹಾಗೂ ಹೊಸ ಬಾಡಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೃಹಜ್ಯೋತಿ ಯೋಜನೆ ನಿಯಮಗಳಲ್ಲಿ ಕೊಂಚ ಮಾರ್ಪಾಡು ಮಾಡಲಾಗಿರುವುದಾಗಿ ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಇಂಧನ ಇಲಾಖೆ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ಮನೆ ಮತ್ತು ಮನೆ ಬದಲಾವಣೆ ವಿಚಾರ ಸಿಎಂ ಜೊತೆ ಚರ್ಚೆಯಾಗಿದೆ.
ಯಾರು ಹೊಸದಾಗಿ ಬಾಡಿಗೆ ಮನೆಗೆ ಬರ್ತಾರೆ ಅವರಿಗೆ ಅಗತ್ಯ ದಾಖಲೆಗಳಿರುವುದಿಲ್ಲ, ಹಾಗಾಗಿ ಅವರಿಗೆ ಅವರೇಜ್ 53% +10% ಸೇರಿಸಿ 58 ಯೂನಿಟ್ ವರೆಗೂ ವಿದ್ಯುತ್ ಉಚಿತ ನೀಡಲಾಗುತ್ತದೆ ಎಂದರು.
ಇದೇ ನಿಯಮ ಹೊಸದಾಗಿ ಮನೆ ನಿರ್ಮಿಸಿದವರಿಗೂ ಅನ್ವಯವಾಗಲಿದೆ. ಏಕೆಂದರೆ ಹಿಂದಿನ ಒಂದು ವರ್ಷದವರೆಗಿನ ಲೆಕ್ಕ ಇವರಿಗೆ ಸಿಗುವುದಿಲ್ಲ, ಹೀಗಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಜಾರ್ಜ್ ಹೇಳಿದರು.
ಈ ಸುದ್ದಿ ಓದಿದ್ದೀರಾ?:ಹೊರರಾಜ್ಯದ ಮಹಿಳೆಯರಿಗೂ ಸಿಗಲಿ ಶಕ್ತಿ ಯೋಜನೆ: ಶಾಮನೂರು ಶಿವಶಂಕರಪ್ಪ ಆಗ್ರಹ
ಸದ್ಯ 58 ಯೂನಿಟ್ ಪಡೆಯುವ ಹೊಸ ಮನೆ ಮತ್ತು ಹೊಸ ಬಾಡಿಗೆದಾರರು, ವರ್ಷದ ಬಳಿಕ 200 ಯೂನಿಟ್ ಪಡೆದುಕೊಳ್ಳಲಿದ್ದಾರೆ. 2022ರ ಏಪ್ರಿಲ್ ತಿಂಗಳಿಂದ 2023ರ ಮಾರ್ಚ್ ತಿಂಗಳ 12 ತಿಂಗಳ ಅವಧಿ ಬಿಲ್ ಲೆಕ್ಕಾಚಾರ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಇದೇ ವೇಳೆ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಜಾರ್ಜ್, ಬಿಜೆಪಿಯವರು ನಮ್ಮ ಉಚಿತ ಕೊಡುಗೆ ವಿರುದ್ಧ ಇದ್ದಾರೆ. ಅವರಿಗೆ ಪ್ರಶ್ನೆ ಮಾಡುವ ಹಕ್ಕಿಲ್ಲ ಎಂದರು.
ದರ ಏರಿಕೆ ಕೆಇಆರ್‌ಸಿ ನಿರ್ಧಾರ
ವಿದ್ಯುತ್ ದರ ಏರಿಕೆಯಾಗಿದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ. ಅದು ಈಗ ಜಾರಿಯಾಗಿದೆ. ಕೆಇಆರ್‌ಸಿ ಒಮ್ಮೆ ಆದೇಶ ಮಾಡಿದರೆ ಅದನ್ನು ಹಿಂಪಡೆಯಲು ಆಗುವುದಿಲ್ಲ.ಕೆಇಆರ್‌ಸಿ ಕಾಯ್ದೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ವಿದ್ಯುತ್ ಏರಿಕೆ ವಿಚಾರವನ್ನು ಕೇವಲ ಅಧಿಕಾರಿಗಳು ನಿರ್ಧರಿಸುವುದಿಲ್ಲ. ಸಿಎಂ, ಇಂಧನ ಇಲಾಖೆ ಸಚಿವರು ಸಭೆ ನಡೆಸಿ ನಿರ್ಧಾರ ಕೈಗೊಳ್ತಾರೆ. ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೆಇಆರ್‌ಸಿ ಮೇಲೆ ಹಾಕಲ್ಲ. ಎಂದು ಜಾರ್ಜ್ ಹೇಳಿದರು.
ಗೃಹಜ್ಯೋತಿ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಗೃಹಜ್ಯೋತಿ ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾವೇ ಭರಿಸಲಿದೆ.ಉಚಿತ ಯೋಜನೆ ಪಡೆಯುವ ಮುನ್ನ ಬಾಕಿ ಬಿಲ್ ಪಾವತಿ ಮಾಡಬೇಕು.ಈ ಹಿಂದಿನ ಬಿಲ್ ಪಾವತಿಸಲು ಗ್ರಾಹಕರಿಗೆ 3 ತಿಂಗಳ ಕಾಲಾವಕಾಶವಿದೆ ಎಂದು ಇಂಧನ ಸಚಿವರು ಹೇಳಿದರು.