ರಾಜ್ಯದಲ್ಲಿ ಹನಿಟ್ರ್ಯಾಪ್ ಗದ್ದಲ ಜೋರಾಗಿದೆ. ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಸೇರಿದಂತೆ ರಾಜ್ಯದ ಕೆಲವು ಮಂತ್ರಿಗಳು ಮತ್ತು ಪ್ರಭಾವಿ ನಾಯಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಪ್ರಕರಣ ವಿಧಾನಸಭೆಯಲ್ಲಿ ಶುಕ್ರವಾರವೂ ಪ್ರತಿಧ್ವನಿಸಿದ್ದು, ‘ಇದೊಂದು ಹನಿಟ್ರ್ಯಾಪ್ ಸರ್ಕಾರ’ ಎಂದು ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸದನದೊಳಗೆ ನಡೆಯುತ್ತಿರುವ ಹನಿಟ್ರ್ಯಾಪ್ ಗದ್ದಲಕ್ಕೆ ಪ್ರಜ್ಞಾವಂತರು ರೋಸಿಹೋಗಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಾಯಕರ ವಿರುದ್ಧ ತೀವ್ರ ಟೀಕೆಯನ್ನು ಸಾಮಾಜಿಕ ಜಾಲತಣಗಳಲ್ಲಿ ಹೊರಹಾಕುತ್ತಿದ್ದಾರೆ.
ನಿಮ್ಮ ತೆವಲಿಗೆ ನಿಮ್ಮ ಹಣ ಖರ್ಚು ಮಾಡಿ: ರಾಜಾರಾಂ ತಲ್ಲೂರು
“ಕರ್ನಾಟಕದ ಶಾಸಕವೃಂದದವರೆ, ತಮ್ಮನ್ನು ರಾಜ್ಯ ಚುನಾಯಿಸಿ ಕಳುಹಿಸಿರುವುದು ನಮ್ಮ ಜನಪ್ರತಿನಿಧಿಗಳಾಗಿ, ವಿಧಾನಮಂಡಲದಲ್ಲಿ ಶಾಸನ ರಚನೆ ಮಾಡಿ, ಕಾರ್ಯಕ್ರಮ ಅನುಷ್ಠಾನಗಳ ಬಗ್ಗೆ ಚರ್ಚೆ ಮಾಡಿ, ನಿಮ್ಮ ಕೆಲಸಗಳಿಗೆ ಉತ್ತರದಾಯಿತ್ವ ಇರಲಿ ಎಂದು. ನೀವು ಅಲ್ಲಿ ವ್ಯಯಿಸುವ ಪ್ರತೀ ನಿಮಿಷಕ್ಕೂ ನಾವು ನಮ್ಮ ಕಿಸೆಯಿಂದ ತೆರಿಗೆ ಹಣ ಕಟ್ಟಿದ್ದೇವೆ” ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಹರಿಹಾಯ್ದಿದ್ದಾರೆ.
“ನಿಮ್ಮ ಖಾಸಗಿ ತೆವಲುಗಳು, ಹನಿಟ್ರ್ಯಾಪು ಇತ್ಯಾದಿಗಳನ್ನೆಲ್ಲ ಸದನದಲ್ಲಿ ಚರ್ಚೆ ಮಾಡುವುದಿದ್ದರೆ, ದಯಮಾಡಿ ಆ ವಿಚಾರಕ್ಕೆ ನೀವು ವ್ಯಯಿಸುವ ಸಮಯದ ಖರ್ಚನ್ನು ನಿಮ್ಮೆಲ್ಲರ ಕಿಸೆಯಿಂದ ಭರಿಸಿ. ನೀವೆಲ್ಲರೂ ಎಷ್ಟೆಷ್ಟೆಲ್ಲ ಮಹಾತ್ಮರೆಂದು ನಾಡಿನ ಜನತೆಗೆ ಈಗಾಗಲೇ ಗೊತ್ತಿದೆ. ಅದನ್ನು ನೀವು ಮತ್ತೆ ತೋರಿಸಿಕೊಡಬೇಕಾಗಿಲ್ಲ” ಎಂದು ಕುಟುಕಿದ್ದಾರೆ.
“ಸ್ಪೀಕರ್ ಸರ್, ಇಂತಹ ಪ್ರತೀಯೊಂದು “ಅಸಂಸದೀಯ”, “ಅನಗತ್ಯ” ಕಾಲಹರಣಗಳಾದಾಗ, ಅಂತಹ ಸಂಬಂಧಿತ ಶಾಸಕರಿಗೆ, ಸಚಿವರಿಗೆ ಆ ವ್ಯಯವಾದ ಸಮಯದ “ಖರ್ಚಿನ ಬಿಲ್” ಕಳುಹಿಸುವುದನ್ನು ಮತ್ತು ಆಯಾಯ ಅಧಿವೇಶನದಲ್ಲೇ ಆ ವೆಚ್ಚವನ್ನು ಸಂಬಂಧಿತರಿಂದ ವಸೂಲಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ ಭರ್ತಿಮಾಡುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ. ವಿಧಾನಮಂಡಲದ ಹಣ ಅಪವ್ಯಯ ಆಗದಂತೆ ತಡೆಯುವ ಸಾಂವಿಧಾನಿಕ ಹೊಣೆಗಾರಿಕೆ ತಮಗಿದೆ” ಎಂದು ನೆನಪಿಸಿದ್ದಾರೆ.
“ಸದನವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗುವುದಕ್ಕೆ ಬೇಕಾದ ಎಲ್ಲ ತೀರ್ಮಾನಗಳನ್ನೂ ತೆಗೆದುಕೊಳ್ಳುವ ಅಧಿಕಾರವನ್ನು ಭಾರತದ ಸಂವಿಧಾನ ತಮಗೆ ನೀಡಿದೆ. ದಯವಿಟ್ಟು ಅದನ್ನು ಸದುಪಯೋಗಪಡಿಸಿಕೊಳ್ಳಿ, ಸಾರ್ವಜನಿಕ ದುಡ್ಡು, ಸದನದಲ್ಲಿ ಅನಗತ್ಯ ಚರ್ಚೆಗಳ ಮೂಲಕ ಪೋಲಾಗದಂತೆ ಜಾಗ್ರತೆ ವಹಿಸಿ. ಅದನ್ನೆಲ್ಲ ಅವರು ಬೀದಿ ಬದಿಯಲ್ಲಿ ಚರ್ಚೆ ಮಾಡಿಕೊಳ್ಳಲಿ. ಸದನದ ಒಳಗೆ ಬೇಡ. ಈ ಬಗ್ಗೆ ಗಟ್ಟಿ ಮನಸ್ಸು ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಬೇಸರಿಸಿಕೊಳ್ಳುವ ಮಾನವಂತ ಶಾಸಕರ ಸಂಖ್ಯೆ ಎಷ್ಟಿದೆ: ಬಿ ಎಂ ಹನೀಫ್ ಪ್ರಶ್ನೆ
“ಕರ್ನಾಟಕದ ರಾಜಕೀಯ ಇಲ್ಲಿಗೆ ಬಂದು ನಿಂತಿದೆ. 34 ಶಾಸಕ, ಸಚಿವ, ಸಂಸದರ ಹನಿ ಟ್ರ್ಯಾಪ್ ಸಿ.ಡಿ ಗಳಿವೆಯಂತೆ. ಹಾಗೆಂದು ಸ್ವತಃ ಹನಿ ಟ್ರ್ಯಾಪ್‌ಗೆ ಒಳಗಾಗಿರುವ ಹಿರಿಯ ಸಚಿವರೇ ವಿಧಾನ ಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಸಚಿವ, ಶಾಸಕರ ಕಡೆಗೆ ಹೆಣ್ಮಕ್ಕಳನ್ನು ಕಳಿಸಿ ಕಾಂಗ್ರೆಸ್‌ನ ಪ್ರಭಾವಶಾಲಿ ನಾಯಕರೇ ಸಿ.ಡಿ. ಮಾಡಿಸಿದ್ದಾರಂತೆ. ಬಿಜೆಪಿ ಯ ಶಾಸಕರು, ಮಾಜಿ ಸಚಿವರ ಹನಿ ಟ್ರ್ಯಾಪ್ ಸಿ.ಡಿ.ಗಳನ್ನು ಆ ಪಕ್ಷದ ಪ್ರಭಾವಶಾಲಿಗಳೇ ಮಾಡಿಸಿದ್ದಾರಂತೆ. ಕರ್ನಾಟಕದ ವಿಧಾನಸಭೆಯ ಪಾವಿತ್ರ್ಯ, ಘನತೆ, ಗೌರವಗಳೆಲ್ಲ ಮಣ್ಣು ಪಾಲು ಆಗುತ್ತಿದೆಯಲ್ಲ ಎಂದು ಬೇಸರಿಸಿಕೊಳ್ಳುವ ಮಾನವಂತ ಶಾಸಕರ ಸಂಖ್ಯೆ ಎಷ್ಟಿರಬಹುದು?ಎಂದು ಅಧಿವೇಶನದ ವಿಡಿಯೊ ನೋಡುತ್ತಾ ಯೋಚಿಸುತ್ತಿದ್ದೇನೆ” ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಲೇವಡಿ ಮಾಡಿದ್ದಾರೆ.
ಕೈ ಬಾಯಿ ಕಚ್ಚೆ ಸರಿ ಇಲ್ದೆ ಇರೋರು ವಿಧಾನಸಭೆಗೆ ಯಾಕೆ ಹೋಗ್ತೀರಾ?
“ರೇಪಿಸ್ಟ್‌ಗಳು, ಬಂಡೆ ಕಳ್ಳರು, ಪಿಕ್ ಪಾಕೆಟ್ ಕಳ್ಳರು, ಗಣಿ ಕಳ್ಳರು, ಕಮಿಷನ್ ದಂಧೆಕೋರರೂ- ಇಂತಹ ಗಂಭೀರ ಆರೋಪದ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಹಲ್ಕಾಗಳು ಮಾಡಿಕೊಳ್ಳುವ ಅಯೋಗ್ಯ ಕೆಲಸಗಳನ್ನೆಲ್ಲಾ ಜನರ ಬೆವರಿನ ತೆರಿಗೆ ಹಣದಲ್ಲಿ ತನಿಖೆ ಮಾಡಲು ಸಾಧ್ಯವೇ? ಮನೆಯಲ್ಲಿ ಬಂಗಾರದಂತ ಹೆಂಡತಿಯರಿದ್ರೂ ಹನಿಟ್ರ್ಯಾಪ್ ಅಂತೆ ಹನಿಟ್ರ್ಯಾಪು, ಇವರ ಮುಖಕ್ಕೆ ತುಪುಕ್ಕು.. ಚಾರಿತ್ರ್ಯ ಹೀನರೆ ಕರ್ನಾಟಕ ರಾಜಕಾರಣದಿಂದ ಮೊದಲು ತೊಲಗಿ” ಎಂದು ಕೆಆರ್‌ಎಸ್ ಪಕ್ಷದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“200ಕ್ಕೂ ಹೆಚ್ಚು ಹನಿ ಟ್ರ್ಯಾಪ್ ಸಿಡಿಗಳು ಸಿಕ್ಕಿವೆಯಂತೆ. ಬೆಂಗಳೂರನ್ನು ಮೊದಲು ‘ಸಿಲಿಕಾನ್ ಸಿಟಿ’ ಎನ್ನುತ್ತಿದ್ದರು. ಇನ್ನು ಮುಂದೆ ‘ಸಿಡಿ ಸಿಟಿ’ ಎನ್ನಬಹುದು” ಎಂದು ವಿಕ್ರಮ್ ಜೋಶಿ ಎಂಬುವರು ವ್ಯಂಗ್ಯ ಮಾಡಿದ್ದಾರೆ.
“ಈ ವಯಸ್ಸಿನಲ್ಲೂ “ಹನಿ”ಸಹವಾಸ ಮಾಡುವ ಲಂಗೋಟಿ ಲೂಸ್ ಮುದಿಯರೆಲ್ಲ “ಹನಿಟ್ರ್ಯಾಪ್” ಆಗಿದೆ ಅಂತ ಬಾಯ್ಬಡ್ಕೊಂಡ್ರೇ ಅದ್ಕೇನಾದ್ರೂ ಅರ್ಥ ಇದ್ಯಾ?” ಎಂದು ರಾ. ಚಿಂತನ್ ಲೇವಡಿ ಮಾಡಿದ್ದಾರೆ.