ವಿವಿಧ ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎನ್ನುವುದನ್ನು ಅಂಕಿ-ಅಂಶಗಳ ಮೂಲಕ ನಿಮ್ಮ ಮುಂದಿಡುವ ಪುಟ್ಟ ಪ್ರಯತ್ನ...
ಹೊಸ ಆರ್ಥಿಕ ನೀತಿಯ ಭಾಗವಾಗಿ ಬಂದ ರಚನಾತ್ಮಕ ಹೊಂದಾಣಿಕೆಯ ಕಾರ್ಯಕ್ರಮಗಳು ಕಳೆದ 25 ವರ್ಷಗಳಿಂದ ಇಂಡಿಯಾದ ಉತ್ಪಾದನಾ ವಲಯದಲ್ಲಿ ಅನೇಕ ಸ್ಥಿತ್ಯಂತರಗಳನ್ನು ಉಂಟುಮಾಡಿವೆ. ಅದರಲ್ಲಿಯೂ ಕಳೆದ ಹತ್ತು ವರ್ಷಗಳಿಂದ ಇಂಡಿಯಾ ಜಾಗತಿಕ ಉತ್ಪಾದನಾ ಕೇಂದ್ರವಾಗಬೇಕು ಎನ್ನುವ ದಿಕ್ಕಿನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಮೂಲಕ ವಿವಿಧ ಉತ್ಪಾದನಾ ವಲಯಗಳನ್ನು ಹಾಗೂ ಸೇವಾ ವಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ.
ವಿಶೇಷ ಆರ್ಥಿಕ ವಲಯ ಯೋಜನೆಯಲ್ಲಿ ಭೂಮಿ ನಿರ್ಣಾಯಕ ಮತ್ತು ಹೆಚ್ಚು ಆಕರ್ಷಕ ವಿಷಯವಸ್ತು. ಇಂಡಿಯಾದಲ್ಲಿ ಡಿಸೆಂಬರ್ 3, 2014ರವರೆಗೆ 46,085.55 ಹೆಕ್ಟೇರ್ ಭೂಮಿಯನ್ನು ಎಸ್.ಇ.ಜಡ್ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೋಟಿಫೈ ಮಾಡಿವೆ. ಆದರೆ ಎಸ್.ಇ.ಜಡ್ ಉದ್ದೇಶಕ್ಕೆ ಮಂಜೂರಾದ ಒಟ್ಟು ಭೂಮಿಯಲ್ಲಿ ಕೇವಲ 19,626.64 ಹೆಕ್ಟೇರ್ (ಶೇಕಡ 42.59ರಷ್ಟು) ಭೂಮಿಯನ್ನು ಉದ್ದೇಶಿತ ಚಟುವಟಿಕೆಗೆ ಬಳಸಲು ಪ್ರಯತ್ನಗಳು ನಡೆದಿದ್ದರೆ, ಉಳಿದ 18,299.29 ಹೆಕ್ಟೇರ್ ಭೂಮಿ ಎಸ್.ಇ.ಜಡ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುಳ್ಳು ಹೇಳಿ ಖಾಲಿಯಿದೆ. ಹೀಗೆ ಖಾಲಿ ಇರುವ ಭೂಮಿಯನ್ನು ಪಡೆಯಲು ಡೆವಲಪರ್‍ಗಳು, ಕಾರ್ಪೊರೇಟ್ ಹೌಸ್‌ಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಂಡವಾಳಶಾಹಿ ವರ್ಗ ನಿರಂತರವಾಗಿ ಸರ್ಕಾರಗಳ ಹಿಂದೆ ಬಿದ್ದಿರುವುದನ್ನು ನಾವು ಕಾಣಬಹುದು.
ಜಾಗತಿಕ ಮಾರುಕಟ್ಟೆಗೆ ಹೆಚ್ಚು ತೆರೆದುಕೊಂಡಿರುವ ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಟೌನ್‌ಶಿಪ್‌ಗಳು, ಗ್ರೇಟರ್ ಬೆಂಗಳೂರು, ಕೈಗಾರಿಕಾ ವಲಯಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 928 ಗ್ರಾಮಗಳ ವ್ಯಾಪ್ತಿಯಲ್ಲಿ 11 ಲಕ್ಷ (2011) ಎಕರೆಗಳಿಗೂ ಹೆಚ್ಚಿನ ಭೂಮಿಯನ್ನು ಖಾಸಗಿಯವರಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ಬೆಲೆಗೆ ನೀಡಲಾಗಿದೆ. ಅಲ್ಲದೇ ಈ ಪ್ರದೇಶಗಳಲ್ಲಿ ಬಂಡವಾಳ ಹೂಡುವವರಿಗೆ ತೆರಿಗೆ ವಿನಾಯತಿ ನೀಡಲಾಗುತ್ತಿದೆ.
ಇದನ್ನು ಓದಿದ್ದೀರಾ?: ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?
ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್‌ಗೆ 10 ಸಾವಿರ ಎಕರೆ, ಮಿತ್ತಲ್ ಗುಂಪಿಗೆ 5 ಸಾವಿರ ಎಕರೆ, ವಿಮಾನ ನಿಲ್ದಾಣಕ್ಕೆ 1,200 ಎಕರೆ, ಎನ್.ಎಂ.ಡಿ.ಸಿಗೆ. 1,000 ಎಕರೆ, ಎಸಿಸಿಗೆ 400 ಎಕರೆ ಕೃಷಿ ಭೂಮಿಯನ್ನು ನೀಡಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ ಬಳಿ ಈ ಪೋಸ್ಕೋ ಕಂಪನಿಯ 6 ಮಿಲಿಯನ್ ಟನ್ ಸಾಮರ್ಥ್ಯದ ರೂ. 32,366 ಕೋಟಿ ಬಂಡವಾಳ ಹೂಡಿಕೆಯ ಪೋಸ್ಕೋ ಸ್ಟೀಲ್ ಪ್ಲಾಂಟ್ 3,382 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತುವ ಪ್ರಯತ್ನಕ್ಕೆ ಹಳ್ಳಿಗುಡಿ, ಹಳ್ಳಿಕೇರಿ, ಲಕ್ಕುಂಡಿ ಇತ್ಯಾದಿ ಹಳ್ಳಿಗಳ ಜನರಿಂದ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ತಾತ್ಕಾಲಿಕ ತಡೆಯಾಗಿದೆ.
ಹೀಗೆ ಕೃಷಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಹಂಚುವ ಮೂಲಕ, ರೈತರು ಕೃಷಿ ಚಟುವಟಿಕೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಪರಿಸರ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಪ್ರತಿವರ್ಷ ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಗೆ ವಿಶೇಷ ಪ್ರಯತ್ನ ಮಾಡುವ ಮೂಲಕ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ರೂಪಾಂತರ ಮಾಡಲಾಗುತ್ತಿದೆ. ಕರ್ನಾಟಕ-2016 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರೂ.3,08,810 ಕೋಟಿ ಬಂಡವಾಳ ಹೂಡಿಕೆಯ 1,201 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಇದಕ್ಕೆ ಪೂರಕವಾಗುವಂತೆ ಕರ್ನಾಟಕ ರಾಜ್ಯ ಯೋಜನಾ ಮಂಡಳಿಯು ‘ಕರ್ನಾಟಕದ ಒಂದು ದೃಷ್ಟಿಕೋನ: 20-20’ ಎನ್ನುವ ಹೆಸರಿನಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿ, ಕೃಷಿ ಸಮಾಜದ ಬಿಕ್ಕಟ್ಟುಗಳನ್ನು ಚರ್ಚಿಸದೇ ಯೋಚಿಸದೇ ಕೃಷಿಯ ಅವಲಂಬನೆಯನ್ನು ಶೇಕಡಾ 61ರಿಂದ 2020ರ ವೇಳೆಗೆ ಶೇಕಡಾ 35-40ರಷ್ಟಕ್ಕೆ ಇಳಿಸಬೇಕೆಂಬ ಶಿಫಾರಸ್ಸನ್ನು ಮಾಡಿದೆ. ಇದರಲ್ಲಿ ಹೊಸ ತಯಾರಿಕಾ ವಲಯಗಳಿಗೆ ಸ್ಥಳೀಯರು ಹಾದಿ ಮಾಡಿಕೊಡಬೇಕೆಂದು ನಿರೀಕ್ಷಿಸಲಾಗಿದೆ. ವಿಶೇಷ ಆರ್ಥಿಕ ವಲಯಗಳ ವಿಸ್ತರಣೆಗೆ ನೋಟಿಫೈಯಾದ ಭೂಮಿಯ ಒಂದು ಪಾಲನ್ನು ಎಸ್.ಇ.ಜಡ್ ಅಭಿವೃದ್ಧಿಗೆ ಬಳಕೆಯ ಪ್ರಯತ್ನ ಮಾಡಿದ್ದರೆ, ಲಾಭದ ಉದ್ದೇಶದಿಂದ ಕೆಲವು ಪಾಲು ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲಾಗಿದೆ.
ಆರು ಪ್ರಮುಖ ರಾಜ್ಯಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ನಿಗದಿಯಾದ 39,245.56 ಹೆಕ್ಟೇರ್ ಭೂಮಿಯಲ್ಲಿ, 5,402.22 ಹೆಕ್ಟೇರ್ ಭೂಮಿಯನ್ನು (ಶೇಕಡಾ 14ರಷ್ಟು) ಡಿನೋಟಿಫೈ ಮಾಡಿ ಇತರೆ (ಎಸ್.ಇ.ಜಡ್ ಸಂಬಂಧಿಸದ) ಲಾಭದಾಯಕ ಉದ್ದೇಶಗಳಿಗೆ ಬಳಸಲಾಗಿದೆ. ಎಸ್.ಇ.ಜಡ್ ಪ್ರದೇಶಗಳಲ್ಲಿ ‘ಸಾರ್ವಜನಿಕ ಉದ್ದೇಶ’ದ ಹೆಸರಿನಲ್ಲಿ ಹೆಚ್ಚಿನ ಭೂಮಿಯನ್ನು 1,894ರ ಭೂ-ಸ್ವಾಧೀನ ಕಾಯಿದೆ (land acquisition Act-1894) ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು 2014ರ ಸಿ.ಎ.ಜಿ. ವರದಿ ತಿಳಿಸುತ್ತದೆ. ಈ ಕುರಿತು ತನಿಖೆ ನಡೆಸಿರುವ ಸಿಬಿಐ, ಎಸ್.ಇ.ಜಡ್‌ನ ನೀತಿಗಳು ಕಾರ್ಪೊರೇಟ್ ವರ್ಗಕ್ಕೆ ಹೆಚ್ಚು ಅನುಕೂಲವಾಗಿವೆ. ಬಳಕೆಯಾಗದೇ ಇರುವ ಭೂಮಿಯನ್ನು ಆಯಾ ರೈತರಿಗೆ ಹಿಂದಿರುಗಿಸುವಂತೆ ತನಿಖಾ ವರದಿಯಲ್ಲಿ ತಿಳಿಸಿದೆ. ಈ ಯೋಜನೆಯ ಮೂಲಕ ಉದ್ಯೋಗ ಅವಕಾಶಗಳು ಶೇಕಡಾ 8ಕ್ಕಿಂತಲೂ ಕಡಿಮೆ ಎಂದು ವರದಿ ನೀಡಿದೆ. ಇದನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಸೇರಿದಂತೆ ಏಳು ರಾಜ್ಯ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿತು. ಅದರಲ್ಲಿಯೂ ಕರ್ನಾಟಕದಲ್ಲಿ 2005ರ ನಂತರ ಅಧಿಕಾರಕ್ಕೆ ಬಂದ ಬಹುತೇಕ ಎಲ್ಲ ಮುಖ್ಯಮಂತ್ರಿಗಳು ಭೂಮಿಯ ಡಿನೋಟಿಫಿಕೇಷನ್ ಅಪರಾಧವನ್ನು ಎದುರಿಸುತ್ತಿದ್ದಾರೆ. ಇದರ ಹಿಂದೆ ಹಲವರ ಹಿತಾಸಕ್ತಿಗಳು ಹಾಗೂ ಕಾಣದ ಬಂಡವಾಳಶಾಹಿಗಳ ಕೈಗಳು ಕೆಲಸ ಮಾಡುತ್ತಿರುವುದನ್ನು ತನಿಖಾ ವರದಿಗಳು ತಿಳಿಸಿವೆ.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಎಸ್.ಇ.ಜಡ್ ಅಭಿವೃದ್ಧಿಗೆ ಭೂಮಿ ಅತ್ಯಂತ ಅಗತ್ಯ, ಹಾಗಾಗಿ ಅದಕ್ಕೆ ಮಂಜೂರು ಮಾಡುವ ಭೂಮಿಯನ್ನು ಹಿಂದಕ್ಕೆ ಪಡೆಯಲಾಗದು ಎಂದು ಎಸ್.ಇ.ಜಡ್ ಕಾಯಿದೆ 2005 ಹೇಳುತ್ತದೆ. ಭೂಮಿಯನ್ನು ರಾಜ್ಯ ಸರ್ಕಾರಗಳು ಎಸ್.ಇ.ಜಡ್ ಡೆವಲಪರ್‍ಗಳ ಪ್ರಸ್ತಾವನೆಗಳಿಗೆ ಅನುಗುಣವಾಗಿ ನೇರವಾಗಿ/ಕೆಲವು ಏಜೆನ್ಸಿಗಳ ಮೂಲಕ ಅಂದರೆ ಭೂ-ಬ್ಯಾಂಕ್ ಮೂಲಕ ಮಂಜೂರು ಮಾಡಬೇಕು. ಭೂ- ಸ್ವಾಧೀನವು 1894ರ ಭೂ-ಸ್ವಾಧೀನ ಕಾಯಿದೆಯ ಸೆಕ್ಷನ್-4 ಮತ್ತು 6ರಂತೆ ನಡೆದಿದೆ. ಎಸ್.ಇ.ಜಡ್‌ನ ಪರಿಣಾಮಗಳನ್ನು ಕುರಿತು ಹಲವು ಅಧ್ಯಯನಗಳನ್ನು ಸಾರ್ವಜನಿಕ ಸಂಸ್ಥೆಗಳು, ಸಾರ್ವಜನಿಕರು ಮತ್ತು ನಾಗರಿಕ ಸಮಾಜ ನಡೆಸಿದೆ. ಬಹುತೇಕ ಎಲ್ಲಾ ಅಧ್ಯಯನಗಳು ಉದ್ದೇಶದ ಅಗತ್ಯಕಿಂತಲೂ ಹೆಚ್ಚಿನ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಲಾಭದ ಉದ್ದೇಶದಿಂದ ಎನ್ನುವುದನ್ನು ಎತ್ತಿತೋರಿಸಿವೆ.
ಈ ಕುರಿತು ನಿಧಾನವಾಗಿ ದೇಶದಾದ್ಯಂತ ದೊಡ್ಡಮಟ್ಟದ ಪ್ರತಿಭಟನೆಗಳು ಹೆಚ್ಚಿದವು. ಇದಕ್ಕೆ ಕಾರಣ ದೇಶದಾದ್ಯಂತ ಬಹಳ ದೊಡ್ಡ ಪ್ರಮಾಣದ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ ಮತ್ತು ಎಸ್.ಇ.ಜಡ್ ಸ್ಥಾಪನೆಗೆ ಸ್ವಾಧೀನ ಮಾಡುವ ಮೂಲಕ, ಗ್ರಾಮೀಣ ಪ್ರದೇಶದ ಬಹುಜನರ ಬದುಕಿಗೆ ಸಂಪನ್ಮೂಲವಾದ ಭೂಮಿಯನ್ನು ಹಾಗೂ ಸಹಜ ಸ್ವಾಭಾವಿಕ ಸಂಪನ್ಮೂಲಗಳನ್ನು ಹೆಚ್ಚು ಲಾಭದ ನೆಲೆಯಲ್ಲಿ ಯೋಚಿಸುತ್ತಿರುವ ಅಂತಾರಾಷ್ಟ್ರೀಯ ಬಂಡವಾಳಶಾಹಿ ವರ್ಗಕ್ಕೆ ಅದರಲ್ಲಿಯೂ ಕಾರ್ಪೋರೇಟ್ ಹೌಸ್‌ಗಳಿಗೆ ವರ್ಗಾಯಿಸುತ್ತಿರುವುದು ‘ಸಮಕಾಲೀನ ಅಭಿವೃದ್ಧಿ’ಯ ಅಜೆಂಡವಾಗಿದೆ.
ಇಂತಹ ಅಭಿವೃದ್ಧಿ ಮಧ್ಯಪ್ರವೇಶಿಕೆಗಳು ರಿಯಲ್ ಎಸ್ಟೇಟ್ ಬೆಳವಣಿಗೆಯ ವೇಗವನ್ನು ಹೆಚ್ಚಿಸಿದೆ. ಅಲ್ಲದೇ ಭೂಮಿಯ ಬೆಲೆ ಏರುಮುಖವಾಗಲು ಒತ್ತಡ ತಂದಿದೆ. ರಿಯಲ್ ಎಸ್ಟೇಟ್ಸ್ ಅಭಿವೃದ್ಧಿಪಡಿಸುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳು ಬಹುರಾಷ್ಟ್ರೀಯ ಕಂಪನಿಗಳ ನೌಕರರ ಮತ್ತು ಅನಿವಾಸಿ ಭಾರತೀಯ ಗೃಹ ಬೇಡಿಕೆಯನ್ನು ಪೂರೈಸಲು ಇಂಟಿಗ್ರೇಟೆಡ್ ಟೌನ್ ಶಿಪ್‌ಗಳನ್ನು ಮತ್ತು ಬೃಹತ್ ಮನೆ ಸಂಕೀರ್ಣಗಳನ್ನು ನಿರ್ಮಾಣ ಮಾಡುತ್ತಿವೆ. ಈ ರೀತಿ ಬೆಳವಣಿಗೆ ಆಧಾರಿತ ಅಭಿವೃದ್ಧಿ ಪ್ರಕ್ರಿಯೆಗಳು ಕೇವಲ ಭೂಮಿಯ ಬೆಲೆಯನ್ನು ಮಾತ್ರ ಹೆಚ್ಚಿಸದೆ, ನಗರ ಅಥವಾ ಪಟ್ಟಣ ಕೇಂದ್ರಿತವಾಗದೆ, ಒಂದು ಪುಟ್ಟ ಬುಡಕಟ್ಟು ಅಡಿಯಿಂದ ಮೆಟ್ರೋಪಾಲಿಟಿನ್ ನಗರಗಳವರೆಗೆ ಹಲವು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ.
ಇದನ್ನು ಒಂದು ಉದಾಹರಣೆಯ ಮೂಲಕ ಇನ್ನಷ್ಟು ಸ್ಪಷ್ಟ ಮಾಡಿಕೊಳ್ಳಬಹುದು. ಬಳ್ಳಾರಿಯ ಗಣಿ ಮಾಫಿಯಾದಿಂದ ಉತ್ಪಾದನೆಯಾದ ಅನಿಯಮಿತ ಹಣಕಾಸು ಬಂಡವಾಳವು ಕರ್ನಾಟಕದ ಜನರು ಮತದಾನದ ಮೂಲಕ ಆಯ್ಕೆ ಮಾಡುತ್ತಿದ್ದ ಸರ್ಕಾರ(ಸ್ಥಳೀಯ ಸರ್ಕಾರದಿಂದ ರಾಜ್ಯ ಸರ್ಕಾರದವರೆಗೆ) ರಚನಾ ಕ್ರಮವನ್ನು ಕೋಟಿಗಟ್ಟಲೆ ಹಣ ನೀಡಿ ಚುನಾವಣೆಯ ಮೂಲಕ ಆಯ್ಕೆಯಾದ ಜನ ಪ್ರತಿನಿಧಿಗಳನ್ನು ಮಾರುಕಟ್ಟೆಯಲ್ಲಿ ದೊರಕುವ ವಸ್ತುಗಳಂತೆ ಕೊಂಡುಕೊಳ್ಳುವ ರಾಜಕೀಯಕ್ಕೆ 2008ರಲ್ಲಿ ಸಾಕ್ಷಿಯಾಯಿತು. ಇದನ್ನು ರೆಸಾರ್ಟ್ ರಾಜಕೀಯದ ಮೂಲಕ ಮುಂದುವರಿಸಿದ ಲೂಟಿಕೋರ ರಾಜಕೀಯ ವ್ಯಕ್ತಿಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಬದಲಾಗಿ ದೊಡ್ಡ ಬಂಡವಾಳಶಾಹಿಗಳು ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಮತ್ತು ರಚನೆಗಳನ್ನು ಆಕ್ರಮಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ಬಿಕ್ಕಟ್ಟುಗಳನ್ನು ಮಾರ್ಕ್ಸಿಸ್ಟ್ ಭೂಗೋಳಶಾಸ್ತ್ರಜ್ಞ ಡೆವಿಡ್ ರಾರ್ವೆ ‘ಅಕ್ಯೂಮುಲೇಷನ್ ಬೈ ಡಿಸ್ಪೋಜಿಸೆನ್’ ಎಂದು ಕರೆಯುತ್ತಾರೆ.
ಇದನ್ನು ಓದಿದ್ದೀರಾ?: ಪಾಟೀಲರೇ, ಸ್ವಲ್ಪವಾದರೂ ಜನಪರವಾಗಿ, ಜವಾಬ್ದಾರಿಯಿಂದ ನಡೆದುಕೊಳ್ಳಿ: ನಟ ಪ್ರಕಾಶ್ ರಾಜ್ ತಿರುಗೇಟು
ಡೆವಿಡ್ ರಾರ್ವೆ ಅವರು ಬಳಸಿರುವ ‘ಅಕ್ಯೂಮುಲೇಷನ್ ಬೈ ಡಿಸ್ಪೋಜಿಸೆನ್’ (Accumulation by dispossession) ಅಭಿವೃದ್ಧಿ ಪರಿಕಲ್ಪನೆಯು ‘ನವ- ಉದಾರವಾದಿ ಬಂಡವಾಳಶಾಹಿ ರಾಜಕಾರಣವು 1970ರಿಂದ ಇಂದಿನವರೆಗೆ, ಸಾರ್ವಜನಿಕರನ್ನು ಅವರ ಸಂಪತ್ತು ಮತ್ತು ಭೂಮಿಯನ್ನು ಡಿಸ್ಪೋಜಿಸೆನ್/ಕಿತ್ತುಕೊಂಡು ಸಾರ್ವಜನಿಕ ಸಂಪತ್ತು ಮತ್ತು ಅಧಿಕಾರ ಕೆಲವರ ಕೈಯಲ್ಲಿ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತಿದೆ’ ಎನ್ನುವುದನ್ನು ಸಾಬೀತು ಮಾಡಿದೆ.
(ಕೃಪೆ: ಹಣಕಾಸು ಮಾರುಕಟ್ಟೆ: ಭೂಮಿ ಮತ್ತು ರಿಯಲ್ ಎಸ್ಟೇಟ್ಸ್ ಅಧ್ಯಾಯದ ಆಯ್ದ ಭಾಗ, ಕೃತಿ: ಅಭಿವೃದ್ಧಿಯ ಅನುಭವಗಳು, ಲೇ: ಡಾ.ಹೆಚ್.ಡಿ. ಪ್ರಶಾಂತ್, ಪ್ರ: ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸಂ: 70228 52677)
