ಸೀಟು ಹಂಚಿಕೆಗೆ ಯಾವ ಮಾನದಂಡ ಇರಬೇಕು. 2019ರ ಲೋಕಸಭೆ ಚುನಾವಣೆಯ ಸಾಧನೆಯೇ ಅಥವಾ ಕಳೆದ ವಿಧಾನಸಭೆ ಚುನಾವಣೆಯ ಸಾಧನೆಯೇ? ರಾಷ್ಟ್ರ ನಾಯಕರು ಮೈತ್ರಿ ಎನ್ನುತ್ತಿದ್ದರೆ, ರಾಜ್ಯ ನಾಯಕರು ಬೇಡ ಎನ್ನುತ್ತಿದ್ದಾರೆ. ಮುಂದೇನಾಗಬಹುದು?
ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಕಾಂಗ್ರೆಸ್ ಮತ್ತು ಎಎಪಿ ತಮ್ಮ ಮೊದಲ ಸುತ್ತಿನ ಸೀಟು ಹಂಚಿಕೆ ಮಾತುಕತೆಯನ್ನು ಜನವರಿ 8ರಂದು ನಡೆಸಿವೆ. ಸಭೆಯಲ್ಲಿ, ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆದಿವೆ. ಎಎಪಿ ತನ್ನ ನೆಲೆಯನ್ನು ಭದ್ರಗೊಳಿಸಿಕೊಂಡಿರುವ ಐದು ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿದೆ. ಆದರೆ, ಕಾಂಗ್ರೆಸ್ನ ರಾಜ್ಯ ನಾಯಕರು ಅದನ್ನು ತಿರಸ್ಕರಿಸುವ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಪಡೆಯುವುದು ಕ್ಷೋಭೆಯಲ್ಲವೆಂದು ಹೈಕಮಾಂಡ್ ಮೇಲೆ ಒತ್ತಡ ತರಲು ಮುಂದಾಗಿವೆ. ಹೀಗಾಗಿ, ಸೀಟು ಹಂಚಿಕೆಯ ವಿಚಾರ ಉಭಯ ಪಕ್ಷಗಳ ನಡುವೆ ಸರಾಗವಾಗಿ ಮುಗಿಯುವ ಸಾಧ್ಯತೆಗಳಿಲ್ಲ.
ಅಂದಹಾಗೆ, ಎಎಪಿ ಮೂಲಗಳ ಪ್ರಕಾರ, ಎಎಪಿಯು ಪಂಜಾಬ್ನಲ್ಲಿ 13, ದೆಹಲಿಯಲ್ಲಿ 7, ಗೋವಾದಲ್ಲಿ 2, ಹರಿಯಾಣದಲ್ಲಿ 10 ಹಾಗೂ ಗುಜರಾತ್ನಲ್ಲಿ 26 ಸ್ಥಾನಗಳಿಗೆ ಕಾಂಗ್ರೆಸ್ ಎದುರು ಬೇಡಿಕೆ ಇಟ್ಟಿದೆ. ಅಲ್ಲದೆ, ಚಂಡೀಗಢದಲ್ಲಿಯೂ ಸ್ಥಾನಗಳಿಗಾಗಿ ಬೇಡಿಕೆ ಇಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ದೆಹಲಿ ಮತ್ತು ಪಂಜಾಬ್ನಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಎಎಪಿ, ಕಾಂಗ್ರೆಸ್ಗೆ ಒಂದಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಾಗಿದೆ. ಅದೂ, ಹರಿಯಾಣ, ಗುಜರಾತ್ ಮತ್ತು ಗೋವಾದಲ್ಲಿ ತಮಗೆ ಕಾಂಗ್ರೆಸ್ ಅವಕಾಶ ಕೊಟ್ಟರೆ ಮಾತ್ರ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಗುಜರಾತ್ನಲ್ಲಿ ಎಎಪಿಗೆ ಸ್ಥಾನ ನೀಡಲು ಮನಸ್ಸಿಲ್ಲದಿದ್ದರೂ ಒಂದಷ್ಟು ಸ್ಥಾನ ನೀಡಬಹುದು. ಆದರೆ, ಗೋವಾ ಮತ್ತು ಹರಿಯಾಣದಲ್ಲಿ ಕ್ಷೇತ್ರ ಬಿಟ್ಟುಕೊಡುವುದು ಕಷ್ಟ ಎಂದು ಕಾಂಗ್ರೆಸ್ ಒಳಗಿನವರು ಹೇಳುತ್ತಾರೆ.
“ಹರಿಯಾಣದಲ್ಲಿ ಅವರ ಅಸ್ತಿತ್ವವೇನು? ಅವರಿಗೆ ಇಲ್ಲಿನ ವಿಧಾನಸಭೆಯಲ್ಲಿ ಒಂದು ಸ್ಥಾನವೂ ಇಲ್ಲ. ಅವರು ಕಾಂಗ್ರೆಸ್ಗೆ ಬರಿಗೈ ಬೆಂಬಲ ನೀಡುವ ಮೂಲಕ ಹರಿಯಾಣದಲ್ಲಿ ರಾಜಕೀಯ ಆಟ ಆಡಲು ಬಯಸುತ್ತಾರೆ” ಎಂದು ಹರಿಯಾಣದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಹರಿಯಾಣದಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿ, ಬಿಜೆಪಿ-ಜೆಜೆಪಿ ಮೈತ್ರಿಯನ್ನು ತನ್ನ ಸ್ವಂತ ಶಕ್ತಿಯಿಂದ ಮಣಿಸಲು ಕಾಂಗ್ರೆಸ್ ಬಯಸುತ್ತದೆ. ಅಲ್ಲಿ, ಎಎಪಿ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಎಎಪಿಯ ಬೇಡಿಕೆಗಳಿಗೆ ಕಾಂಗ್ರೆಸ್ ಮಣೆ ಹಾಕಬಾರದು ಅಥವಾ ಹಾಕುವುದಿಲ್ಲ ಎಂಬ ಮಾತುಗಳು ಕಾಂಗ್ರೆಸ್ ಪಡೆಯೊಳಗೆ ಚರ್ಚೆಯಾಗುತ್ತಿದೆ.
ಸೀಟು ಹಂಚಿಕೆಯ ಮಾನದಂಡವೇನು?
ಸೀಟು ಹಂಚಿಕೆಗೆ ಯಾವ ಮಾನದಂಡ ಇರಬೇಕು ಎಂಬುದು ಇನ್ನೊಂದು ವಿಚಾರ. ಇದು 2019ರ ಲೋಕಸಭೆ ಚುನಾವಣೆಯ ಸಾಧನೆಯೇ ಅಥವಾ ಕಳೆದ ವಿಧಾನಸಭೆ ಚುನಾವಣೆಯ ಸಾಧನೆಯೇ? ಎಂಬುದು ತರ್ಕಕ್ಕೆ ಸಿಲುಕಿದೆ.
ಇದು ಲೋಕಸಭಾ ಚುನಾವಣೆಯ ಮಾನದಂಡವಾದರೆ, ಕಾಂಗ್ರೆಸ್ ಪಂಜಾಬ್ನಲ್ಲಿ 13 ರಲ್ಲಿ 8 ಸ್ಥಾನಗಳನ್ನು, ಗೋವಾದಲ್ಲಿ 2 ರಲ್ಲಿ 1 ಸ್ಥಾನವನ್ನು ಗೆದ್ದುಕೊಂಡಿದೆ. ಇನ್ನು, ಗುಜರಾತ್, ಹರಿಯಾಣ ಹಾಗೂ ದೆಹಲಿಯಲ್ಲಿ ಕಾಂಗ್ರೆಸ್ ಆಗಲೀ, ಎಎಪಿ ಆಗಲೀ ಒಂದೂ ಸ್ಥಾನವನ್ನು ಗೆದ್ದಿಲ್ಲ.
ಒಂದು ವೇಳೆ, ಕಳೆದ ವಿಧಾನಸಭಾ ಚುನಾವಣೆ ಮಾನದಂಡವಾದರೆ, 2020ರ ದೆಹಲಿ ಚುನಾವಣೆ ಮತ್ತು 2022ರ ಪಂಜಾಬ್ ಚುನಾಣೆಯಲ್ಲಿ ಎಎಪಿ ಮೇಲುಗೈ ಸಾಧಿಸಿದೆ. ದೆಹಲಿಯ 70 ಸ್ಥಾನಗಳಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದೂ ಸ್ಥಾನವನ್ನು ಗೆಲ್ಲಲಾಗಿಲ್ಲ. ಪಂಜಾಬ್ನ 117 ಸ್ಥಾನಗಳಲ್ಲಿ ಎಎಪಿ 92 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 18 ಸ್ಥಾನಗಳಿಗೆ ಕುಸಿದಿದೆ. ಆದರೆ, 2022ರ ಚುನಾವಣೆಗೂ ಹಿಂದೆ ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು.
ಇನ್ನು, ಹರಿಯಾಣದಲ್ಲಿ ಒಟ್ಟು 90 ಸ್ಥಾನಗಳಲ್ಲಿ ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದಿದೆ, ಎಎಪಿ ಶೂನ್ಯ ಸಾಧನೆ ಮಾಡಿದೆ. ಗುಜರಾತ್ನ 182 ಸ್ಥಾನಗಳಲ್ಲಿ ಕಾಂಗ್ರೆಸ್ 17, ಎಎಪಿ 5 ಸ್ಥಾನಗಳನ್ನು ಹಾಗೂ ಗೋವಾದ 40 ಸ್ಥಾನಗಳಲ್ಲಿ ಕಾಂಗ್ರೆಸ್ 12 ಮತ್ತು ಎಎಪಿ 2 ಸ್ಥಾನಗಳನ್ನು ಗೆದ್ದಿವೆ.
ಹೀಗಾಗಿ, ಎರಡೂ ಪಕ್ಷಗಳು ಸಮತೋಲಿತ ಮತ್ತು ಸ್ವೀಕಾರಾರ್ಹ ಮಾತುಕತೆ ನಡೆಸಬಹುದು ಎಂದು ಮಾತುಗಳು ಕೇಳಿಬರುತ್ತಿವೆ.
ಮೈತ್ರಿಗೆ ಕಾಂಗ್ರೆಸ್ ರಾಜ್ಯ ಘಟಕಗಳ ವಿರೋಧ
ಕಾಂಗ್ರೆಸ್ನ ದೆಹಲಿ ಮತ್ತು ಪಂಜಾಬ್ ಎರಡೂ ಘಟಕಗಳು ಎಎಪಿ ಜೊತೆಗಿನ ಮೈತ್ರಿಯನ್ನು ವಿರೋಧಿಸುತ್ತಿವೆ. ಈ ರಾಜ್ಯಗಳಲ್ಲಿ ಎಎಪಿ ಮತ್ತು ಕಾಂಗ್ರೆಸ್ನ ತಳಹದಿಯು ಒಂದೇ ರೀತಿಯದ್ದಾಗಿದೆ. ಹೊಂದಾಣಿಕೆಯಿಂದ ಎಎಪಿ ತಳಹದಿಯನ್ನು ಕಾಂಗ್ರೆಸ್ ಬಲಪಡಿಸುತ್ತದೆ ಮತ್ತು ಪಕ್ಷವು ಸ್ವತಃ ದುರ್ಬಲವಾಗುತ್ತದೆ. ಸೈದ್ಧಾಂತಿಕವಾಗಿಯೂ ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸುತ್ತಾರೆ.
ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತಗಳು ಸಂಪೂರ್ಣವಾಗಿ ಎಎಪಿ ಎಡೆಗೆ ವಾಲಿಕೊಂಡಿವೆ. 2013ರಲ್ಲಿ ಎಎಪಿ ಜೊತೆ ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳದಿದ್ದರೆ, ಪಕ್ಷದ ಮತಗಳು ಎಎಪಿಗೆ ಹೋಗುತ್ತಿರಲಿಲ್ಲ ಎಂದು ಕಾಂಗ್ರೆಸ್ ರಾಜ್ಯ ಘಟಕ ವಾದಿಸಿದೆ.
ಇನ್ನು, ಪಂಜಾಬ್ನಲ್ಲಿ ಕಾಂಗ್ರೆಸ್ ಉತ್ತಮ ನೆಲೆ ಹೊಂದಿತ್ತು. ಆದರೆ, 2022ರ ಚುನಾವಣೆಯಲ್ಲಿ ಎಎಪಿ ಅಧಿಕಾರ ಹಿಡಿದಿದೆ. ಈಗ, ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.
ಒಂದು ವೇಳೆ, ಈ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ, ವಿರೋಧ ಪಕ್ಷದ ಜಾಗವನ್ನು ಅಕಾಲಿ ದಳ ಆಕ್ರಮಿಸಿಕೊಳ್ಳುತ್ತದೆ. ತನ್ನನ್ನು ಪಂಜಾಬಿ ಪಕ್ಷವೆಂದು ಹೇಳಿಕೊಳ್ಳುವ ಅಕಾಲಿ ದಳವು ಎಎಪಿ ಮತ್ತು ಕಾಂಗ್ರೆಸ್ ಅನ್ನು ದೆಹಲಿಗರು ನಡೆಸುತ್ತಿರುವ ಪಕ್ಷಗಳು ಎಂದು ಆರೋಪಿಸುತ್ತಿದೆ.
ಹೀಗಾಗಿ, ನೆಲ ಮತ್ತು ವಿಧಾನಸಭೆಯಲ್ಲಿ ಪರಸ್ಪರ ವಿರೋಧ ಮತ್ತು ಪೈಪೋಟಿ ಹೊಂದಿರುವ ಎಎಪಿ ಮತ್ತು ಕಾಂಗ್ರೆಸ್ನ ಸ್ಥಳೀಯ ನಾಯಕರು ಪಕ್ಷಗಳ ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ. ಈ ಪೈಪೋಟಿ ಎರಡು ಪಕ್ಷಗಳು ಒಗ್ಗೂಡಿದರೂ, ಮತಗಳು ಒಗ್ಗೂಡುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಮತಗಳು ಹಂಚಿಹೋಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.
ಈ ವರದಿ ಓದಿದ್ದೀರಾ?: ತಮಿಳುನಾಡಿನಲ್ಲಿ ಮೋದಿ ಸ್ಪರ್ಧೆ: ಗೆಲುವು ಸಾಧ್ಯವೇ, ಮೋದಿ ಮನಸ್ಸು ಮಾಡುವರೇ?
ಅದಾಗ್ಯೂ, ಲೋಕಸಭೆ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಸೌಹಾರ್ದ ಹೋರಾಟ ನಿಭಾಯಿಸಬಹುದು ಎಂದು ಹೇಳಲಾಗುತ್ತಿದೆ. ಈ ರಾಜ್ಯದಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿಲ್ಲ. ವಿಶೇಷವಾಗಿ ಸಿಖ್ ಮತದಾರರು ಬಿಜೆಪಿಗೆ ಮಣೆ ಹಾಕುತ್ತಿಲ್ಲ. ಕಳೆದ ರೈತ ಹೋರಾಟದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಯಾವುದೇ ಕಾರಣಕ್ಕೂ ನೆಲೆ ನೀಡುವುದಿಲ್ಲವೆಂದು ಪಂಜಾಬಿಗಳು ಹೇಳಿದ್ದಾರೆ.
ಪಂಜಾಬ್ನ 13 ಲೋಕಸಭಾ ಸ್ಥಾನಗಳಲ್ಲಿ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಅವಕಾಶವನ್ನು ಬಿಜೆಪಿ ಹೊಂದಿದೆ. ಅದೂ ಅಕಾಲಿದಳದ ನೆರವಿನಿಂದ. ಇಲ್ಲದಿದ್ದರೆ ಅದೂ ಕೂಡ ಸುಲಭವಲ್ಲ.
ಕಾಂಗ್ರೆಸ್-ಎಎಪಿ ಮೈತ್ರಿ ಸಾಧ್ಯವೇ?
ರಾಜ್ಯ ಘಟಕಗಳ ಕಾಳಜಿ ಮತ್ತು ವಾದಗಳು ಮೈತ್ರಿಗೆ ಮನ್ನಣೆ ನೀಡುತ್ತಿಲ್ಲ. ಆದರೂ, ಮೈತ್ರಿ ಸಾಧ್ಯವೇ ಇಲ್ಲ ಎಂದೂ ಹೇಳಲಾಗದು. ವಿಶೇಷವಾಗಿ, ಪಕ್ಷಗಳಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಸುಲಭದ ರಾಜ್ಯವೆಂದರೆ, ಅದು ದೆಹಲಿ. 2019ರ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಮತಗಳೊಂದಿಗೆ ಬಿಜೆಪಿ ಎಲ್ಲ 7 ಸ್ಥಾನಗಳನ್ನು ಗೆದ್ದುಕೊಂಡಿತು. ಆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿಯನ್ನು ಮಣಿಸಲು ಸಾಧ್ಯವಾಗುತ್ತಿರಲಿಲ್ಲ.
ದೆಹಲಿಯಲ್ಲಿ ಬಿಜೆಪಿಯ ಪ್ರಾಬಲ್ಯವು ವಾಸ್ತವವಾಗಿ ಎರಡು ಪಕ್ಷಗಳು ಒಗ್ಗೂಡಲು ಒಂದು ಕಾರಣವನ್ನು ನೀಡುತ್ತದೆ. ಅವರು ತಮ್ಮ ಅಭ್ಯರ್ಥಿಗಳನ್ನು ಉತ್ತಮವಾಗಿ ಆಯ್ಕೆ ಮಾಡಿದರೆ, ಪರಿಣಾಮಕಾರಿಯಾಗಿ ಮತಗಳನ್ನು ವರ್ಗಾಯಿಸಿದರೆ ಹಾಗೂ ಬಿಜೆಪಿ ಮತದಾರರನ್ನು ತಮ್ಮತ್ತ ಸೆಳೆದರೆ, ಮೈತ್ರಿಕೂಟವು ಸಫಲತೆಯನ್ನು ಕಾಣಬಹುದು.
ಇದೇ ಮಾನದಂಡ ಗುಜರಾತ್ಗೂ ಅನ್ವಯಿಸುತ್ತದೆ. ಅಲ್ಲಿಯೂ ಬಿಜೆಪಿ ಅಜೇಯ ಪಕ್ಷವಾಗಿದೆ. ಅದನ್ನು ಕೊಂಚ ಅಲುಗಾಡಿಸಲು ಕಾಂಗ್ರೆಸ್-ಎಎಪಿ ಮೈತ್ರಿ ಒಂದು ಉತ್ತಮ ಅಸ್ತ್ರವಾಗಬಹುದು. ಬಿಜೆಪಿಗೆ ಪೈಪೋಟಿಯ ಸ್ಪರ್ಧೆ ನೀಡಬಹುದು.
ಇನ್ನು, ಪಂಜಾಬ್ನಲ್ಲಿಯೂ ಕೆಲವು ಸ್ಥಾನಗಳಲ್ಲಿ ಹೊಂದಾಣಿಕೆಗೆ ಕೊಂಚ ಅವಕಾಶವಿದೆ. ಉದಾಹರಣೆಗೆ, ಸಂಗ್ರೂರ್ ಮತ್ತು ಬಟಿಂಡಾ ಕ್ಷೇತ್ರಗಳಲ್ಲಿ ಎಎಪಿ ಪ್ರಬಲ ಪಕ್ಷವಾಗಿದೆ. ಪಟಿಯಾಲ, ಗುರುದಾಸ್ಪುರ ಮತ್ತು ಹೋಶಿಯಾರ್ಪುರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಬಲ ಸವಾಲಾಗಿದೆ.
ಗೋವಾ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಉತ್ತಮ ನೆಲೆ ಹೊಂದಿದೆ. ಗೋವಾದಲ್ಲಿ ಎಎಪಿ ಕೂಡ ತನ್ನ ನೆಲೆ ಕಂಡುಕೊಳ್ಳುತ್ತಿದೆ. ಗೋವಾದಲ್ಲಿ ಸೀಟು ಹಂಚಿಕೆ ಸಾಧ್ಯವಾಗಬಹುದು. ಸಾಧ್ಯವಾಗದೆಯೂ ಇರಬಹುದು. ಹರಿಯಾಣ ಕಾಂಗ್ರೆಸ್ ಮಾತ್ರ, ಯಾವುದೇ ಕಾರಣಕ್ಕೂ ಎಎಪಿಗೆ ಅವಕಾಶ ನೀಡಬಾರದು ಎನ್ನುತ್ತಿದೆ.
ಇದೆಲ್ಲದರ ನಡುವೆ, ಎಎಪಿ ಮತ್ತು ಕಾಂಗ್ರೆಸ್ ನಾಯಕರು ಸೀಟು ಹಂಚಿಕೆಯ ಚರ್ಚೆ ನಡೆಸುತ್ತಿದ್ದಾರೆ. ಸೋಮವಾರದ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, “ಎಲ್ಲವನ್ನೂ ಕೂಲಂಕಷವಾಗಿ ಚರ್ಚಿಸಲಾಗಿದೆ. ನಾವು ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ. ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ” ಎಂದು ಹೇಳಿದ್ದಾರೆ.