ಸೆಲೆಬ್ರಿಟಿಗಳ ಸುದ್ದಿಗಳು, ಮಾಧ್ಯಮಗಳು ಮತ್ತು ಜನಸಾಮಾನ್ಯರು

Date:

ಜವಾಬ್ದಾರಿಯುತ ಮಾಧ್ಯಮಗಳು ಮತ್ತು ಪ್ರಜ್ಞಾವಂತ ಜನರು ಸಕ್ರಿಯವಾಗಿ ಜನರನ್ನು ನಿರಂತರವಾಗಿ ಎಚ್ಚರಿಸುತ್ತಾ ಅವರನ್ನು ಮಾನಸಿಕ ದಾಸ್ಯದಿಂದ ಹೊರತರುವುದಕ್ಕೆ ಪ್ರಯತ್ನಿಸುತ್ತಲೇ ಇರಬೇಕು. ಇದೊಂದು ನಿರಂತರ ಪ್ರಯತ್ನ. ತಕ್ಷಣದ ಬದಲಾವಣೆಗಳನ್ನು ನಿರೀಕ್ಷಿಸುವಂತಿಲ್ಲ

ಸೆಲೆಬ್ರಿಟಿಗಳಿಂದಲೇ ಶುರುಮಾಡೋಣ. ಮಾಧ್ಯಮಗಳು ಸೆಲೆಬ್ರಿಟಿಗಳ ಸುದ್ದಿಗಳಿಗೆ ಯಾವಾಗಲೂ ದುಂಬಾಲು ಬೀಳುವುದು ಏಕೆ? ಒಬ್ಬರ ವಿವಾಹ, ಮತ್ತೊಬ್ಬರ ಬಸಿರು, ಮಗದೊಬ್ಬರ ವಿಚ್ಛೇದನ, ಅವರ ಜೀವನಶೈಲಿ, ಐಭೋಗಗಳು, ದುಷ್ಕೃತ್ಯಗಳು- ಹೀಗೆ ಎಲ್ಲವೂ ಸುದ್ದಿಯೇ. ಅಂತಹ ಸುದ್ದಿಗಳಿಗೆ ಮಾರುಕಟ್ಟೆ ಇಲ್ಲದಿದ್ದರೆ ಮಾಧ್ಯಮಗಳು ಅವುಗಳಿಗೆ ಏಕೆ ಆತುಕೊಳ್ಳುತ್ತಾರೆ? ಮಾರುಕಟ್ಟೆ ಅರ್ಥಶಾಸ್ತ್ರದಲ್ಲಿ ಎಲ್ಲವೂ ಮಾರಾಟದ ವಸ್ತುಗಳಾಗಿರುತ್ತವೆ. ಶ್ರೀಮಂತರ ಖಾಸಗಿ ಬದುಕು ಮಾಧ್ಯಮಗಳಿಗೆ ಹಣ ತರುವಾಗ ಅವರೇಕೆ ಅದನ್ನು ತಿರಸ್ಕರಿಸುತ್ತಾರೆ? ಆದರೆ, ನಿಜವಾದ ಪ್ರಶ್ನೆ, ಜನಸಾಮಾನ್ಯರು ಅಂತಹ ಸುದ್ದಿಯನ್ನು ರುಚಿರುಚಿಯಾಗಿ ಸವಿಯುವ ಮನಸ್ಥಿತಿಯನ್ನು ಹೇಗೆ ಬೆಳೆಸಿಕೊಂಡಿದ್ದಾರೆ. ಸೆಲೆಬ್ರಿಟಿ ಸುದ್ಧಿಗಳು ನಶೆಯ ರೀತಿಯಲ್ಲಿ ಎಲ್ಲರನ್ನೂ ಹಿಡಿದು ಇಡುವುದು ಹೇಗೆ ಸಾಧ್ಯವಾಗುತ್ತಿದೆ? ಜನರಿಗೆ ತಮ್ಮ ದಿನನಿತ್ಯದ ನೋವು ಹತಾಶೆಗಳನ್ನು ಮರೆಯುವ ದಾರಿ ಇದಾಗಿರಬಹುದೇ? ಏಕತಾನತೆಯಿಂದ ಬಳಲುತ್ತಿರುವ ತಮ್ಮ ಬದುಕನ್ನು ಜೀವಂತಗೊಳಿಸುವ ಮಾರ್ಗ ಇದಾಗಿರಬಹುದೇ?

ನೆನಪಿಡಿ. ಈ ಸೆಲೆಬ್ರಿಟಿ ನಶೆ ಭಾರತೀಯರಿಗೆ ಮಾತ್ರ ಅಂಟಿಕೊಂಡಿದೆ ಎಂದೇನಿಲ್ಲ. ಇದೊಂದು ಜಾಗತಿಕ ಪಿಡುಗು. ಬ್ರಿಟನ್‌ನ ಯುವರಾಣಿ ಡಯನಾ ಸಾಕಷ್ಟು ವರ್ಷಗಳು ಅಲ್ಲಿನ ಮಾಧ್ಯಮಗಳ ಕಣ್ಮಣಿಯಾಗಿದ್ದರು. ಹಾಲಿವುಡ್‌ ಸೆಲೆಬ್ರಿಟಿಗಳಾದ ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ ಅವರ ವಿವಾಹ ವಿಚ್ಛೇದನ, ಮಾನನಷ್ಟ ಮೊಕದ್ದಮೆಗಳು ಅಲ್ಲಿನ ಮಾಧ್ಯಮಗಳಿಗೆ ಕೆಲವು ವರ್ಷ ನಿರಂತರ ಸುದ್ದಿ ಮೂಲಗಳಾಗಿದ್ದವು. ಅಮೇರಿಕಾದಲ್ಲಷ್ಟೇ ಅಲ್ಲ ಭಾರತದಲ್ಲಿಯೂ ಕೂಡ ಜಾನಿ ಡೆಪ್‌ ಮತ್ತು ಆಂಬರ್‌ ಹರ್ಡ್‌ ಅವರ ವೈಯಕ್ತಿಕ ಬದುಕು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿತ್ತು. ಮುಖ್ಯವಾಹಿನಿಯ ಮಾಧ್ಯಮಗಳಿಗೆ ಕೂಡ ಬ್ರೇಕಿಂಗ್‌ ನ್ಯೂಸ್‌ ಆಗಿತ್ತು.

ಬಾಲಿವುಡ್‌ ನಟನಟಿಯರ ಖಾಸಗಿ ಬದುಕು, ಅಂಬಾನಿ ಕುಟುಂಬದ ಮದುವೆ, ಟ್ರಂಪ್‌ನ ಲೈಂಗಿಕ ವಿಕೃತಿಗಳು ಇವೆಲ್ಲವೂ ಜನಸಾಮಾನ್ಯರಿಗೆ ರಸಗವಳಗಳೇ. ಹೀಗೆ ಪ್ರಪಂಚದ ಎಲ್ಲ ಮೂಲೆಮೂಲೆಗಳಿಂದ ಸಾಲುಸಾಲು ಉದಾಹರಣೆಗಳನ್ನು ಕೊಡಬಹುದು. ಹಾಗಾಗಿ, ಕೇವಲ ಭಾರತದ ಹಾಗೂ ಕರ್ನಾಟಕದ ಮಾಧ್ಯಮಗಳನ್ನೋ ಅಥವಾ ಇಲ್ಲಿನ ಜನರ ಅಭಿರುಚಿಗಳನ್ನೋ ಕೀಳಾಗಿ ಬಿಂಬಿಸುವುದು ನಿರರ್ಥಕವಾಗುತ್ತದೆ. ಈ ಪ್ರವೃತ್ತಿಯ ಐತಿಹಾಸಿಕ ಹಿನ್ನೆಲೆಯನ್ನು ಜಾಲಾಡಿದರೆ ಏನಾದರೂ ಕುರುಹುಗಳು ಸಿಗಬಹುದೇ ನೋಡೋಣ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರತ್ಯಕ್ಷ ದೇವರುಗಳು ಯಾರ್‍ಯಾರು?
ಮನುಕುಲದ 4-5 ಸಾವಿರ ವರ್ಷಗಳ ಇತಿಹಾಸವನ್ನು ನೋಡಿದರೆ ಕೆಲವು ಸತ್ಯಗಳು ಗೋಚರಿಸುತ್ತವೆ. ಹಿಂದಿನಿಂದಲೂ ಪ್ರಪಂಚದ ಎಲ್ಲೆಡೆ ವಂಶಪಾರಂಪರ್ಯವಾದ ಆಡಳಿತವಿರುತ್ತಿತ್ತು. ಆಳುವವರೇ ದೇವರು ಎಂದು ಜನಸಾಮಾನ್ಯರನ್ನು ನಂಬಿಸಲಾಗಿತ್ತು. ‘ರಾಜಾ ಪ್ರತ್ಯಕ್ಷ ದೇವತಾ’ ಎನ್ನುವ ಸಂಸ್ಕೃತದ ನುಡಿಗಳು ಯಾರಿಂದ ಬಂದಿರುವುದೋ ಗೊತ್ತಿಲ್ಲ. ಆದರೆ, ಇದರಲ್ಲಿ ಅಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿ ಇದೆ. ಭೀಷ್ಮ ದ್ರೋಣ ಕರ್ಣರು ದುರ್ಯೋದನನ ‘ಉಪ್ಪುತಿಂದ’ ಕಾರಣಕ್ಕಾಗಿ ಅವನ ಅನ್ಯಾಯಗಳಿಗೆ ಪ್ರತಿಭಟಿಸಲಿಲ್ಲ. ಗ್ರೀಕ್‌ ಸಾಮ್ರಾಜ್ಯದ ದೊರೆಗಳು, ಈಜಿಫ್ತಿನ ಫೆರ‍್ರೋಗಳು, ರಷ್ಯಾದ ಜಾರ್‌ಗಳು ಹೀಗೆ ಆಳುವವರೆಲ್ಲ ತಮ್ಮನ್ನು ದೇವರೆಂದು ತಾವೇ ಘೋಷಿಸಿಕೊಳ್ಳುತ್ತಿದ್ದರು. ಕೆಲವೇ ತಿಂಗಳ ಹಿಂದೆ ತಾನು ದೇವರಿಂದಲೇ ಜನಿಸಿದವ ಎಂದು ಹೇಳಿಕೊಂಡ ನಮ್ಮ ದೇಶದ ದೊರೆಯನ್ನು ಮತದಾರರು ಒಂದೇ ತಿಂಗಳಲ್ಲಿ ನರಮನುಷ್ಯನನ್ನಾಗಿ ಬದಲಾಯಿಸಿದರು!

ಹೀಗೆ ಆಳುವವರನ್ನು ದೇವರೆಂದು ಘೋಷಿಸುವುದನ್ನು ‘ದೈವಿಕ ಹಕ್ಕುಗಳ ಸಿದ್ದಾಂತ’ (Doctrine of Divine Rights) ಎನ್ನಲಾಗುತ್ತದೆ. ಇದರ ಪ್ರಕಾರ, ದೈವೀ ಸ್ವರೂಪದ ರಾಜರನ್ನು ಯಾರೂ ಪ್ರಶ್ನಿಸುವಂತೆಯೇ ಇಲ್ಲ ಮತ್ತು ಅವರ ಆದೇಶಗಳನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ಇದನ್ನು ಓದಿದ್ದೀರಾ:? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?

ರಾಜನ ನಂತರ ದೇವರಿಗೆ ಬಹಳ ಹತ್ತಿರವಾದವರು ಧರ್ಮಾಧಿಕಾರಿಗಳು. ಅಂದರೆ, ಭಾರತೀಯ ಸಂದರ್ಭದಲ್ಲಿ ಬ್ರಾಹ್ಮಣರು. ಅವರ ನಂತರ ಮಂತ್ರಿಗಳು, ಅವರ ಕೆಳಗೆ ಸೇನಾಧಿಪತಿಗಳು, ಶ್ರೀಮಂತ ವರ್ಗದ ಜನರು- ಹೀಗೆ 3-4 ವರ್ಗದವರೂ ಕೂಡ ದೇವರ ಸಮಾನರೇ ಆಗಿರುತ್ತಿದ್ದರು. ಹೀಗೆ ಜನಸಮುದಾಯದ 1-2% ಮಾತ್ರ ಇರುತ್ತಿದ್ದ ದೈವಾಂಶಸಂಭೂತರು ಉಳಿದ 98% ಶ್ರಮಿಕ ವರ್ಗವನ್ನು ಆಳುತ್ತಿದ್ದರು. ಪ್ರಪಂಚದ ವಿವಿಧ ದೇಶಗಳ ಇತಿಹಾಸವನ್ನು ನೋಡಿದರೆ, ಇದೇ ಪ್ರವೃತ್ತಿಯ ವಿವಿಧ ರೂಪಾಂತರಗಳು ಕಂಡುಬರುತ್ತವೆ. ಎಲ್ಲ ದೇಶಗಳ ಪುರಾಣಗಳಲ್ಲಿ ದೈವಿಕ ಹಕ್ಕಿನ ಸಿದ್ದಾಂತವನ್ನು ಎತ್ತಿಹಿಡಿಯಲು ಪೂರಕವಾಗುವಂತಹ ಕತೆಗಳು ಕಂಡುಬರುತ್ತವೆ.

ಮನಶ್ಯಾಸ್ತ್ರದ ವಿವರಣೆ ಏನು?
ಮನಶ್ಯಾಸ್ತ್ರ ಮತ್ತು ಅಧ್ಯಾತ್ಮದ ದೃಷ್ಟಿಕೋನದಿಂದ ನೋಡಿದರೆ, ದೈವಿಕ ಹಕ್ಕುಗಳ ಸಿದ್ದಾಂತ ಒಂದು ರೀತಿಯ ಮಾನಸಿಕ ದಾಸ್ಯದ ಸಂಕೇತ. ತನ್ನದೇ ಅಸ್ತಿತ್ವದ ಅರ್ಥ ಮತ್ತು ಸಾಧ್ಯತೆಗಳನ್ನು ಕಡೆಗಣಿಸಿ ಮತ್ತೊಬ್ಬರನ್ನು ಎತ್ತರಕ್ಕೇರಿಸಿ ಆರಾಧಿಸುವುದು ಇಂತಹ ದಾಸ್ಯದ ಲಕ್ಷಣ. ಇದಕ್ಕೆ ಅನುಕೂಲವಾಗುವಂತೆ ತರ್ಕ ವಿವೇಚನೆಗಳಿಗೆ ಬಳಕೆಯಾಗುವ ಮಿದುಳನ್ನು ನಿಷ್ಕ್ರಿಯಗೊಳಿಸಿ ನಮ್ಮೊಳಗಿರುವ ಪ್ರಾಣಿ ಮಿದುಳಿನ ಅಂಗಗಳನ್ನು ಮಾತ್ರ ಚುರುಕುಗೊಳಿಸಲಾಗುತ್ತದೆ. ಭಯ ಹುಟ್ಟಿಸುವುದು, ಶಿಕ್ಷೆಯ ಬೆದರಿಕೆ ತೋರಿಸುವುದು, ಪ್ರತಿಫಲದ ಆಸೆ ಮೂಡಿಸುವುದು ಮುಂತಾದ ಪ್ರಾಣಿ ಸಹಜ ಪ್ರವೃತ್ತಿಗಳನ್ನು ದುರ್ಬಳಕೆ ಮಾಡಿಕೊಂಡು ಇಂತಹ ಮಾನಸಿಕ ದಾಸ್ಯಕ್ಕೆ ಒಳಪಡಿಸಲಾಗುತ್ತದೆ. ನಾಯಿಗಳಷ್ಟೇ ಅಲ್ಲ ಅತ್ಯಂತ ಬಲಶಾಲಿಯಾದ ಆನೆಗಳನ್ನೂ ಕೂಡ ಮಾನವರು ಪಳಗಿಸಿ ಮಾನಸಿಕ ದಾಸ್ಯಕ್ಕೆ ಒಳಪಡಿಸುವುದು ಹೀಗೆಯೇ ಅಲ್ಲವೇ? ದಾಸ್ಯಕ್ಕೆ ಒಳಗಾಗುವವರು ಯಾವುದೇ ವಿವೇಚನೆ ತರ್ಕಗಳನ್ನು ಬಳಸಲಾಗದಂತಹ ಭ್ರಮಾಧೀನ ಸ್ಥಿತಿಗೆ ತಲುಪುತ್ತಾರೆ.

ಹೀಗೆ ಮಾನಸಿಕ ದಾಸ್ಯಕ್ಕೆ ಒಳಪಡಿಸಲು ಹಲವಾರು ತಂತ್ರಗಳನ್ನು ಉಪಯೋಗಿಸಲಾಗುತ್ತದೆ. ದೈವಾಂಶಸಂಭೂತರ ಸುತ್ತಲೂ ಅವರ ವಿಶೇಷ ಶಕ್ತಿಗಳನ್ನು ಪ್ರಮಾಣೀಕರಿಸಲು ಹಲವಾರು ಕತೆಗಳನ್ನು ಕಟ್ಟಲಾಗುತ್ತದೆ. ಅವರಿಂದ ಪವಾಡಗಳು ನಡೆಯುತ್ತವೆ ಎಂದು ಬಿಂಬಿಸಲಾಗುತ್ತದೆ. ಜನಸಾಮಾನ್ಯರ ಎಲ್ಲ ಕಷ್ಟಗಳಿಗೆ ಅವರಲ್ಲಿ ಪರಿಹಾರವಿರುತ್ತದೆ ಎಂದು ನಂಬಿಸಲಾಗುತ್ತದೆ. ಅವರ ಮೇಲೆ ಅಪನಂಬಿಕೆ ವ್ಯಕ್ತಪಡಿಸುವುದು ಘೋರವಾದ ಪಾಪ ಮತ್ತು ಇದರಿಂದ ದೇವರು ಕುಪಿತನಾಗುತ್ತಾನೆ ಎನ್ನಲಾಗುತ್ತದೆ. ದೈವಾಂಶಸಂಭೂತರ ಪ್ರಯತ್ನಗಳನ್ನು ಮೀರಿ ಜನಸಾಮಾನ್ಯರು ಕಷ್ಟಗಳನ್ನು ಅನುಭವಿಸಿದರೆ ಅದಕ್ಕೆ ಅವರವರ ಪೂರ್ವಜನ್ಮದ ಕರ್ಮಗಳೇ ಕಾರಣ. ಅದು ದೇವರ ಇಚ್ಛೆ ಮುಂತಾದ ಸಮಜಾಯಿಷಿಗಳನ್ನು ನೀಡಲಾಗುತ್ತದೆ. ಹೀಗೆ ಮಾನಸಿಕ ದಾಸ್ಯಕ್ಕೆ ಒಳಪಡಿಸುವುದು ಒಂದು ದೊಡ್ಡ ಸಾಂಸ್ಕೃತಿಕ ಧಾರ್ಮಿಕ ಜಾಲವಾಗಿ ಪ್ರಪಂಚದ ಎಲ್ಲೆಡೆ ಕಂಡುಬರುತ್ತದೆ.

ಮಾನಸಿಕ ದಾಸ್ಯಕ್ಕೆ ಒಳಗಾಗಿರುವ ಜನಸಮುದಾಯವನ್ನು ಅದರಿಂದ ಹೊರತರುವುದು ಸುಲಭದ ಕೆಲಸವಲ್ಲ. ಯಾವುದೇ ತರ್ಕ ಸಿದ್ದಾಂತಗಳು ಅವರ ಮನಸ್ಸಿನಾಳದಲ್ಲಿ ಬೇರು ಬಿಡಲು ಸಾವಿರಾರು ವರ್ಷಗಳೇ ಬೇಕಾಗಬಹುದು.

ಫ್ರೆಂಚ್‌ ಕ್ರಾಂತಿಯ ನಂತರ…
ಶತಶತಮಾನಗಳಿಂದ ವಂಶಪಾರಂಪರ್ಯದ ರಾಜ ಮನೆತನಗಳ ಆಳ್ವಿಕೆಗೆ ಒಗ್ಗಿಹೋಗಿದ್ದ ಜನಸಮುದಾಯಕ್ಕೆ ಪ್ರಜಾಪ್ರಭುತ್ವದ ಹೊಸ ಕಲ್ಪನೆಯ ಬೇರು ಬಿತ್ತಿದ್ದು 18ನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾದ ಫ್ರೆಂಚ್‌ ಕ್ರಾಂತಿ. ಈ ಕ್ರಾಂತಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಶಬ್ದಗಳನ್ನು ಮುನ್ನೆಲೆಗೆ ತಂದು ಹೊಸ ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಹೊಳಹುಗಳನ್ನು ನೀಡಿತು. ಆದರೆ, ಇದು ಜನರ ಮನದಾಳದಲ್ಲಿ ಬೇರು ಬಿಡುವುದರೊಳಗೆ ನೆಪೋಲಿಯನ್‌ ಎಂಬ ಸರ್ವಾಧಿಕಾರಿ ಫ್ರಾನ್ಸ್‌ನ್ನು ಹಿಡಿತಕ್ಕೆ ತೆಗೆದುಕೊಂಡಿದ್ದ. ಫ್ರಾನ್ಸ್‌ನಲ್ಲಿ ಬಿತ್ತಲಾಗಿದ್ದ ಪ್ರಜಾಪ್ರಭುತ್ವದ ಬೀಜಗಳು ನಿಧಾನವಾಗಿ ಪ್ರಪಂಚದ ಎಲ್ಲೆಡೆ ಮೊಳೆಯತೊಡಗಿದವು.
ರಾಜಕೀಯ ವ್ಯವಸ್ಥೆ ಬದಲಾಗುತ್ತಾ ಬಂದಂತೆ ಸ್ವಲ್ಪ ಮಟ್ಟಿಗೆ ಜನರು ಸ್ವತಂತ್ರವಾಗಿ ಯೋಚಿಸುವ ಶಕ್ತಿ ಪಡೆದುಕೊಂಡರು. ಆದರೆ, ದುರಾದೃಷ್ಟದಿಂದ ಈ ಸ್ವಾತಂತ್ರ್ಯ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು.  ಧಾರ್ಮಿಕ ಕ್ಷೇತ್ರದಲ್ಲಿ ಹೇರಲಾದ ಕಟ್ಟುಪಾಡುಗಳಿಂದಾಗಿ ಧರ್ಮಾಧಿಕಾರಿಗಳು ಜನರ ಮನಸ್ಸಿನ ಮೇಲೆ ಸಾಧಿಸಿದ್ದ ಹಿಡಿತ ಮುಂದುವರೆಯುತ್ತಲೇ ಹೋಯಿತು. ಇಂದಿಗೂ ರಾಜಕೀಯ ನಾಯಕರನ್ನಾದರೂ ಜನರು ಪ್ರಶ್ನಿಸಿಯಾರು. ಆದರೆ, ಧಾರ್ಮಿಕ ನಾಯಕರ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವುದು ಅತಿ ವಿರಳ.

ಶ್ರೀಮಂತರು ನೇರವಾಗಿ ಜನರ ಮನಸ್ಸುಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಲಿಲ್ಲ. ತಮ್ಮ ರಾಜಕೀಯ ಧಾರ್ಮಿಕ ಪ್ರಭಾವ, ತಮ್ಮ ಜೀವನಶೈಲಿ, ಆಗೀಗ ಮಾಡುವ ದಾನಧರ್ಮಗಳಿಂದ ಹಿಂಬಾಗಿಲಿನ ಮೂಲಕ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳುತ್ತಲೇ ಬಂದಿದ್ದಾರೆ. ಜಾಗತೀಕರಣಗೊಂಡ ಮುಕ್ತ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆ ಬಂದ ಮೇಲೆ ಹಣ ಜೀವನದ ಪರಮ ಮೌಲ್ಯವಾಗಿದೆ. ಗಳಿಸುವ ದಾರಿಗಳು ಹೇಗೇ ಇರಲಿ, ಹಣ ಉಳ್ಳವವರನ್ನು ಜನ ಬೆರಗುಗಣ್ಣುಗಳಿಂದ ನೋಡುತ್ತಾರೆ. ”ನಿಮ್ಮ ಬೆವರುಗಳಿಗೆ ಸೂಕ್ತ ಬೆಲೆ ನೀಡದೆ ಶ್ರೀಮಂತರು ಸೃಷ್ಟಿಯಾಗಿದ್ದಾರೆ, ನಿಮಗೆ ಅನ್ಯಾಯವಾಗಿದೆ ಎಚ್ಚರಗೊಳ್ಳಿ” ಎಂದು ಬಡವನೊಬ್ಬನಿಗೆ ತಿಳಿಹೇಳುವುದು ಸುಲಭವಲ್ಲ. ಅಯ್ಯೋ ಬಿಡಿ, ಅವರವರ ಕರ್ಮ, ದೇವರು ಅವರಿಗೆ ಶ್ರೀಮಂತಿಕೆ ಕೊಟ್ಟಿದ್ದಾನೆ, ಪೂರ್ವಜನ್ಮದ ಫಲ ಇರಬಹುದು. ನಮ್ಮ ಪಾಲಿಗೆ ಬಂದಿದ್ದರಲ್ಲಿ ನಾವು ತೃಪ್ತಿಪಡಬೇಕು- ಮುಂತಾಗಿ ಸಮಾಧಾನ ಹೇಳಿಕೊಂಡು ಅವರು ಅನ್ಯಾಯಗಳನ್ನು ಸಹಿಸಿಕೊಳ್ಳುತ್ತಾರೆ.

ಇದನ್ನು ಓದಿದ್ದೀರಾ?: ನೆನಪು | ರಾಜೀವ್ ತಾರಾನಾಥ್ ಮತ್ತು ಗೋಧ್ರಾ

ಆಧುನಿಕ ಸಮಾಜಗಳು ಶ್ರೀಮಂತರ ಜೊತೆಗೆ ಸಿನಿಮಾ, ಸಂಗೀತ, ಕ್ರೀಡೆ ಮುಂತಾದ ಕ್ಷೇತ್ರಗಳಿಂದ ಸಾಕಷ್ಟು ಜನರನ್ನು ಸೆಲೆಬ್ರಿಟಿ ಸ್ಥಾನಕ್ಕೇರಿಸಿವೆ. ಎಲ್ಲ ಸೆಲೆಬ್ರಿಟಿಗಳಿಗೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಜನರ ಮೇಲೆ ಮಾನಸಿಕ ಹಿಡಿತ ಸಾಧಿಸಲು ಅನುವು ಮಾಡಿಕೊಟ್ಟಿರುವುದು ಇವತ್ತಿನ ಸಂಪರ್ಕ ಸಾಧನಗಳಾದ ಟೀವಿ, ಕಂಪ್ಯೂಟರ್‌, ಮೊಬೈಲ್‌ ಮುಂತಾದವು ಮತ್ತು ಸುಲಭವಾಗಿ ಎಲ್ಲೆಡೆ ದೊರೆಯುತ್ತಿರುವ ಅಂತರ್ಜಾಲ.

ನಾವೇನು ಮಾಡಬಹುದು?
ಅಂಬಾನಿಯವರ ಮದುವೆ ಸಮಾಚಾರ, ಯಾರದ್ದೋ ಬಸಿರು, ವಿಚ್ಛೇದನ, ಸಿನಿಮಾ ಗಾಸಿಪ್‌ಗಳಿಗೆ ಇನ್ನೂ ಮಾರಕಟ್ಟೆ ಇದೆ ಎಂದರೆ, ಅದು ಸಾವಿರಾರು ವರ್ಷಗಳಿಂದ ಜನಮಾನಸದಲ್ಲಿ ಬೇರೂರಿರುವ ಮಾನಸಿಕ ದಾಸ್ಯದಿಂದ ಅವರಿನ್ನೂ ಹೊರಬಂದಿಲ್ಲ ಎನ್ನುವುದರ ಸೂಚನೆ ಮಾತ್ರ. ಹಾಗಾಗಿ, ಜನರನ್ನು ನಿಂದಿಸಿದರೆ ಅದು ನಮ್ಮ ಅಸಹಾಯಕತೆಯ ಸೂಚನೆಯೇ ಹೊರತು ಬದಲಾವಣೆಯ ದಾರಿಯಲ್ಲ. ಇವತ್ತಿನ ಮಾಧ್ಯಮಗಳು ದೊಡ್ಡ ಮೊತ್ತದ ಹಣ ಹೂಡುವ ವೃತ್ತಿಯಾಗಿರುವುದರಿಂದ ಅವರು ಜನರನ್ನು ಎಚ್ಚರಿಸುತ್ತಾರೆಂದು ನಿರೀಕ್ಷಿಸುವಂತಿಲ್ಲ.

ಉಳಿದಿರುವುದು ಕೆಲವೇ ಜವಾಬ್ದಾರಿಯುತ ಮಾಧ್ಯಮಗಳು ಮತ್ತು ಪ್ರಜ್ಞಾವಂತ ಜನರು. ಇವರೆಲ್ಲ ಸಕ್ರಿಯವಾಗಿ ಜನರನ್ನು ನಿರಂತರವಾಗಿ ಎಚ್ಚರಿಸುತ್ತಾ ಅವರನ್ನು ಮಾನಸಿಕ ದಾಸ್ಯದಿಂದ ಹೊರತರುವುದಕ್ಕೆ ಪ್ರಯತ್ನಿಸುತ್ತಲೇ ಇರಬೇಕು. ಇದೊಂದು ನಿರಂತರ ಪ್ರಯತ್ನ. ತಕ್ಷಣದ ಬದಲಾವಣೆಗಳನ್ನು ನಿರೀಕ್ಷಿಸುವಂತಿಲ್ಲ. ಇದಕ್ಕೆ ಇರುವ ಇನ್ನೊಂದು ಮಾರ್ಗವೆಂದರೆ, ಜನಸಮುದಾಯದ ಗಮನವನ್ನು ಅವರ ದಿನನಿತ್ಯದ ಸಮಸ್ಯೆಗಳ ಕಡೆ. ಅವರ ಬದುಕಿನ ಆದ್ಯತೆಗಳತ್ತ, ಅವರ ಕುಟುಂಬ ಮತ್ತು ಸುತ್ತಲಿನ ಸಮಾಜದ ಆಗುಹೋಗುಗಳತ್ತ ಸೆಳೆಯುತ್ತಲೇ ಇರಬೇಕು. ನಿಧಾನವಾಗಿ ಸೆಲೆಬ್ರಿಟಿ ಸುದ್ದಿಗಳಿಗೆ ಮಾರುಕಟ್ಟೆ ಕಡಿಮೆಯಾಗುತ್ತಾ ಬಂದರೆ ಮಾಧ್ಯಮಗಳು ಬದಲಾಗುವ ಅನಿವಾರ್ಯತೆ ಉಂಟಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ನಡಹಳ್ಳಿ ವಸಂತ್
ನಡಹಳ್ಳಿ ವಸಂತ್
ಲೇಖಕರು, ಮನೋಚಿಕಿತ್ಸಕರು ಮತ್ತು ಆಪ್ತಸಮಾಲೋಚಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ- ʼಇಂಡಿಯನ್ ಎಕ್ಸ್‌ಪ್ರೆಸ್‌ʼ ಆಸ್ಫೋಟಕ ವರದಿ!

ಸುಪ್ರೀಮ್ ಕೋರ್ಟ್ ತೀರ್ಪು 2019ರಲ್ಲಿ ಹೊರಬಿದ್ದಿತ್ತು. ಅಂದಿನಿಂದ 2024ರ ಮಾರ್ಚ್ ತಿಂಗಳವರೆಗೆ...

ಐದು ವರ್ಷ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ ವರ್ಗಾವಣೆಗೆ ಸೂಚನೆ

ಐದು ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪಿ.ಸಿ. ಹೆಚ್.ಸಿ ಹಾಗೂ...

ಮುಂಗಾರು ಅಧಿವೇಶನ | ಸಾವಿರಕ್ಕೂ ಅಧಿಕ ಪರವಾನಗಿ ಹೊಂದಿರುವ ಸರ್ವೇಯರ್‌ ಹುದ್ದೆ ಭರ್ತಿ: ಸಚಿವ ಕೃಷ್ಣ ಬೈರೇಗೌಡ

ಸರ್ವೇ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ....

ವಾಲ್ಮೀಕಿ ನಿಗಮ ಅಕ್ರಮ | ಹಣ ಲೂಟಿ ಮಾಡಲು ನಕಲಿ ಹುದ್ದೆ ಸೃಷ್ಟಿ!

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕೋಟ್ಯಂತರ ರೂ.ಗಳನ್ನು ಲೂಟಿ...