ಸದಾ ವಿವಾದಾತ್ಮಕ ಹೇಳಿಕೆ ಹಾಗೂ ಮುಸ್ಲಿಮರ ವಿರುದ್ಧ ದ್ವೇಷಕ್ಕೆ ಕರೆ ನೀಡುವುದರಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, “ಹಿಂದೂಗಳು ಹಲಾಲ್ ಮಾಂಸ ತಿನ್ನುವುದನ್ನು ಬಿಟ್ಟು, ಜಟ್ಕಾ ಮಾಂಸ ಮಾತ್ರ ತಿನ್ನಬೇಕು” ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಲಾಲ್ ವಿಚಾರವಾಗಿ ಹೇಳಿಕೆ ನೀಡಿರುವ ಅವರು, “ಷಡ್ಯಂತ್ರದ ಭಾಗವಾಗಿ ಹಿಂದೂಗಳಿಗೆ ಹಲಾಲ್ ಮಾಂಸವನ್ನು ನೀಡಲಾಗುತ್ತಿದೆ ಮತ್ತು ಅವರ ಧರ್ಮವನ್ನು ಭ್ರಷ್ಟಗೊಳಿಸಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಬಿಹಾರದ ಬೇಗುಸರಾಯ್ ಕ್ಷೇತ್ರದ ಬಿಜೆಪಿ ಸಂಸದನಾಗಿರುವ ಗಿರಿರಾಜ್ ಸಿಂಗ್, ನರೇಂದ್ರ ಮೋದಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೂಡ ಆಗಿದ್ದಾರೆ.
ಬೇಗುಸರಾಯ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, “ಅನೇಕ ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ಹಿಂದೂ ಧರ್ಮದ ಭಾಗವಾಗಿದ್ದರೂ ಅದನ್ನು ನಿಷೇಧಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ಮತ್ತೊಂದೆಡೆ ಹಿಂದೂಗಳು ಮಾಡುವ ತ್ಯಾಗ ಬಲಿದಾನವಾದರೆ ಮುಸಲ್ಮಾನರ ಬಲಿದಾನವನ್ನೂ ಸರ್ಕಾರ ನಿಲ್ಲಿಸಬೇಕು. ಹಿಂದೂಗಳ ಮನೆಯಲ್ಲಿ ತಯಾರಿಸಿದ ಮಾಂಸವನ್ನು ಯಾವ ಮುಸಲ್ಮಾನರೂ ತಿನ್ನುವುದಿಲ್ಲ. ಆದರೆ ಹಿಂದೂಗಳು ಮುಸ್ಲಿಮರ ಮನೆಯಲ್ಲಿ ಬೇಯಿಸಿದ ಹಲಾಲ್ ಮಾಂಸವನ್ನು ತಿನ್ನುತ್ತಾರೆ. ಇದರಿಂದ ಹಿಂದೂಗಳ ಧರ್ಮ ಭ್ರಷ್ಟವಾಗುತ್ತಿದೆ. ರಾಜ್ಯದ ನಿತೀಶ್ ಸರ್ಕಾರಕ್ಕೆ ಈ ವಿಷಯಗಳ ಬಗ್ಗೆ ಕಾಳಜಿ ಇಲ್ಲ, ಅವರು ಕೇವಲ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
“ರಸ್ತೆಬದಿಯಲ್ಲಿ ಮಾಂಸ ಕತ್ತರಿಸುವುದರಿಂದ ಸುತ್ತಮುತ್ತ ಕೊಳಚೆ ಹರಡುತ್ತಿದ್ದು, ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಬದಿಯ ಬಯಲಿನಲ್ಲಿ ಮಾಂಸ ಕತ್ತರಿಸುವುದನ್ನು ನಿಷೇಧಿಸಬೇಕು. ಹಿಂದೂಗಳು ಹಲಾಲ್ ಮಾಂಸ ತಿನ್ನುವುದನ್ನು ಬಿಡಬೇಕು, ಜಟ್ಕಾ ಮಾಂಸವನ್ನು ಮಾತ್ರ ತಿನ್ನಬೇಕು. ಜಟ್ಕಾ ಮಾಂಸ ವಿಧಾನದಲ್ಲಿ ಪ್ರಾಣಿಯನ್ನು ಒಂದೇ ಹೊಡೆತದಲ್ಲಿ ಕೊಲ್ಲಲಾಗುತ್ತದೆ. ಇನ್ನು ಮುಂದೆ ಹಲಾಲ್ ಮಾಂಸವನ್ನು ತಿನ್ನುವ ಮೂಲಕ ನಮ್ಮ ಧರ್ಮವನ್ನು ಭ್ರಷ್ಟಗೊಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು” ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಮುಸ್ಲಿಮರ ಬಗ್ಗೆ ತೀಕ್ಷ್ಣವಾದ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿರುವ ಗಿರಿರಾಜ್ ಸಿಂಗ್, ಮುಸ್ಲಿಮರನ್ನು ಇದೇ ವೇಳೆ ಹೊಗಳಿದ್ದಾರೆ.
“ಹಲಾಲ್ ಮಾಂಸವನ್ನು ಮಾತ್ರ ತಿನ್ನುತ್ತೇವೆ ಎಂದು ನಿರ್ಧರಿಸಿದ ಎಲ್ಲ ಮುಸ್ಲಿಮರನ್ನು ನಾನು ಪ್ರಶಂಸಿಸುತ್ತೇನೆ. ಈಗ ಹಿಂದೂಗಳು ತಮ್ಮ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಇದೇ ರೀತಿಯ ಬದ್ಧತೆ ತೋರಿಸಬೇಕು. ಮುಸ್ಲಿಂ ಸಮುದಾಯದಲ್ಲಿ ಜಟ್ಕಾ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕಾಗಿ ಅವರು ಹಲಾಲ್ ಮಾಂಸವನ್ನು ಮಾತ್ರ ಸೇವಿಸುತ್ತಾರೆ” ಎಂದು ಸಿಂಗ್ ಹೇಳಿದ್ದಾರೆ.
ಹಲಾಲ್-ಜಟ್ಕಾ ಬಗ್ಗೆ ಕೇಂದ್ರ ಸಚಿವ ನೀಡಿದ ಹೇಳಿಕೆಯು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬಳಿಕ ಇದು ವಿವಾದ ಎಬ್ಬಿಸಿದೆ. “ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹಾಗಾಗಿ, ನರೇಂದ್ರ ಮೋದಿ ಸರ್ಕಾರದ ಕೇಂದ್ರದ ಸಚಿವರಿಗೆ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ. ಹಾಗಾಗಿ, ಮತ ಗಳಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ವಿಭಜನೆ ಮಾಡುವ ಕಾಯಕವಷ್ಟೇ ಗೊತ್ತು” ಎಂದು ವಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.
#WATCH | Begusarai, Bihar: Union Minister Giriraj Singh says, “…I respect the Muslims who are committed to their religion. Hindus too need to understand this. ‘Sanatana Dharma’ has ‘bali pratha’ (animal sacrifice) and in ‘bali pratha’ there is jhatka…I’ll get a jhatka meat… pic.twitter.com/GMYakjWuke
— ANI (@ANI) December 18, 2023
ತಮ್ಮ ಹೇಳಿಕೆಯ ಬಗ್ಗೆ ಸಮರ್ಥನೆ ನೀಡಿರುವ ಕೇಂದ್ರ ಸಚಿವರ ಗಿರಿರಾಜ್ ಸಿಂಗ್, “ನಾನು ತಮ್ಮ ಧರ್ಮಕ್ಕೆ ಬದ್ಧರಾಗಿರುವ ಮುಸ್ಲಿಮರನ್ನು ಗೌರವಿಸುತ್ತೇನೆ. ಹಿಂದೂಗಳೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸನಾತನ ಧರ್ಮದಲ್ಲಿ ಜಟ್ಕಾ ಬಗ್ಗೆ ಇದೆ. ಮುಸ್ಲಿಮರು ಹೇಗೆ ಹಲಾಲ್ ಅನ್ನು ಅನುಸರಿಸುತ್ತಾರೋ, ಅದೇ ರೀತಿ ಜಟ್ಕಾವನ್ನು ಹಿಂದೂಗಳು ಅನುಸರಿಸಿ ಎಂದಷ್ಟೇ ತಿಳಿಸಿದ್ದೇನೆ. ಬೇಗುಸರಾಯ್‌ನಲ್ಲಿ ನಾನು ಕೂಡ ಜಟ್ಕಾ ಮಾಂಸದ ಅಂಗಡಿಯನ್ನು ತೆರೆಯುವ ಯೋಚನೆಯಲ್ಲಿದ್ದೇನೆ.” ಎಂದು ತಿಳಿಸಿದ್ದಾರೆ.