ಸದಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಬಿಜೆಪಿಯವರ ಸಾಧನೆ ಏನು ಎಂದು ಹೇಳಲಿ. ಕಾಂಗ್ರೆಸ್ ಈ ದೇಶದಲ್ಲಿ ಏನು ಸಾಧನೆ ಮಾಡಿದೆ ಎಂಬ ಬಗ್ಗೆ ನನ್ನ ಬಳಿ ದಾಖಲೆ ಇದೆ. ಕಾಂಗ್ರೆಸ್ ಬಡವರಿಗಾದರೆ, ಬಿಜೆಪಿ ಶ್ರೀಮಂತರಿಗಾಗಿ ಇರುವ ಪಕ್ಷ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಮಹಾರಾಣಿ ಕಾಲೇಜಿನ ಮೈದಾನದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಸ್ಸಿ, ಎಸ್ಟಿಗಳ ಶಿಕ್ಷಣ ಕೇವಲ 7% ಇತ್ತು. ನಾವು 60% ಮಾಡಿದ್ದೇವೆ. ಕಾಂಗ್ರೆಸ್ 50 ವರ್ಷದಲ್ಲಿ ಏನೂ ಮಾಡಿಲ್ಲ ಅಂತ ಬೊಬ್ಬೆ ಹೊಡೆಯುತ್ತಲೇ ಇದ್ದಾರೆ. ನಾವು ಮಾಡಿದ್ದು ಬಹಳ ಇದೆ. 1947ರ ಹಿಂದೆ 2 ಲಕ್ಷ ಪ್ರಾಥಮಿಕ ಶಾಲೆಗಳಿದ್ದವು. ಈಗ 8 ಲಕ್ಷ ಇದೆ. ನರೇಗಾ ನಾವು ತಂದಿದ್ದು, ಆಹಾರ ಭದ್ರತಾ ಕಾಯ್ದೆ ತಂದಿದ್ದು, ಅದಕ್ಕೆ ಉಚಿತ ಅನ್ನ ಭಾಗ್ಯವೂ ತಂದದ್ದು ಕಾಂಗ್ರೆಸ್. ಬಡವರಿಗಾಗಿ ನಾವು ಯೋಜನೆಗಳನ್ನು ಮಾಡಿದ್ದೇವೆ. ಆದರೆ ಅವರು ಶ್ರೀಮಂತರಿಗಾಗಿ ಇದ್ದಾರೆ. ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ. ಮೋದಿ ಎಂದಿದ್ದಕ್ಕೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದರು. ಆದ್ರೆ ರಾಹುಲ್ ಯಾವುದಕ್ಕೂ ಹೆದರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿ ರಾಹುಲ್ ಗಾಂಧಿ ಜನರ ಮಾತು ಆಲಿಸಿದ್ದಾರೆ. ಕೇಂದ್ರದ ಯಾವ ನಾಯಕ ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್ ವಾಗ್ದಾನ ಮಾಡಿದ್ದನ್ನು ಪೂರೈಸಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಅದನ್ನೇ ನಾನು ಕೂಡ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಈಗಾಗಲೇ 4 ಗ್ಯಾರಂಟಿ ಅನುಷ್ಠಾನಕ್ಕೆ ಬಂದಿವೆ. ಯುವನಿಧಿ ಯೋಜನೆ ಒಂದು ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ಯಾವ ಸರ್ಕಾರವೂ ಈ ರೀತಿಯ ಯೋಜನೆಗಳನ್ನು ಮಾಡಿಲ್ಲ. ಇಡೀ ಭಾರತದಲ್ಲಿ ಒಪ್ಪುವಂತಹ ಗ್ಯಾರಂಟಿಗಳಿವು. ಚುನಾವಣೆ ಮುಂಚೆ ನಾವು ಗ್ಯಾರಂಟಿ ಘೋಷಣೆ ಮಾಡಿದಾಗ, ಕೇಂದ್ರದ ಬಿಜೆಪಿ ನಾಯಕರು ಟೀಕೆ ಮಾಡುತ್ತಲೇ ಇದ್ದರು. ಇದರಿಂದ ಆರ್ಥಿಕತೆ ಕುಸಿಯುತ್ತದೆ. ಬೋಗಸ್ ಎಂದಿದ್ದರು. ಆದರೆ ಈಗ ನಾವು ಇದನ್ನು ಮಾಡಿ ತೋರಿಸಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದರು.