2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷರಂತೆ “ನರೇಂದ್ರ ಪುಟಿನ್” ಆಗುತ್ತಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆತಂಕ ವ್ಯಕ್ತಪಡಿಸಿದರು.
ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ರಾಷ್ಟ್ರ ರಾಜಧಾನಿ ವಿರುದ್ಧ ಆಡಳಿತ ಸೇವಾ ವಿಷಯಗಳಲ್ಲಿ ಹೊರಡಿಸುತ್ತಿರುವ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಹಮ್ಮಿಕೊಂಡಿರುವ ಮಹಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಮೋದಿ ಈಗಾಗಲೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪೂರ್ಣ ಪ್ರಮಾಣದ ಸರ್ವಾಧಿಕಾರಿಯಾಗಲಿದ್ದಾರೆ. 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಚುನಾವಣೆಯೇ ಇರುವುದಿಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನರೇಂದ್ರ ಮೋದಿ ನರೇಂದ್ರ ಪುಟಿನ್ ಆಗುತ್ತಾರೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಶುಭಮನ್ ಗಿಲ್ ಔಟ್ ಬಗ್ಗೆ ವಿವಾದಾತ್ಮಕ ತೀರ್ಪು; ಕ್ರಿಕೆಟ್ ದಿಗ್ಗಜರಿಂದ ಅಂಪೈರ್ ಬಗ್ಗೆ ಆಕ್ರೋಶ
“ಬಿಜೆಪಿ ನಾಯಕರು ಮೋದಿಯನ್ನು ಭಾರತದ ‘ಮಾಲಿಕ್’ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. 140 ಕೋಟಿ ಭಾರತೀಯರಿರುವ ಭಾರತವನ್ನು ಒಟ್ಟಿಗೆ ಕೊಂಡೊಯ್ದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಬಿಜೆಪಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆ. ಬಿಜೆಪಿಯವರು ಹಿಂದೂ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದು ದೇಶದಲ್ಲಿ ಅಂತರ್ಯುದ್ಧಕ್ಕೆ ಕಾರಣವಾಗುತ್ತದೆ” ಎಂದು ಭಗವಂತ್ ಮಾನ್ ತಿಳಿಸಿದರು.
ಮಹಾ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ದೆಹಲಿ ಎಎಪಿ ನಾಯಕ ಮತ್ತು ಸಚಿವ ಗೋಪಾಲ್ ರೈ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.
ಆಡಳಿತ ಸೇವಾ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಪ್ರತಿಭಟಿಸಲು ದೆಹಲಿಯ ಆಡಳಿತ ಪಕ್ಷವು ಈ ರ್ಯಾಲಿಯನ್ನು ಆಯೋಜಿಸಿದೆ. ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಕೋರಿರುವ ಎಎಪಿ, ಕೇಂದ್ರ ಸರ್ಕಾರವು ತನ್ನ ನಿಲುವನ್ನು ಮರುಪರಿಶೀಲಿಸಬೇಕು ಮತ್ತು ದೆಹಲಿಯ ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದಿದೆ. ಸುಗ್ರೀವಾಜ್ಞೆಯಿಂದ ದೆಹಲಿ ಜನರ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಎಎಪಿ ವಿವರಿಸಿದೆ.
ಜನರಿಂದ ಆಯ್ಕೆಯಾದ ದೆಹಲಿ ಸರ್ಕಾರದ ಆಡಳಿತದ ವಿಷಯದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೊರಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.