ಒಂದೆಡೆ ಹರಿಯಾಣ ಸರ್ಕಾರ ರೈತ ಹೋರಾಟ ತಡೆಯಲು ಪಂಜಾಬ್ ಗಡಿಗಳಿಗೆ ಬೇಲಿ ಹಾಕುತ್ತಿದ್ದರೆ, ಮತ್ತೊಂದೆಡೆ ಪಂಜಾಬ್ ಮುಖ್ಯಮಂತ್ರಿ ರೈತರ ಜೊತೆಗೆ ಸಂಧಾನಕ್ಕೆ ಪ್ರಯತ್ನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರೈತ ಸಂಘಟನೆಗಳು ಫೆಬ್ರವರಿ 13ರಂದು ಆಯೋಜಿಸಿರುವ ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸುವ ರಾಜ್ಯದ ರೈತರನ್ನು ತಡೆಯಲು ಹರಿಯಾಣ ಪೊಲೀಸರು ಪಂಜಾಬ್ನ ಗಡಿಗಳಿಗೆ ಬೇಲಿ ಹಾಕುತ್ತಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಐಎನ್ಎಲ್ಡಿ ನಾಯಕ ಮತ್ತು ಶಾಸಕ ಅಭಯ್ ಸಿಂಗ್ ಚೌಟಾಲ ತಿಳಿಸಿದ್ದಾರೆ.
ವಿಡಿಯೋ ಕ್ಲಿಪ್ ಒಂದನ್ನು ‘ಎಕ್ಸ್’ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿರುವ ಐಎನ್ಎಲ್ಡಿ ನಾಯಕ ಮತ್ತು ಶಾಸಕ ಅಭಯ್ ಸಿಂಗ್ ಚೌಟಾಲ, “ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಹರಿಯಾಣದ ಸರ್ವಾಧಿಕಾರಿ ಮನೋಭಾವದ ಖಟ್ಟರ್ ಸರ್ಕಾರ ಜನರ ಪಾಸ್ಪೋರ್ಟ್ಗಳನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಗ್ರಾಮಗಳಲ್ಲಿ ಘೋಷಣೆ ಮಾಡುತ್ತಿದ್ದಾರೆ. ರೈತ ಹೋರಾಟಕ್ಕೆ ಬೆಂಬಲಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
अघोषित आपातकाल लागू है! हरियाणा की तानाशाह खट्टर सरकार गांव गांव ऐलान कर रही है कि जो आंदोलन में किसानों का साथ देगा उनके पासपोर्ट रद्द कर दिए जाएंगे तथा उनके खिलाफ कड़ी कार्रवाई की जाएगी। #FarmersProtest2024 pic.twitter.com/rq0eJIldZI
— Abhay Singh Chautala (@AbhaySChautala) February 11, 2024
ವಿಡಿಯೋದಲ್ಲಿ ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರಿಗೆ ಬೆಂಬಲ ನೀಡುವವರ ಪಾಸ್ಪೋರ್ಟ್ಗಳನ್ನು ರದ್ದುಮಾಡುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ಹಾಕುತ್ತಿರುವ ದೃಶ್ಯಗಳಿವೆ. “ರೈತ ಹೊರಾಟದಲ್ಲಿ ಭಾಗಿಯಾದ ಗ್ರಾಮಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೋರಾಟದಲ್ಲಿ ಭಾಗಿಯಾದವರ ಜೆಸಿಬಿ ಅಥವಾ ಟ್ರ್ಯಾಕ್ಟರ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಕಾನೂನು ಕ್ರಮ ಜರುಗಿಸಿದಾಗ ಪಾಸ್ಪೋರ್ಟ್ ರದ್ದಾಗುತ್ತದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆದರೆ ಈ ವಿಡಿಯೋ ಅಧಿಕೃತವೇ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ.
ಒಂದೆಡೆ, ಒಪ್ಪಿಗೆ ಇಲ್ಲದೆ ರೈತ ಹೋರಾಟದಲ್ಲಿ ಭಾಗವಹಿಸಿದಲ್ಲಿ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದಲ್ಲಿ ಪಾಸ್ಪೋರ್ಟ್ಗಳನ್ನು ತಡೆಹಿಡಿಯಲಾಗುವುದು ಎಂದು ಹರಿಯಾಣ ಸರ್ಕಾರ ರೈತ ಸಂಘಟನೆಗಳಿಗೆ ನೊಟೀಸ್ ಕಳುಹಿಸುತ್ತಿದ್ದರೆ,. ಮತ್ತೊಂದೆಡೆ, ಪಂಜಾಬ್ ಮತ್ತು ಭಾರತದ ನಡುವೆ ಗಡಿಗಳನ್ನು ಸೃಷ್ಟಿಸದೆ ರೈತರ ಜೊತೆಗೆ ಮಾತುಕತೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಪಂಜಾಬ್ ಗಡಿಭಾಗದ ಇತರ ರಸ್ತೆಗಳಲ್ಲಿ ಭಾರೀ ಬೇಲಿಗಳನ್ನು ನಿರ್ಮಿಸಲು ಹರಿಯಾಣ ಸರ್ಕಾರ ಪ್ರಯತ್ನಿಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಪಂಜಾಬ್ ಮುಖ್ಯಮಂತ್ರಿ ಸಂಧಾನ ಪ್ರಯತ್ನ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭಾಷಣದಲ್ಲೇ ಉಳಿದ ಸಬ್ಕಾ ಸಾಥ್ ಸಬ್ಕಾ ವಿಕಾಸ್
ಪಂಜಾಬ್ ಮತ್ತು ಭಾರತದ ಗಡಿಗಳಿಗೆ ಬೇಲಿ ಹಾಕದಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿರುವ ಭಗವಂತ್ ಮಾನ್, “ಹರಿಯಾಣದಲ್ಲಿ ಏನಾಗುತ್ತಿದೆ? ಪಂಜಾಬ್ ಗಡಿಗಳಿಗೆ ಅವರು ಬೇಲಿ ಹಾಕುತ್ತಿದ್ದಾರೆ. ರೈತರೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಭಾರತ-ಪಂಜಾಬ್ ಗಡಿ ರಚಿಸದಂತೆ ಬೇಡಿಕೊಳ್ಳುತ್ತೇನೆ. ನೀವು ಗಡಿ ಹಾಕುತ್ತಿದ್ದಿರಾ? ಪಾಕಿಸ್ತಾನದ ಗಡಿಯಲ್ಲೂ ಇಂತಹುದೇ ಬೇಲಿಗಳನ್ನು ನಿರ್ಮಿಸಲಾಗಿದೆ” ಎಂದು ಮಾನ್ ಹೇಳಿದ್ದಾರೆ.
ಫೆಬ್ರವರಿ 13ರಂದು ಪಂಜಾಬ್ ರೈತರು ಹರಿಯಾಣದ ಮೂಲಕ ದೆಹಲಿಗೆ ತೆರಳದಂತೆ ತಡೆಯಲು ಗಡಿಭಾಗದಲ್ಲಿ ಬೇಲಿಗಳನ್ನು ನಿರ್ಮಿಸಲಾಗಿದೆ ಎಂದು ಹರಿಯಾಣ ಸರ್ಕಾರ ಹೇಳಿದೆ. “ಗೋಧಿ ಅಥವಾ ಅಕ್ಕಿಗಾಗಿ ನೀವು ಎಲ್ಲಿಗೆ ಹೋಗುತ್ತೀರಿ? ನಿಮಗೆ ಆಹಾರ ಮತ್ತು ಹೊಟ್ಟೆಗೆ ಅಗತ್ಯವಿರುವ ವಸ್ತುಗಳನ್ನು ನಾವೇ ಒದಗಿಸಬೇಕು. ನಮ್ಮನ್ನೂ ನಿಮ್ಮೊಳಗಿನ ಒಬ್ಬರಂತೆ ಕಾಣಿರಿ. ಸ್ವಾತಂತ್ರ್ಯ ಹೋರಾಟಕ್ಕೆ ನಾವೂ ಸಾಕಷ್ಟು ಕೊಡುಗೆ ನೀಡಿದ್ದೇವೆ” ಎಂದು ಮಾನ್ ಹೇಳಿದ್ದಾರೆ.
“ನಮ್ಮ ಸೈನಿಕರು ಗಡಿಭಾಗದಲ್ಲಿ ದೇಶಕ್ಕಾಗಿ ಸಾಯಲು ಸಿದ್ಧವಾಗಿದ್ದಾರೆ. ಆದರೆ ಇದೀಗ ದ್ವೇಷ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ರಾಷ್ಟ್ರಗೀತೆಯಿಂದಲೂ ಪಂಜಾಬ್ ಹೆಸರನ್ನು ತೆಗೆಯಲು ಬಯಸಿದ್ದಾರೆ.ಅದಕ್ಕಾಗಿ ಮಸೂದೆಯ ಅಗತ್ಯವಿದೆ” ಎಂದು ಅವರು ಹೇಳುವ ದೃಶ್ಯಗಳಿವೆ.
ರೈತರ ಹಕ್ಕುಗಳಿಗಾಗಿ ಕೆಲಸ ಮಾಡಲು ಹರಿಯಾಣ ಸರ್ಕಾರ ಸಿದ್ಧವಿದೆ ಎಂದು ಹರಿಯಾಣದ ಗೃಹಸಚಿವ ಅನಿಲ್ ವಿಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಕನಿಷ್ಠ ಬೆಂಬಲ ಬೆಲೆಕ್ಕೆ ಸಂಬಂಧಿಸಿ ರೈತರಿಗೆ ಮೂರು ಕಂತುಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಪಂಜಾಬ್ ರೈತರ ಜೊತೆಗೆ ಮಾತುಕತೆ ನಡೆಸುತ್ತಿದೆ. ಮಾತುಕತೆಯಿಂದಲಷ್ಟೇ ಪರಿಹಾರ ಸಾಧ್ಯವಾಗಿರುವುದರಿಂದ ರೈತರನ್ನು ಸಮಾಧಾನಿಸಲು ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ. “ಹರಿಯಾಣದ ಭದ್ರತೆಯ ಕಡೆಗೆ ನಾವು ಗಮನಕೊಡಲೇಬೇಕು. ರೈತ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಂಡು ಹೋರಾಟ ನಡೆಸಲು ನಾವು ಒಪ್ಪಿಗೆ ನೀಡಲು ಸಾಧ್ಯವಿಲ್ಲ” ಎಂದೂ ವಿಜ್ ಹೇಳಿದ್ದಾರೆ.