ಹಿಂಡೆನ್‌ಬರ್ಗ್–ಅದಾನಿ-ಸೆಬಿ ಪ್ರಕರಣ | ಅಕ್ರಮಗಳ ಬಗ್ಗೆ ಮಾತನಾಡಿದರೆ ದೇಶದ್ರೋಹವಾಗುತ್ತದೆಯೇ?

Date:

Advertisements
ಅಕ್ರಮವನ್ನು ಹೊರಗೆಳೆದ ಹಿಂಡೆನ್‌ಬರ್ಗ್ ಮತ್ತು ಕಾಂಗ್ರೆಸ್ ನಾಯಕರದ್ದು ದೇಶದ್ರೋಹವೇ? ದೇಶವನ್ನು ವಂಚಿಸುತ್ತಿರುವ ಅದಾನಿ, ಅದಾನಿ ವಂಚನೆಯನ್ನು ಮುಚ್ಚಿಹಾಕುತ್ತಿರುವ ಸೆಬಿ ಮುಖ್ಯಸ್ಥೆ, ಅದಾನಿ ಮತ್ತು ಸೆಬಿ ಮುಖ್ಯಸ್ಥೆಯ ಮೋಸಗಳನ್ನು ಮುಚ್ಚಿಟ್ಟಿರುವ ಮೋದಿ ಸರ್ಕಾರ- ದೇಶಪ್ರೇಮಿಗಳೇ?

ಸೆಬಿ ಮುಖ್ಯಸ್ಥರು ಮತ್ತು ಅದಾನಿ ನಡುವಿನ ಸಂಬಂಧಗಳ ಬಗ್ಗೆ ಆಘಾತಕಾರಿ ವರದಿಯು ಬಹಿರಂಗವಾಗಿದೆ. ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ತಕ್ಷಣವೇ ಸೆಬಿ ಮುಖ್ಯಸ್ಥರ ರಾಜೀನಾಮೆ ಪಡೆಯಬೇಕು. ಆ ಬಗ್ಗೆ ತನಿಖೆಯ ಅಗತ್ಯವಿದ್ದು, ಜಂಟಿ ಸದನ ಸಮಿತಿ ರಚಿಸಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ(ಸೆಬಿ)ಯ ಅಧ್ಯಕ್ಷೆ ಮಾಧವಿ ಬುಚ್ ಮೇಲೆ ಕೇಳಿಬಂದಿರುವ ಈ ಆರೋಪ ಗಂಭೀರವಾಗಿದೆ. ಅದು ದೇಶದ ‍‍ಷೇರುಪೇಟೆ, ಹಣಕಾಸು ಮಾರುಕಟ್ಟೆ, ಹೂಡಿಕೆದಾರರು ಮತ್ತು ದೇಶದ ಆರ್ಥಿಕ ವಲಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಸೆಬಿ ಮುಖ್ಯಸ್ಥೆ ಮತ್ತು ಅದಾನಿ ನಡುವಿನ ಸಂಬಂಧಗಳ ತನಿಖೆ ಅತ್ಯಗತ್ಯವಾಗಿದೆ. ಷೇರು ಮಾರುಕಟ್ಟೆಯಲ್ಲಿನ ಸಣ್ಣ ಹೂಡಿಕೆದಾರರ ಹಣವನ್ನು ಅಪಾಯಕ್ಕೆ ಸಿಲುಕಿಸಲು ಯತ್ನಿಸಲಾಗಿದೆ. ಅದನ್ನು ತಡೆಯಬೇಕಿದೆ. ದೇಶದ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅದರ ಸಲುವಾಗಿ ಕಾಂಗ್ರೆಸ್ ಪಕ್ಷ ಆಗಸ್ಟ್ 22 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದಿರುವುದು, ಜನತಂತ್ರದ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಡೆ ಸರಿಯಾಗಿಯೇ ಇದೆ.

2017ರಲ್ಲಿ ಹುಟ್ಟಿಕೊಂಡ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್, ಹೂಡಿಕೆದಾರ ಕಂಪನಿಗಳಿಗೆ ಸಂಸ್ಥೆಗಳ ಬಗ್ಗೆ ಸಂಶೋಧನೆ ನಡೆಸಿ, ವಿವರವಾದ ವರದಿಯನ್ನು ಪೂರೈಸುವ ಕೆಲಸ ಮಾಡುತ್ತದೆ. ಅದೇ ರೀತಿ ಜನವರಿ 24, 2023ರಲ್ಲಿ ಅದಾನಿ ಸಮೂಹ ಸಂಸ್ಥೆಗಳ ಬಗ್ಗೆ ಅವರದೇ ಒಡೆತನದ 13 ಬೇನಾಮಿ ಕಂಪನಿಗಳಿಂದ ಅದಾನಿ ಕಂಪನಿಗಳ ಷೇರು ಖರೀದಿ ಮಾಡಿ, ಕೃತಕವಾಗಿ ಷೇರು ಬೆಲೆ ಏರಿಕೆ ಮಾಡಿ, ಅದೇ ಷೇರುಗಳನ್ನು ಬ್ಯಾಂಕಿಗೆ ಅಡವಿಟ್ಟು ಸಾಲ ಎತ್ತಿದ್ದರ ಬೃಹತ್ ಹಗರಣ ಕುರಿತು ವರದಿ ಪ್ರಕಟಿಸಿತ್ತು. ಆನಂತರ ಸುಪ್ರೀಂ ಕೋರ್ಟ್ ಅದಾನಿ ವಂಚನೆಯನ್ನು ಪರಿಶೀಲಿಸಲು ಎ.ಎಂ. ಸಪ್ರೆ ನೇತೃತ್ವದ ಸಮಿತಿ ರಚಿಸಿತು.

Advertisements

ಅದಾದ ನಂತರದಲ್ಲಿ ಈಗ, ಆಗಸ್ಟ್ 10ರಂದು ಮತ್ತೊಂದು ವರದಿ- ಅದಾನಿ ಗ್ರೂಪ್‌ನ ವಿದೇಶಿ ಷೇರುಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ 41,814 ಕೋಟಿ ರೂಪಾಯಿಗಳ ಹೂಡಿಕೆಯನ್ನು ಹೊಂದಿದ್ದಾರೆ ಎಂಬುದನ್ನು ಹಿಂಡೆನ್‌ಬರ್ಗ್ ಸಂಸ್ಥೆಯು ಬಹಿರಂಗಪಡಿಸಿದೆ. ಅದರಲ್ಲಿ ಷೇರು ಮಾರುಕಟ್ಟೆಯ ಮೇಲೆ ನಿಗಾ ಇಟ್ಟು ಅಕ್ರಮಗಳಾಗದಂತೆ ನಿಯಂತ್ರಿಸಬೇಕಾದ ಸೆಬಿಯ ಮುಖ್ಯಸ್ಥರ ಮೇಲೆಯೇ ಆರೋಪ ಮಾಡಲಾಗಿದೆ. ಅದು ತೀವ್ರ ಚರ್ಚೆಗೆ ನಾಂದಿ ಹಾಡಿದೆ.  

ಆದರೆ ಈ ಗಂಭೀರ ಆರ್ಥಿಕ ಆರೋಪ ಕುರಿತು ಸೂಕ್ತವಾಗಿ ವಿವೇಚಿಸಿ, ವಿಶ್ಲೇಷಿಸಿ ಮತ್ತು ಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಕೆಂದ್ರ ಸರ್ಕಾರ, ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಪ್ರಧಾನಿ ಮೋದಿಯವರು ಎಂದಿನಂತೆ ಮೌನಕ್ಕೆ ಜಾರಿದ್ದಾರೆ.

ಇದನ್ನು ಓದಿದ್ದೀರಾ?: ಭಾರತದ ಲಡಾಖ್‌ನಲ್ಲಿ ಚೀನಾ ಬಂಕರ್ ನಿರ್ಮಾಣ – ಮೋದಿ ಮೌನವಾಗಿದ್ದಾರೆ, ಅಂದರೆ…!

ಏಕೆಂದರೆ ಗಂಭೀರ ಆರೋಪ ಕೇಳಿಬಂದಿರುವುದು ಮೋದಿಯವರ ಪರಮಾಪ್ತ ಮಿತ್ರ ಗೌತಮ್ ಅದಾನಿಯವರ ಮೇಲೆ. ಅದಾನಿಯವರ ಅಕ್ರಮ ವ್ಯವಹಾರಗಳಿಗೆ ಸಹಕರಿಸುತ್ತಿರುವ ಸೆಬಿ ಅಧ್ಯಕ್ಷೆಯ ಮೇಲೆ.

ಈ ಅದಾನಿ ಮೋದಿಯ ತವರೂರಾದ ಗುಜರಾತಿನವರು. ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಸಣ್ಣ ಮಟ್ಟದ ಸರಕು ವ್ಯಾಪಾರಿಯಾಗಿದ್ದರು. ಈಗ ಬಂದರುಗಳು, ವಿದ್ಯುತ್ ಉತ್ಪಾದನೆ, ವಿಮಾನ ನಿಲ್ದಾಣಗಳು, ಗಣಿಗಾರಿಕೆ, ನವೀಕರಿಸಬಹುದಾದ ವಸ್ತುಗಳು, ಮಾಧ್ಯಮ ಮತ್ತು ಸಿಮೆಂಟ್ ಉದ್ದಿಮೆಗಳಂತಹ ಬಹುಕೋಟಿ ವ್ಯವಹಾರಗಳ ಒಡೆಯ. ಏಷ್ಯಾದ ಶ್ರೀಮಂತ ವ್ಯಕ್ತಿ. ಸಣ್ಣ ಸರಕು ವ್ಯಾಪಾರಿಯಾಗಿದ್ದ ಅದಾನಿಯನ್ನು ಶ್ರೀಮಂತ ವ್ಯಕ್ತಿಯನ್ನಾಗಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೇ ಸಲ್ಲಬೇಕು. 2014ರಿಂದ 2024ರವರೆಗೆ, ಅದಾನಿ ಬೆಳೆದ ಪರಿ, ಆಸ್ತಿ ಏರಿಕೆ ಊಹೆಗೂ ನಿಲುಕದ್ದು. ಇದನ್ನು ಗಮನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ, ‘ನಿಮಗೂ ಅದಾನಿಗೂ ಏನು ಸಂಬಂಧ’ ಎಂಬ ಪ್ರಶ್ನೆ ಮಾಡಿದರು. ಅದಕ್ಕೆ ಪೂರಕವಾದ ಚಿತ್ರವನ್ನು ಪ್ರದರ್ಶಿಸಿದರು. ಆದರೆ ಮೋದಿಯವರಿಂದ ಉತ್ತರ ಮಾತ್ರ ಬರಲಿಲ್ಲ.

ಈ ಹಿಂಡೆನ್‌ಬರ್ಗ್‌ನಿಂದ ಹೊರಬಿದ್ದ ಎರಡನೇ ವರದಿ ಕುರಿತು, ‘ಹಿಂಡೆನ್‌ಬರ್ಗ್ ರಿಸರ್ಚ್ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ದೇಶಕ್ಕೆ ಕೆಟ್ಟ ಹೆಸರು ತಂದಿದೆ. ದೇಶಕ್ಕಾದ ಈ ಅವಮಾನವನ್ನು ನಾವು ಸಹಿಸಲಾರೆವು. ಇವರು ದೇಶದ ಶತ್ರುಗಳು. ಹಿಂಡೆನ್‌ಬರ್ಗ್ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‍‌ಬಿಐ) ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ(ಸೆಬಿ) ಹಣಕಾಸು ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಆರ್‍‌ಬಿಐ ಮತ್ತು ಸೆಬಿ ಪ್ರಮುಖ ಪಾತ್ರವಹಿಸುತ್ತವೆ.

ಅದಾನಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸೆಬಿಯ ಅಧ್ಯಕ್ಷರೇ ಅದಾನಿಯ ಕಂಪನಿಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿರುವುದು ಎಷ್ಟು ಸರಿ ಎನ್ನುವುದು ಇಲ್ಲಿಯ ಪ್ರಶ್ನೆ. ಆದರೆ, ದೇಶದ ಷೇರುಪೇಟೆ, ಹಣಕಾಸು ಮಾರುಕಟ್ಟೆ ಮತ್ತು ಆರ್ಥಿಕ ವಲಯದ ಮೇಲೆ ಆಗಿರುವ ದುಷ್ಪರಿಣಾಮಗಳ ಕುರಿತು ಮಾತನಾಡಬೇಕಾದ ಜವಾಬ್ದಾರಿಯುತ ಸಚಿವರು, ಆರೋಪಿಸಿದ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ.

ಹಿಂಡೆನ್‌ಬರ್ಗ್ ಭಾರತವನ್ನು ನಾಶ ಮಾಡುವ ಟೂಲ್ ಕಿಟ್. ರಾಹುಲ್ ಗಾಂಧಿ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ, ದೇಶದ ಜನರು ಇಂತಹವರ ಬಗ್ಗೆ ಎಚ್ಚರವಾಗಿರಬೇಕು ಎಂದು ದೇಶದ ಜನರನ್ನು ರಾಹುಲ್ ಗಾಂಧಿ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.

ಆದರೆ, ದಿಟ್ಟ ದನಿಯ ರಾಹುಲ್ ಗಾಂಧಿ, ಅದಾನಿ ಮತ್ತು ಸೆಬಿ ಅಧ್ಯಕ್ಷೆಯ ನಡೆಯನ್ನು, ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಹೊಂದಾಣಿಕೆ ಮಾಡಿಕೊಂಡಂತೆ ಎಂದು ಹೋಲಿಸಿರುವುದು ಸೂಕ್ತವಾಗಿಯೇ ಇದೆ.

ಏನತ್ಮಧ್ಯೆ, ಹಿಂಡೆನ್‌ಬರ್ಗ್ ವರದಿಯ ಬಗ್ಗೆ ಮಾಧವಿ ಬುಚ್ ಮತ್ತು ಧವಲ್ ಬುಚ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ನನ್ನ ಪತಿಗೆ ಅನಿಲ್ ಅಹುಜಾ ಜೊತೆಗಿನ ಬಾಲ್ಯದ ಸ್ನೇಹದಿಂದಾಗಿ ಐಪಿಇ-ಪ್ಲಸ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗಿದೆಯೇ ಹೊರತು ಹಣ ಅದಾನಿಗೆ ಹೋಗಿಲ್ಲ’ ಎಂದಿದ್ದಾರೆ.

ಇದಕ್ಕಾಗಿಯೇ ಕಾದಿದ್ದ ಬಿಜೆಪಿ ಸಂಸದ, ಮಾಜಿ ಸಚಿವ ರವಿಶಂಕರ್ ಪ್ರಸಾದ್, ‘ಭಾರತದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಪಿತೂರಿ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಉತ್ಸಾಹದಲ್ಲಿ ಕಾಂಗ್ರೆಸ್ ರಾಷ್ಟ್ರದ ವಿರುದ್ಧ ವರ್ತಿಸುತ್ತಿದೆ. ಸೆಬಿ ಅಧ್ಯಕ್ಷೆಯೇ ಖುದ್ದು ನಮ್ಮ ಪಾತ್ರವಿಲ್ಲವೆಂದು ಸ್ಪಷ್ಟೀಕರಣ ಕೊಟ್ಟಿದ್ದಾಗಿದೆ. ಆದರೂ ಕಾಂಗ್ರೆಸ್ ಪಕ್ಷ ದೇಶದ ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಗುರಿ ಹೊಂದಿರುವುದು, ಅತ್ಯಂತ ತಪ್ಪು’ ಎಂದು ಹೇಳಿದ್ದಾರೆ.

DKQOC4EVAAAGCGn

ಉದ್ಯಮಿ ಗೌತಮ್ ಅದಾನಿ ಪ್ರಧಾನಿ ಮೋದಿಯವರ ಪರಮಾಪ್ತ ಮಿತ್ರ ಎನ್ನುವುದಕ್ಕೆ ದೇಶದ ಬಂದರುಗಳು, ವಿಮಾನ – ರೈಲ್ವೆ ನಿಲ್ದಾಣಗಳೇ ನಿಜ ಹೇಳುತ್ತಿವೆ. ಅದಾನಿ ಕಂಪನಿಗಳ ಹೂಡಿಕೆ, ಷೇರು, ಹಣಕಾಸು ಮಾರುಕಟ್ಟೆಯ ಮೇಲೆ ನಿಗಾ ಇಡಬೇಕಾದ ಸೆಬಿ ಅಧ್ಯಕ್ಷೆ, ಅವರ ಕಂಪನಿಯ ಪಾಲುದಾರರೇ ಆಗಿರುವುದು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ.

ಆದರೆ ಬಿಜೆಪಿಯ ನಾಯಕರು ಮಾತ್ರ ಅಕ್ರಮವನ್ನು ಹೊರಗೆಳೆದ ಹಿಂಡೆನ್‌ಬರ್ಗ್ ಮತ್ತು ಕಾಂಗ್ರೆಸ್ ನಾಯಕರನ್ನು ದೇಶದ್ರೋಹಿಗಳೆಂದು ಚಿತ್ರಿಸುತ್ತಿದ್ದಾರೆ. ಅದನ್ನು ಗೋದಿ ಮೀಡಿಯಾದ ಪತ್ರಕರ್ತರು ದೇಶಕ್ಕೆಲ್ಲ ಹಂಚುತ್ತಿದ್ದಾರೆ. ದೇಶವನ್ನು ವಂಚಿಸುತ್ತಿರುವ ಅದಾನಿ, ಅದಾನಿ ವಂಚನೆಯನ್ನು ಮುಚ್ಚಿಹಾಕುತ್ತಿರುವ ಸೆಬಿ ಮುಖ್ಯಸ್ಥೆ, ಅದಾನಿ ಮತ್ತು ಸೆಬಿ ಮುಖ್ಯಸ್ಥೆಯ ಮೋಸಗಳನ್ನು ಮುಚ್ಚಿಟ್ಟಿರುವ ಮೋದಿ ಸರ್ಕಾರ- ದೇಶಪ್ರೇಮಿಗಳೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X