ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಇತ್ತೀಚೆಗೆ ಹೊರಬಿದ್ದಿದ್ದು ಬಿಜೆಪಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಸಿದ್ಧವಾಗಿದೆ. ಹರಿಯಾಣ ವಿಧಾನಸಭೆಗೆ ಹೊಸದಾಗಿ ಚುನಾಯಿತರಾದ 90 ಸದಸ್ಯರ ಪೈಕಿ ಶೇಕಡ 96ರಷ್ಟು ಶಾಸಕರು (86) ಕೋಟ್ಯಾಧಿಪತಿಗಳಾಗಿದ್ದರೆ, ಶೇಕಡ 13ರಷ್ಟು (12) ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ಡೇಟಾ ಉಲ್ಲೇಖಿಸಿದೆ.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಹರಿಯಾಣ ಎಲೆಕ್ಷನ್ ವಾಚ್ ಗೆದ್ದ ಎಲ್ಲಾ 90 ಅಭ್ಯರ್ಥಿಗಳ ಅಫಿಡವಿಟ್ಗಳ ವಿಶ್ಲೇಷಣೆ ನಡೆಸಿದೆ. ಹರಿಯಾಣದಲ್ಲಿ 2019ರಲ್ಲಿ ಶೇಕಡ 93ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದರು, ಆದರೆ ಅದು ಈಗ ಶೇಕಡ 96ಕ್ಕೆ ಏರಿಕೆಯಾಗಿದೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಬಿಎಸ್ಪಿ ಸೋಲಿಗೆ ಜಾಟ್ಗಳ ಜಾತಿವಾದಿ ಮನಸ್ಥಿತಿ ಕಾರಣ: ಮಾಯಾವತಿ
ಶೇಕಡ 44ರಷ್ಟು ಶಾಸಕರಲ್ಲಿ 10 ಕೋಟಿ ರೂಪಾಯಿಗೂ ಅಧಿಕ ಆಸ್ತಿಯಿದ್ದು ಶೇಕಡ 2.2ರಷ್ಟು ಮಂದಿ ಮಾತ್ರ 20 ಲಕ್ಷ ರೂ.ಗಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ಎಡಿಆರ್ ಅಂಕಿಅಂಶಗಳು ತಿಳಿಸಿವೆ. ಚುನಾವಣೆಯಲ್ಲಿ ಗೆದ್ದ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿಯು 24.97 ಕೋಟಿ ರೂಪಾಯಿಗಳಷ್ಟಿದೆ. 2019ರಲ್ಲಿ ಸರಾಸರಿ ಆಸ್ತಿಯು 18.29 ಕೋಟಿ ರೂಪಾಯಿ ಆಗಿದ್ದು, ಈ ಚುನಾವಣೆ ವೇಳೆಗೆ ಹೆಚ್ಚಳವಾಗಿದೆ.
ಕಾಂಗ್ರೆಸ್, ಬಿಜೆಪಿಯ ಕೋಟ್ಯಾಧಿಪತಿಗಳೆಷ್ಟು?
ಎಡಿಆರ್ ವರದಿಯ ಪ್ರಕಾರ ಶೇಕಡ 96ರಷ್ಟು ಬಿಜೆಪಿ ಶಾಸಕರು, ಶೇಕಡ 95ರಷ್ಟು ಕಾಂಗ್ರೆಸ್ ಶಾಸಕರು, ಶೇಕಡ 100ರಷ್ಟು ಐಎನ್ಎಲ್ಡಿ ಮತ್ತು ಸ್ವತಂತ್ರ ಶಾಸಕರು ಒಂದು ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಘೋಷಿಸಿದ್ದಾರೆ. ಹಿಸಾರ್ನ ಸ್ವತಂತ್ರ ಶಾಸಕಿ, ಗೆದ್ದ ಬಳಿಕ ಬಿಜೆಪಿಗೆ ಬೆಂಬಲ ನೀಡಿದ ಸಾವಿತ್ರಿ ಜಿಂದಾಲ್ ಒಟ್ಟು 270 ಕೋಟಿ ರೂಪಾಯಿ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬಿಜೆಪಿಯ ಶಕ್ತಿ ರಾಣಿ ಶರ್ಮಾ 145 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಬಿಜೆಪಿಯ ಶ್ರುತಿ ಚೌಧರಿ 134 ಕೋಟಿ ರೂ. ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಜಯಭೇರಿ
2024ರಲ್ಲಿ ಒಟ್ಟು 30 ಶಾಸಕರು ಮರು ಆಯ್ಕೆಯಾಗಿದ್ದಾರೆ. 2019ರಲ್ಲಿ ಅವರ ಸರಾಸರಿ ಆಸ್ತಿಯು 9.08 ಕೋಟಿ ರೂ. ಆಗಿತ್ತು. ಅದೀಗ ಶೇಕಡ 59ರಷ್ಟು ಹೆಚ್ಚಾಗಿ 14.46 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ಐದು ವರ್ಷಗಳಲ್ಲಿ ಶಾಸಕರುಗಳ ಆಸ್ತಿಯು ಗಮನಾರ್ಹವಾಗಿ ಏರಿಕೆಯಾಗಿದೆ.
12 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ
ಈ ನಡುವೆ ನೂತನ ಶಾಸಕರ ಪೈಕಿ 12 ಮಂದಿ ಕ್ರಿಮಿನಲ್ ಪ್ರಕರಣವನ್ನು ಹೊಂದಿರುವವರು. ತಮ್ಮ ಅಫಿಡವಿಟ್ನಲ್ಲಿ ಈ ಮಾಹಿತಿಯನ್ನು ಅವರೇ ಬಹಿರಂಗಪಡಿಸಿದ್ದಾರೆ. ಈ ಪೈಕಿ ಆರು ಮಂದಿ ವಿರುದ್ಧ ಕೊಲೆಯಂತಹ ಗಂಭೀರ ಆರೋಪಗಳಿವೆ. 2019ರಲ್ಲಿ ಏಳು ಶಾಸಕರ ಮೇಲೆ ಗಂಭೀರ ಕ್ರಿಮಿನಲ್ ಮೊಕದ್ದಮೆಗಳಿದ್ದವು. ಶೇಕಡ 19ರಷ್ಟು ಕಾಂಗ್ರೆಸ್ ಶಾಸಕರು, ಶೇಕಡ 6ರಷ್ಟು ಬಿಜೆಪಿ ಶಾಸಕರು ಮತ್ತು ಶೇಕಡ 67ರಷ್ಟು ಸ್ವತಂತ್ರ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.
ಇದನ್ನು ಓದಿದ್ದೀರಾ? ಬಡವರಿಗೆ 10%; ಶ್ರೀಮಂತರಿಗೆ 5% ಬಡ್ಡಿ; ಇದೇ ಮೋದಿ ನ್ಯಾಯ? Gautham Adani | Ambani | Sudha Murthy | Modi
ಇನ್ನು ನೂತನ ಶಾಸಕರುಗಳು ಪೈಕಿ 28 ಮಂದಿ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಸಾಲವನ್ನು ಹೊಂದಿದ್ದಾರೆ. ಲೋಹರು ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜ್ಬೀರ್ ಫರ್ಟಿಯಾ 44 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. 2023-24ರ ಆದಾಯ ತೆರಿಗೆ ರಿಟರ್ನ್ನಲ್ಲಿ 10.75 ಕೋಟಿ ರೂಪಾಯಿಗಳ ಆದಾಯವನ್ನು ಘೋಷಿಸಿರುವ ಫರ್ಟಿಯಾ ಅತಿ ಹೆಚ್ಚು ಆದಾಯ ಗಳಿಸಿರುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ
ಹರಿಯಾಣದ ನೂತನ ಶಾಸಕರ ಪೈಕಿ ಶೇಕಡ 68ರಷ್ಟು ಮಂದಿ ಪದವೀಧರರು ಅಥವಾ ಉನ್ನತ ಪದವಿಗಳನ್ನು ಪೂರೈಸಿದ್ದಾರೆ. ಆದರೆ ಶೇಕಡ 29ರಷ್ಟು ಶಾಸಕರು 8ನೇ ತರಗತಿಯಿಂದ 12ನೇ ತರಗತಿಯವರೆಗೆ (ದ್ವಿತೀಯ ಪಿಯುಸಿ) ಮಾತ್ರ ವಿದ್ಯಾಭ್ಯಾಸ ಪಡೆದಿದ್ದಾರೆ.
ಹರಿಯಾಣದ ನೂತನ ವಿಧಾನಸಭೆ ಸದಸ್ಯರಲ್ಲಿ ಶೇಕಡ 14ರಷ್ಟು ಮಹಿಳಾ ಶಾಸಕರು ಇದ್ದಾರೆ. 2019ರ ಲೆಕ್ಕಾಚಾರಕ್ಕೆ (ಶೇಕಡ 10) ಹೋಲಿಸಿದಾಗ ಮಹಿಳಾ ಶಾಸಕರ ಪ್ರಮಾಣದಲ್ಲಿ ಹೆಚ್ಚಳ ಕಾಣಬಹುದು. ಇನ್ನು ವಿಧಾನಸಭೆಯಲ್ಲಿ ಶೇಕಡ 66ರಷ್ಟು ಶಾಸಕರು 51ರಿಂದ 80 ವರ್ಷ ವಯಸ್ಸಿನವರಾಗಿದ್ದಾರೆ. ಅಂದರೆ ಯುವ ಶಾಸಕರ ಸಂಖ್ಯೆ ಕಡಿಮೆಯಿದೆ.
