ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಎರಡನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ ಕುರಿತು ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಈ ಯೋಜನೆಯಡಿ ಮನೆಯ ಯಜಮಾನಿಗೆ ₹2000 ಸಹಾಯಧನ ನೀಡುತ್ತಿದ್ದು, ಯೋಜನೆಯ ಲಾಭ ಪಡೆಯಲು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವ ಉದ್ದೇಶದಿಂದ ಕುಟುಂಬದ ಯಜಮಾನಿಗೆ ಮಾಸಿಕ ₹2000 ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಈ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಈಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಮುಖ ಮಾರ್ಗಸೂಚಿಗಳೇನು?
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
- ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಿದೆ.
- ಯೋಜನೆಯ ಲಾಭ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಜೋಡಣೆ ಮಾಡಬೇಕು.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಭೌತಿಕವಾಗಿಯಾಗಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಅವಕಾಶ ಇಲ್ಲ; ಸಿಎಂ ಸಿದ್ದಾರಮಯ್ಯ
ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದರೆ ಕಾನೂನು ಕ್ರಮ
ಯೋಜನೆಗೆ ಅರ್ಜಿ ಸಲ್ಲಿಸುವರಿಗೆ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುತ್ತದೆ. ಅರ್ಜಿಯಲ್ಲಿನ ಅಂಶಗಳ ಬಗ್ಗೆ ತದನಂತರ ಪರಿಶೀಲನ ಮಾಡಲಾಗುತ್ತದೆ. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ. ಜತೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.