ಭಾರತವು 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಮೂರು ವರ್ಷಗಳ ಹಿಂದೆ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಸಮಯದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಆಜಾದಿ ಕಾ ಅಮೃತ್ ಮಹೋತ್ಸವ’ ಎಂಬ ಘೋಷಣೆಯನ್ನು ಹುಟ್ಟುಹಾಕಿತ್ತು. ದೇಶದ ಎಲ್ಲ ಮನೆಗಳ ಮೇಲೂ ಭಾರತದ ಧ್ವಜ ಹಾರಿಸಬೇಕೆಂದು ‘ಹರ್ ಘರ್ ತಿರಂಗಾ’ಕ್ಕೆ ಕರೆಕೊಟ್ಟಿತ್ತು. ಈಗಲೂ ‘ಹರ್ ಗರ್ ತಿರಂಗಾ’ ಘೋಷಣೆ ಚಾಲ್ತಿಯಲ್ಲಿದೆ. ನಿನ್ನೆ (ಗುರುವಾರ) ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ, ದೇಶಾದ್ಯಂತ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಲಾಗಿದೆ. ‘ಹರ್ ಘರ್ ತಿರಂಗಾ’ ಘೋಷಣೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಈಗ ಅಗತ್ಯವಾಗಿ ಬೇಕಿರುವುದು ‘ಹರ್ ಘರ್ ನೌಕ್ರಿ’ (ಮನೆ-ಮನೆಗೆ ಉದ್ಯೋಗ) ಎಂದು ಹೇಳಿದ್ದಾರೆ.
ಅಂದಹಾಗೆ, ದೇಶದ ಜನರಿಗೆ ತಮ್ಮ ರಾಷ್ಟ್ರದ ಬಗ್ಗೆ ಅತೀವ ಗೌರವವಿದೆ. ಪ್ರಧಾನಿ ಮೋದಿ ಹೇಳಿದರೂ, ಹೇಳದೇ ಇದ್ದರೂ ಸ್ವಾತಂತ್ರ್ಯ ದಿನವನ್ನು ಎಲ್ಲರೂ ಸಂಭ್ರಮಿಸುತ್ತಾರೆ. ಆಚರಿಸುತ್ತಾರೆ. ಹೀಗಾಗಿ, ಪ್ರಧಾನಿ ಮೋದಿ ಅವರಿಂದ ‘ಹರ್ ಗರ್ ತಿರಂಗಾ’ ಕರೆಯನ್ನು ದೇಶವಾಸಿಗಳು ಬಯಸಿರಲಿಲ್ಲ. ಬದಲಾಗಿ, ದೇಶದ ಯುವಜನರು ಮೋದಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರದಿಂದ ಸ್ವಾವಲಂಬಿ ಬದುಕಿಗಾಗಿ ಉದ್ಯೋಗವನ್ನು ನಿರೀಕ್ಷಿಸಿದ್ದರು. ಈಗಲೂ ನಿರೀಕ್ಷಿಸುತ್ತಿದ್ದಾರೆ. 10 ವರ್ಷಗಳ ಕಾಲ ಅಧಿಕಾರ ನಡೆಸಿ, 3ನೇ ಅವಧಿಗೆ ಪ್ರಧಾನಿಯಾಗಿರುವ ಮೋದಿ ಈಗಲಾದರೂ ‘ಹರ್ ಘರ್ ನೌಕ್ರಿ’ ಘೋಷಿಸುವರೇ, ಉದ್ಯೋಗ ನೀಡುವರೇ ಎಂದು ಎದುರು ನೋಡುತ್ತಿದ್ದಾರೆ.
ಮೋದಿ ಅವರು 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಬ್ಬರದ ಭಾಷಣ ಮಾಡಿದ್ದರು. ಅಂದರೆ, ಕಳೆದ 10 ವರ್ಷಗಳಲ್ಲಿ ಅವರು 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ, ಬಿಜೆಪಿ ಸಚಿವರೇ ಹೇಳಿಕೊಂಡಿರುವಂತೆ, ಕೇಂದ್ರ ಸರ್ಕಾರವು 2014ರಿಂದ ಈವರೆಗೆ ಕೇವಲ 1.5 ಕೋಟಿ ಉದ್ಯೋಗ ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ಮೋದಿ ಘೋಷಣೆಯಂತೆ 9 ತಿಂಗಳಲ್ಲಿ ಸೃಷ್ಟಿಯಾಗಬೇಕಿದ್ದ ಉದ್ಯೋಗಗಳು, 9 ವರ್ಷಗಳಷ್ಟು ದೀರ್ಘಕಾಲವನ್ನು ತೆಗೆದುಕೊಂಡಿವೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅಲ್ಲದೆ, ಸಾಮಾಜಿಕ ಭದ್ರತಾ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅಂಕಿಅಂಶಗಳ ಪ್ರಕಾರ, ಭವಿಷ್ಯ ನಿಧಿ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಘಟಿತ ವಲಯದ ಉದ್ಯೋಗಿಗಳ ಸಂಖ್ಯೆ 2023ರ ವೇಳೆಗೆ ಕೇವಲ 18.88 ಲಕ್ಷ ಮಾತ್ರವೇ ಇದೆ. ಅಂದರೆ, ಕೋಟ್ಯಂತರ ಜನರು ಅಸಂಘಟಿತ ಉದ್ಯೋಗಿಗಳಾಗಿದ್ದಾರೆ. ಅವರ ಉದ್ಯೋಗಗಳಿಗೆ ಯಾವುದೇ ಭದ್ರತೆ ಇಲ್ಲ.
ಮುಖ್ಯ ವಿಷಯವೆಂದರೆ, 2022ರಲ್ಲಿ ದೇಶಾದ್ಯಂತ ಒಟ್ಟು 15,783 ಯುವಜನರು ನಿರುದ್ಯೋಗದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಿಂದ 2022ರ ನಡುವೆ 28,464 ಯುವಜನರು ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಅಲ್ಲದೆ, ಮೋದಿ ಮೊದಲ ಬಾರಿಗೆ ಪ್ರಧಾನಿಯಾಗುವ ಹಿಂದಿನ ವರ್ಷ 2012ರಲ್ಲಿ 2.1% ಇದ್ದ ನಿರುದ್ಯೋಗ ದರವು ಈಗ 6.8%ಗೆ ಏರಿಕೆಯಾಗಿದೆ. ಗಮನಾರ್ಹವಾಗಿ, 2018ರ ನಂತರದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದೆ.

ಇತ್ತೀಚೆಗೆ, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2024ರ ಜನವರಿಯಲ್ಲಿ ನಿರುದ್ಯೋಗ ದರವು 6.8% ಇದೆ. ಅಲ್ಲದೆ, 20ರಿಂದ 24 ವಯಸ್ಸಿನ ಯುವಜನರ ನಿರುದ್ಯೋಗ ಪ್ರಮಾಣವು ಬರೋಬ್ಬರಿ 44.49%ಗೆ ಏರಿಕೆಯಾಗಿದೆ. ಅಂತೆಯೇ, 25 ಮತ್ತು 29ರ ನಡುವಿನ ಯುವಜನರಲ್ಲಿ ನಿರುದ್ಯೋಗವು 14.33% ಇದೆ.
ಇನ್ನು, ಉತ್ಪಾದನಾ ವಲಯದಲ್ಲಿ ಉದ್ಯೋಗದ ಪ್ರಮಾಣವು 2012ರಲ್ಲಿ 12.8% ಇತ್ತು. ಅದು 2018ರ ವೇಳೆಗೆ 11.5%ಗೆ ಕುಸಿಯಿತು. ಈ ಪ್ರಮಾಣವು ನೆರೆಯ ರಾಷ್ಟ್ರ, ಈಗ ಹಿಂಸಾಚಾರದಿಂದ ಬಳಲುತ್ತಿರುವ ಬಾಂಗ್ಲಾದೇಶಕ್ಕಿಂತ ಕಡಿಮೆ ಇದೆ. ಆ ದೇಶದಲ್ಲಿ ಉತ್ಪಾದನಾ ವಲಯದ ಉದ್ಯೋಗ ಪ್ರಮಾಣವು 16% ಇದೆ ಎಂಬುದು ಗಮನಾರ್ಹ.
ಸಿಎಂಐಇ ದತ್ತಾಂಶಗಳ ಪ್ರಕಾರ, 2023ರ ಅಕ್ಟೋಬರ್ನಲ್ಲಿ ನಿರುದ್ಯೋಗ ದರವು 10% ಇತ್ತು. ಆದರೆ, ಪಿಎಲ್ಎಫ್ಎಸ್ ಡಾಟಾದಲ್ಲಿ 5.3% ಎಂದು ಹೇಳುತ್ತಿದೆ. ಸಿಎಂಐಎ ಅಂಕಿಅಂಶವು ಸಂಘಟಿತ ಮತ್ತು ಅಸಂಘಟಿತ ವಲಯಗಳನ್ನು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಒಳಗೊಳ್ಳುತ್ತದೆ. ಆದರೆ, ಪಿಎಲ್ಎಫ್ಎಸ್ ಸರಿಯಾದ ವಸ್ತುನಿಷ್ಠತೆಯನ್ನು ಹೊಂದಿಲ್ಲವೆಂದು ಹೇಳಲಾಗುತ್ತಿದೆ. ಹೀಗಾಗಿ, ನಿರುದ್ಯೋಗದ ದರವು ಪ್ರಸ್ತುತ 6-7% ಇದೆ ಎಂದೇ ಹೇಳಲಾಗುತ್ತಿದೆ.
ಈ ವರದಿ ಓದಿದ್ಧೀರಾ?: ಹಿಂಡೆನ್ಬರ್ಗ್–ಅದಾನಿ-ಸೆಬಿ ಪ್ರಕರಣ | ಅಕ್ರಮಗಳ ಬಗ್ಗೆ ಮಾತನಾಡಿದರೆ ದೇಶದ್ರೋಹವಾಗುತ್ತದೆಯೇ?
ಇದೆಲ್ಲದರ ನಡುವೆ, ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರವೊಂದಿದೆ. ಅದು, ಪ್ರಧಾನಿ ಮೋದಿ ಅವರು ‘ಪಕೋಡಾ ಮಾರುವುದು ಕೂಡ ಉದ್ಯೋಗವೇ’ ಎಂದು 2018ರ ಜನವರಿಯಲ್ಲಿ ಹೇಳಿದ್ದು. ಯುವಜನರಿಗೆ ಹೆಚ್ಚಿನ ಉದ್ಯೋಗ ಕೊಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು, ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ. ಪಕೋಡ ಮಾರುವುದು ಅವಮಾನವೇನು ಅಲ್ಲ. ಆದರೆ, ಯುವಜನರು ಪಕೋಡ ಮಾರಲು ಮೋದಿ ಅವರೇ ಪ್ರಧಾನಿಯಾಗಬೇಕಿಲ್ಲ.
ನಿರುದ್ಯೋಗ, ಭ್ರಷ್ಟಾಚಾರವನ್ನೇ ಪ್ರಚಾರದ ಗುರಿಯಾಗಿಸಿಕೊಂಡಿದ್ದ ಬಿಜೆಪಿ, ಹಿಂದುತ್ವವನ್ನೂ ಅಜೆಂಡವನ್ನಾಗಿ ಇಟ್ಟುಕೊಂಡಿತ್ತು. ಸದ್ಯ, ಭ್ರಷ್ಟಾಚಾರದಲ್ಲಿ ಎಲ್ಲ ಪಕ್ಷಗಳಿಗಿಂತ ಬಿಜೆಪಿಯೇ ಮುಂದಿದೆ ಎಂಬುದು ಚರ್ಚೆಯಲ್ಲಿರುವ ವಿಚಾರ. ಇನ್ನು, ನಿರುದ್ಯೋಗವನ್ನು ಮರೆಮಾಚುತ್ತಿರುವ ಕೇಂದ್ರ ಸರ್ಕಾರ, ಯುವಜನರಲ್ಲಿ ಹಿಂದುತ್ವದ ವಿಷದೊಂದಿಗೆ ಕೋಮು ದ್ವೇಷವನ್ನು ತುಂಬಿ, ಪೆನ್ನು, ಕಂಪ್ಯೂಟರ್ ಹಿಡಿಯಬೇಕಿದ್ದ ಯುವಜನರ ಕೈಗೆ ದೊಣ್ಣೆ, ಚಾಕು, ಚೂರಿಗಳನ್ನು ಕೊಡುತ್ತಿದೆ. ದ್ವೇಷ ಹರಡುತ್ತಲೇ, ಹುಸಿ ರಾಷ್ಟ್ರೀಯವಾದವನ್ನು ಮುನ್ನೆಲೆಗೆ ತರುತ್ತಿದೆ. ಅದಕ್ಕಾಗಿ, ರಾಷ್ಟ್ರಧ್ವಜವನ್ನೂ ಬಳಸಿಕೊಳ್ಳುತ್ತಿದೆ.
ಬಿಜೆಪಿ-ಆರ್ಎಸ್ಎಸ್ನ ಅಜೆಂಡಾವನ್ನು ಯುವಜನರು ಅರ್ಥೈಸಿಕೊಳ್ಳುವಲ್ಲಿ ತಡಮಾಡಿದರೂ, ಸದ್ಯ, ಅರ್ಥ ಮಾಡಿಕೊಂಡಿದ್ದಾರೆ. ಹುಸಿ ರಾಷ್ಟ್ರೀಯವಾದವನ್ನು ಬದಿಗೊತ್ತಿ, ಸಮಾಜವಾದ, ಜಾತ್ಯತೀತೆಯನ್ನು ಒಳಗೊಂಡಿರುವ ನೈಜ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದೇ ಸಮಯದಲ್ಲಿ, ದೇಶದ ಯುವಜನರಿಗೆ ‘ಹರ್ ಘರ್ ನೌಕ್ರಿ’ ಕೊಡಿ ಎಂದು ಮೋದಿ ಸರ್ಕಾರದ ಎದುರು ಕಾಂಗ್ರೆಸ್ ಹೊಸ ಘೋಷಣೆಯನ್ನು ಮುಂದಿಟ್ಟಿದೆ. ಇದು, ಕಾಂಗ್ರೆಸ್ನ ಘೋಷಣೆಯಾಗದೆ, ಭಾರತದ ಪ್ರತಿಯೊಬ್ಬ ಯುವಜನರ ಘೋಷಣೆಯಾಗಬೇಕಿದೆ. ಮೋದಿ ಸರ್ಕಾರವನ್ನು ಗಟ್ಟಿಧನಿಯಲ್ಲಿ ಕೇಳುವ, ಪ್ರಶ್ನಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬೇಕಿದೆ. ‘ಹರ್ ಘರ್ ನೌಕ್ರಿ’ ಭಾರತದ ಭವಿಷ್ಯವಾಗಬೇಕಿದೆ.