ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂಜಿನಿಯರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಹಾಗೂ ಕಿರಿಯ ತಾಂತ್ರಿಕ ಶಾಲೆಗಳ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಜ.1, 2024ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಸೇವಾ ಅವಧಿಯ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನವನ್ನು 5ಸಾವಿರ ರೂ.ಗಳಿಂದ 8 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50 ಸಾವಿರ ರೂ.ಗಳಂತೆ 5 ಲಕ್ಷ ರೂ.ಗಳ ಮೊತ್ತದ ಇಡಿಗಂಟಿನ ಸೌಲಭ್ಯವನ್ನು ನೀಡಲು ಮಂಜೂರಾತಿ ಮಾಡಲಾಗಿದೆ.
ಅತಿಥಿ ಉಪನ್ಯಾಸಕರ ಆರೋಗ್ಯ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ.ಗಳ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಆರೋಗ್ಯ ವಿಮಾ ಸೌಲಭ್ಯವನ್ನು ಅನುಷ್ಠಾನಗೊಳಿಸಲು ಮಂಜೂರು ಮಾಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಧರಣಿ ನಡೆಸಿದ್ದ ಅತಿಥಿ ಉಪನ್ಯಾಸಕರು, ಖಾಯಂಗೊಳಿಸಲು ಬೇಡಿಕೆ ಇರಿಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿಥಿ ಉಪನ್ಯಾಸಕರ ನಿಯೋಗದೊಂದಿಗೆ ಸಭೆ ನಡೆಸಿ, “ಸೇವಾ ಭದ್ರತೆ ನೀಡಲು ಕಾನೂನು ತೊಡಕುಗಳಿರುವುದರಿಂದ ಸಾಧ್ಯವಾಗುವುದಿಲ್ಲ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ” ಎಂದು ನಿಯೋಗಕ್ಕೆ ತಿಳಿಸಿದ್ದಲ್ಲದೇ, ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದರು.