26 ವಿಪಕ್ಷಗಳ ಒಕ್ಕೂಟಕ್ಕೆ ನೂತನ ಹೆಸರಾಗಿ ‘ಇಂಡಿಯಾ(I-N-D-I-A)’ ಎಂದು ಇಡಲಾಗಿದ್ದು ಮುಂದಿನ ಸಭೆಯು ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಎರಡು ದಿನ ನಡೆದ ಸಭೆಯ ಬಳಿಕ ನಡೆಸಲಾದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ 16 ಪಕ್ಷಗಳು ಭಾಗಿಯಾಗಿದ್ದವು. ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆಯಲ್ಲಿ 26 ಪಕ್ಷಗಳು ಭಾಗವಹಿಸಿವೆ. 11 ಜನರ ಕಮಿಟಿಯನ್ನು ಕೂಡ ರಚಿಸಲು ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮುಂದಿನ ಆಗುಹೋಗುಗಳ ಬಗ್ಗೆ ತೀರ್ಮಾನ ಮಾಡಲು ಮುಂಬೈನಲ್ಲಿ ಮುಂದಿನ ಸಭೆ ನಡೆಯಲಿದೆ’ ಎಂದರು.
ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, “ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನ ವಿರೋಧಿ ನಡೆಗಳನ್ನು ಅನುಸರಿಸುತ್ತಿದೆ. ಕೇಂದ್ರದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿದೆ. ಭಾರತದ ಸಾರ್ವಭೌಮತ್ವದ ಪರವಾಗಿ ನಾವು ಕೆಲಸ ಮಾಡುತ್ತೇವೆ. ವಿಪಕ್ಷಗಳು ಸಭೆ ಮಾಡುವುದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಯ ಉಂಟಾಗಿದೆ’ ಎಂದು ಹೇಳಿದರು.