- ಹರಿಯಾಣ ಕುಸ್ತಿ ಸಂಘದ ಅಧ್ಯಕ್ಷ ರೋಹ್ತಾಶ್ ಸಿಂಗ್ ಕಾರ್ಯದರ್ಶಿಗಳ ಅಮಾನತು
- ಬ್ರಿಜ್ ಭೂಷಣ್ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳು
ಹರಿಯಾಣ ಹವ್ಯಾಸಿ ಕುಸ್ತಿ ಸಂಘ (ಎಚ್‌ಎಡಬ್ಲ್ಯುಎ) ತನಗೆ ಸಂಯೋಜಿತ ಮೂರು ಜಿಲ್ಲಾ ಘಟಕಗಳ ಕಾರ್ಯದರ್ಶಿಗಳನ್ನು ಮಂಗಳವಾರ (ಮೇ 9) ಅಮಾನತು ಮಾಡಿದೆ.
ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿಯಲ್ಲಿ ಮಹಿಳೆ ಹಾಗೂ ಪುರುಷ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುಸ್ತಿ ಸಂಘ ಹೇಳಿದೆ.
ಜಜ್ಜರ್‌ನ ವೀರೇಂದ್ರ ಸಿಂಗ್ ದಲಾಲ್, ಹಿಸಾರ್‌ನ ಸಂಜಯ್ ಸಿಂಗ್ ಮಲಿಕ್ ಮತ್ತು ಮೇವಾತ್‌ನ ಜೈ ಭಗವಾನ್ ರನ್ನು ಅಮಾನತುಗೊಳಿಸಿ ಹರಿಯಾಣ ಕುಸ್ತಿ ಸಂಘದ ಅಧ್ಯಕ್ಷ ರೋಹ್ತಾಶ್ ಸಿಂಗ್ ಪತ್ರವೊಂದನ್ನು ಹೊರಡಿಸಿದ್ದಾರೆ.
ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ರಾಜ್ಯದ ಕುಸ್ತಿ ಸಂಘದ ಕಾರ್ಯದರ್ಶಿಗಳ ಭಾಗವಹಿಸುವಿಕೆಯನ್ನು ಅನೈತಿಕ ಎಂದು ರೋಹ್ತಾಶ್ ಸಿಂಗ್ ಕರೆದಿದ್ದಾರೆ.
ಹರಿಯಾಣ ಕುಸ್ತಿ ಸಂಘದ ಅಧ್ಯಕ್ಷ ರೋಹ್ತಾಶ್ ಸಿಂಗ್ ಮಾತನಾಡಿ, “ಮೂವರು ಕಾರ್ಯದರ್ಶಿಗಳು ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದು ಸಂಪೂರ್ಣ ಅನೈತಿಕ ಹಾಗೂ ಡಬ್ಲ್ಯುಎಫ್‌ಐ ಮತ್ತು ಎಚ್‌ಎಡಬ್ಲ್ಯುಎ ಸಂಸ್ಥೆಗಳ ಉದ್ದೇಶ, ನಿಯಮ ಹಾಗೂ ನಿಬಂಧನೆಗಳಿಗೆ ವಿರುದ್ಧವಾದುದು” ಎಂದು ಹೇಳಿದರು.
ರೋಹ್ತಾಶ್ ಅವರ ನಿರ್ಧಾರ ರಾಜ್ಯ ಕುಸ್ತಿ ಸಂಘ ಹಾಗೂ ಭಾರತದ ಕುಸ್ತಿ ಒಕ್ಕೂಟದ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದು ಬಹಿರಂಗವಾಗಿದೆ. ಕುಸ್ತಿ ಸಂಘದ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಡಬ್ಲ್ಯುಎಫ್‌ಐನ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.
ಹರಿಯಾಣ ಕುಸ್ತಿ ಸಂಘದ ಅಧ್ಯಕ್ಷ ರೋಹ್ತಾಶ್ ಅವರು ಅಧಿಕಾರಿಗಳನ್ನು ಅಮಾನತು ಮಾಡುವ ಅಧಿಕಾರ ಹೊಂದಿಲ್ಲ ಎಂದು ರಾಕೇಶ್ ತಿಳಿಸಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಏಪ್ರಿಲ್ 23 ರಿಂದ ಮಹಿಳೆ ಹಾಗೂ ಪುರುಷ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೋಟ್ ದುರಂತಗಳಲ್ಲಿ 200ಕ್ಕೂ ಅಧಿಕ ಮಂದಿ ಬಲಿ; ಪಾಠ ಕಲಿಯದ ಕೇರಳ!
ಬ್ರಿಜ್ ಭೂಷಣ್ ಅವರು ಒಬ್ಬ ಅಪ್ರಾಪ್ತ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ದೆಹಲಿ ಪೊಲೀಸರು ಏಪ್ರಿಲ್ 28 ರಂದು ಬ್ರಿಜ್ ಭೂಷಣ್ ಅವರ ವಿರುದ್ಧ ಎರಡು ಪ್ರಕರಣ ದಾಖಲಿಸಿದ್ದಾರೆ.