ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ ಇನ್ನೊಂದು ಕೈಯಲ್ಲಿ ಜನಸಾಮಾನ್ಯರ ಹಣವನ್ನು ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಎಎಪಿ ಪ್ರಧಾನಕಾರ್ಯದರ್ಶಿಮೋಹನ್ ದಾಸರಿ ಆರೋಪಿಸಿದ್ದಾರೆ.
ತೈಲ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಮುಖಂಡರು ಮಂಗಳವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ದ್ವಿಚಕ್ರ ವಾಹನಗಳಿಗೆ ಹೂವಿನ ಹಾರಗಳನ್ನು ಹಾಕಿ ಅಣುಕು ಅಂತ್ಯಕ್ರಿಯೆ ನಡೆಸುವ ಮೂಲಕ ಗಮನ ಸೆಳೆದರು. ಸೈಕಲ್‌ಗಳನ್ನು ಏರಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಪಕ್ಷದ ಪ್ರಧಾನಕಾರ್ಯದರ್ಶಿ ಮೋಹನ್ ದಾಸರಿ, “ಸಮರ್ಪಕವಾಗಿ ಸಂಪನ್ಮೂಲ ಕ್ರೋಡಿಕರಣ ಮಾಡಿದರೆ, ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯನ್ನು ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಇತರೆ ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಹಣ ಉಳಿಯುತ್ತದೆ” ಎಂದು ಮೋಹನ್ ದಾಸರಿ ಅಭಿಪ್ರಾಯ ವ್ಯಕ್ತಪಡಿಸಿದರು.
“ಮೇ 2023ರಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ 1 ವರ್ಷದ ಅವಧಿಯೊಳಗೆ ಅಬಕಾರಿ ತೆರಿಗೆಯನ್ನು ಮೂರು ಬಾರಿ ಹೆಚ್ಚಿಸಿದ್ದಾರೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಗರಿಷ್ಠ ಶೇ.25 ರವರೆಗೆ ಏರಿಕೆ ಮಾಡಿದ್ದಾರೆ. ನಾನಾ ಹಂತದ ವಾಹನಗಳಿಗೆ ವಿಧಿಸುವ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಬೇರೆ ಯಾವೆಲ್ಲ ಮೂಲಗಳಿಂದ ತೆರಿಗೆ ಹೆಸರಲ್ಲಿ ಜನಸಾಮಾನ್ಯರನ್ನು ಹಿಂಡಬಹುದು ಎಂದು ಹುಡುಕುತ್ತಿದ್ದಾರೆ. ಇದರರ್ಥ, ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ ಸುರಿಯುತ್ತಿರುವ ₹52 ಸಾವಿರ ಕೋಟಿ ಒದಗಿಸಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒದ್ದಾಡುತ್ತಿದ್ದಾರೆ ಎಂಬುದಾಗಿದೆ. ಅಧಿಕಾರಕ್ಕೆ ಬರಬೇಕು ಎಂಬ ಹಪಾಹಪಿಯಲ್ಲಿ ಅಧ್ಯಯನ ರಹಿತವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದೇ ಇದಕ್ಕೆಲ್ಲ ಮೂಲ ಕಾರಣ” ಎಂದು ಆರೋಪಿಸಿದರು.
“ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಅನುಷ್ಠಾನಕ್ಕೆ ತಂದಿರುವ ಉಚಿತ ಯೋಜನೆಗಳು ಭಾರಿ ಯಶಸ್ಸು ಕಂಡಿವೆ. ಕಾರಣ, ಸಮರ್ಪಕ ಸಂಪನ್ಮೂಲ ಕ್ರೋಡೀಕರಣ, ಭ್ರಷ್ಟಾಚಾರ ರಹಿತ ಆಡಳಿತ, ಅಧ್ಯಯಶೀಲ ಉಚಿತ ಯೋಜನೆಗಳ ಅನುಷ್ಠಾನಗಳಾಗಿವೆ. ಆದರೆ, ಈ ಯೋಜನೆಗಳನ್ನು ಕಾಪಿ ಮಾಡಿದ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸಲುವಾಗಿ ಉಚಿತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭ್ರಷ್ಟಾಚಾರ, ಕಮಿಷನ್ ದಂಧೆ ಎಂದಿನಂತೆ ಎಗ್ಗಿಲ್ಲದೆ ಮುಂದುವರಿದಿದೆ. ಮೊದಲು ಭ್ರಷ್ಟಾಚಾರ, ಕಮಿಷನ್‌ಗಿರಿಯನ್ನು ನಿಲ್ಲಿಸಿ, ನಂತರ ಗ್ಯಾರಂಟಿ ಯೋಜನೆಗಳು ಸುಗಮವಾಗಿ ಸಾಗುತ್ತವೆ” ಎಂದು ಮೋಹನ್ ದಾಸರಿ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಜುಲೈ12ರಂದು ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಉಪ ಚುನಾವಣೆ
ಈ ಸಂದರ್ಭ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ರವಿ ಕುಮಾರ್, ಜಗದೀಶ್ ಚಂದ್ರ, ಜಗದೀಶ್ ಬಾಬು, ವೀಣಾ ಸರಾವು, ಅನಿಲ್ ನಾಚಪ್ಪ, ಮಹಾಲಕ್ಷ್ಮಿ, ಅಂಜನಾ ಗೌಡ, ಪುಟ್ಟಣ್ಣ, ಶಶಿಧರ್ ಆರಾಧ್ಯ, ರಾಮಾಂಜನೇಯ, ಲೋಕೇಶ್ ಕುಮಾರ್ ಸೇರಿದಂತೆ ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.