ಗುಜರಾತ್‌ನಲ್ಲಿ 2.75 ಲಕ್ಷ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾಗಿದ್ದಾರೆ. 1.18 ಲಕ್ಷ ಅಭ್ಯರ್ಥಿಗಳು ಶಿಕ್ಷಕರ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ (ಟಿಎಟಿ) ಉತ್ತೀರ್ಣರಾಗಿದ್ದಾರೆ. ಆದರೆ, ಅವರೆಲ್ಲರೂ ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯಾಗಿದೆ.
ಬೋಧನಾ ಹುದ್ದೆಗಳಿಗೆ ಅರ್ಹತೆ ಪಡೆಯಲು ಈ – ಟಿಎಟಿ ಮತ್ತು ಟಿಇಟಿ – ಪರೀಕ್ಷೆಗಳು ಅವಶ್ಯಕವಾಗಿವೆ. ಈ ಪರೀಕ್ಷೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಉತ್ತೀರ್ಣರಾಗಿರುವ 3.94 ಲಕ್ಷ ಅಭ್ಯರ್ಥಿಗಳ ಪೈಕಿ 3.88 ಲಕ್ಷ ಮಂದಿ ಈಗಲೂ ನಿರುದ್ಯೋಗಿಗಳಾಗಿದ್ದಾರೆ ಎಂದು ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.
ಶಾಲೆಗಳಿಗೆ ಶಿಕ್ಷಕರ ನೇಮಕಾತಿಗಾಗಿ ಟಿಇಟಿ ಮತ್ತು ಟಿಎಟಿ ಉತ್ತೀರ್ಣರಾದವರನ್ನು ನೇಮಿಸಿಕೊಳ್ಳುವಂತೆ ಆಗ್ರಹಿಸಿ ಗುಜರಾತ್‌ನಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಸಂಖ್ಯೆ ಮತ್ತು ನಿಜವಾಗಿ ಎಷ್ಟು ಮಂದಿ ಉದ್ಯೋಗದಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕಿರಿತ್ ಪಟೇಲ್ ಗುಜರಾತ್ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದರು.
ಅವರ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, “2023ರ ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ ಟಿಎಟಿ-1ರಲ್ಲಿ 39,395 ಅಭ್ಯರ್ಥಿಗಳು ಹಾಗೂ ಟಿಎಟಿ-2ನಲ್ಲಿ 35,956 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಟಿಎಟಿ ಸೆಕೆಂಡರಿಯಲ್ಲಿ 75,328 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ 28,307 ಅಭ್ಯರ್ಥಿಗಳು ಟಿಎಟಿ ಸೆಕೆಂಡರಿ ಡ್ಯುಯಲ್ ಮಟ್ಟವನ್ನು ಹಾಗೂ 15,253 ಅಭ್ಯರ್ಥಿಗಳು ಟಿಎಟಿ ಹೈಯರ್ ಸೆಕೆಂಡರಿ ಡ್ಯುಯಲ್ ಮಟ್ಟವನ್ನು ಸಾಧಿಸಿದ್ದಾರೆ” ಎಂದು ಹೇಳಿದೆ.
2022ರಲ್ಲಿ ನಡೆದ ಟಿಇಟಿ-1 ಮತ್ತು 2023ರಲ್ಲಿ ನಡೆದ ಟಿಇಟಿ-2ರಲ್ಲಿ 2.75 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಲ್ಲ ಸೇರಿ, ಒಟ್ಟು 3.94 ಲಕ್ಷ ಅರ್ಜಿದಾರರು ಶಿಕ್ಷಕರ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ, 2022ರಿಂದ ಸೆಕೆಂಡರಿ ಅಥವಾ ಹೈಯರ್ ಸೆಕೆಂಡರಿ ಶಾಲೆಗಳಿಗೆ ಸರ್ಕಾರವು ಯಾವುದೇ ನೇಮಕಾತಿ ನಡೆದಿಲ್ಲ.
ಅದೇ ರೀತಿ, 2023ರಲ್ಲಿ ಸರ್ಕಾರಿ ಅಥವಾ ಅನುದಾನಿತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಯಾವುದೇ ಅಭ್ಯರ್ಥಿಗಳನ್ನು ನೇಮಿಸಲಾಗಿಲ್ಲ ಎಂದು ಸರ್ಕಾರ ಹೇಳಿದೆ. ಅವಶ್ಯಕತೆಗೆ ಅನುಗುಣವಾಗಿ ನೇಮಕಾತಿ ನಡೆಸಲಾಗುವುದು ಎಂದಿದೆ.
ಕಳೆದ ಎರಡು ವರ್ಷಗಳಲ್ಲಿ 3.94 ಲಕ್ಷ ಟಿಎಟಿ ಮತ್ತು ಟಿಇಟಿ ಅಭ್ಯರ್ಥಿಗಳ ಪೈಕಿ ಕೇವಲ 5,678 ಮಂದಿಗೆ ಮಾತ್ರ ನೇಮಕಾತಿಯಾಗಿದೆ ಎಂದು ಸರ್ಕಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ. ಅಲ್ಲದೆ, “2023ರ ಮಾರ್ಚ್ ಹೊತ್ತಿಗೆ 4,146 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 5,940 ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ” ಎಂದು ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಹೇಳಿದ್ದಾರೆ.
ಅದೇ ಅವಧಿಯ ವೇಳೆಗೆ, ವಿವಿಧ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಮಾಧ್ಯಮಿಕ ಶಾಲೆಗಳಲ್ಲಿ 3,260 ಬೋಧನಾ ಹುದ್ದೆಗಳು ಖಾಲಿಯಾಗಿವೆ ಎಂದು ಅವರು ಹೇಳಿದ್ದಾರೆ.