ಗುಜರಾತ್‌ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ಅನುಷ್ಠಾನದಲ್ಲಿನ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಹೆಚ್ಚಾಗಿವೆ. ದಾಹೋದ್, ಪಂಚಮಹಲ್ ಹಾಗೂ ನರ್ಮದಾ ಜಿಲ್ಲೆಗಳಲ್ಲಿ ಭಾರಿ ಅಕ್ರಮಗಳು ಬೆಳಕಿಗೆ ಬಂದಿವೆ. ಭಾರೀ ಚರ್ಚೆಗಳಾಗುತ್ತಿವೆ. ಇದೀಗ, ಮನರೇಗಾದಲ್ಲಿ ಮತ್ತೊಂದು ಬಹುಕೋಟಿ ಹಗರಣವು ಭರೂಚ್‌ನಲ್ಲಿ ಬಯಲಾಗಿದೆ.
ಭರೂಚ್‌ನ ಎ ವಿಭಾಗದಲ್ಲಿ ದಾಖಲಾಗಿರುವ ಪೊಲೀಸ್ ದೂರಿನ ಪ್ರಕಾರ, ಅಮೋದ್, ಜಂಬುಸರ್ ಹಾಗೂ ಹನ್ಸೋಟ್ ತಾಲೂಕುಗಳ 56 ಹಳ್ಳಿಗಳಲ್ಲಿ ಮನರೇಗಾ ಅನುಷ್ಠಾನದಲ್ಲಿ ಒಟ್ಟು 7.30 ಕೋಟಿ ರೂ. ಭಷ್ಟಾಚಾರ ನಡೆದಿದೆ. ಗುತ್ತಿಗೆದಾರರು ಮತ್ತು ಸರ್ಕಾರಿ ಸಿಬ್ಬಂದಿಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
2025ರ ಮೇ 30ರಂದು ಭರೂಚ್ ಎ ಡಿವಿಷನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಮುರಳೀಧರ್ ಎಂಟರ್‌ಪ್ರೈಸ್ ಮತ್ತು ಜಲರಾಮ್ ಎಂಟರ್‌ಪ್ರೈಸ್ ಎಂಬ ಎರಡು ಸಂಸ್ಥೆಗಳು 11 ಗ್ರಾಮಗಳಲ್ಲಿ ಮಣ್ಣಿನ ರಸ್ತೆ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ಅಕ್ರಮ ಎಸಗಿವೆ.
ತಾಂತ್ರಿಕ ಲೆಕ್ಕಪರಿಶೋಧನೆಯನ್ನು ಉಲ್ಲೇಖಿಸಿರುವ ಎಫ್‌ಐಆರ್, “ಪ್ರತಿ 11 ಗ್ರಾಮಗಳಲ್ಲಿ ರಸ್ತೆಗಳು ಸ್ಥಿರವಾಗಿದ್ದರೂ, ಏಜೆನ್ಸಿಗಳು ‘ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್’ (ಎಸ್‌ಒಪಿ) ಮತ್ತು ಸರ್ಕಾರ ಸೂಚಿಸಿದ ಮಾನದಂಡಗಳನ್ನು ಉಲ್ಲಂಘಿಸಿ ರಸ್ತೆಗಳನ್ನು ವಿಭಿನ್ನ ಭಾಗಗಳಾಗಿ ವಿಂಗಡಿಸಿವೆ. ಪ್ರತಿ ವಿಭಾಗಕ್ಕೆ ಸರಾಸರಿ 236 ಮೀಟರ್‌ಅನ್ನೂ ಹಂಚಿವೆ” ಎಂದು ವಿವರಿಸಿದೆ.
“ಗುತ್ತಿಗೆದಾರರು ಕಾಮಗಾರಿಯಲ್ಲಿ ಅಗತ್ಯವಿರುವ ದಪ್ಪದ ಕಬ್ಬಿಣವನ್ನು ಬಳಸಲಿಲ್ಲ. ಅನುಮೋದಿತ ನಿರ್ಮಾಣ ಸಾಮಗ್ರಿಗಳನ್ನು ಪೂರೈಸಲಿಲ್ಲ. ಬದಲಾಗಿ, ಪಟ್ಟಿಯಲ್ಲಿ ಮಾತ್ರವೇ ಸಾಮಗ್ರಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ ಮತ್ತು ನಕಲಿ ಬಿಲ್‌ಗಳನ್ನು ತಯಾರಿಸಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ
“ಬಿಲ್‌ಗಳು ನಕಲಿ ಎಂದು ತಿಳಿದಿದ್ದರೂ, ಮುರಳೀಧರ್ ಎಂಟರ್‌ಪ್ರೈಸ್ 13,05,676.51 ರೂ. ಮತ್ತು ಜಲರಾಮ್ ಎಂಟರ್‌ಪ್ರೈಸ್‌ಗೆ 6,58,898.89 ರೂ.ಗಳನ್ನು ಪಾವತಿಸಲಾಗಿದೆ. ಇದರಿಂದಾಗಿ ಗುತ್ತಿಗೆದಾರರು ಒಟ್ಟು 19,64,575.40 ರೂ. ವಂಚನೆಯ ಲಾಭ ಗಳಿಸಿದ್ದಾರೆ” ಎಂದು ಆರೋಪಿಸಲಾಗಿದೆ.
ಆದಾಗ್ಯೂ, ವಂಚನೆಯು ಖಾಸಗಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರಿ ಸಿಬ್ಬಂದಿಗಳೂ ಭಾಗಿಯಾಗಿದ್ದಾರೆ. ವಂಚನೆಯು ಪೂರ್ವಯೋಜಿತ ಪಿತೂರಿಯ ಭಾಗವಾಗಿದೆ ಎಂದು ಎಫ್‌ಐಆರ್ ತಿಳಿಸಿದೆ.
“ಎರಡೂ ಏಜೆನ್ಸಿಗಳು ಸಾಮಗ್ರಿಗಳನ್ನು ಪೂರೈಸಲು ಮಾತ್ರ ಅಧಿಕಾರ ಹೊಂದಿದ್ದರೂ, ಸರ್ಕಾರಿ ಅಧಿಕಾರಿಗಳು, ಉದ್ಯೋಗಿಗಳು ಹಾಗೂ ಗುತ್ತಿಗೆ ಸಿಬ್ಬಂದಿಗಳು ಆ ಸಂಸ್ಥೆಗಳೊಂದಿಗೆ ಶಾಮೀಲಾಗಿ, ಮನರೇಗಾ ಇ-ಗ್ರಾಮ ಪಂಚಾಯತ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಾರೆ. ನಕಲಿ ಕೆಲಸದ ಪ್ರಸ್ತಾವನೆಗಳನ್ನು ಸಲ್ಲಿಸಿ, ವಂಚಿಸಿದ್ದಾರೆ” ಎಂದು ದೂರಲಾಗಿದೆ.
ಈ ಕೃತ್ಯವನ್ನು ಸರ್ಕಾರಕ್ಕೆ ನಂಬಿಕೆ ದ್ರೋಹ ಮತ್ತು ಕ್ರಿಮಿನಲ್ ವಂಚನೆಯೆಂದು ಎಫ್‌ಐಆರ್ ಹೇಳಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರೂ ಗ್ರಾಮೀಣಾಭಿವೃದ್ಧಿಯ ನೆಪದಲ್ಲಿ ಆರ್ಥಿಕ ಅಕ್ರಮಗಳನ್ನು ನಡೆಸಲು ಒಗ್ಗೂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವರದಿ ಓದಿದ್ದೀರಾ?: Ground Report | ಗೂಂಡಾಗಳಿಂದ ದಲಿತರ ಮನೆ, ದೇವಾಲಯ ಧ್ವಂಸವಾದರೂ ಬೇಗೂರು ಪೊಲೀಸರು ನಿರ್ಲಕ್ಷ್ಯ ತಾಳಿದ್ದೇಕೆ?
ಮನರೇಗಾ ಭ್ರಷ್ಟಾಚಾರದ ಬಗ್ಗೆ ಆಡಳಿತಾರೂಢ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. “ಮನರೇಗಾ ಅಕ್ರಮದ ಕುರಿತು ನಾವು ಎರಡು ವರ್ಷಗಳ ಹಿಂದೆ ಟಿಡಿಒ ಮತ್ತು ಡಿಡಿಒಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದೇವೆ. ಆದರೆ ಅದನ್ನು ನಿರ್ಲಕ್ಷಿಸಲಾಗಿದೆ. ಭ್ರಷ್ಟಾಚಾರದಲ್ಲಿ ಬಿಜೆಪಿನಾಯಕರು ಭಾಗಿಯಾಗಿದ್ದಾರೆ. ಆದ್ದರಿಂದಲೇ ನ್ಯಾಯಯುತ ತನಿಖೆ ನಡೆದಿಲ್ಲ. ನಿಜವಾದ ತನಿಖೆ ನಡೆಯಬೇಕು. ಮನರೇಗಾ ಹಗರಣಗಳ ತನಿಖೆ ಮಾಡಲು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ರಚಿಸಬೇಕು” ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಸಿಂಗ್ ಮಂಗ್ರೋಲಾ ಒತ್ತಾಯಿಸಿದ್ದಾರೆ.
ವಿಪಕ್ಷ ನಾಯಕ ಅಮಿತ್ ಚಾವ್ಡಾ ಅವರು ಮೊದಲು ದೇವಗಢಬರಿಯಾ, ಧನಪುರ ಹಾಗೂ ದಾಹೋದ್‌ನಲ್ಲಿ ನಡೆದಿರುವ 250 ಕೋಟಿ ರೂ. ಮೌಲ್ಯದ ಮನರೇಗಾ ಹಗರಣವನ್ನು ಬಯಲಿಗೆ ಎಳೆದರು. ನಂತರ ನಡೆದ ತನಿಖೆಗಳಲ್ಲಿ 71 ಕೋಟಿ ರೂ. ವಂಚನೆ ನಡೆದಿದೆ ಎಂಬುದು ದೃಢಪಟ್ಟಿತು. ಗುಜರಾತ್ ಗ್ರಾಮೀಣಾಭಿವೃದ್ಧಿ ಸಚಿವ ಬಚು ಖಬರ್ ಅವರ ಪುತ್ರರಾದ ಬಲ್ವಂತ್ ಖಬಾರ್ ಮತ್ತು ಕಿರಣ್ ಖಬರ್ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.
ಅಲ್ಲದೆ, ಜಂಬೂಘೋಡದಲ್ಲಿ ನಡೆದ 109 ಕೋಟಿ ರೂ. ವಂಚನೆಯನ್ನು ಕಾಂಗ್ರೆಸ್ ಬಹಿರಂಗಪಡಿಸಿದೆ. ಇದರಲ್ಲಿ ಬಿಜೆಪಿಗೆ ಸಂಬಂಧಿಸಿದ ಏಜೆನ್ಸಿಗಳು ಭಾಗಿಯಾಗಿವೆ ಎಂದು ಆರೋಪಿಸಲಾಗಿದೆ.