ದೇಶಕ್ಕೆ ಹೊರಗಿನಿಂದ ಬೆದರಿಕೆ ಇರುವುದಲ್ಲ, ದೇಶದೊಳಗೆಯೇ ಬೆದರಿಕೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫೆರೆನ್ಸ್ ಅಧ್ಯಕ್ಷ ಡಾ ಫಾರೂಕ್ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ. ಹಾಗೆಯೇ ಭಾರತದ ಭವಿಷ್ಯವನ್ನು ಭದ್ರಪಡಿಸಬೇಕಾದರೆ ಒಗ್ಗಟ್ಟಿನಿಂದ ಇರಬೇಕಾದ, ಒಡಕು ಹುಟ್ಟಿಸುವ ಹೇಳಿಕೆಗಳನ್ನು ವಿರೋಧಿಸಬೇಕಾದ ಅಗತ್ಯವನ್ನು ಫಾರೂಕ್ ಅಬ್ದುಲ್ಲಾ ಒತ್ತಿ ಹೇಳಿದ್ದಾರೆ.
ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, “ದೇಶ ಉಳಿಯಬೇಕಾದರೆ ಇಂದಿಗೂ ಬಲಿದಾನದ ಅಗತ್ಯವಿದೆ. ದೇಶಕ್ಕೆ ಹೊರಗಿನಿಂದಲ್ಲ, ಒಳಗಿನಿಂದಲೇ ಬೆದರಿಕೆಯಿದೆ. ದೇಶದೊಳಗೆ ಇರುವವರೇ ದೇಶವನ್ನು ನಾಶ ಮಾಡಬಹುದು. ನಮ್ಮ ದೇಶವನ್ನು ಗಟ್ಟಿಗೊಳಿಸಬೇಕಾದರೆ, ನಾವು ನಮ್ಮ ಸಹೋದರ- ಸಹೋದರಿಯರನ್ನು ಪ್ರಬಲರನ್ನಾಗಿಸಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಭಯೋತ್ಪಾದಕ ದಾಳಿ | ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗಲ್ಲ: ಫಾರೂಕ್ ಅಬ್ದುಲ್ಲಾ
ಇನ್ನು ದೇಶಗಳು ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಸುಳ್ಳು ಪ್ರಚಾರವನ್ನು ಕೂಡಾ ಅಬ್ದುಲ್ಲಾ ಅವರು ಟೀಕಿಸಿದರು. “ನಮ್ಮ ದೇಶದಲ್ಲಿ ಶೇಕಡ 80ರಷ್ಟು ಹಿಂದೂಗಳು ಇದ್ದಾರೆ. ಹಾಗಿದ್ದಾಗ ಅಪಾಯ ಯಾರದ್ದು? ಜನರಲ್ಲಿ ಆತಂಕ ಹುಟ್ಟುಹಾಕುವ ನಿಟ್ಟಿನಲ್ಲಿ ಈ ರೀತಿ ಪ್ರಚಾರ ಮಾಡಲಾಗುತ್ತದೆ. ಇದು ಸುಳ್ಳು ಎಂಬುದನ್ನು ಎಲ್ಲರಿಗೂ ತಿಳಿಸುವುದು ಎಲ್ಲರ ಕರ್ತವ್ಯ” ಎಂದು ಕರೆ ನೀಡಿದರು.
ಇನ್ನು ತನ್ನ ಅಧಿಕಾರವಧಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಲಾಗಿದೆ ಎಂಬ ಆರೋಪದ ಬಗ್ಗೆಯೂ ಫಾರೂಕ್ ಪ್ರತಿಕ್ರಿಯೆ ನೀಡಿದರು. “ಪಾಕಿಸ್ತಾನದವರು ಬಂದು ನಿಮ್ಮ ಭೂಮಿಯನ್ನು ಕಿತ್ತುಕೊಳ್ಳುತ್ತಾರೆ ಎಂದು ಸುಳ್ಳು ಮಾಹಿತಿಯನ್ನು ಹರಡಲಾಯಿತು. ಕೇಂದ್ರ ಗೃಹ ಸಚಿವಾಲಯ ಹೊರತುಪಡಿಸಿ ಬೇರೆ ಯಾರೂ ಕೂಡಾ ಇತರೆ ದೇಶದೊಂದಿಗೆ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲವೆಂದು ನಾನು ಹೇಳಿದೆ. ಆದರೆ ಯಾರೂ ನನ್ನ ಮಾತನ್ನು ಕೇಳಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಒಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಂದಿನ ಸಿಎಂ: ಫಾರೂಕ್ ಅಬ್ದುಲ್ಲಾ ಘೋಷಣೆ
370 ವಿಧಿ ರದ್ಧತಿ ಬಗ್ಗೆ ಮಾತನಾಡಿದ ಫಾರೂಕ್, “370 ವಿಧಿ ರದ್ಧತಿಯನ್ನು ನೀವು ಸಂಭ್ರಮಿಸಿದಿರಿ, ಆದರೆ ಈಗ ಸ್ಥಳೀಯ ಉದ್ಯೋಗಗಳು ಕೂಡಾ ಹೊರಗಿನವರ ಪಾಳಾಗುತ್ತಿದೆ. ಕಾರ್ಮಿಕರನ್ನು ಹೊರಗಿನಿಂದ ಕರೆತರಲಾಗುತ್ತಿದೆ. ಇದರಿಂದ ನಿಮಗೆ ಏನು ಲಾಭವಾಯಿತು ಎಂದು ಒಮ್ಮೆ ಆಲೋಚಿಸಿ” ಎಂದರು.
“ನಾನು ಮುಸ್ಲಿಂ ಮತ್ತು ಭಾರತೀಯ ಮುಸ್ಲಿಂ. ನಾನು ಚೀನಾದವನೂ ಅಲ್ಲ ಪಾಕಿಸ್ತಾನಿಯೂ ಅಲ್ಲ. ಆದರೆ ನ್ಯಾಷನಲ್ ಕಾನ್ಫೆರೆನ್ಸ್‌ನ ಹಿಂದೂಗಳನ್ನೂ ಕೂಡಾ ಪಾಕಿಸ್ತಾನಿಗಳೆಂದು ಒಮ್ಮೆ ಬಿಂಬಿಸಲಾಗಿದೆ” ಎಂದು ಹೇಳಿದರು.
