- ಬೆಸ್ಕಾಂ ಜಾಗೃತಾ ದಳದ ಡಿವೈಎಸ್‌ಪಿ ನೇತೃತ್ವದಲ್ಲಿ ಪರಿಶೀಲನೆ
- ಎರಡು ದಿನದ ವಿದ್ಯುತ್ ಬಳಕೆ ಆಧಾರದ ಮೇಲೆ ದಂಡ
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ವಿದ್ಯುತ್ ಕಳ್ಳತನ ಮಾಡಿರುವುದಕ್ಕೆ ಬೆಸ್ಕಾಂ ದಂಡ ವಿಧಿಸಿದೆ.
ಕುಮಾರಸ್ವಾಮಿ ಅವರು ಅಕ್ರಮವಾಗಿ ವಿದ್ಯುತ್ ಬಳಸಿಕೊಂಡಿದ್ದಾರೆ ಎಂದು ವಿಡಿಯೋ ಸಮೇತ ಕಾಂಗ್ರೆಸ್ ಆರೋಪಿಸಿತ್ತು. ಬಳಿಕ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ತೆರಳಿ ಪರಿಶೀಲನೆ ಮಾಡಿ, ಬಳಿಕ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿದ್ದರು.
ಬೆಸ್ಕಾಂ ಜಾಗೃತಾ ದಳದ ಡಿವೈಎಸ್‌ಪಿ ಅನುಷ ನೇತೃತ್ವದಲ್ಲಿ ವಿದ್ಯುತ್ ಬಳಕೆ ಕೌಂಟಿಂಗ್ ಮಾಡಿ, 10 ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆ ಆಗುತ್ತದೆ ಎನ್ನುವುದನ್ನು ಲೆಕ್ಕ ಮಾಡಿ, ಎರಡು ದಿನ ಎಷ್ಟು ಬಳಕೆ ಆಗಿದೆ ಎಂಬುದರ ಲೆಕ್ಕದ ಮೇಲೆ ನ.14 ರಂದು ಅಧಿಕಾರಿಗಳು ರಿಪೋರ್ಟ್ ನೀಡಿದ್ದರು.
ಆ ಪ್ರಕಾರ ಇದೀಗ ಬೆಸ್ಕಾಂ ಇಲಾಖೆ ಕುಮಾರಸ್ವಾಮಿಗೆ 68 ಸಾವಿರ ರೂ. ದಂಡವನ್ನು ವಿಧಿಸಿದ್ದು, ಅದನ್ನು ಏಳು ದಿನಗಳೊಳಗಾಗಿ ಕಟ್ಟುವಂತೆ ಸೂಚಿಸಿದೆ.