ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಕ್ಟೋಬರ್ 6ರಂದು ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವೆ ಟಿ20 ಪಂದ್ಯ ನಡೆಯಲಿದೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಹಿಂದು ಮಹಾಸಭಾ, ಕ್ರಿಕೆಟ್ ಪಂದ್ಯವನ್ನು ವಿರೋಧಿಸಿ, ಅಂದು (ಅ.6) ಗ್ವಾಲಿಯರ್ ಬಂದ್‌ಗೆ ಕರೆಕೊಟ್ಟಿದೆ.
“ಅಕ್ಟೋಬರ್ 6 ರಂದು ಗ್ವಾಲಿಯರ್‌ನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯವನ್ನು ಹಿಂದು ಮಹಾಸಭಾ ವಿರೋಧಿಸುತ್ತದೆ. ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯಗಳು ಇನ್ನೂ ನಡೆಯುತ್ತಿವೆ. ಬಾಂಗ್ಲಾದೇಶದೊಂದಿಗೆ ಕ್ರಿಕೆಟ್ ಪಂದ್ಯ ಆಡುವುದು ಸರಿಯಲ್ಲ” ಎಂದು ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಹೇಳಿದ್ದಾರೆ.
ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಮೀಸಲಾತಿ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಬಾಂಗ್ಲಾ ಯುವಜನರು ಪ್ರತಿಭಟನೆಗೆ ಇಳಿದಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಬಾಂಗ್ಲಾ ಸೇನೆ ಸರ್ಕಾರ ಮುನ್ನಡೆಸುತ್ತಿದೆ. ಪ್ರತಿಭಟನೆ-ಹಿಂಸಾಚಾರದ ವೇಳೆ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಕೆಲವು ದಾಳಿಗಳು ನಡೆದಿವೆ. ಆದರೆ, ಅಲ್ಲಿ ಹಿಂದುಗಳು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ದಾಳಿಗಳು ನಡೆದಿಲ್ಲ. ಬದಲಾಗಿ, ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಅವರ ಬೆಂಬಲಿಗರಾಗಿದ್ದರು ಎಂಬ ಕಾರಣಕ್ಕೆ ಉದ್ರಿಕ್ತ ಗುಂಪುಗಳು ದಾಳಿ ನಡೆಸಿವೆ.
ಈ ವರದಿ ಓದಿದ್ದೀರಾ?: ಬಾಂಗ್ಲಾ ಹಿಂದೂಗಳ ಸಂಕಟ: ದಿಟವೆಷ್ಟು, ಸಟೆಯೆಷ್ಟು?
ದಾಳಿಗಳಿಂದ ಹಿಂದುಗಳನ್ನು ಅಲ್ಲಿನ ಸ್ಥಳೀಯ ಮುಸಲ್ಮಾನರೇ ರಕ್ಷಿಸುತ್ತಿದ್ದಾರೆ. ದೇವಾಲಯಗಳಿಗೂ ಮುಸ್ಲಿಮರೇ ರಕ್ಷಣೆಯನ್ನೂ ನೀಡುತ್ತಿದ್ದಾರೆ. ಹಿಂದು ಕುಟುಂಬಗಳ ಮೇಲಿನ ಬಹುತೇಕ ದಾಳಿಗಳು, ಲೂಟಿಗಳು, ಈ ಹಿಂದು ಕುಟುಂಬಗಳು ಶೇಖ್ ಹಸೀನಾಗೆ ಬೆಂಬಲ ನೀಡಿದ್ದಕ್ಕಾಗಿ ಜರುಗಿವೆ. ಹಳೆಯ ಆಸ್ತಿ ವಿವಾದಗಳ ಹಗೆಯನ್ನೂ ಇದೇ ಸಂದರ್ಭದಲ್ಲಿ ತೀರಿಸಿಕೊಳ್ಳಲಾಗಿದೆ.
ಅಲ್ಲದೆ, ಬಾಂಗ್ಲಾದೇಶದ ಹಿಂದುಗಳ ಮೇಲೆ ಅತ್ಯಾಚಾರಗಳು ಜರುಗಿವೆ ಎಂದು ಸಾರುವ ಬಹುತೇಕ ಫೇಕ್ ಪೋಸ್ಟ್‌ಗಳು ಭಾರತ ಮೂಲದವು ಎಂಬುದನ್ನು ಫ್ಯಾಕ್ಟ್ ಚೆಕರ್‌ಗಳು ಬಯಲಿಗೆಳಿದ್ದಾರೆ. ವದಂತಿಗಳ ಒಂದಷ್ಟು ಪ್ರಮಾಣ ಬಾಂಗ್ಲಾದೇಶದ ಒಳಗಿನಿಂದಲೂ ಹಬ್ಬಿರುವುದನ್ನು ಪತ್ತೆ ಹಚ್ಚಿದ್ದಾರೆ. ಹಿಂದೂಗಳ ಮನೆಗಳ ಜೊತೆಗೆ ಮುಸಲ್ಮಾನರ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಗಮನ ಸೆಳೆದಿದ್ದಾರೆ.