- ಏನ್ರೀ ರೇವಣ್ಣ, ನಿಂಬೆ ಹಣ್ಣು ಹಿಡಿಯುವ ಕೈಯಲ್ಲಿ ಕೊಬ್ಬರಿ ಯಾಕೆ?: ಸಿಎಂ
- ಎಚ್ ಡಿ ರೇವಣ್ಣ ಅವರಿಗಾಗಿ ಆದ್ರೂ ಕೊಬ್ಬರಿ ಬೆಲೆ ಏರಿಸಿ: ಬೊಮ್ಮಾಯಿ
ಜೆಡಿಎಸ್ ಸದಸ್ಯರು ಕೊಬ್ಬರಿ ಬೆಳೆಗಾರರ ವಿಚಾರವಾಗಿ ಮಂಡಿಸಿದ ನಿಲುವಳಿ ಸೂಚನೆ ಮಂಡಿಸಿ ಎಂಟು ದಿನ ಕಳೆದಿದ್ದು, ಈವರೆಗೂ ಚರ್ಚೆಗೆ ಕೈಗೆತ್ತಿಕೊಳ್ಳದ ಹಿನ್ನೆಲೆಯಲ್ಲಿ ಎಚ್ ಡಿ ರೇವಣ್ಣ ಅವರು ಸದನಕ್ಕೆ ಕೊಬ್ಬರಿ ತಂದು ಪ್ರದರ್ಶಿಸಿ ಚರ್ಚೆಯ ಬಗ್ಗೆ ಗಮನ ಸೆಳೆದರು.
16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾದ ಮರುದಿನವೇ ಜೆಡಿಎಸ್ ಸದಸ್ಯರು ಕೊಬ್ಬರಿ ಬೆಳೆಗಾರರ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿದ್ದರು. ಸಭಾಧ್ಯಕ್ಷ ಯು ಟಿ ಖಾದರ್ ಅವರು ಜೆಡಿಎಸ್ ನಿಲುವಳಿಯನ್ನು ನಿಯಮ 69ಕ್ಕೆ ಕನ್ವರ್ಟ್ ಮಾಡಿ ಚರ್ಚೆಗೆ ಎತ್ತಿಕೊಳ್ಳುವ ಭರವಸೆ ನೀಡಿದ್ದರು.
ಪ್ರತಿ ದಿನ ಈ ವಿಚಾರವಾಗಿ ಧ್ವನಿ ಎತ್ತುತ್ತಿದ್ದ ಎಚ್ ಡಿ ರೇವಣ್ಣ ಅವರು ಗುರುವಾರದ ಮಧ್ಯಾಹ್ನದ ಕಲಾಪ ಆರಂಭವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆ ಎದ್ದು ನಿಂತು ಕೊಬ್ಬರಿ ಪ್ರದರ್ಶಿಸಿ ನಮಗೆ ಚರ್ಚೆ ಮಾಡಲು ಅವಕಾಶ ನೀಡಿ ಎಂದು ಸಭಾಧ್ಯಕ್ಷರನ್ನು ಕೋರಿದರು.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಏನ್ರೀ ರೇವಣ್ಣ, ನಿಂಬೆ ಹಣ್ಣು ಹಿಡಿಯುವ ಕೈಯಲ್ಲಿ ಕೊಬ್ಬರಿ ಯಾಕ್ ಹಿಡ್ಕೊಂಡಿದೀಯ” ಎಂದು ತಮಾಷೆ ಮಾಡಿದರು.
ಈ ಸುದ್ದಿ ಓದಿದ್ದೀರಾ? 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಇಲ್ಲ: ಬಸವಳಿದ ರಾಜ್ಯ ಬಿಜೆಪಿ; ಆಸ್ಥೆ ತೋರದ ಮೋದಿ-ಶಾ
ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ಹೇಗೂ ಸದನಕ್ಕೆ ಕೊಬ್ಬರಿ ತಂದಿದ್ದೀರಿ. ನನಗೆ ಕೊಡಿ, ಮನೆಗೆ ಒಯ್ಯುವೆ” ಎಂದರು. ಸದನ ನಗೆಗಡಲಲ್ಲಿ ತೇಲಿತು. ರೇವಣ್ಣ ಅವರು ಮಾತ್ರ ಗಂಭೀರವಾಗಿ, “ನನ್ನ ರೈತರ ಸಮಸ್ಯೆಗಳ ಬಗ್ಗೆ ನಾನು ಇಲ್ಲಿ ಮಾತನಾಡಬೇಕು. ನಿಯಮ 69ಗೆ ಕನ್ವರ್ಟ್ ಮಾಡಿದ್ದೀರಿ. ಇಂದಾದರೂ ಅವಕಾಶ ಮಾಡಿ ಕೊಡಿ” ಎಂದು ಸಭಾಧ್ಯಕ್ಷರನ್ನು ಕೋರಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, “ಎಚ್ ಡಿ ರೇವಣ್ಣ ಅವರಿಗಾಗಿ ಆದ್ರೂ ಕೊಬ್ಬರಿ ಬೆಲೆ ಏರಿಸಿ” ಎಂದು ಒತ್ತಾಯಿಸಿದರು. ಆರ್ ಅಶೋಕ ಮಧ್ಯ ಪ್ರವೇಶಿಸಿ, “ಎಚ್ ಡಿ ರೇವಣ್ಣ ಅವರು ಎಂದೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿಲ್ಲ” ಎಂದರು.
ರೇವಣ್ಣ ಉತ್ತರಿಸಿ, “ನೋಡ್ರಿ ಅಶೋಕ್, ನಾನು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಅವರೇನು ಅಂತ ನನಗೆ ಗೊತ್ತು” ಎಂದರು. ಸಿಎಂ ಸಿದ್ದರಾಮಯ್ಯ ಉತ್ತರಿಸಿ, “ರೇವಣ್ಣ ಅವರ ಬಗ್ಗೆ ವಿಶೇಷ ಪ್ರೀತಿ ಇದೆ. ನನ್ನ ಒಳ್ಳೆಯ ಸ್ನೇಹಿತರು ಅವರು” ಎಂದರು.