ಈ ವರ್ಷದ ಅಕ್ಟೋಬರ್‌ನಲ್ಲಿ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲ ಪಕ್ಷಗಳು ಚುನಾವಣಾ ತಯಾರಿ ಅರಂಭಿಸಿವೆ. ಇದೀಗ, ಎಎಪಿ ಕೂಡ ಚುನಾವಣಾ ಅಖಾಡಕ್ಕೆ ಇಳಿದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಹರಿಯಾಣಕ್ಕೆ ಐದು ಗ್ಯಾರಂಟಿಗಳನ್ನು ಘೋಷಿದ್ದಾರೆ. ಬಂಧನದಲ್ಲಿರುವ ಕೇಜ್ರಿವಾಲ್ ಬದಲಾಗಿ ಸುನೀತಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಎಎಪಿ ಸಂಸದರಾದ ಸಂಜಯ್ ಸಿಂಗ್ ಮತ್ತು ಸಂದೀಪ್ ಪಾಠಕ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಸುನೀತಾ ಕೇಜ್ರಿವಾಲ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಎಎಪಿ ಅಧಿಕಾರಿಕ್ಕೆ ಬಂದರೆ, ಪಂಜಾಬ್ ಮತ್ತು ದೆಹಲಿಯಂತೆ ಹಗಲಿರುಳು ಉಚಿತ ವಿದ್ಯುತ್, ಪ್ರತಿಯೊಬ್ಬ ಯುವಕನಿಗೆ ಉದ್ಯೋಗ, ಪ್ರತಿ ಮಗುವಿಗೆ ಶಿಕ್ಷಣ, ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆಗೆ ಮಾಸಿಕ 1,000 ರೂ. ಸಹಾಯ ಧನ ನೀಡುವುದಾಗಿ ಘೋಷಿಸಿದ್ದಾರೆ.
ಎಎಪಿಯ ರಾಜ್ಯ ಘಟಕದ ಮುಖ್ಯಸ್ಥ ಸುಶೀಲ್ ಗುಪ್ತಾ ಮಾತನಾಡಿ, “ಪಕ್ಷವು ಎಲ್ಲ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಚುನಾವಣೆಯಲ್ಲಿ ಪ್ರಬಲವಾಗಿ ಹೋರಾಡಲು ಮತ್ತು ಸರ್ಕಾರ ರಚಿಸಲು ಸಜ್ಜಾಗಿದೆ” ಎಂದು ಹೇಳಿದ್ದಾರೆ.
“ಜನರು ಬದಲಾವಣೆ ಬಯಸಿದ್ದಾರೆ. ಹರಿಯಾಣದಲ್ಲಿ ಸಂಪೂರ್ಣ ಬಲದೊಂದಿಗೆ ಚುನಾವಣೆ ಎದುರಿಸಲು ಎಎಪಿ ನಿರ್ಧರಿಸಿದೆ” ಎಂದು ಹೇಳಿದ್ದಾರೆ.
ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಪಾಠಕ್ ಮಾತನಾಡಿ, “ನಾವು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಲ್ಲಿ ಪೂರ್ಣ ಶಕ್ತಿಯಿಂದ ಚುನಾವಣೆ ಎದುರಿಸಿದಂತೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಬಲವಾಗಿ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಬಿಜೆಪಿ ಸರ್ಕಾರವು ತೂಗುಗತ್ತಿಯ ಮೇಲಿದೆ. ರೈತ ಹೋರಾಟದ ಸಮಯದಲ್ಲಿ ರೈತರ ಮೇಲೆ ದಾಳಿ, ದೌರ್ಜನ್ಯ ನಡೆಸಿದ ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ, ಅಧಿಕಾರಕ್ಕೇರಬೇಕೆಂದು ಕಾಂಗ್ರೆಸ್ ಭಾರೀ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟದಲ್ಲಿರುವ ಎಎಪಿ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿತ್ತು. ಅದರೆ, ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ ಎಂದು ಎಎಪಿ ಹೇಳುತ್ತಿದೆ. ಹೀಗಾಗಿ, ಕಾಂಗ್ರೆಸ್-ಎಎಪಿ ಮೈತ್ರಿ ವಿಧಾನಸಭೆಯಲ್ಲಿ ಮುಂದುವರೆಯುವುದೇ ಅಥವಾ ಮುರಿಯುವುದೇ ಎಂಬ ಪ್ರಶ್ನೆ ಮುನ್ನೆಲೆಯಲ್ಲಿದೆ.