ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಕನಿಮೊಳಿ ಕರುಣಾನಿಧಿ ಅವರು, “ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್” ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದು, ಕ್ಷೇತ್ರ ಮರುವಿಂಗಡಣೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವೆಸಗಲಿದೆ ಎಂದು ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆ (delimitation) ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ, ಡಿಎಂಕೆ ಈಗಲೇ ಅದನ್ನು ಇಷ್ಟೊಂದು ತೀವ್ರವಾಗಿ ವಿರೋಧಿಸುತ್ತಿರುವುದಕ್ಕೆ ಕಾರಣಗಳೇನು?
ಡಿಎಂಕೆ ತಮಿಳುನಾಡಿನ ಹಕ್ಕಿಗಾಗಿ ಈ ಮಸೂದೆಯನ್ನು ವಿರೋಧಿಸುತ್ತಿದೆ. ನಮ್ಮ ರಾಜ್ಯ ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಯನ್ನು ಮಾಡಿ ಪ್ರಗತಿಪರ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಪ್ರಸ್ತಾವಿತ ಈ ಮಸೂದೆ ಒಕ್ಕೂಟ ವ್ಯವಸ್ಥೆಯ ಅತ್ಯಂತ ದೊಡ್ಡ ಕುಚೋದ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಚುನಾವಣೆಯನ್ನು ಎದುರಿಸುತ್ತಿರುವಾಗ, ಈ ಮಹಿಳಾ ಮೀಸಲಾತಿ ಮಸೂದೆಯ ನೆಪದಲ್ಲಿ ಕ್ಷೇತ್ರ ಮರುವಿಂಗಡಣೆಯ ಮಸೂದೆಯನ್ನೂ ಜಾರಿಗೆ ತರುವುದಕ್ಕೆ ಯತ್ನಿಸುತ್ತಿರುವುದು ತೀವ್ರ ಕಳವಳ ಉಂಟು ಮಾಡುತ್ತದೆ.
ವಿರೋಧ ಪಕ್ಷಗಳ ಪಾಲ್ಗೊಳ್ಳುವಿಕೆಯಿಲ್ಲದೆ ಮಸೂದೆಯನ್ನು ಅಂಗೀಕರಿಸುವುದು ಮತ್ತು ಚುನಾವಣಾ ಸಮಯದಲ್ಲಿ ಇತರ ರಾಷ್ಟ್ರೀಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವುದು ಇದರ ಪ್ರಮುಖ ಹುನ್ನಾರವಾಗಿದೆ.
ಒಂದು ವೇಳೆ ಬಿಜೆಪಿ ಈ ತಿದ್ದುಪಡಿಗಳನ್ನುಅಂಗೀಕರಿಸಿದ್ದೇ ಆದಲ್ಲಿ, ಡಿಎಂಕೆಯ ‘ಪ್ಲಾನ್ ಬಿ’ ಏನು?
ಖಂಡಿತ ನಾವು ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇವೆ. ಜನಸಂಖ್ಯೆಯ ಆಧಾರದ ಮೇಲೆ ಮಾಡುವ ಕ್ಷೇತ್ರ ಮರುವಿಂಗಡಣೆಯನ್ನು ನಾವು ವಿರೋಧಿಸುತ್ತೇವೆ. ಕಾನೂನುಬದ್ಧವಾಗಿ ಮತ್ತು ಸಾಂವಿಧಾನಿಕವಾಗಿ ಇದನ್ನು ವಿರೋಧಿಸುವುದಕ್ಕೆ ದಕ್ಷಿಣ ಭಾರತದ ರಾಜ್ಯಗಳ ನಡುವೆ ಸಮನ್ವಯ ಸಾಧಿಸಿಕೊಂಡು ಇದರ ವಿರುದ್ಧ ಹೋರಾಡುತ್ತೇವೆ.
ನಾವು ನ್ಯಾಯಯುತ ಸಂಸದೀಯ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸುತ್ತೇವೆ. ನಮ್ಮ ಹೋರಾಟ ಮುಂದುವರಿಸುತ್ತೇವೆ.
ಮಹಿಳೆಯರಿಗೆ 33% ಮೀಸಲಾತಿ ಜಾರಿಯಾಗುವುದನ್ನು ವಿರೋಧ ಪಕ್ಷಗಳು ತಡೆಯಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸುತ್ತಿದೆಯಲ್ಲ?
ಸಂಸತ್ತಿನ ಈಗಿನ 543 ಕ್ಷೇತ್ರಗಳಲ್ಲಿ 181 ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲು ಕೇಂದ್ರ ಸರ್ಕಾರ ಸಿದ್ಧರಿದ್ದರೆ, ನಾವು ಅದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ಆದರೆ, ಈ 33% ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ತಳಕು ಹಾಕಿರುವುದಕ್ಕೆ ನಮ್ಮ ಆಕ್ಷೇಪವಿದೆ.
ಮಹಿಳೆಯರು ತಮ್ಮನ್ನು ಪೀಠದ ಮೇಲೆ ಕೂರಿಸಬೇಕೆಂದು ಅಥವಾ ಪೂಜಿಸಬೇಕೆಂದು ಬಯಸುವುದಿಲ್ಲ, ನಾವು ಸಮಾನ ಗೌರವವನ್ನು ಬಯಸುತ್ತೇವೆ. ಅಂಗೀಕರಿಸಲ್ಪಟ್ಟ ಮೀಸಲಾತಿ ಮಸೂದೆ ತಕ್ಷಣವೇ ಜಾರಿಗೆ ಬರಬೇಕು, ರಾಜಕೀಯ ಲಾಭಕ್ಕಾಗಿ ವಿನ್ಯಾಸಗೊಳಿಸಲಾದ ಅಧಿಕಾರಶಾಹಿ ವಿಳಂಬಗಳಿಗೆ ಅದು ಬಲಿಯಾಗಬಾರದು.
ಡಿಎಂಕೆ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡುತ್ತಿಲ್ಲ ಎಂಬ ಟೀಕೆಗಳಿವೆಯಲ್ಲ?
ನಾವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 164 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಇದು ನಮ್ಮ ರಾಜಕೀಯ ಪಯಣದ ಒಂದು ಭಾಗವೇ ಹೊರತು ಅಂತಿಮ ಗುರಿಯಲ್ಲ. ಆದರೂ, ನಾವು ಮಹಿಳೆಯರಿಗೆ ಅಡಿಪಾಯ ಹಾಕಿಕೊಟ್ಟಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಮೊದಲು ಜಾರಿಗೆ ತಂದು, ತಳಮಟ್ಟದ ಆಡಳಿತವನ್ನು ಆಮೂಲಾಗ್ರವಾಗಿ ಬದಲಿಸಿದ್ದು ಡಿಎಂಕೆ.
ಸೌಜನ್ಯ : The New Indian Express
ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ




