ಕಾಂಗ್ರೆಸ್‌ನ ಭೂಪಿಂದರ್ ಹೂಡಾ ಜಾಟ್ ಸಮುದಾಯಕ್ಕೆ ಸೇರಿದ್ದರೂ, ಹೂಡಾ ಬೆಂಬಲಿಗರು- 'ಮುಂದಿನ ಸಿಎಂ ಹೂಡಾ' ಎಂದು ಪ್ರಚಾರ ಮಾಡಿದ್ದರೂ, ಹೈಕಮಾಂಡ್ ಈ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿರಲಿಲ್ಲ. ಬದಲಿಗೆ ಕುಮಾರಿ ಸೆಲ್ಜಾ ಕೂಡ, 'ಕಾಂಗ್ರೆಸ್ ಬಹುಮತ ಗಳಿಸಿದರೆ, ನಾನೂ ಕೂಡ ಸಿಎಂ ಆಕಾಂಕ್ಷಿ' ಎಂದಿದ್ದರು. ಅದಕ್ಕೂ ಹೈಕಮಾಂಡ್ ಒಲವು ತೋರಿರಲಿಲ್ಲ. ಇದು ಪಕ್ಷಕ್ಕೆ ದುಬಾರಿಯಾಗಿದೆ, ಸೋಲಿನತ್ತ ಸಾಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದಶಕದ ನಂತರ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಹರಿಯಾಣದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್, ಮಂಗಳವಾರ ಬೆಳಗ್ಗೆ ಹೊರಬಿದ್ದ ಫಲಿತಾಂಶಗಳ ಏರಿಳಿತದ ಆಟದಲ್ಲಿ ಅಂಚಿಗೆ ತಳ್ಳಲ್ಪಟ್ಟಿತ್ತು. ಪಕ್ಷದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತ್ತು.
ಲೋಕಸಭೆ ಚುನಾವಣೆಯಲ್ಲಿ ಹರಿಯಾಣದಲ್ಲಿ ತನ್ನ ಸಾಧನೆಯ ಬಗ್ಗೆ ಸಂತೋಷಪಡುತ್ತಿದ್ದ ಕಾಂಗ್ರೆಸ್‌ಗೆ ಈ ಹಿನ್ನಡೆ, ಭಾರೀ ಮುಖಭಂಗಕ್ಕೆ ಈಡು ಮಾಡಿದೆ. ಕಳೆದ ಲೋಕ ಚುನಾವಣೆಯಲ್ಲಿ ಅದು 10 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದಿತು. ಮತ್ತು ರಾಜ್ಯವನ್ನು ಬಿಜೆಪಿಯಿಂದ ಕಸಿದುಕೊಳ್ಳುವ ಆತ್ಮವಿಶ್ವಾಸದಲ್ಲಿತ್ತು.
ಅದಕ್ಕೆ ಪೂರಕವಾಗಿ, ಆಡಳಿತಾರೂಢ ಬಿಜೆಪಿಯ ದುರಾಡಳಿತ, ಕೆಲ ತಿಂಗಳ ಹಿಂದೆ ನೇಮಕಗೊಂಡ ಮುಖರಹಿತ ಮುಖ್ಯಮಂತ್ರಿ, ಮೂರು ಕೃಷಿ ಕಾಯ್ದೆಗಳ ಮೂಲಕ ರೈತರ ವಿರೋಧ ಕಟ್ಟಿಕೊಂಡದ್ದು, ರೈತರ ಪ್ರತಿಭಟನೆಗೆ ತೊಂದರೆ ಕೊಟ್ಟಿದ್ದು, ಜಾಟರು ಮತ್ತು ದಲಿತರು ಪಕ್ಷದಿಂದ ದೂರ ಆಗಿದ್ದು, ಟಿಕೇಟ್ ವಂಚಿತರು ಬೇರೆ ಪಕ್ಷಗಳತ್ತ ಮುಖ ಮಾಡಿ ಬಿಜೆಪಿಯ ಬಲ ಕುಂದಿಸಿದ್ದು- ಇವೆಲ್ಲ ಕಾರಣಗಳು ಬಿಜೆಪಿಗೆ ಈ ಬಾರಿ ಕಷ್ಟವಿದೆ ಎನಿಸಿತ್ತು.
ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುಮ್ಮಸ್ಸು ಮನೆ ಮಾಡಿತ್ತು. ಕುಸ್ತಿ ಪಟು ವಿನೇಶ್ ಫೋಗಟ್ ಮೋದಿ ವಿರುದ್ಧ ಗುಟುರು ಹಾಕಿದ್ದಷ್ಟೇ ಅಲ್ಲ, ಕಾಂಗ್ರೆಸ್ ಸೇರಿ ಜುಲಾನಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಕುಮಾರಿ ಸೆಲ್ಜಾ ಮತ್ತು ಭೂಪಿಂದರ್ ಹೂಡಾ ನಡುವಿನ ವಿರಸವನ್ನು ರಾಹುಲ್ ಗಾಂಧಿ ಶಮನ ಮಾಡಿದ್ದು, ಪ್ರತಿಭಟನಾನಿರತ ರೈತರನ್ನು ರಾಹುಲ್ ಪ್ರೀತಿಯಿಂದ ಕಂಡಿದ್ದು, ರೈತ ಹೋರಾಟವನ್ನು ಬೆಂಬಲಿಸಿದ್ದು, ಹೂಡಾ ಕಾರಣಕ್ಕೆ ಜಾಟರು ಪಕ್ಷದ ಪರವಾಗಿದ್ದು- ಈ ಎಲ್ಲ ಕಾರಣಗಳು ಕಾಂಗ್ರೆಸ್ ಅಧಿಕಾರಕ್ಕೇರುವುದು ಶತಸಿದ್ಧ ಎನಿಸಿತ್ತು.
ಅದಕ್ಕಿಂತಲೂ ಮುಖ್ಯವಾಗಿ, ದೇಶದ ನಾನಾ ಸುದ್ದಿ ಸಂಸ್ಥೆಗಳು, ಖಾಸಗಿ ಸರ್ವೇ ಸಂಸ್ಥೆಗಳು ಹಾಗೂ ರಾಜಕೀಯ ವಿಶ್ಲೇಷಕರು- ಈ ಬಾರಿ ಹರಿಯಾಣದಲ್ಲಿ ಬಿಜೆಪಿ ಸೋಲಲಿದೆ, ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಲಿದೆ ಎಂದೇ ಭವಿಷ್ಯ ನುಡಿದಿದ್ದರು.
ಆದರೆ ಆದದ್ದೇನು?
ಕಾಂಗ್ರೆಸ್ ನಾಯಕರ ಅತಿಯಾದ ಆತ್ಮವಿಶ್ವಾಸ ಕೈ ಕೊಟ್ಟಿತೇ? ಪಕ್ಷದೊಳಗಿನ ನಾಯಕರ ನಡುವಿನ ಕಾಲೆಳೆದಾಟ ಮಿತಿ ಮೀರಿತೇ? ಕುಮಾರಿ ಸೆಲ್ಜಾ ಮತ್ತು ಭೂಪಿಂದರ್ ಹೂಡಾ ನಡುವಿನ ಸಿಎಂ ಕುರ್ಚಿಗಾಗಿ ಕಾದಾಟ ಕಾರಣವಾಯಿತೇ? ರಾಹುಲ್ ಗಾಂಧಿಯವರ ವರ್ಚಸ್ಸು ಕಳೆಗುಂದಿತೇ?
ಈ ಎಲ್ಲ ಪ್ರಶ್ನೆಗಳು ಈಗ ರಾಜಕೀಯ ವಿಶ್ಲೇಷಕರ ನಡುವೆ ಚರ್ಚೆಯಾಗುತ್ತಿವೆ. ಹಾಗೆಯೇ ಕಾಂಗ್ರೆಸ್ ವಲಯದಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿವೆ.
2014ರಲ್ಲಿ ಹರಿಯಾಣದಲ್ಲಿ ಬಿಜೆಪಿಯಿಂದ ಅಧಿಕಾರದಿಂದ ಹೊರಗುಳಿದ ಕಾಂಗ್ರೆಸ್, 2019ರ ಕೊನೆಯ ವಿಧಾನಸಭಾ ಚುನಾವಣೆಯ ನಂತರ ನಿಧಾನವಾಗಿ ಮತ್ತು ಸ್ಥಿರವಾಗಿ ಹಿಮ್ಮೆಟ್ಟಿಸುವ ಲಕ್ಷಣಗಳನ್ನು ತೋರಿಸಿತ್ತು.
2014ರಲ್ಲಿ 20.7% ಮತ ಗಳಿಕೆಯೊಂದಿಗೆ 15 ಸ್ಥಾನಗಳನ್ನು ಗೆದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್, 2019ರಲ್ಲಿ 31 ಸ್ಥಾನಗಳನ್ನು ಪಡೆದು ಪುಟಿದೆದ್ದಿತು. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ, ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತಷ್ಟು ಸುಧಾರಿಸಿಕೊಂಡಿತ್ತು. ಅದು ಕಾಂಗ್ರೆಸ್ ಕಾರ್ಯಕರ್ತರಲ್ಲಿ, ನಾಯಕರಲ್ಲಿ ಮತ್ತು ದಿಲ್ಲಿಯ ನಾಯಕರಲ್ಲಿ ಆತ್ಮವಿಶ್ವಾಸ ಹುಟ್ಟಿಸಿತ್ತು. ಈ ಬಾರಿ ಹರಿಯಾಣದಲ್ಲಿ ಅಧಿಕಾರಕ್ಕೇರುವುದು ಗ್ಯಾರಂಟಿ ಎಂಬುದು, ರಾಹುಲ್ ಗಾಂಧಿಯವರ ಪ್ರಚಾರ ಸಭೆಗಳಿಗೆ ಸೇರುತ್ತಿದ್ದ ಜನರಿಂದ ಗೋಚರಿಸುತ್ತಿತ್ತು. ಅದನ್ನೇ ಎಕ್ಸಿಟ್ ಪೋಲ್‌ಗಳು ಕೂಡ ಹೇಳಿದ್ದವು.
ಎಕ್ಸಿಟ್ ಪೋಲ್‌ನಲ್ಲಿ ಗೆದ್ದಿದ್ದ ಕಾಂಗ್ರೆಸ್ ಈಗ ರೇಸ್‌ನಿಂದಲೇ ಎಕ್ಸಿಟ್ ಆಗಿದೆ.
ಚುನಾವಣೆ ಹತ್ತಿರವಾದಂತೆಲ್ಲ ಬೇರೆ ಪಕ್ಷಗಳ ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದು, ಹೂಡಾ ಮತ್ತು ಸೆಲ್ಜಾ ನಡುವಿನ ವಿರಸ, ಮೇಲ್ನೋಟಕ್ಕೆ ತೇಪೆ ಹಾಕಿದಂತೆ ಕಂಡರೂ, ಒಳಗೊಳಗೇ ಪಕ್ಷವಿರೋಧಿ ಚಟುವಟಿಕೆಯಲ್ಲಿ ಇಬ್ಬರೂ ನಿರತವಾಗಿದ್ದು ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಓದಿದ್ದೀರಾ?: ಹರಿಯಾಣ ವಿಧಾನಸಭೆ: ಗೆಲುವು ಸಾಧಿಸಿದ ಕುಸ್ತಿಪಟು ವಿನೇಶ್ ಫೋಗಟ್
ಹಾಗೆಯೇ ಮತ್ತೊಂದು ಮುಖ್ಯ ಕಾರಣ, ಕೊನೆ ಕ್ಷಣದಲ್ಲಿ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದು ಬಿಜೆಪಿಗೆ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.
ಹರಿಯಾಣದ ಒಟ್ಟು ಜನಸಂಖ್ಯೆಯಲ್ಲಿ ಜಾಟರೇ ಬಹುಸಂಖ್ಯಾತರು, ಬಲಾಢ್ಯರು. ಶೇ.25ರಷ್ಟಿರುವ ಇವರು ಮೊದಲಿನಿಂದಲೂ ಇಲ್ಲಿನ ರಾಜಕಾರಣವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಹಾಗೆಯೇ ಹೆಚ್ಚು ಮುಖ್ಯಮಂತ್ರಿಗಳಾಗಿದ್ದಾರೆ. ಭಜನ್ ಲಾಲ್, ಬನ್ಸಿ ಲಾಲ್, ಭೂಪಿಂದರ್ ಹೂಡಾ, ಓಂ ಪ್ರಕಾಶ್ ಚೌಟಾಲಾ- ಇವರೆಲ್ಲರೂ ಪ್ರಭಾವಿ ಜಾಟ್ ಸಮುದಾಯದ ಮುಖ್ಯಮಂತ್ರಿಗಳು. ಇವರ ಕುಟುಂಬಗಳೇ ಹರಿಯಾಣ ರಾಜಕಾರಣವನ್ನು ದಶಕಗಳ ಕಾಲ ನಿಯಂತ್ರಿಸುತ್ತಾ ಬಂದಿವೆ.
ಜಾಟರಷ್ಟೇ ಸಂಖ್ಯೆಯ ಓಬಿಸಿಗಳು ಇಲ್ಲಿ ಪ್ರಬಲರಾಗಿದ್ದಾರೆ. ಜೊತೆಗೆ ದಲಿತರ ಸಂಖ್ಯೆಯೂ ಗಣನೀಯವಾಗಿದೆ. ಸದ್ಯಕ್ಕೆ ಓಬಿಸಿ ಮತ್ತು ಮೇಲ್ಜಾತಿ ಜನ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆಯೇ? ದಲಿತರು ಮತ್ತು ಜಾಟರ ಮತಗಳು ವಿಭಜನೆಯಾಗಿವೆಯೇ? ಇದು ಸದ್ಯಕ್ಕೆ ಸಿಗುತ್ತಿರುವ ಫಲಿತಾಂಶದ ಹಿಂದಿರುವ ಸತ್ಯಗಳು. ಪೂರ್ಣ ಫಲಿತಾಂಶ ಹೊರಬಿದ್ದ ಮೇಲೆ, ನಿಖರ ಮತ ವಿಭಜನೆ ಸಿಗಬಹುದು, ಇರಲಿ.
ಕಾಂಗ್ರೆಸ್‌ನ ಭೂಪಿಂದರ್ ಹೂಡಾ ಜಾಟ್ ಸಮುದಾಯಕ್ಕೆ ಸೇರಿದ್ದರೂ, ಹೂಡಾ ಬೆಂಬಲಿಗರು- ‘ಮುಂದಿನ ಸಿಎಂ ಹೂಡಾ’ ಎಂದು ಪ್ರಚಾರ ಮಾಡಿದ್ದರೂ, ಹೈಕಮಾಂಡ್ ಈ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿರಲಿಲ್ಲ. ಬದಲಿಗೆ ಕುಮಾರಿ ಸೆಲ್ಜಾ ಕೂಡ, ‘ಕಾಂಗ್ರೆಸ್ ಬಹುಮತ ಗಳಿಸಿದರೆ, ನಾನೂ ಕೂಡ ಸಿಎಂ ಆಕಾಂಕ್ಷಿ’ ಎಂದಿದ್ದರು. ಅದಕ್ಕೂ ಹೈಕಮಾಂಡ್ ಒಲವು ತೋರಿರಲಿಲ್ಲ. ಇದು ಪಕ್ಷಕ್ಕೆ ದುಬಾರಿಯಾಗಿದೆ, ಸೋಲಿನತ್ತ ಸಾಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೇಖಕ, ಪತ್ರಕರ್ತ