- ಅಪ್ ಲೋಡ್ ಮಾಡುವವರಿಗೆ ಸರ್ಕಾರದಿಂದಲೇ ಪ್ರತಿ ಅರ್ಜಿಗೆ ಹಣ ಸಂದಾಯ
- ‘ಸೇವಾ ಕೇಂದ್ರಗಳಲ್ಲಿ ದುಡ್ಡು ಪಡೆದರೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು’
ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ನೋಂದಣಿಯನ್ನು ಮಹಿಳೆಯರು ಉಚಿತವಾಗಿ ಮಾಡಿಸಿಕೊಳ್ಳಬೇಕೆಂದು ಬಹಳಷ್ಟು ಕಷ್ಟಪಟ್ಟು ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಇದರಲ್ಲೂ ಸೇವಾ ಕೇಂದ್ರಗಳು ದುಡ್ಡು ಪಡೆಯುತ್ತಿರುವುದು ಗಮನಕ್ಕೆ ಬಂದರೆ ಅಂತವರ ಲಾಗಿನ್ ಐಡಿ ಮತ್ತು ಪಾಸವರ್ಡ್ ವಾಪಸ್ ಪಡೆದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.
ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಮೂವರು ಜನರ ಲಾಗಿನ್ ಐಡಿ ವಾಪಸ್ ಪಡೆಯಲಾಗಿದೆ. ಸರ್ಕಾರವಾಗಲಿ, ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಅಂತವರ ಮೇಲೆ ಕ್ರಿಮಿನಲ್ ಪ್ರಕರಣ ಸಹ ದಾಖಲಿಸಲಾಗುವುದು” ಎಂದರು.
“ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಹಾಗೂ ತಹಸಿಲ್ದಾರ್ ಸೇರಿದಂತೆ ಯಾರಿಗೇ ಆಗಲಿ ಹಣ ಪಡೆಯುವುದು ಗಮನಕ್ಕೆ ಬಂದರೆ ತಕ್ಷಣ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು” ಎಂದು ಹೇಳಿದರು.
“ನಾವು ಯಾರಿಂದಲೂ ಉಚಿತವಾಗಿ ಮಾಡಿಸಿಕೊಳ್ಳುತ್ತಿಲ್ಲ. ಅಪ್ ಲೋಡ್ ಮಾಡುವವರಿಗೆ ಸರ್ಕಾರದಿಂದಲೇ ಪ್ರತಿ ಅರ್ಜಿಗೆ 12 ರೂ. ನೀಡಲಾಗುತ್ತಿದೆ. 10 ರೂ. ಅಪ್ ಲೋಡ್ ಮಾಡಲು, 2 ರೂ. ಪ್ರಿಂಟ್ ಔಟ್ ಕೊಡಲು ನೀಡಲಾಗುತ್ತಿದೆ. ಹಾಗಾಗಿ ಜನರು ಯಾರಿಗೂ ದುಡ್ಡು ಕೊಡುವ ಅಗತ್ಯವಿಲ್ಲ”ಎಂದರು.
22.9 ಲಕ್ಷ ಮಹಿಳೆಯರು ನೋಂದಣಿ
“ಜುಲೈ 20 ರಿಂದ ರಾಜ್ಯಾದ್ಯಂತ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಬೆಂಗಳೂರು ಒನ್, ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ಯೋಜನೆಗೆ ಅರ್ಜಿ ಭರದಿಂದ ಸಾಗುತ್ತಿದೆ” ಎಂದು ಹೇಳಿದರು.
“ಕೆಲವೆಡೆ ಸರ್ವರ್ ಸಮಸ್ಯೆ ಇದೆ. ಶನಿವಾರದ ಅಂತ್ಯಕ್ಕೆ ಯೋಜನೆಗೆ ಒಟ್ಟಾರೆ 22,90,782 ಮಹಿಳೆಯರಿಂದ ಅರ್ಜಿ ಸಲ್ಲಿಕೆ ಮಾಡಿದ್ದರು. ಭಾನುವಾರ ಸೇವಾ ಕೇಂದ್ರಗಳಿಗೆ ರಜೆ ಇತ್ತು. ಮತ್ತೆ ಸೋಮವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ” ಎಂದು ವಿವರಿಸಿದರು.