ಹಾಸನದ ಅಶ್ಲೀಲ ವೀಡಿಯೊ ತುಣುಕು ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಶನಿವಾರ ರಾತ್ರಿ ಎಸ್ಐಟಿ ರಚನೆಗೆ ಆದೇಶ ಹೊರಡಿಸಿದೆ. ಆದರೆ, ಇದಕ್ಕೂ ಮೊದಲೇ, ಆರೋಪ ಕೇಳಿಬಂದಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ತೆರಳಿರುವುದಾಗಿ ಮಾಹಿತಿ ದೊರಕಿದೆ. ಅಲ್ಲದೇ, ಈ ಮಾಹಿತಿಯನ್ನು ಪೊಲೀಸರು ಕೂಡ ದೃಢೀಕರಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸಿರುವ ಹಾಸನ ಸೇರಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ(ಏ.26) ಮತದಾನ ನಡೆದಿತ್ತು. ಪ್ರತಿ ಚುನಾವಣೆಯಲ್ಲೂ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸುತ್ತಿದ್ದ ಪ್ರಜ್ವಲ್, ಈ ಬಾರಿ ಪೆನ್ಡ್ರೈವ್ ಪ್ರಕರಣ ಸುದ್ದಿಯಲ್ಲಿದ್ದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ಏಕಾಂಗಿಯಾಗಿ ಬಂದು ಹಕ್ಕು ಚಲಾವಣೆ ಮಾಡಿದ್ದರು. ಅಲ್ಲದೇ, ಈ ವೇಳೆ ಮಾಧ್ಯಮಗಳೊಂದಿಗೂ ಕೂಡ ಮಾತನಾಡಿ, ‘ಗೆಲುವು ನನ್ನದಾಗಲಿದೆ’ ಎಂದು ಹೇಳಿದ್ದರು.
ಅಶ್ಲೀಲ ವೀಡಿಯೋ ಪ್ರಕರಣವು ರಾಜ್ಯದ ಮೂಲೆಮೂಲೆಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಶನಿವಾರ ಮುಂಜಾನೆ ಮೂರು ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.
LH 755 ನಂಬರಿನ ಲುಫ್ತಾನ್ಸಾ ಏರ್ಲೈನ್ಸ್ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್ ಫರ್ಟ್ಗೆ ಪ್ರಜ್ವಲ್ ರೇವಣ್ಣ ಅವರು ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಯಾರೊಂದಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಸರ್ಕಾರವು ಎಸ್ಐಟಿ ತನಿಖೆಗೆ ಆದೇಶ ಮಾಡುವ ಮುಂಚೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರುವ ಮೂಲಕ ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಇನ್ನಷ್ಟು ಮುಜುಗರ ತಂದಿದ್ದು, ಸತ್ಯ ಒಪ್ಪಿಕೊಂಡಂತಾಗಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ದಾರಿ ತಪ್ಪಿರುವವರು ಯಾರು ಕುಮಾರಸ್ವಾಮಿ? @hd_kumaraswamy ಯಾರು!?
—ನಾಚಿಕೆ, ಮಾನ,ಮರ್ಯಾದೆ, ನಿಮ್ಮಲ್ಲಿ ಕಿಂಚಿತ್ತಾದರೂ ಇದ್ರೆ? ನಾಳೆ ತುರ್ತು-ಸುದ್ದಿಗೋಷ್ಠಿ ನಡೆಸಿ ನೀವೂ ಸಹಾ ಒಂದು ಹೆಣ್ಣು ಭ್ರೂಣದಿಂದಲೇ ಹುಟ್ಟಿದ್ದು ಎಂದು ಜಗತ್ತಿಗೆ ಖಚಿತಪಡಿಸಿ!
📌ಮನುಷ್ಯನಾಗುವನೋ ಅಥವಾ ಮಾನಗೇಡಿಯಾಗುವನೋ ಕುಮಾರ?#LokSabhaElections2024 pic.twitter.com/yN4FDxUnnU
— Gururaj Anjan (@Anjan94150697) April 27, 2024
ಎಸ್ಐಟಿ ತಂಡ ರಚನೆ
ಪ್ರಜ್ವಲ್ ರೇವಣ್ಣ ಅವರಿಂದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ತಂಡ ರಚಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಲವಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿರುವ ಪೆನ್ಡ್ರೈವ್ ಒಂದು ಬಹಿರಂಗಗೊಂಡಿದೆ. ಅದರ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ ಪೆನ್ಡ್ರೈವ್ ಪ್ರಕರಣ | ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ನಿರ್ಧಾರ
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ, ಸರ್ಕಾರ ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…— Siddaramaiah (@siddaramaiah) April 27, 2024
ಸರ್ಕಾರ ರಚಿಸಿರುವ ಎಡಿಜಿಪಿ ನೇತೃತ್ವದ ವಿಶೇಷ ತನಿಖಾ ತಂಡದಲ್ಲಿ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಎಸ್ಪಿಗಳು ಇರಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕುಂದಾನಗರಿ ಬೆಳಗಾವಿಗೆ ಆಗಮಿಸಿದ ಪ್ರಧಾನಿ ಶ್ರೀ @narendramodi ಅವರನ್ನು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @JagadishShettar ಮತ್ತು ಪ್ರಮುಖರು ಸ್ವಾಗತಿಸಿದರು. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ pic.twitter.com/M83hIt0yc9
— BJP Karnataka (@BJP4Karnataka) April 27, 2024
ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಕೊನೆಯ ಹಂತದಲ್ಲಿ ರಾಸಲೀಲೆಯ ವಿಡಿಯೋಗಳು ಬಹಿರಂಗಗೊಂಡಿವೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.
ರಾಜ್ಯದಲ್ಲಿ ಇನ್ನೂ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ನಡೆಯುವುದಕ್ಕೂ ಮುನ್ನವೇ ಈ ಬೆಳವಣಿಗೆ ನಡೆದಿದೆ. ಅಲ್ಲದೇ, ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಪ್ರವಾಸದಲ್ಲಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕುಂದಾನಗರಿ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ರಾತ್ರಿ ತಲುಪಿದ್ದಾರೆ. ಈಗ ಈ ಬೆಳವಣಿಗೆ ನಡೆದಿರುವುದು ರಾಜ್ಯದ ಬಿಜೆಪಿ ಮುಖಂಡರಿಗೆ ಇರಿಸು-ಮುರಿಸು ತಂದೊಡ್ಡಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ನಾಳೆ(ಏ.28)ರ ಬೆಳಗ್ಗೆ 11.30ಕ್ಕೆ ತುರ್ತು ಮಾಧ್ಯಮಗೋಷ್ಠಿಯನ್ನು ಕೂಡ ಕರೆದಿದ್ದು, ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿಲ್ಲ. ಸುದ್ದಿಗೋಷ್ಠಿಯಲ್ಲಿ ಹಾಸನ ಪೆನ್ಡ್ರೈವ್ ವಿಚಾರದಲ್ಲಿ ಮೌನ ಮುರಿಯಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
