ಸಭಾಪತಿ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿದ್ದ ಹೊರಟ್ಟಿ ಆಪ್ತ ಸಹಾಯಕರಿಗೆ ಖಾಯಂ ಹುದ್ದೆ ಭಾಗ್ಯ!

Date:

Advertisements
ವಿಧಾನ ಪರಿಷತ್‌ ಸದಸ್ಯರ ಹಾಗೂ ಪೀಠಾಸೀನಾಧಿಕಾರಿಗಳ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಷರತ್ತಿಗೊಳಪಟ್ಟು ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಯಂಗೊಳಿಸಿ ವಿಲೀನಗೊಳಿಸಲು ಅವಕಾಶವಿಲ್ಲವೆಂದು ನೇಮಕಾತಿ ಆದೇಶದ ಪ್ರತಿಯಲ್ಲೇ ಉಲ್ಲೇಖಿಸಲಾಗಿದ್ದರೂ ಸಭಾಪತಿಯವರ ಅಂತಿಮ ತೀರ್ಮಾನದ ಮೇರೆಗೆ ವಿಶೇಷ ಮಂಡಳಿ ಮೂಲಕ ಸಭಾಪತಿ ಅವರಿಗೆ ಆಪ್ತರಾಗಿದ್ದ ಇಬ್ಬರು ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ನಿಯಮ ಮತ್ತು ಪ್ರಕ್ರಿಯೆಯಲ್ಲಿ ಸಭಾಪತಿ ಹುದ್ದೆಗೆ ನೀಡಿರುವ ನೇಮಕಾತಿ ನಿಯಮಗಳ ವಿನಾಯಿತಿ ಅಧಿಕಾರ ದುರುಪಯೋಗವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.

ಸಭಾಪತಿಯವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಆಪ್ತ ಸಹಾಯಕರನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಪರಮೋಚ್ಚ ಅಧಿಕಾರ ಬಳಸಿ, ಸಚಿವಾಲಯದ ವಿಶೇಷ ಮಂಡಳಿ ಮೂಲಕ ಖಾಯಂಗೊಳಿಸಿದ್ದಾರೆ ಎನ್ನುವ ಆಕ್ಷೇಪ ವ್ಯಕ್ತವಾಗಿದೆ.

ವಿಧಾನ ಪರಿಷತ್ತಿನ ವಿಶೇಷ ಮಂಡಳಿ ಆದೇಶಾನುಸಾರ ಸಭಾಪತಿ ಹೊರಟ್ಟಿ ಅವರ ಆಪ್ತ ಸಹಾಯಕರಾದ ಅರವಿಂದ ಅಜ್ಜನಗೌಡ ಪಾಟೀಲ್ ಅವರನ್ನು ಸಚಿವಾಲಯದಲ್ಲಿ ‘ಕಿರಿಯ ಸಹಾಯಕ’ ಹುದ್ದೆಗೆ (4/11/2024ರಂದು) ಮತ್ತು ಬಿ ಎಂ ವಾಸಿಂ ಎಂಬುವರನ್ನು ಗ್ರೂಪ್‌ ‘ಡಿ’ ಹುದ್ದೆಗೆ (5/11/2024ರಂದು) ನೇಮಕ ಮಾಡಿ ವಿಧಾನ ಪರಿಷತ್ತಿನ ಎರಡನೇ ಕಾರ್ಯದರ್ಶಿ ಎಸ್‌ ನಿರ್ಮಲಾ ಅವರು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ. ಇವರಿಬ್ಬರ ನೇಮಕಾತಿ ಆದೇಶ ಪ್ರತಿ ಈ ದಿನ.ಕಾಮ್‌ಗೆ ಲಭ್ಯವಾಗಿದೆ.

Advertisements

ಅರವಿಂದ ಅಜ್ಜನಗೌಡ ಪಾಟೀಲ್ ಹಲವು ವರ್ಷಗಳಿಂದ ವಿಧಾನ ಪರಿಷತ್ತಿನ ಸದಸ್ಯರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದಾರೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇವರು ಕಳೆದ ಮೂರು ವರ್ಷಗಳಿಂದ (2021 ಅಕ್ಟೋಬರ್‌ 2ರಿಂದ) ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಆಪ್ತ ಸಹಾಯಕರಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿ ಎಂ ವಾಸಿಂ ಹಲವು ವರ್ಷಗಳಿಂದ ವಿಧಾನ ಪರಿಷತ್ತಿನ ಸಭಾಪತಿ/ಉಪ ಸಭಾಪತಿಯವರ ಆಪ್ತ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಆಪ್ತ ಸಹಾಯಕರಾಗಿ ‘ಡಿ’ ಗುಂಪು ನೌಕರರಾಗಿದ್ದು, 2021 ಅಕ್ಟೋಬರ್‌ 2ರಿಂದ ಸಭಾಪತಿಯವರ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

WhatsApp Image 2024 11 09 at 11.53.35 AM

ವಿಧಾನ ಪರಿಷತ್‌ ಸದಸ್ಯರ ಹಾಗೂ ಪೀಠಾಸೀನಾಧಿಕಾರಿಗಳ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಷರತ್ತಿಗೊಳಪಟ್ಟು ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಯಂಗೊಳಿಸಿ ವಿಲೀನಗೊಳಿಸಲು ಅವಕಾಶವಿಲ್ಲವೆಂದು ಇದೇ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಂವಿಧಾನ ರಚನಾ ಸಭೆ ನಡವಳಿ, ಅನುಚ್ಛೇದ 187 ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿ ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ನಿಯಮ 13ರಲ್ಲಿ ಸಭಾಪತಿ ಹುದ್ದೆಗೆ ನೀಡಿರುವ ನಿಯಮಗಳ ವಿನಾಯತಿ ಹಿನ್ನಲೆಯಲ್ಲಿ ನೇಮಕಾತಿ ನಿಯಮ ಮತ್ತು ಪ್ರಕ್ರಿಯೆಯಲ್ಲಿ ಸಭಾಪತಿಯವರ ತೀರ್ಮಾನವೇ ಅಂತಿಮವಾಗಿರುತ್ತದೆಂದು ಅಭಿಪ್ರಾಯಿಸಿರುವುದರಿಂದ ಹಾಗೂ ಕರ್ನಾಟಕ ವಿಧಾನ ಸಭೆ ಸಚಿವಾಲಯದ ಹಿಂದಿನ ನಿದರ್ಶನಗಳಂತೆ ಮತ್ತು ಮಾನವೀಯತೆ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಇವರಿಬ್ಬರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ಆಪ್ತ ಸಹಾಯಕರ ನೇಮಕಾತಿಗಾಗಿ ಸಭಾಪತಿ ಅವರು ಪ್ರತ್ಯೇಕ ಟಿಪ್ಪಣಿ ಹೊರಡಿಸಿ, ಅರವಿಂದ ಅಜ್ಜನಗೌಡ ಪಾಟೀಲ್ ಸಲ್ಲಿಸಿದ ಮನವಿಯನ್ನು ಅವರ ವಿದ್ಯಾರ್ಹತೆಗೆ ತಕ್ಕಂತೆ ಹಾಗೂ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿರುವ ಸೇವಾವಧಿಯನ್ನು ಪರಿಗಣಿಸಿ ಕಿರಿಯ ಸಹಾಯಕ ಹುದ್ದೆ ನೀಡಲು ವಿಶೇಷ ಮಂಡಳಿಯ ಅನುಮೋದನೆಗೆ ಕಡತ ಮಂಡಿಸಲು ಹೊರಟ್ಟಿ ಅವರೇ ಸೂಚಿಸಿದ್ದಾರೆ.

ಹಾಗೆಯೇ ಬಿ ಎಂ ವಾಸಿಂ ಸಲ್ಲಿಸಿದ್ದ ಮನವಿಯಲ್ಲಿ ನೇರ ನೇಮಕಾತಿಯ ವಯೋಮಿತಿ ಮೀರಿರುವುದರಿಂದ ಅವರ ಮನವಿಯನ್ನು ಪರಿಗಣಿಸಿ ಕಿರಿಯ ಸಹಾಯಕ ಅಥವಾ ಗ್ರೂಪ್ ‘ಡಿ’ ಹುದ್ದೆಗೆ ನೇಮಕಾತಿ ಮಾಡಲು ವಿಶೇಷ ಪ್ರಸ್ತಾವನೆಯನ್ನು ವಿಶೇಷ ಮಂಡಳಿಯ ಅನುಮೋದನೆಗೆ ಕಡತ ಮಂಡಿಸಲು ಹೊರಟ್ಟಿ ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾಗಿ ಆದೇಶದಲ್ಲೇ ಉಲ್ಲೇಖವಿದೆ.

WhatsApp Image 2024 11 09 at 12.06.21 PM

ನೇರ ನೇಮಕಾತಿ, ಮುಂಬಡ್ತಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ವಿಧಾನಗಳಲ್ಲಿ ನೇಮಕಾತಿಗಳಿಗೆ ಮಾತ್ರ ನಿಯಮಾವಳಿಗಳಲ್ಲಿ ಅವಕಾಶವಿದೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಹೊರಗುತ್ತಿಗೆ ನೌಕರರನ್ನೇ ವಿಲೀನ ಮಾಡಿಕೊಳ್ಳುವ ಬಗ್ಗೆ ನಿರ್ದಿಷ್ಟ ನಿಯಮಗಳಿಲ್ಲ. ಮಾನವೀಯತೆ ದೃಷ್ಟಿಯಿಂದ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಾನವೀಯ ನೆಲೆಗಟ್ಟಿನಲ್ಲಿ ತಮ್ಮ ಆಪ್ತರಿಗೆ ಸಭಾಪತಿಗಳು ವಿಶೇಷ ಮಂಡಳಿ ಮೂಲಕ ಖಾಯಂ ನೌಕರಿ ಕೊಡಿಸುವುದಾದರೆ ಗುತ್ತಿಗೆ ಆಧಾರದ ಮೇಲೆ ಸರ್ಕಾರದಲ್ಲಿ ಸಾವಿರಾರು ನೌಕರರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಒಂದು ನ್ಯಾಯ, ವಿಧಾನ ಪರಿಷತ್ ಸಚಿವಾಲಯದ ಗುತ್ತಿಗೆ ನೌಕರರಿಗೆ ಒಂದು ನ್ಯಾಯವೇ ಎಂಬ ಪ್ರಶ್ನೆ ಮೂಡಿದೆ. ಸಂಸದೀಯ ಪದಾಧಿಕಾರಿಗಳು ಪ್ರತಿ ಐದು ವರ್ಷಕೊಮ್ಮೆ ಗುತ್ತಿಗೆ ನೌಕರರನ್ನು ನೇಮಕಾತಿ ಮಾಡಿಕೊಂಡಿಕೊಂಡು ನೇರ ನೇಮಕಾತಿಗೆ ವಿಲೀನ ಮಾಡಿಕೊಳ್ಳುತ್ತಿದ್ದರೆ, ನೇರ ನೇಮಕಾತಿ ನಿಯಮಕ್ಕೆ ಇದು ವಿರುದ್ಧವಲ್ಲವೇ? ಸರ್ಕಾರಿ ನೌಕರಿ ಪಡೆಯಲೆಂದೇ ಹಗಲಿರುಳು ಕಷ್ಟಪಟ್ಟು ಓದುವ ಉದ್ಯೋಗಾಕಾಂಕ್ಷಿಗಳಿಗೆ ಸಭಾಪತಿಗಳ ಅಂತಿಮ ತೀರ್ಮಾನದ ಮೇರೆಗೆ ವಿಶೇಷ ಮಂಡಳಿ ನಿರ್ಧಾರಗಳು ಮಾರಕವಲ್ಲವೇ?

ವಿಧಾನ ಪರಿಷತ್ ಸಚಿವಾಲಯದಲ್ಲಿ ‘ಡಿ’ ಗುಂಪಿನ ಸುಮಾರು 77 ನೌಕರರು ಮುಂಬಡ್ತಿಗೆ ಅವಕಾಶ ಇಲ್ಲದೆ ಸುಮಾರು 10 ರಿಂದ 15 ವರ್ಷದವರೆಗೆ ಕಾಯುತ್ತಿದ್ದಾರೆ. ವಿದ್ಯಾರ್ಹತೆ ಇರುವವರಿಗೆ ಅವಕಾಶ ನೀಡದೆ, ಕೇವಲ ತಮ್ಮ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದಾನೆ ಎಂದು ಕಾರಣಕ್ಕೆ ವಿಲೀನ ಮಾಡಿಕೊಂಡಿರುವುದು ಸಚಿವಾಲಯದ ಸಿಬ್ಬಂದಿ ನೌಕರರಿಗೆ ಆತಂಕ ಹುಟ್ಟಿಸಿದೆ. ಮುಂಬಡ್ತಿ ಸಿಗದೇ ಭವಿಷ್ಯ ಹಾಳುಗುತ್ತಿರುವುದಕ್ಕೆ ಸಭಾಪತಿಗಳನ್ನು ದೂರುತ್ತಿದ್ದಾರೆ.

ಸಭಾಪತಿ ಹೊರಟ್ಟಿ ಅವರ ಆಪ್ತ ಸಹಾಯಕರಾದ ಅರವಿಂದ ಅಜ್ಜನಗೌಡ ಪಾಟೀಲ್
ಸಭಾಪತಿ ಹೊರಟ್ಟಿ ಅವರ ಆಪ್ತ ಸಹಾಯಕರಾದ ಅರವಿಂದ ಅಜ್ಜನಗೌಡ ಪಾಟೀಲ್

ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ನೇಮಕಾತಿ ಆದೇಶ ಹೊರಡಿಸುವುದು ಸರ್ಕಾರದ ನಿಯಮ. ಸಚಿವಾಲಯದಲ್ಲಿ ಕೂಡ ಜನರಲ್‌ ನೇಮಕಾತಿಗೆ ಇದೇ ನಿಯಮ ಅನುಸರಿಸಲಾಗುತ್ತದೆ. ಆದರೆ ಈಗ ಸಭಾಪತಿ ಅವರು ತಮ್ಮ ಆಪ್ತ ಸಹಾಯಕರನ್ನು ವಿಲೀನ ಮಾಡಿಕೊಂಡಿರುವ ನಡೆ ನೋಡಿದರೆ ಇತರೆ ಸಂಸದೀಯ ಪದಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತಾರು ನೌಕರರು ತಮ್ಮನ್ನು ವಿಲೀನಗೊಳಿಸಬೇಕೆಂದು ಆಗ್ರಹಿಸಿದರೆ ಸಭಾಪತಿಗಳ ಮತ್ತು ಸರ್ಕಾರದ ಉತ್ತರವೇನು?

ಇವರಿಬ್ಬರ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲಾಗಿದೆಯಾ? ಮತ್ತು ಯಾವ ಖಾಲಿ ಹುದ್ದೆಗೆ ಭರ್ತಿ ಮಾಡಿಕೊಳ್ಳಲಾಗಿದೆ ಎಂಬುದಕ್ಕೂ ಆದೇಶ ಪ್ರತಿಯಲ್ಲಿ ಉತ್ತರವಿಲ್ಲ. ಗುತ್ತಿಗೆ ನೌಕರರನ್ನು ವಿಲೀನಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಉಲ್ಲೇಖಿಸಿದ್ದರೂ ಮುಖ್ಯ ಕಾರ್ಯದರ್ಶಿಯವರ ಅಭಿಪ್ರಾಯಕ್ಕೆ ನಿಯಮ ಬಾಹಿರವಾಗಿ ಕಾರ್ಯದರ್ಶಿ 2 ರವರಿಂದ ನೇಮಕಾತಿ ಆದೇಶ ಹೊರಡಿಸಲಾಗಿದೆಯಾ?

WhatsApp Image 2024 11 09 at 11.57.22 AM

ಅರವಿಂದ ಅಜ್ಜನಗೌಡ ಪಾಟೀಲ್ ಮತ್ತು ಬಿ ಎಂ ವಾಸಿಂ ನೇಮಕಾತಿ ಬಗ್ಗೆ ಅಭಿಪ್ರಾಯ ಪಡೆಯಲು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ಈ ನೇಮಕಾತಿಗಳನ್ನು ನಿಯಮಗಳ ಪ್ರಕಾರವೇ ಮಾಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ಆಪ್ತ ಸಹಾಯಕರಾಗಿ ಕೆಲಸ ಮಾಡಿದವರನ್ನು ಮಾನವೀಯ ನೆಲೆಯಲ್ಲಿ ವಿಲೀನಗೊಳಿಸಲು ವಿಶೇಷ ಮಂಡಳಿಗೆ ಅವಕಾಶವಿದೆ. ಈ ವಿಶೇಷ ಮಂಡಳಿಯಲ್ಲಿ ಮುಖ್ಯಮಂತ್ರಿಗಳು, ಕಾನೂನು ಸಚಿವರು ಹಾಗೂ ಸಭಾಪತಿಗಳು ಮೂರು ಸೇರಿ ನೇಮಕಾತಿಯನ್ನು ನಿರ್ಧರಿಸಲಾಗುತ್ತದೆ. ಈ ಹಿಂದೆಯೂ ಕೂಡ ಉಮೇಶ್ ಎಂಬುವರನ್ನು ನೇಮಕ ಮಾಡಲಾಗಿದೆ”‌ ಎಂದರು.

ಸರ್ಕಾರದಲ್ಲಿ ಸಾವಿರಾರು ನೌಕರರು ಕಾರ್ಯನಿರ್ವಹಿಸುತ್ತಿದ್ದು ಅವರನ್ನು ವಿಲೀನ ಮಾಡಿಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದಾಗ, “ಯಾರು ಬೇಡ ಎಂದವರು? ಸರ್ಕಾರ ನಿರ್ಧಾರ ಮಾಡಲಿ” ಎಂದು ತಿಳಿಸಿದರು.

ಸಭಾಪತಿ ಅವರೇ ಹೇಳಿದ ಉಮೇಶ್ ಎಂಬ ನೌಕರನ ನೇಮಕಾತಿ ಬಗ್ಗೆ ಸಚಿವಾಲಯದಲ್ಲಿ ವಿಚಾರಿಸಿದಾಗ ಉಮೇಶ್ ಎಂಬುವವರನ್ನು ಬಸವರಾಜ ಹೊರಟ್ಟಿ ಅವರೇ ಈ ಹಿಂದೆ ವಿಲೀನಗೊಳಿಸಿರುತ್ತಾರೆ ಎಂಬ ಮಾಹಿತಿ ದೊರಕಿದೆ.

ಮಾಜಿ ಸಭಾಪತಿ ಡಿ ಎಚ್‌ ಶಂಕರ ಮೂರ್ತಿ ಅವರು ಈ ಬಗ್ಗೆ ಮಾತನಾಡಿ, “ಸಚಿವಾಲಯದಲ್ಲಿ ಹೀಗೆ ನೇಮಕ ಮಾಡಿಕೊಳ್ಳಲು ಸಭಾಪತಿಗಳಿಗೆ ಯಾವುದೇ ಅಧಿಕಾರವಿಲ್ಲ. ನಾನು ಕೂಡ ಆ ಹುದ್ದೆಯಲ್ಲಿ ಇದ್ದು ಬಂದವನು. ಇಂತಹ ಯಾವ ನೇಮಕಾತಿಗಳನ್ನು ನಾನು ಮಾಡಿಲ್ಲ. ನೇಮಕಾತಿಗೆ ಆದೇಶ ಹೊರಡಿಸಿ ಅರ್ಜಿ ಕರೆದ ನಂತರ ನೇಮಕಾತಿ ಪ್ರಕ್ರಿಯೆ ಮೂಲಕ ಹುದ್ದೆ ತುಂಬಿಕೊಳ್ಳಲಾಗುತ್ತದೆ. ಹಾಗೇ ನೋಡಿದರೆ ಮುಖ್ಯಮಂತ್ರಿಗಾಗಲಿ ಅಥವಾ ಪ್ರಧಾನಿಗಾಗಲಿ ಹೀಗೆ ತಮ್ಮ ಬಳಿ ನೌಕರಿ ಕೊಡಿ ಎಂದು ಮನವಿ ಸಲ್ಲಿಸಿದವರನ್ನು ಖಾಯಂ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಇಲ್ಲವೇ ಇಲ್ಲ. ಹಾಗೊಂದು ನಿಯಮ ಇದ್ದರೆ ಇಂದು ಎಷ್ಟೋ ಜನರಿಗೆ ಈ ಮಾರ್ಗದಲ್ಲಿ ಸರ್ಕಾರಿ ನೌಕರಿ ಸಿಗುತ್ತಿತ್ತು. ಇವರಿಬ್ಬರ ನೇಮಕಾತಿಯನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ನೇಮಕಾತಿ ರದ್ದಾಗುತ್ತದೆ” ಎಂದು ಹೇಳಿದರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X