- ಮಣಿಪುರ ಮುಖ್ಯಮಂತ್ರಿ ಬರೇನ್ ಉದ್ಘಾಟಿಸಬೇಕಿದ್ದ ಜಿಮ್, ಕ್ರೀಡಾ ಕಟ್ಟಡ ಧ್ವಂಸ
- ಚುರಾಚಂದಾಪುರ ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿದ ಬುಡಕಟ್ಟು ವೇದಿಕೆ
ಮಣಿಪುರ ರಾಜ್ಯದ ಚುರಾಚಂದಪುರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳದಲ್ಲಿ ಗುರುವಾರ (ಏಪ್ರಿಲ್ 27) ಹಿಂಸಾಚಾರ ಭುಗಿಲೆದ್ದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಿಸಲು ಸಂರಕ್ಷಿತ ಅರಣ್ಯ, ಚೌಗು ಪ್ರದೇಶಗಳೆಂದು ಸಮೀಕ್ಷೆ ನಡೆಸಿ ಅಕ್ರಮ ನಿರ್ಮಾಣ ಹೆಸರಿನಲ್ಲಿ ಧಾರ್ಮಿಕ ಕೇಂದ್ರಗಳು, ಬುಡಕಟ್ಟು ಸಮುದಾಯದ ಗ್ರಾಮಗಳನ್ನು ತೆರವುಗೊಳಿಸುತ್ತಿದೆ ಎಂದು ಅರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪ್ರತಿಭಟನಾಕಾರರ ಗುಂಪೊಂದು ಮುಖ್ಯಮಂತ್ರಿ ಬಿರೇನ್ ಅವರ ಉದ್ಘಾಟನೆಗೆ ಅಣಿಯಾಗಿದ್ದ ಮಣಿಪುರ ರಾಜ್ಯದ ಚರಾಚಂದಪುರ ಜಿಲ್ಲೆಯ ಕಾರ್ಯಕ್ರಮಕ್ಕೆ ನುಗ್ಗಿ ಸ್ಥಳದಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಗುಂಪು ಗುರುವಾರ ಮುಖ್ಯಮಂತ್ರಿ ಬರೇನ್ ಅವರು ಉದ್ಘಾಟಿಸಬೇಕಿದ್ದ ಕಾರ್ಯಕ್ರಮದ ಸ್ಥಳಕ್ಕೆ ಧಾವಿಸಿ ಕುರ್ಚಿಗಳು ಹಾಗೂ ಇತರ ವಸ್ತುಗಳನ್ನು ಧ್ವಂಸಗೊಳಿಸಿತು. ಕಟ್ಟಡದಲ್ಲಿದ್ದ ಕ್ರೀಡಾ ಸಾಮಗ್ರಿ ಮತ್ತು ಇತರ ವಸ್ತುಗಳಿಗೆ ಬೆಂಕಿ ಹಚ್ಚಿದರು.
ಮಣಿಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಸ್ಥಳದಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಘೋಷಿಸಿ ಗುರುವಾರ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ.
ಚುರಾಚಂದಪುರದಲ್ಲಿ ಶುಕ್ರವಾರ (ಏಪ್ರಿಲ್ 28) ಬರೇನ್ ಅವರು ವ್ಯಾಯಾಮ ಶಾಲೆ ಹಾಗೂ ಕ್ರೀಡಾ ಸೌಲಭ್ಯದ ಕಟ್ಟಡ ಉದ್ಘಾಟಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
“ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹಾಳಾಗದಂತೆ ಸಾರ್ವಜನಿಕರ ಹಿತಾಸಕ್ತಿ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಚುರಾಚಂದಪುರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಥಿಯನ್ಲಟ್ಜಾಯ್ ಗಂಗ್ಟೆ ಹೇಳಿದರು.
ಮಣಿಪುರ ರಾಜ್ಯದ ಚುರಾಚಂದಪುರ ಜಿಲ್ಲೆಯಲ್ಲಿ ಸ್ಥಳೀಯ ಬುಡಕಟ್ಟು ನಾಯಕರ ಮನವಿ ಮೇರೆಗೆ ಸಂಪೂರ್ಣ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಶುಕ್ರವಾರ ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂದ್ ಘೋಷಿಸಿದೆ.
ಮಣಿಪುರ ರಾಜ್ಯದಲ್ಲಿನ ಚರ್ಚ್‌ಗಳ ಇರುವ ಪಾವಿತ್ರ್ಯತೆ ಮತ್ತು ಗೌರವವನ್ನು ಪರಿಗಣನೆಗೆ ತೆಗೆದುಕೊಳ್ಳದೆ ರಾಜ್ಯ ಸರ್ಕಾರ ಅವುಗಳನ್ನು ಕೆಡವಿದೆ ಎಂದು ವೇದಿಕೆ ಆರೋಪಿಸಿದೆ.
ಕುಕಿ ವಿದ್ಯಾರ್ಥಿಗಳ ಸಂಘಟನೆಯೂ ಬುಡಕಟ್ಟು ವೇದಿಕೆಯನ್ನು ಬೆಂಬಲಿಸಿದೆ. “ರಾಜ್ಯ ಸರ್ಕಾರ ಬುಡಕಟ್ಟು ಸಮುದಾಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಧಾರ್ಮಿಕ ಕೇಂದ್ರಗಳನ್ನು ಕೆಡವುವುದು ಮತ್ತು ಅಕ್ರಮವಾಗಿ ಬುಡಕಟ್ಟು ಗ್ರಾಮಗಳನ್ನು ತೆರವುಗೊಳಿಸುತ್ತಿರುವುದನ್ನು ಖಂಡಿಸುತ್ತೇವೆ” ಎಂದು ವಿದ್ಯಾರ್ಥಿಗಳ ಸಂಘಟನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ರಾಮನವಮಿ ಹಿಂಸೆಯ ಎನ್‌ಐಎ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್
ಮಣಿಪುರ ಸರ್ಕಾರ ಅಕ್ರಮ ನಿರ್ಮಾಣದ ಆರೋಪದಲ್ಲಿ ಈ ತಿಂಗಳ ಆರಂಭದಲ್ಲಿ ಮೂರು ಚರ್ಚ್‌ಗಳನ್ನು ಕೆಡವಿದೆ. ಚರ್ಚ್‌ಗಳನ್ನು ತೆರವುಗೊಳಿಸುವುದರ ವಿರುದ್ಧ ಸ್ಥಳೀಯ ಸಂಸ್ಥೆಯೊಂದು ಮಣಿಪುರದ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.
ಅಕ್ರಮ ನಿರ್ಮಾಣಗಳ ಕುರಿತು ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಲ್ಲಿಯ ಜನರನ್ನು ತೆರವುಗೊಳಿಸಲಾಗುವುದು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರುಳೀಧರನ್ ಪೀಠ ಹೇಳಿತ್ತು.