ರಾಜಕೀಯವಾಗಿ ಬೆಳೆಯಬೇಕೆಂಬ ದುರುದ್ದೇಶದಿಂದ ಬಿಜೆಪಿ ನಾಯಕಿಯೊಬ್ಬರು ತನ್ನದೇ ಮಗಳ ಮೇಲೆ ಅತ್ಯಾಚಾರ ಎಸಗಲು ತನ್ನ ಗೆಳೆಯ ಮತ್ತು ಆತನ ಸ್ನೇಹಿತನಿಗೆ ನಿರಂತರವಾಗಿ ಸಹಾಯ ಮಾಡಿರುವ ಅಮಾನುಷ, ಅಮಾನವೀಯ, ವಿಕೃತ ಪ್ರಕರಣ ಉತ್ತರಾಖಂಡದಲ್ಲಿ ಬೆಳಕಿಗೆ ಬಂದಿದೆ.
ಉತ್ತರಾಖಂಡದ ಹರಿದ್ವಾರದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿಯ ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕ ಶರ್ಮಾ ತನ್ನ ಸ್ನೇಹಿತರಿಗೆ ತನ್ನದೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅನಾಮಿಕ ಶರ್ಮ, ಆಕೆಯ ಸ್ನೇಹಿತ ಸುಮಿತ್ ಪತ್ವಾಲ್ ಹಾಗೂ ಪತ್ವಾಲ್‌ನ ಗೆಳೆಯ ಶುಭಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿಯಲ್ಲಿ ಸಕ್ರಿಯವಾಗಿರುವ ಅನಾಮಿಕ ಶರ್ಮಾ, 2024ರವೆರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿದ್ದರು. ನಂತರ, ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತನ್ನ ಪತಿಯಿಂದ ದೂರವಾಗಿದ್ದ ಆಕೆ, ಸುಮಿತ್ ಪತ್ವಾಲ್ ಜೊತೆ ಪ್ರೇಮ, ವಿವಾಹೇತರ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.
ತನ್ನ ಮಗಳನ್ನು ಆಗ್ಗಾಗ್ಗೆ ಬಲವಂತವಾಗಿ ತನ್ನೊಂದಿಗೆ ಕರೆದೊಯ್ಯುತ್ತಿದ್ದ ಅನಾಮಿಕಾ ತನ್ನ ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರ ಎಸಗಲು ತಾನೇ ವ್ಯವಸ್ಥೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಹರಿದ್ವಾರ, ಬೃಂದಾವನ ಹಾಗೂ ಆಗ್ರಾ ಸೇರಿದಂತೆ ಹಲವೆಡೆ ಅನಾಮಿಕಾ ಅವರ ಸಮ್ಮಿಖದಲ್ಲೇ ಆಕೆಯ ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ಬಗ್ಗೆ ತನ್ನ ತಂದೆಗೆ ಹೇಳದಂತೆ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ.
ನಿರಂತರ ದೌರ್ಜನ್ಯವನ್ನು ಸಹಿಸಲಾಗದೆ ನೊಂದಿದ್ದ ಬಾಲಕಿ ಅಂತಿಮವಾಗಿ ತನ್ನ ತಂದೆಯ ಬಳಿ ತನ್ನ ಮೇಲಾದ ಕೃತ್ಯಗಳ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರನ್ನೂ ಬಂಧಿಸಿದ್ದಾರೆ.
“ಬಾಲಕಿ ಮೇಲೆ ಜನವರಿ ತಿಂಗಳಲ್ಲಿ ಮೊದಲ ಬಾರಿಗೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಮೇಲೆ ಈವರೆಗೆ ಸುಮಾರು ಎಂಟು ಬಾರಿ ಸಾಮೂಹಿಕ ಅತ್ಯಾಚಾರ ನಡೆದಿದೆ. ತಿಂಗಳುಗಳ ಕಾಲ ನಿರಂತರ ದೌರ್ಜನ್ಯದಿಂದ ನೊಂದ ಸಂತ್ರಸ್ತೆ ತನ್ನ ತಂದೆಯ ಬಳಿ ತಾನು ಎದುರಿಸಿದ ಕ್ರೌರ್ಯದ ಕುರಿತು ಹೇಳಿಕೊಂಡಿದ್ದಾಳೆ. ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 70 (2) (ಸಾಮೂಹಿಕ ಅತ್ಯಾಚಾರ), 351 (3) (ಕ್ರಿಮಿನಲ್ ಬೆದರಿಕೆ), 3(5) (ಸಾಮಾನ್ಯ ಉದ್ದೇಶವನ್ನು ಮುಂದಿಟ್ಟುಕೊಂಡು ಹಲವಾರು ವ್ಯಕ್ತಿಗಳಿಂದ ಕ್ರಿಮಿನಲ್ ಕೃತ್ಯ) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.