ಜುಲೈ 31 ರಂದು ಹರ್ಯಾಣದ ನುಹ್ ಜಿಲ್ಲೆಯ ಬ್ರಜಮಂಡಲ್ ಯಾತ್ರೆಯಲ್ಲಿ ಉಂಟಾದ ಹಿಂಸಾಚಾರದ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯದ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಫಿರೋಜ್‌ಪುರ ಜಿರ್ಕಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಹರಿಯಾಣ ಪೊಲೀಸರ ವಿಶೇಷ ತಂಡ ಬಂಧಿಸಿದೆ.
ಪೊಲೀಸರು ಶಾಸಕರನ್ನು ಬಂಧಿಸಿ ನುಹ್ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನುಹ್ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ನುಹ್ ಜಿಲ್ಲೆಯ ಫಿರೋಜ್‌ಪುರ ಜಿರ್ಕಾ ವಿಧಾನಸಭಾ ಕ್ಷೇತ್ರದ ಶಾಸಕ ಮಮ್ಮನ್ ಖಾನ್ ಅವರಿಗೆ ಆಗಸ್ಟ್ 25 ರಂದು ನೋಟಿಸ್ ನೀಡಿ, ಆಗಸ್ಟ್ 31 ರಂದು ತನಿಖೆಗೆ ಹಾಜರಾಗುವಂತೆ ಸೂಚಿಸಿತ್ತು.
ನೋಟಿಸ್‌ಗೆ ಪ್ರತಿಕ್ರಿಯಿಸಿದ ಶಾಸಕರು ಅನಾರೋಗ್ಯದ ಕಾರಣ ನೀಡಿದ್ದರು. ಆ ಬಳಿಕ ಸೆ.5ರಂದು ಪೊಲೀಸರು ಎರಡನೇ ಬಾರಿಗೆ ಹಾಗೂ ಸೆ.10ರಂದು ಮತ್ತೊಮ್ಮೆ ನೋಟಿಸ್ ನೀಡಿದ್ದರೂ ಹಾಜರಾಗಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಶೇ. 40 ಹಾಲಿ ಸಂಸದರಿಗೆ ಕ್ರಿಮಿನಲ್ ಆರೋಪ, ಶೇ. 7 ಮಂದಿ ಶತ ಕೋಟ್ಯಾಧೀಶರು: ಎಡಿಆರ್ ವರದಿ
ಮಮ್ಮನ್ ಅವರು ಪೋಲಿಸರು ತಮ್ಮನ್ನು ಬಂಧಿಸದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಉನ್ನತ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ವಾದಿಸಿದ್ದರು.
ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಮಮ್ಮನ್ ಅವರಿಗೆ ಸೂಚಿಸಿ ಮುಂದಿನ ದಿನಾಂಕವನ್ನು ಅಕ್ಟೋಬರ್ 19ಕ್ಕೆ ನಿಗದಿಪಡಿಸಿದ್ದಾರೆ.
ಜುಲೈ 31 ರಂದು, ನುಹ್ ಜಿಲ್ಲೆಯಲ್ಲಿ ಬ್ರಿಜ್ಮಂಡಲ್ ಯಾತ್ರೆಯ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿತ್ತು. ಇದರ ನಂತರ ಗುರುಗ್ರಾಮ್, ಪಲ್ವಾಲ್, ರೇವಾರಿ, ಸೋನಿಪತ್ ಮತ್ತು ಫರಿದಾಬಾದ್‌ನ ಇತರ ಪ್ರದೇಶಗಳಿಗೆ ಹರಡಿತು. ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷ ಮತ್ತು ಓರ್ವ ಧರ್ಮಗುರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೇ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.