‘ಗೃಹಲಕ್ಷ್ಮಿ’ ಯೋಜನೆಯ ಮೂಲಕ ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮಾ ಆಗಿದೆ. ಇಂತಹ ಯೋಜನೆ ವಿಶ್ವದ ಯಾವ ಭಾಗದಲ್ಲೂ ಇಲ್ಲ. ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಹಣಕಾಸಿನ ಯೋಜನೆ ಎಂದು ರಾಹುಲ್ ಗಾಂಧಿ ಹೇಳಿದರು.
ಮೈಸೂರಿನ ಮಹಾರಾಣಿ ಕಾಲೇಜಿನ ‘ಗೃಹಲಕ್ಷ್ಮಿ’ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯ ಪೂರ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಕಾಂಗ್ರೆಸ್ ಏನು ವಾಗ್ದಾನ ಮಾಡುತ್ತದೋ, ಅದನ್ನು ಈಡೇರಿಸುತ್ತದೆ ಎಂದು ಹೇಳಿದರು.
‘ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ನಮ್ಮ ಗ್ಯಾರಂಟಿ ಘೋಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ಟೀಕೆ ಮಾಡಿದ್ದರು. ನಾವಿಂದು ನುಡಿದಂತೆ ನಡೆದಿದ್ದೇವೆ. ಎರಡು ಸಾವಿರ ಖಾತೆಗೆ ನೀಡುವ ಹಣ ಹಾಗೂ ಯೋಜನೆ ಚಿಕ್ಕ ವಿಷಯವೇನಲ್ಲ. ಇದರಿಂದ ಮಹಿಳೆಯರು ಹಣ ಉಳಿತಾಯ ಮಾಡಬಹುದು, ಮಕ್ಕಳಿಗೆ ಪುಸ್ತಕ ಕೊಡಿಸಬಹುದು. ಇದರ ಸಂಪೂರ್ಣ ಉಪಯೋಗ ಮಹಿಳೆಯರ ಮೇಲಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.
‘ಕರ್ನಾಟಕದ ನಮ್ಮ ತಾಯಂದಿರು, ಅಕ್ಕ-ತಂಗಿಯರು ಉಚಿತವಾಗಿ ಕರ್ನಾಟಕ ಸುತ್ತಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡಲಾಗಿದೆ, ಇಂದು ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಯಲ್ಲಿ ಎರಡು ಸಾವಿರ ಹಣ ಇದೆ. ಭಾರತ ದೇಶದ ಅತಿ ದೊಡ್ಡ ಹಣ ವರ್ಗಾವಣೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ. ‘ಕರ್ನಾಟಕ ಮಾಡೆಲ್’ ಈ ದೇಶಕ್ಕೆ ಮಾದರಿಯಾಗಿದೆ’ ಎಂದರು.