“ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸ್ಥಾನಮಾನ ನೀಡಲಾಗುವುದು” ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಎಲ್ಲಾ ನಾಯಕರು ಕೂತು ಚರ್ಚೆ ಮಾಡುತ್ತೇವೆ. ನೇಮಕದ ಪಟ್ಟಿ ಒಂದು ಹಂತಕ್ಕೆ ಬಂದಿದೆ. ಕೇಂದ್ರ ನಾಯಕರು ಕೂಡ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿರುತ್ತಾರೆ. ಅದಕ್ಕಾಗಿ ಎಲ್ಲರ ಜತೆ ಚರ್ಚೆ ಮಾಡಬೇಕು. ಸಂಕ್ರಾಂತಿ ಹಬ್ಬದ ವೇಳೆಗೆ ನೇಮಕ ಆಗಬಹುದು ಎನ್ನುವ ನಿರೀಕ್ಷೆ ಇದೆ” ಎಂದು ತಿಳಿಸಿದರು.
“ಜನಸಾಮಾನ್ಯರು ತಮ್ಮ ಕಷ್ಟಗಳನ್ನು ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರ ಕಷ್ಟಗಳನ್ನು ಕೇಳಲು ನಾವೇ ಅವರ ಬಳಿ ಹೋಗಬೇಕು. ಅವರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ‘ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ತಿಳಿಸಿದರು.
“ಮುಂದಿನ ತಿಂಗಳು ದಿನಕ್ಕೆ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಮಧ್ಯೆ ದೆಹಲಿ ಹಾಗೂ ಬೇರೆ ಕಡೆ ಪ್ರವಾಸ ಮಾಡುವ ವೇಳೆ ಈ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗಿದೆ. ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಸಂಸದರು ಭಾಗವಹಿಸಲು ಆಹ್ವಾನ ನೀಡುತ್ತೇವೆ” ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಸಿದ್ಧತೆಗೆ ಜ. 10 ರಂದು ಸಭೆ
ಜನವರಿ 10ರ ಪಕ್ಷದ ಸಭೆ ಬಗ್ಗೆ ಕೇಳಿದಾಗ, “ಲೋಕಸಭೆ ಚುನಾವಣೆ ಸಿದ್ಧತೆ ವಿಚಾರವಾಗಿ ಜನವರಿ 10ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜತೆ ಸಭೆ ಮಾಡುತ್ತೇವೆ” ಎಂದು ತಿಳಿಸಿದರು.
“ಜ. 4ರಂದು ದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದೇನೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಭೆ ಇದೆ. ಚುನಾವಣೆ ಅಭ್ಯರ್ಥಿ ವಿಚಾರವಾಗಿ ಕೆಲವು ಸಚಿವರು ವರದಿ ನೀಡಿದ್ದಾರೆ. ಅವರ ಬಗ್ಗೆ ಸಮೀಕ್ಷೆ ನಡೆಸಬೇಕಿದೆ. ಈ ವಿಚಾರವಾಗಿ ಚರ್ಚೆ ಮಾಡಲು ದೆಹಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಕೇಳಿದಾಗ, “ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚುಕಮ್ಮಿ ಆಗಿರುತ್ತದೆ. ಅದೇನು ವಿಚಾರ ಎಂದು ನೋಡುತ್ತೇನೆ” ಎಂದು ತಿಳಿಸಿದರು.
ಅಲ್ಪಸಂಖ್ಯಾತರಿಗೆ ಒಂದು ಸಾವಿರ ಕೋಟಿ ನೆರವು, ಸಿಎಂ ನಿರ್ಧಾರದಲ್ಲಿ ತಪ್ಪೇನಿದೆ?
ಅಲ್ಪಸಂಖ್ಯಾತರಿಗೆ ಒಂದು ಸಾವಿರ ಕೋಟಿ ರೂ. ಕ್ರಿಯಾಯೋಜನೆ ಬಗ್ಗೆ ಕೇಳಿದಾಗ, “ನಿಮ್ಮನ್ನು ರಾಮನಗರಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಪ್ರವಾಹ ಪರಿಸ್ಥಿತಿ ಬಂದಾಗ, ಅಲ್ಲಿನ ಸ್ಥಿತಿಗತಿ ಹೇಗಿದೆ ಎಂದು ಬಂದು ನೋಡಿ. ಅವರು ಹೇಗೆ ಬದುಕುತ್ತಿದ್ದಾರೆ ಎಂಬುದೇ ಆಶ್ಚರ್ಯ. ಜನರ ಬದುಕು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
“224 ಕ್ಷೇತ್ರಗಳಿಗೆ ಈ ಅನುದಾನ ಹಂಚಿದರೆ ಎಷ್ಟು ಸಿಗುತ್ತದೆ. ಹಳ್ಳಿಗಳಲ್ಲಿ ನರೇಗಾ ಯೋಜನೆ ಅವಕಾಶವಿದೆ. ಆದರೆ ಈ ಸಮುದಾಯ ಹೆಚ್ಚಾಗಿ ನಗರ ಪ್ರದೇಶದಲ್ಲಿ ವಾಸವಿದ್ದಾರೆ. ಹೀಗಾಗಿ ಅವರಿಗೆ ಹೆಚ್ಚು ಅವಕಾಶ ಇಲ್ಲ. ಅವರ ಪ್ರದೇಶ ಸ್ವಚ್ಛ ಮಾಡಿ, ಬದುಕು ಬದಲಿಸಬೇಕು ಎಂದು ಸಿಎಂ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ತಪ್ಪೇನಿದೆ?” ಎಂದು ತಿಳಿಸಿದರು.
ಬಿಜೆಪಿ ಓಲೈಕೆ ರಾಜಕಾರಣ ಎಂಬ ಟೀಕೆ ಬಗ್ಗೆ ಕೇಳಿದಾಗ, “ಅವರು ಟೀಕೆ ಮಾಡುತ್ತಿರಲಿ. ನಾವು ಬಡವರ ಪರ ಕೆಲಸ ಮಾಡುತ್ತಿರುತ್ತೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.