ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನು ಕಂತುಗಳಲ್ಲಿ ಹೇಳುವುದನ್ನು ಬಿಟ್ಟು ಒಂದೇ ಬಾರಿ ನೇರವಾಗಿ, ಸ್ಪಷ್ಟವಾಗಿ ಹೇಳಿಬಿಡಬೇಕು. ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಆ ರಾಜ್ಯಗಳಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ತಮ್ಮ ದಮ್ಮು ತಾಖತ್ ತೋರಿಸಬೇಕು. ಆಗಾಗ ಗೊಣಗಾಡಿಕೊಂಡರೆ ಏನು ಫಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಪಸ್ವರ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ, “ಇದೀಗ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಹಾ ಅವರು ‘ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ’ ಎನ್ನುತ್ತಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಅವರಿಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ. ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ, ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ, ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ. ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ನಾನು ಸಾಬೀತು ಮಾಡಬಲ್ಲೆ. ಇದು ಅಮಿತ್ ಶ ಅವರಿಗೆ ನನ್ನ ಸವಾಲು ಕೂಡಾ ಹೌದು” ಎಂದಿದ್ದಾರೆ.
“ಕರ್ನಾಟಕದ ಬಗ್ಗೆ ಮಾತನಾಡುವಾಗ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ನಾಯಕರು ತಮ್ಮ ಆಳ್ವಿಕೆಯ ರಾಜ್ಯಗಳಲ್ಲಿ ಅದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಗ್ಯಾರಂಟಿಯ ಯೋಜನೆಗಳನ್ನು ಮಾತ್ರ ಅಲ್ಲ, ಗ್ಯಾರಂಟಿ ಎಂಬ ಹೆಸರನ್ನೂ ಕದ್ದು ಈಗ ಅದೇ ಹೆಸರಲ್ಲಿ ಜಾಹೀರಾತು ನೀಡಿದ್ದಾರೆ. ಇದು ಆ ಪಕ್ಷದ ಬಡಜನ ವಿರೋಧಿ ನಿಲುವು ಮತ್ತು ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಹಾ ಅವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರು ನಿಜವಾಗಿ ವಿರೋಧಿಸುವುದು ಗ್ಯಾರಂಟಿ ಯೋಜನೆಗಳನ್ನಲ್ಲ, ಅವರ ಕೆಂಗಣ್ಣು ಬಿದ್ದಿರುವುದು ಈ ಯೋಜನೆಗಳ ಫಲಾನುಭವಿಗಳಾಧ ಬಡವರ ಮೇಲೆ. ಬಡಜನರಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳನ್ನು ವಿರೋಧಿಸುತ್ತಲೇ ಬಂದಿರುವ ಇತಿಹಾಸ ಬಿಜೆಪಿ ಮತ್ತು ಸಂಘ ಪರಿವಾರಕ್ಕಿದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿಯವರು ಗರೀಬಿ ಹಟಾವೋ ಎಂದು ಕರೆನೀಡಿದಾಗಲೂ ಇದೇ ಪರಿವಾರದವರು ಅದನ್ನು ವಿರೋಧಿಸಿದ್ದರು. ಭೂ ಸುಧಾರಣೆ, ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಯಾವುದೇ ಕಾರ್ಯಕ್ರಮಗಳಿದ್ದರೂ ಇವರ ವಿರೋಧ ಇದ್ದೇ ಇದೆ. ಇದಕ್ಕೆ ಬಡವರೇ ತಕ್ಕ ಉತ್ತರವನ್ನು ಕೊಡಬೇಕು” ಎಂದರು.
“ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ ಬಿಜೆಪಿ ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು. ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೊಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಭಾರತ್ ಬ್ರಾಂಡ್‌ನಲ್ಲಿ ಅದೇ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. ನಾವು ಕಿಲೋಗೆ ರೂ.33ರಂತೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಕಿಲೋಗೆ ರೂ.29ರಂತೆ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿಗೆ ಕರ್ನಾಟಕದ ಬಡವರು, ರೈತರು, ಮಹಿಳೆಯರು, ಕಾರ್ಮಿಕರೆಂದರೆ ಅಸಹನೆ” ಎಂದು ಆರೋಪಿಸಿದ್ದಾರೆ.
“ನಮ್ಮ ಗ್ಯಾರಂಟಿ ಯೋಜನೆಗಳ ವಿರುದ್ದ ಮಾತನಾಡುತ್ತಿರುವ ಗೃಹ ಸಚಿವ ಅಮಿತ್ ಶಹಾ ಅವರಿಗೆ ಕನ್ನಡಿಗರೆಂದರೆ ತಾತ್ಸಾರ. ಕನ್ನಡ ಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆಗೆ ಪ್ರಯತ್ನ, ನಂದಿನಿ ಮೇಲೆ ಅಮುಲ್ ಹೇರುವ ಹುನ್ನಾರ ಇವೆಲ್ಲವೂ ಅಮಿತ್ ಶಹಾ ಸಾಧನೆಗಳು. ಕೇಂದ್ರ ಸರ್ಕಾರ ಬರಪರಿಹಾರ ನೀಡಬೇಕೆಂದರೆ ಗೃಹ ಸಚಿವ ಅಮಿತ್ ಶಹಾ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತೀರ್ಮಾನಿಸಬೇಕು. ಕನ್ನಡಿಗರ ವಿರೋಧಿಯಾಗಿರುವ ಅಮಿತ್ ಶಹಾ ಅವರು ಆ ಸಭೆಯನ್ನೇ ಕರೆಯುತ್ತಿಲ್ಲ. ಇಂತಹವರು ರಾಜ್ಯಕ್ಕೆ ಬಂದು ನಮಗೆ ಪಾಠ ಮಾಡುತ್ತಿದ್ದಾರೆ” ಎಂದು ಕಿರಿಕಾರಿದ್ದಾರೆ.
“ಬಡವರ ಕಷ್ಟ ಕಡಿಮೆ ಮಾಡುವ ಕಣ್ಣೀರು ಒರೆಸುವ ಕೆಲಸವೇ ನಿಜವಾದ ದೈವ ಭಕ್ತಿ ಎಂದು ನಾನು ತಿಳಿದುಕೊಂಡವನು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿ ಎಷ್ಟು ಬಾರಿ ರಾಮನಾಮ ಹೇಳಿದರೂ ಅದು ವ್ಯರ್ಥ. ಬಡವರಗೆ ಅನ್ನವನ್ನೂ ನೀಡದೆ ದೇವರಿಗೆ ನೈವೇಧ್ಯ ನೀಡಿ ಏನು ಫಲ? ಬಡವರಿಗೆ ಮನೆ ಕಟ್ಟಿಕೊಡದೆ ದೇವರಿಗೆ ಗುಡಿ ಕೊಟ್ಟು ಏನು ಫಲ? ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರಿಗೆ ಯಾವ ರಾಮನ ದಯೆಯೂ ಇರಲಾರದು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೂ ಇರಲಾರದು” ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರೆ…. ನೀವು ಗ್ಯಾರಂಟಿಗಳನ್ನು ಕೊಟ್ಟಿದ್ದೀವಿ.. ನಮ್ಮ ಸರ್ಕಾರವೇ ಯಾವುದೇ ಸರ್ಕಾರದ ಮಾಡದ ಕೆಲಸ ಮಾಡ್ತಿದೆ ಅಂತೆಲ್ಲಾ ಹೇಳ್ತಿದ್ದೀರಿ.. ಅದ್ರೆ,.. ಒಬ್ಬ ಕೂಲಿ ಕೆಲಸ ಮಾಡಿ ಜೀವನ ಮಾಡೋನಿಗೆ ಐದು ಕೆಜಿ ಅಕ್ಕಿ ಖರೀದಿ ಮಾಡಲು ತಾಕತ್ತಿಲ್ಲವೇ… ಐದು ಗ್ಯಾರಂಟಿ ಬಿಟ್ಟಿ ಯೋಜನೆಗಳನ್ನು ನಮ್ಮ ತೆರಿಗೆ ಹಣದಲ್ಲೇ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಕೊಟ್ಟಿದ್ದು ಅಂತೇಳೋದನ್ನು ಬಿಟ್ಟು.. ಅದ್ರ ಬದಲು ಬಡವರಿಗೆ ನೆರವಾಗುವ ಸಂಪೂರ್ಣವಾಗಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ನೀಡುವ ಯೋಜನೆ ಜಾರಿಗೆ ತರಬಾರದೇಕೆ… ಸಿದ್ರಾಮಯ್ಯ ಅವ್ರೇ ನೀವೇನು ಬಿಟ್ಟಿ ಗ್ಯಾರಂಟಿ ಅಂತಾ ಕೋಡ್ತಿದ್ದೀರೋ ಅದನ್ನು ನೋಡಿ ಲೋಕಸಭೆಯಲ್ಲಿ ನಿಮಗೆ ಜನ್ರು ವೋಟ್ ಹಾಕ್ತಾರೆ ಅನ್ನೋ ಭ್ರಮೆಯಲ್ಲಿರಬೇಡಿ… ಅದ್ರ ಬದಲು ಜನರಿಗಾಗಿ ಕಾಂಗ್ರೆಸ್ ಪಕ್ಷದ ಬಹು ನಿರೀಕ್ಷಿತ, ದೂರದರ್ಶಿತ್ವಹೊಂದಿರುವ ಯೋಜನೆಗಳು, ಅವುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ರೂಪುರೇಷೆ ಈ ಬಗ್ಗೆ ಯೋಚಿಸಿದ್ರೆ ಮಾತ್ರವೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ.. ಬರೀ ಒಂದಂಶ ಅಜೆಂಡಾ ಎಂಬಂತೆ ಬರೀ ಬಿಜೆಪಿ ಹಾಗೂ ಮೋದಿ ಅವರನ್ನು ತೆಗಳುವುದನ್ನ ಬಿಟ್ಟು ಜನಕಲ್ಯಾಣದ ಬಗ್ಗೆ ಗಮನ ಹರಿಸಿದ್ರೆ ಸ್ಪಲ್ಪ ಸೀಟುಗಳಾದ್ರೂ ಗೆಲ್ಲಬಹುದು. ತಪ್ಪಿದ್ದಲ್ಲಿ ನಿಮಗೆ ಪ್ರತಿಪಕ್ಷ ಸ್ಥಾನವೇ ಗ್ಯಾರಂಟಿ…ನಿಮ್ಮ ಐದು ಗ್ಯಾರಂಟಿಗಳೊಂದಿಗೆ ಪ್ರತಿಪಕ್ಷ ಸ್ಥಾನದ ಗ್ಯಾರಂಟಿ ಸೇರಿ ಆರು ಗ್ಯಾರಂಟಿಗಳಾಗಬಹುದು. ಮುಂದಾದ್ರೂ ಜಾಣತದಿಂದ ಯೋಜನೆಗಳನ್ನು ರೂಪಿಸುವ ಮೂಲಕ ಸುಭದ್ರ ಭಾರತದ ಕುರಿತಂತೆ ಅಲೋಚಿಸಿದ್ರೆ ಅಧಿಕಾರಕ್ಕೆ ಬರಲು ಹತ್ತಿರವಾಗಬಹುದು. ತಪ್ಪಿದ್ರೆ ಮುಂದೆ 25 ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂ. ಶಿವರಾಂ.. ಬೆಂಗಳೂರು.