ಹರಿಯಾಣ ರಾಜ್ಯದಲ್ಲಿ ಹಿಂದುತ್ವ ಸಂಘಟನೆಯೊಂದರ ಬೃಹತ್ ಸಮಾವೇಶಕ್ಕೆ ಅನುಮತಿ ನೀಡುವಾಗ “ದ್ವೇಷದ ಭಾಷಣ ಮಾಡಬಾರದು” ಎಂಬ ಷರತ್ತು ವಿಧಿಸಿದ ಹೊರತಾಗಿಯೂ ಪಲ್ವಾಲ್ ಜಿಲ್ಲೆಯಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ಕೆಲವು ಭಾಷಣಕಾರರು ಬಹಿರಂಗ ಬೆದರಿಕೆ ಹಾಕಿದ್ದಾರೆ.
ದ್ವೇಷದ ಭಾಷಣ ಮಾಡದಂತೆ ಭಾಷಣಕಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಘಟಕರು ಹೇಳುತ್ತಿದ್ದಾರೆ, ಆದರೆ ಕೆಲವು ಭಾಷಣಕಾರರು ಅದನ್ನು ನಿರ್ಲಕ್ಷಿಸಿದ್ದಾರೆ.
ಒಬ್ಬ ಭಾಷಣಕಾರ, “ನೀವು ಬೆರಳು ತೋರಿಸಿದರೆ, ನಿಮ್ಮ ಕೈಗಳನ್ನು ಕತ್ತರಿಸುತ್ತೇವೆ” ಎಂದು ಹೇಳುವುದು ಕೇಳಿಸಿದೆ. ಆದರೆ ಇನ್ನೊಬ್ಬ ಭಾಷಣಕಾರ ರೈಫಲ್‌ಗಳಿಗೆ ಪರವಾನಗಿ ನೀಡುವಂತೆ ಒತ್ತಾಯಿಸಿದ್ದಾನೆ.
ಎರಡು ವಾರಗಳ ಹಿಂದೆ ಹರಿಯಾಣ ರಾಜ್ಯದ ನೂಹ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ ನಂತರ ಸಂಘಟನೆಯೊಂದು ಸಭೆ ನಡೆಸುತ್ತಿದೆ.
ಕಳೆದ ತಿಂಗಳು ನೂಹ್‌ನಲ್ಲಿ ದಾಳಿಗೊಳಗಾದ ವಿಶ್ವ ಹಿಂದೂ ಪರಿಷತ್‌ನ ಧಾರ್ಮಿಕ ಮೆರವಣಿಗೆಯನ್ನು ಪೂರ್ಣಗೊಳಿಸುವ ಕುರಿತು ಚರ್ಚಿಸಲು ಇಂದು(ಆಗಸ್ಟ್ 13) ಹಿಂದುತ್ವ ಸಂಘಟನೆಯೊಂದು ಮಹಾಪಂಚಾಯತ್ ಅನ್ನು ನೂಹ್‌ನಲ್ಲಿ ನಡೆಸಲು ಯೋಜಿಸಿತ್ತು. ಆದರೆ, ಪೊಲೀಸರಿಂದ ಅನುಮತಿ ನಿರಾಕರಿಸಿದ ನಂತರ ಅದನ್ನು 35 ಕಿಮೀ ದೂರದ ಪಲ್ವಾಲ್‌ಗೆ ಸ್ಥಳಾಂತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಸಿಎಂ ತವರು ಜಿಲ್ಲೆಯ ಆಸ್ಪತ್ರೆಯಲ್ಲಿ ಮರಣ ಮೃದಂಗ; 12 ಗಂಟೆಯಲ್ಲಿ 17 ರೋಗಿಗಳು ಸಾವು
ಮಹಾಪಂಚಾಯತ್ ಈಗ ಪಲ್ವಾಲ್-ನೂಹ್ ಗಡಿಯಲ್ಲಿರುವ ಪೊಂಡ್ರಿ ಗ್ರಾಮದಲ್ಲಿ ನಡೆಯುತ್ತಿದೆ.ಕೇವಲ 500 ಜನರಿಗೆ ಮಾತ್ರ ಅವಕಾಶ ಒಳಗೊಂಡು ಹಲವು ಷರತ್ತುಗಳ ಮೇಲೆ ಅನುಮತಿ ನೀಡಲಾಗಿದೆ ಎಂದು ಪಲ್ವಾಲ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.
“ಯಾರೊಬ್ಬರು ದ್ವೇಷಪೂರಿತ ಭಾಷಣಗಳನ್ನು ಮಾಡುವುದಿಲ್ಲ. ಯಾರಾದರೂ ಮಾಡಿದರೆ ತಕ್ಷಣವೇ ಪ್ರಕರಣವನ್ನು ದಾಖಲಿಸಲಾಗುತ್ತದೆ. ಯಾರೂ ಆಯುಧಗಳು, ದೊಣ್ಣೆಗಳು, ಲಾಠಿಗಳನ್ನು ಅಥವಾ ಯಾವುದೇ ದಹಿಸುವ ವಸ್ತುವನ್ನು ತರುವಂತಿಲ್ಲ. ಮಧ್ಯಾಹ್ನ 2 ಗಂಟೆಗೆ ಮುಗಿಯಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು” ಎಂದು ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ.
ನೂಹ್‌ನಲ್ಲಿ ಕೆಲವು ದಿನಗಳ ಹಿಂದೆ ಗಲಭೆ ಉಂಟಾದ ನಂತರ ಸಾರ್ವಜನಿಕ ಸಮಾರಂಭ ಆಯೋಜಿಸುವಾಗ ಸಿಸಿಟಿವಿ, ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಅಲ್ಲದೆ ಇದೇ ವಿಷಯ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಸಹ ನೀಡಿತ್ತು.