- ಕಳೆದ ಬಾರಿಯ ಸೋಲಿನ ಕಾರಣ ಬಿಚ್ಚಿಟ್ಟ ಹಾಲಿ ಸಚಿವ ಮಹದೇವಪ್ಪ
- ನಾನು ತೆರೆದ ಪುಸ್ತಕ, ಯಾರು ಬೇಕಾದರೂ ನೋಡಬಹುದು ಎಂದ ಎಚ್‌ಸಿಎಂ
ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡದ ಕಾರಣ ಕಳೆದ ಬಾರಿ ಸೋಲು ಕಂಡಿದ್ದೆ. ಜೊತೆಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ರೂ ನಾನು ಪ್ರಚಾರ ಪಡೆಯದೇ ಇದ್ದದ್ದೂ ನನ್ನ ಸೋಲಿಗೆ ಮತ್ತೊಂದು ಕಾರಣ ಎಂದು ಸಚಿವ ಎಚ್ ಸಿ ಮಹದೇವಪ್ಪ ಹೇಳಿದರು.
ಮೈಸೂರಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಹದೇವಪ್ಪ ಇದುವರೆಗೆ ನಾನು 6 ಬಾರಿ ಗೆದ್ದಿದ್ದೇನೆ, ಮೂರು ಬಾರಿ ಸೋತಿದ್ದೇನೆ. ಮೂರು ಬಾರಿಯೂ ನನ್ನಿಂದ ನಾನೇ ಸೋತಿದ್ದೇನೆ ಎಂದರು.
ಗೆದ್ದಾಗ ಮಂತ್ರಿಯಾಗುತ್ತಿದ್ದೆ. ರಾಜ್ಯದ ಜನರಿಗೆ ಸಮಯ ಕೊಡುವ ಭರದಲ್ಲಿ ನನ್ನ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ. ನನ್ನ ಕಾರ್ಯಕರ್ತರಿಂದ ದೂರವಾಗಿದ್ದ ಕಾರಣ ಸೋಲಾಯಿತು ಅಷ್ಟೆ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಬೀಗಿಲ್ಲ ಎಂದವರು ಹೇಳಿದರು.
ಪಕ್ಷದ ಮುಂದೆ ನಾನೆಂದೂ ಟಿಕೆಟ್ ಗೆ ಬೇಡಿಕೆ ಇಟ್ಟಿಲ್ಲ. ನನ್ನ ಹೋರಾಟ ನೋಡಿಯೇ ಟಿಕೆಟ್ ನೀಡಿದ್ದಾರೆ. ನಾನು ತೆರೆದ ಪುಸ್ತಕದಂತೆ, ಯಾರು ಬೇಕಾದರೂ ನೋಡಬಹುದು ಎಂದರು. ಮುಂದುವರಿದು ಮಾತನಾಡಿದ ಅವರು ನನ್ನ ಅವಧಿಯಲ್ಲಿ ಎಲ್ಲವನ್ನೂ ಕ್ರೋಡೀಕರಿಸಿ ಉತ್ತಮ ದಸರಾ ಮಾಡಿದ್ದೇನೆ. ನಿಜವಾದ ವೈಚಾರಿಕತೆ ಹಾಗೂ ಸಾಂವಿಧಾನಿಕ ದಸರಾ ಆಚರಣೆ ಮಾಡಿದ್ದೇನೆ ಎಂದರು.
ಈ ಸುದ್ದಿ ಓದಿದ್ದೀರಾ?:ಇಂದಿನ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ: ಸಂಸದ ಡಿ ಕೆ ಸುರೇಶ್
ಇನ್ನು ಕೇಂದ್ರ ಸರ್ಕಾರದ ಅಕ್ಕಿ ಪೂರೈಸುವ ವಿಚಾರದಲ್ಲಿನ ತಾರತಮ್ಯದ ಬಗ್ಗೆ ಮಾತನಾಡಿದ ಮಹದೇವಪ್ಪ, ಹೆಚ್ಚುವರಿ ಅಕ್ಕಿ ಕೇಳಿದರೆ ಚುನಾವಣೆಗೂ ಮುನ್ನ ನಮ್ಮನ್ನು ಕೇಳಿದ್ದಿರಾ ಎಂದು ಪ್ರಶ್ನಿಸುತ್ತಾರೆ? ನಮ್ಮ ಪ್ರಣಾಳಿಕೆ ಬಗ್ಗೆ ಇನ್ನೊಂದು ಪಕ್ಷದ ಜೊತೆ ಚರ್ಚಿಸಲು ಆಗುತ್ತಾ..? ಇವರೆಂತಹ ರಾಜಕಾರಣ ಮಾಡುತ್ತಾರೋ ಎಂದು ಮಹದೇವಪ್ಪ ಬಿಜೆಪಿ ವಿರುದ್ಧ ಚಾಟಿ ಬೀಸಿದರು.
ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ
ಇದೇ ವೇಳೆ ಮುಖ್ಯಮಂತ್ರಿ ಅವಧಿ ಹಂಚಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಹದೇವಪ್ಪ, ‘ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರೇ ಪೂರ್ಣವಧಿ ಸಿಎಂ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.