ಅಂತಿಮವಾಗಿ ನಾವು ಅರಿತುಕೊಳ್ಳಬೇಕಾದ ಸತ್ಯ ಸ್ಪಷ್ಟವಾಗಿದೆ – ಅರಾವಳಿ ಪರ್ವತಗಳ ಸಂರಕ್ಷಣೆ ಒಂದು ಕಾಗದದ ಮೇಲಿನ ರಕ್ಷಣೆ ಅಥವಾ ಫೈಲ್ನಲ್ಲಿರುವ ಅಧಿಸೂಚನೆಯ ವಿಷಯವಲ್ಲ. ಇದು ನಮ್ಮ ಬದುಕಿನ, ನಮ್ಮ ಮುಂದಿನ ಜನಾಂಗದ ಬದುಕಿನ ಮೂಲಭೂತ ಹಕ್ಕುಗಳ ಪ್ರಶ್ನೆ. ಇದು ನಮ್ಮ ಕುಡಿಯುವ ನೀರು, ಉಸಿರಾಡುವ ಗಾಳಿ, ಹವಾಮಾನ ಸಮತೋಲನ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ.
ಭಾರತದ ಸಮಕಾಲೀನ ಪರಿಸರ ಚರ್ಚೆಗಳ ಕೇಂದ್ರಬಿಂದುವಿನಲ್ಲಿ ಇತ್ತೀಚೆಗೆ ಅರಾವಳಿ ಪರ್ವತಶ್ರೇಣಿಗಳ ವಿವಾದ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದು ಕೇವಲ ಭೂಗೋಳಶಾಸ್ತ್ರ ಅಥವಾ ಒಂದು ಪ್ರಾಚೀನ ಪರ್ವತಶ್ರೇಣಿಯ ಉಳಿವು–ನಾಶದ ಪ್ರಶ್ನೆಯಾಗಿಲ್ಲ. ಬದಲಾಗಿ, ಈ ವಿವಾದವು ಅಭಿವೃದ್ಧಿಯ ಮಾದರಿ, ಪರಿಸರ ನಿರ್ವಹಣೆಯ ತತ್ವಗಳು, ಕಾನೂನು ಮತ್ತು ನ್ಯಾಯಾಂಗದ ಪಾತ್ರ, ಸರ್ಕಾರದ ನೀತಿ ಮತ್ತು ಆಡಳಿತದ ದಿಕ್ಕು, ಹಾಗೂ ನಾಗರಿಕ ಸಮಾಜದ ಜಾಗೃತಿ ಮತ್ತು ಹೋರಾಟ – ಈ ಎಲ್ಲ ಅಂಶಗಳನ್ನು ಒಂದೇ ತಂತುವಿನಲ್ಲಿ ಕಟ್ಟಿಬಿಡುವ ಸಂಕೀರ್ಣ ವಿಷಯವಾಗಿದೆ.
ಅರಾವಳಿ ಪರ್ವತಗಳ ಸಂರಕ್ಷಣೆಯ ಹೆಸರಿನಲ್ಲಿ ಹೊರಬರುತ್ತಿರುವ ನಿರ್ಧಾರಗಳು ಮತ್ತು ವ್ಯಾಖ್ಯಾನಗಳು, ವಾಸ್ತವದಲ್ಲಿ ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತಿವೆಯೋ ಅಥವಾ ಅದನ್ನು ಕಾನೂನಾತ್ಮಕವಾಗಿ ದುರ್ಬಲಗೊಳಿಸುತ್ತಿವೆಯೋ ಎಂಬ ಪ್ರಶ್ನೆಯನ್ನು ಇಂದು ದೇಶದಾದ್ಯಂತ ಉಂಟುಮಾಡಿವೆ. ಅಭಿವೃದ್ಧಿ ಮತ್ತು ಗಣಿಗಾರಿಕೆಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ಹಸ್ತಕ್ಷೇಪಕ್ಕೆ ಯಾವ ಮಟ್ಟದ ಮಿತಿ ಇರಬೇಕು? ಪರಿಸರ ವ್ಯವಸ್ಥೆಗಳನ್ನು ಬರಿಯ ಸಂಖ್ಯಾತ್ಮಕ ಮಾನದಂಡಗಳಿಗೆ ಸೀಮಿತಗೊಳಿಸುವುದು ವೈಜ್ಞಾನಿಕವಾಗಿ ಸಮಂಜಸವೇ? ನ್ಯಾಯಾಲಯಗಳು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರದ ನೀತಿಗೆ ಹೇಗೆ ಪ್ರತಿಕ್ರಿಯಿಸಬೇಕು? ಎಂಬಂತಹ ಆಳವಾದ ಪ್ರಶ್ನೆಗಳು ಈ ವಿವಾದದೊಂದಿಗೆ ಸೇರಿಕೊಂಡಿವೆ. ಈ ಪ್ರಶ್ನೆಗಳು ಬರಿಯ ಪರಿಸರ ತಜ್ಞರಿಂದ, ಅಥವಾ ನೀತಿ ರೂಪಕರಿಂದ, ಅಥವಾ ವಿಜ್ಞಾನಿಗಳಿಂದ ಮಾತ್ರವಲ್ಲ. ಬದಲಿಗೆ ನಾಗರೀಕ ಸಮಾಜ, ಯುವ ಜನಾಂಗ, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಹೀಗೆ ಎಲ್ಲೆಡೆಯಿಂದ ಇಂತಹ ಪ್ರಶ್ನೆಗಳು ಮೂಡಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ, ಪರಿಸರಕ್ಕೆ ಹಾನಿಯಾದರೆ ಪ್ರತಿಯೊಂದು ಜೀವಜಾಲದ ಸಮಗ್ರ ಹಾನಿಯಾದಂತೆ. ಹಾಗೆಯೇ ಒಂದೆಡೆ ಪರಿಸರಕ್ಕೆ ಮಾರಕವಾದ ನೀತಿಗಳನ್ನು ತಂದರೆ ಅದರ ಪರಿಣಾಮ ಕೆಲವೊಮ್ಮೆ ಇಡೀ ಮನುಕುಲದ ಮೇಲೆಯೇ ಬೀಳುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ, ಅರಾವಳಿ ವಿವಾದವು ಒಂದು ಪ್ರಾಂತೀಯ, ಒಂದು ರಾಜ್ಯದ ಅಥವಾ ಒಂದು ತಾಂತ್ರಿಕ ವಿಷಯವಲ್ಲದೆ, ಭಾರತ ಒಂದು ರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ಅಭಿವೃದ್ಧಿ ಪಥವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮೂಲಭೂತ ಪ್ರಶ್ನೆ ದೇಶದಾದ್ಯಂತ ಕೇಳಿಬರುತ್ತಿದೆ. ಹಾಗೆಯೇ ಇದು ನಗರೀಕರಣ, ಕೈಗಾರಿಕೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವೇಗದ ನಡುವೆ, ಪರಿಸರ ಸಂರಕ್ಷಣೆ ಮತ್ತು ಮಾನವ ಆರೋಗ್ಯವನ್ನು ಹೇಗೆ ಸಮತೋಲನದಲ್ಲಿಡಬೇಕು ಎಂಬ ರಾಷ್ಟ್ರೀಯ/ಅಂತರರಾಷ್ಟ್ರೀಯ ಚರ್ಚೆಗೆ ದಾರಿ ನೀಡುತ್ತಿದೆ. ಜೊತೆಗೆ, ಜನಪ್ರತಿರೋಧ, ಸಾಮಾಜಿಕ ಮಾಧ್ಯಮ ಚಳವಳಿ, ತಜ್ಞರ ಎಚ್ಚರಿಕೆಗಳು ಮತ್ತು ನ್ಯಾಯಾಂಗದ ಹಸ್ತಕ್ಷೇಪ – ಹೀಗೆ ಎಲ್ಲವೂ ಸೇರಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪರಿಸರದ ವಿಚಾರಗಳು ಹೇಗೆ ಮುಂದಕ್ಕೆ ಬರುತ್ತವೆ ಎಂಬುದನ್ನೂ ಈ ವಿವಾದ ಸ್ಪಷ್ಟವಾಗಿ ತೋರಿಸುತ್ತದೆ.
ಈ ಲೇಖನವು ಈ ವಿಶಾಲ ಹಿನ್ನಲೆಯಲ್ಲಿ ಅರಾವಳಿ ಪರ್ವತಶ್ರೇಣಿಗಳ ಇತಿಹಾಸ ಮತ್ತು ಪರಿಸರ, ಅದರ ವೈಜ್ಞಾನಿಕ ಮಹತ್ವದಿಂದ ಆರಂಭಿಸಿ, 1992ರ (Aravalli Notification under Environment Protection Act) ಅಧಿಸೂಚನೆಗಳು, 2000ರ ದಶಕದ ಸುಪ್ರೀಂ ಕೋರ್ಟ್ ತೀರ್ಪುಗಳು, 2025ರಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ವ್ಯಾಖ್ಯಾನ, ಅದಕ್ಕೆ ನ್ಯಾಯಾಲಯ ನೀಡಿದ ಪ್ರತಿಕ್ರಿಯೆ, ಸರ್ಕಾರದ ಅಧಿಕೃತ ನಿಲುವು ಮತ್ತು ಪರಿಸರ ತಜ್ಞರು ಹಾಗೂ ನಾಗರಿಕ ಸಮಾಜ ವ್ಯಕ್ತಪಡಿಸಿದ ಗಂಭೀರ ಆಕ್ಷೇಪಣೆಗಳನ್ನು ವಿಶ್ಲೇಷಿಸುವ ಒಂದು ಪ್ರಯತ್ನ. ಇದರ ಹಿಂದಿರುವ ಉದ್ದೇಶ ಒಂದೇ – ಅರಾವಳಿ ವಿವಾದವನ್ನು ಒಂದು ಸುದ್ದಿಶೀರ್ಷಿಕೆಯಾಗಿ ಅಲ್ಲ, ಬದಲಾಗಿ ಭಾರತದ ಪರಿಸರ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ತಿರುವು ಎಂಬ ದೃಷ್ಟಿಯಿಂದ ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು.

ಅರಾವಳಿ ಪರ್ವತಶ್ರೇಣಿಗಳು ಬಹಳ ಪ್ರಾಚೀನ ಪರ್ವತ ಶ್ರೇಣಿಗಳು. ವೈಜ್ಞಾನಿಕ ಅಂದಾಜುಗಳ ಪ್ರಕಾರ, ಇವು ಸುಮಾರು 200 ಕೋಟಿ ವರ್ಷಗಳ ಹಿಂದಿನ ಭೂಗರ್ಭ ಚಲನೆಗಳಿಂದ ರೂಪುಗೊಂಡಿವೆ. ಹಾಗೆಯೇ ಇವು ಜಗತ್ತಿನಲ್ಲಿನ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತವೆ. ಗುಜರಾತ್ನಿಂದ ಆರಂಭವಾಗಿ ರಾಜಸ್ಥಾನ, ಹರಿಯಾಣ ಮತ್ತು ದೆಹಲಿವರೆಗೂ ಸುಮಾರು 700 ಕಿಲೋಮೀಟರ್ ಉದ್ದದಲ್ಲಿ ಹರಡಿರುವ ಈ ಶ್ರೇಣಿ, ಭಾರತದ ಉತ್ತರ ಮತ್ತು ಪಶ್ಚಿಮ ಭಾಗದ ಪರಿಸರ, ಹವಾಮಾನ, ಜಲಸಂಪತ್ತು ಮತ್ತು ಜೀವವೈವಿಧ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.
ಈ ಶ್ರೇಣಿಗಳಿಗೆ ಅವುಗಳದ್ದೇ ಆದ ಐತಿಹಾಸಿಕ, ಭೌಗೋಳಿಕ, ಪಾರಿಸರಿಕ, ಮತ್ತು ವೈಜ್ಞಾನಿಕ ಮಹತ್ವ ಇದೆ. ಈ ಪರ್ವತಶ್ರೇಣಿಗಳು ಭಾರತದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ, ಮರುಭೂಮಿಯ ವಿಸ್ತಾರವನ್ನು ತಡೆಯುವ ನೈಸರ್ಗಿಕ ಅಡ್ಡಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ. ಹಾಗೆಯೇ ಮಣ್ಣಿನ ಅತಿಯಾಗಿ ಹರಿದುಹೋಗುವಿಕೆಯನ್ನು ತಡೆದು, ಮಳೆನೀರನ್ನು ಭೂಗರ್ಭಜಲವಾಗಿ ಪುನರ್ಭರ್ತಿ ಮಾಡಲು ಸಹಾಯ ಮಾಡುತ್ತವೆ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತವೆ ಎಂದು ವಿಜ್ಞಾನಿಗಳು ಸೂಚಿಸುತ್ತಾರೆ. ಇದರಿಂದ ಇಲ್ಲಿಗೆ ಸಮೀಪವಿರುವ ಹಲವಾರು ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳು ನೆಲದ ಫಲವತ್ತತೆ, ನೀರಿನ ಮಟ್ಟ, ಮತ್ತು ಪರಿಸರ ಸಮತೋಲನವನ್ನು ಉಳಿಸಿಕೊಂಡಿವೆ.
ಅರಾವಳಿ ಪರ್ವತಗಳು ಪರಿಸರಕ್ಕೆ ನೀಡುವ ಸೇವೆಗಳು ಅನೇಕವಾಗಿವೆ. ಇವು ಥಾರ್ ಮರುಭೂಮಿಯ ವೃದ್ಧಿಯನ್ನು ತಡೆಯಲು ಬಹು ಮುಖ್ಯ ಪದರವಾಗಿ ಕಾರ್ಯನಿರ್ವಹಿಸುತ್ತವೆ. ಹವಾಮಾನ ಶೇಖರಣ ಮತ್ತು ಗಾಳಿಯ ಗುಣಮಟ್ಟದಲ್ಲಿ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ, ವಿಶೇಷವಾಗಿ ದೆಹಲಿ–ಎನ್ಸಿಆರ್ ಪ್ರದೇಶದಲ್ಲಿ ನಡೆಯುತ್ತಿರುವ ತೀವ್ರ ವಾಯುಮಾಲಿನ್ಯ ಸಂದರ್ಭದಲ್ಲಿ ಇದರ ಪಾತ್ರ ಇನ್ನೂ ಹೆಚ್ಚಿನ ಪ್ರಮುಖತೆಯನ್ನು ಪಡೆದಿದೆ. ಬಹುಶ ಈ ಪರ್ವತ ಶ್ರೇಣಿ ಇಲ್ಲದೆ ಇರುತ್ತಿದ್ದರೆ, ಪರಿಸ್ಥಿತಿ ಇನ್ನೂ ಹದಗೆಡುತಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಅರಾವಳಿ ವಲಯದ ಅರಣ್ಯ ಪ್ರದೇಶ ಮಳೆಯ ನೀರನ್ನು ಭೂಗರ್ಭಕ್ಕೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದು ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಸರಾಸರಿ 20 ಲಕ್ಷ ಲೀಟರ್ ಮಳೆನೀರನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಕುಡಿಯುವ ನೀರಿನ ಲಭ್ಯತೆಯ ಮೇಲೆಯೂ ಕೂಡ ಸೂಕ್ಷ್ಮ ಪರಿಣಾಮ ಬೀರುತ್ತದೆ. ಈ ಅರಣ್ಯಗಳು ಮಣ್ಣನ್ನು ಹಿಡಿದುಕೊಂಡು ಭೂಕ್ಷಯವನ್ನು ತಡೆಯುವುದರಲ್ಲಿ ಬಹು ಸಹಾಯಕಾರಿಯಾಗಿವೆ. ಬರಿಯ ಮನುಕುಲಕ್ಕೆ ಮಾತ್ರವಲ್ಲ, ಬದಲಿಗೆ, ಸಕಲ ಜೀವಜಾಲದ ಅಸ್ತಿತ್ವಕ್ಕೂ ಕೂಡ ಈ ಪರ್ವತಶ್ರೇಣಿಗಳು ಮಹತ್ವದ ಕೊಡುಗೆಯನ್ನು ನೀಡಿವೆ. ಈ ಶ್ರೇಣಿಗಳು ನಾಶವಾದರೆ, ನೀರು ಸಂರಕ್ಷಣೆ, ಗಾಳಿ ಗುಣಮಟ್ಟ, ಕೃಷಿ ಉತ್ಪಾದನೆ ಮತ್ತು ಜೀವವೈವಿಧ್ಯಕ್ಕೆ ನೇರ ಧಕ್ಕೆ ಉಂಟಾಗುತ್ತದೆ.
1992ರಲ್ಲಿ ಅಂದಿನ ಒಕ್ಕೂಟ ಸರ್ಕಾರ ಅರಾವಳಿ ಪ್ರದೇಶವನ್ನು “ಪರಿಸರ ಸಂವೇದನಶೀಲ ಪ್ರದೇಶ” ಎಂದು ಘೋಷಿಸಿತ್ತು. ಈ ಅಧಿಸೂಚನೆಯ ಉದ್ದೇಶ- ಈ ಹಸಿರು ಶ್ರೇಣಿಯ ಸಂರಕ್ಷಣೆಗೆ ಕಾನೂನಿನ ಬಲ ನೀಡುವುದರ ಜೊತೆಜೊತೆಗೆ, ಅತಿಯಾದ ಗಣಿಗಾರಿಕೆ, ಅಕ್ರಮ ಗಣಿಗಾರಿಕೆ, ಅಕ್ರಮ ಚಟುವಟಿಕೆಗಳು ಮತ್ತು ಅನಿಯಂತ್ರಿತ ನಿರ್ಮಾಣವನ್ನು ನಿಯಂತ್ರಿಸುವುದಾಗಿತ್ತು. ದುರದೃಷ್ಟವಶಾತ್, ಈ ಅಧಿಸೂಚನೆಯ ಸಮಗ್ರ ಅನುಷ್ಠಾನ ಆಗಲಿಲ್ಲ. ಅದರ ಪರಿಣಾಮವಾಗಿ ಅಧಿಸೂಚನೆ ಜಾರಿಗೆ ಬಂದ ಬಳಿಕವೂ ಅಕ್ರಮ ಗಣಿಗಾರಿಕೆ ಮತ್ತು ಸ್ಥಳೀಯ ಅನಧಿಕೃತ ಚಟುವಟಿಕೆಗಳು ಈ ಪ್ರದೇಶದಲ್ಲಿ ಮುಂದುವರೆಯುತ್ತಲೇ ಹೋದವು. ಹಲವು ಪ್ರಭಾವಿ ರಾಜಕಾರಣಿಗಳು, ಉಳ್ಳವರ ಪ್ರಭಾವದಿಂದಾಗಿ – ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಇದ್ದರೂ ಸಹ, ಅಕ್ರಮ ಗಣಿಗಾರಿಕೆ ಮತ್ತು ಪರಿಸರ ಹಾನಿ ನಿರಂತರವಾಗಿ ನಡೆಯುತ್ತಾ ಹೋಯಿತು.
ಈ ಮಧ್ಯೆ, ಹಲವು ಪರಿಸರವಾದಿಗಳು, ನಾಗರಿಕ ಸಮಾಜ ಕೋರ್ಟಿನ ಮೊರೆ ಹೋಗಿ ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವಂತೆ ಮನವಿ ಸಲ್ಲಿಸಿದ್ದರಿಂದಾಗಿ, 2004, 2009, 2010ರಂತಹ ಮುಖ್ಯ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಈ ಪ್ರದೇಶದಲ್ಲಿ, ಅಕ್ರಮ ಗಣಿಗಾರಿಕೆಗೆ ನಿಷೇಧ ಹೇರಿತ್ತು. ಹಾಗೆಯೇ ಅರಾವಳಿ ಪರ್ವತ ಶ್ರೇಣಿಯ ಪರಿಸರದ ಸಮಗ್ರ ರಕ್ಷಣೆಗೆ ಕಠಿಣ ನಿಯಮಾವಳಿಗಳನ್ನು ಕೂಡ ಜಾರಿ ಮಾಡಿತ್ತು.
ಇಷ್ಟೆಲ್ಲಾ ಅರಿವು, ಎಚ್ಚರಿಕೆ, ಹೋರಾಟ, ಸುಪ್ರೀಂ ಕೋರ್ಟ್ನ ತೀರ್ಪುಗಳು ಹಾಗೂ ಕಾನೂನುಗಳ ನಡುವೆಯೂ ಅರಾವಳಿ ಅರಣ್ಯದ ನಾಶ ನಿಲ್ಲಲಿಲ್ಲ. ಸಂಬಂಧಪಟ್ಟ ಇಲಾಖೆಗಳು ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾದವು. ವರದಿಗಳ ಪ್ರಕಾರ, 2011ರಿಂದ 2017ರವರೆಗೆ ರಾಜಸ್ಥಾನದ ಸುತ್ತಮುತ್ತಲಿರುವ ಅರಾವಳಿ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ 4,072 ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿದ್ದು, ಒಂದು ಕೋಟಿಗಿಂತ ಹೆಚ್ಚು ಟನ್ ಖನಿಜಗಳನ್ನು ಅಕ್ರಮವಾಗಿ ತೆಗೆದುಕೊಳ್ಳಲಾಗಿದೆ. ಇದು ಕೇವಲ ಕಾನೂನಿನ ವೈಫಲ್ಯವಲ್ಲ; ಆಡಳಿತಾತ್ಮಕ ದುರ್ಬಲತೆಯನ್ನೂ ಸೂಚಿಸುತ್ತದೆ. ಅಕ್ರಮ ಗಣಿಗಾರಿಕೆ ದೀರ್ಘಕಾಲದ ಸಮಸ್ಯೆಯಾಗಿದ್ದು, 2025ರ ಏಪ್ರಿಲ್–ಜೂನ್ ಅವಧಿಯಲ್ಲಿ ಹರಿಯಾಣದ ನೂಹ್ ಪ್ರದೇಶದಲ್ಲಿ 31 ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿವೆ; ₹14.3 ಲಕ್ಷದ ದಂಡವನ್ನು ವಸೂಲಾಗಿದ್ದು, 59 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ರಮ ಚಟುವಟಿಕೆಗಳು ಸುಪ್ರೀಂ ಕೋರ್ಟ್ನ ನಿಷೇಧದ ನಡುವೆಯೇ ನಡೆದು ಹೋಗಿವೆ, ಎಂದರೆ – ಇದು ಕಾನೂನು ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇತ್ತೀಚಿಗಿನ ದಿನಗಳಲ್ಲಿ ಈ ಪ್ರಕರಣ ಮತ್ತೆ ಮುಂದೆ ಬರಲು ಕಾರಣ – 2025ರ ಅಕ್ಟೋಬರ್ 13ರಂದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಮಿತಿಯ ಹೊಸ ಶಿಫಾರಸು. ಈ ಶಿಫಾರಸಿನಂತೆ, ಸರ್ಕಾರವು ಅರಾವಳಿ ಪರ್ವತಗಳ ಹೊಸ ವ್ಯಾಖ್ಯಾನವನ್ನು ಪ್ರಕಟಿಸಿತು. ಈ ಹೊಸ ಶಿಫಾರಸಿನ ಪ್ರಕಾರ: “ಅರಾವಳಿ ಪರ್ವತ ಎಂದರೆ ಸ್ಥಳೀಯ ಪ್ರದೇಶಗಳಲ್ಲಿ – ನೆಲದ ಮೇಲೆ 100 ಮೀಟರ್ ಅಥವಾ ಹೆಚ್ಚು ಎತ್ತರ ಹೊಂದಿರುವ ಪ್ರದೇಶ” ಮತ್ತು “ಅರಾವಳಿ ಶ್ರೇಣಿ ಎಂದರೆ 500 ಮೀಟರ್ ಒಳಗೆ ಎರಡು ಅಥವಾ ಹೆಚ್ಚು ಇಂತಹ ಅರಣ್ಯ ಪ್ರದೇಶಗಳ ಸಮೂಹ”, ಎಂಬ ಹೊಸ ವ್ಯಾಖ್ಯಾನವನ್ನು ನೀಡಲಾಗಿದೆ. ಸರ್ಕಾರದ ವಿವರಣೆಯ ಪ್ರಕಾರ, ಈ ವ್ಯಾಖ್ಯಾನವು ಅಕ್ರಮ ಗಣಿಗಾರಿಕೆ, ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು, ಮತ್ತು ಬೇರೆ ಬೇರೆ ರಾಜ್ಯಗಳ ನಡುವೆ ಒಂದೇ ರೀತಿಯ ವ್ಯಾಖ್ಯಾನವನ್ನು ತರಲು, ಅರಾವಳಿ ಅರಣ್ಯ ಪ್ರದೇಶ ನಿರ್ವಹಣೆಗೆ ಸ್ಪಷ್ಟತೆ ನೀಡಲು ಸಹಾಯಮಾಡುತ್ತದೆ ಎನ್ನುವುದು. ಆದರೆ, ತಜ್ಞರು ಮತ್ತು ಪರಿಸರವಾದಿಗಳು ಹೇಳಿರುವಂತೆ, ಈ ವ್ಯಾಖ್ಯಾನವು ಅರಾವಳಿ ಪ್ರದೇಶದ ಸಂರಕ್ಷಣಾ ವ್ಯಾಪ್ತಿಯನ್ನು ಮತ್ತಷ್ಟು ಕಡಿಮೆ ಮಾಡುವ, ಮತ್ತಷ್ಟು ಅಕ್ರಮ ಗಣಿಗಾರಿಕೆಗೆ, ಅಕ್ರಮ ಕಟ್ಟಡಗಳಿಗೆ, ಅನುವು ಮಾಡಿಕೊಟ್ಟು, ಜೀವವೈವಿಧ್ಯಕ್ಕೆ ಸೂಕ್ತವಾದ ಶ್ರೇಣಿಗಳನ್ನು ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸುತ್ತಾರೆ.
ಒಂದಿಷ್ಟು ವರದಿಗಳು ಹೇಳುವಂತೆ, ಹೊಸ ವ್ಯಾಖ್ಯಾನದಡಿಯಲ್ಲಿ, ಫಾರೆಸ್ಟ್ ಸರ್ವೇ ಆಪ್ ಇಂಡಿಯಾ ಈಗಾಗಲೇ ಗುರುತಿಸಿರುವ 12,081 ಅರಣ್ಯ ಪ್ರದೇಶಗಳಲ್ಲಿ, 100 ಮೀಟರ್ ಎಂಬ ವ್ಯಾಖ್ಯಾನದಡಿಯಲ್ಲಿ ಕೇವಲ 1,048 ಕ್ಕೆ ಮಾತ್ರ ಸೀಮಿತವಾಗುತ್ತವೆ. ಉಳಿದ ಭೂಪ್ರದೇಶಗಳು ‘ಅರಾವಳಿ ಅರಣ್ಯ ಪ್ರದೇಶ’ ದಿಂದ ಹೊರಗುಳಿಯುತ್ತವೆ. ಎಂದರೆ, ಈ ಹೊಸ ವ್ಯಾಖ್ಯಾನದ ಪ್ರಕಾರ ಈಗಾಗಲೇ ಇರುವ ಅರಾವಳಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ ಶೇಕಡಾ 8.7% ಮಾತ್ರವೇ ಅರಾವಳಿ ಸಂರಕ್ಷಿತ ಪ್ರದೇಶದ ಪರಿಧಿಯ ಒಳಗೆ ಬರುತ್ತದೆ ಎಂಬ ಅಂದಾಜು ಇದೆ. ಇಂತಹ ಹೊಸ ವ್ಯಾಖ್ಯಾನದ ಕಾರಣದಿಂದಾಗಿ – ಪರಿಸರ ತಜ್ಞರು, ಪರಿಸರವಾದಿಗಳು ಹಾಗೂ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಮತ್ತು ಇದರಿಂದಾಗಿ ಸರಿಸುಮಾರು 90% ಸಂರಕ್ಷಿತ ಅರಾವಳಿ ಪರ್ವತ ಶ್ರೇಣಿಗಳು ಕಾನೂನಾತ್ಮಕ ರಕ್ಷಣೆಯಿಂದ ಕಡಿತಗೊಳ್ಳುತ್ತವೆ. ಈ ಬದಲಾವಣೆಗಳ ಪರಿಣಾಮವಾಗಿ, ಈಗಾಗಲೇ ಗುರುತಿಸಲಾದ ಕೆಲವು ಪ್ರದೇಶಗಳು ಸಂರಕ್ಷಣಾ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆ ಅಷ್ಟೇ ಅಲ್ಲ, ಇದರ ಜೊತೆಜೊತೆಗೆ – ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ದೊರಕಿಸಿಕೊಡುವ ಹುನ್ನಾರ ಎಂಬ ಅಭಿಪ್ರಾಯವೂ ಇದೆ.

ಈ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರದ ನಿಲುವೇನೆಂದರೆ – ಈ ನೂತನ ವ್ಯಾಖ್ಯಾನವು “ಗಣಿಗಾರಿಕೆಗೆ ನೀಡುವ ಪರವಾನಿಗೆ” ನಿಯಂತ್ರಣಕ್ಕೆ ಮಾತ್ರ ಸಂಬಂಧಿಸಿದೆ ಮತ್ತು ಅರಾವಳಿ ಪರಿಸರ ಸಂರಕ್ಷಣಾ ವ್ಯವಸ್ಥೆಗೆ ಇದರಿಂದ ಯಾವುದೇ ರೀತಿಯ ಕುಂದಿಲ್ಲ. ಹಾಗೆಯೇ ಸದ್ಯಕ್ಕೆ ಈ ಪ್ರದೇಶದ ಸಮಗ್ರ ಅಧ್ಯಯನ ಮತ್ತು ವಿಶ್ಲೇಷಣೆ ವಿಶ್ಲೇಷಣೆ ಸಂಪೂರ್ಣಗೊಳ್ಳುವವರೆಗೆ ಹೊಸ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧವನ್ನು ಕೂಡ ಹೇರಲಾಗಿದೆ. ಕೇಂದ್ರ ಪರಿಸರ ಸಚಿವರಾದ ಭೂಪೇಂದ್ರ ಯಾದವ್ ಅವರು ಈ ನಿಟ್ಟಿನಲ್ಲಿ ನೀಡಿರುವ ಹೇಳಿಕೆಯ ಪ್ರಕಾರ ಪ್ರಸ್ತುತ ಒಟ್ಟು 1.44 ಲಕ್ಷ ಚದರ ಕಿಲೋಮೀಟರ್ಗಳ ಅರಾವಳಿ ಪ್ರದೇಶದಲ್ಲಿ ಕೇವಲ 277.89 ಚದರ ಕಿಲೋಮೀಟರ್ (0.19%) ಪ್ರದೇಶವನ್ನು ಮಾತ್ರ ಗಣಿಗಾರಿಕೆಗೆ ತೆರೆಯಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ, ಸರ್ಕಾರದ ಈ ವಿವರಣೆ ಮತ್ತು ಭರವಸೆಗಳ ನಡುವೆಯೂ, ನೆಲಮಟ್ಟದಲ್ಲಿ ಉಂಟಾಗಿರುವ ಆತಂಕಗಳು ಮತ್ತು ಪ್ರತಿಕ್ರಿಯೆಗಳು ಬೇರೆ ಕಥೆಯನ್ನು ಹೇಳುತ್ತಿವೆ.
ಇವೆಲ್ಲವೂ ಸಂಪೂರ್ಣವಾಗಿ ನಿರ್ಧಾರವಾಗಬೇಕಾದ ಈ ಹಿನ್ನೆಲೆಯಲ್ಲಿ – ಭಾರತಕ್ಕೆ ಎಂತಹ ಪರಿಸರ ನೀತಿ ಬೇಕು ಎನ್ನುವುದರತ್ತ ಕೂಡ ಒಂದಿಷ್ಟು ಗಮನ ಹಾಯಿಸಲೇಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಪ್ಯಾರಿಸ್ ಒಪ್ಪಂದದಂತಹ ಒಪ್ಪಂದಗಳು ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯ ಸಮತೋಲನವನ್ನು ಒತ್ತಿಹೇಳುತ್ತವೆ. ಅನೇಕ ದೇಶಗಳು ಪರಿಸರ ಸಂವೇದನಶೀಲ ಪ್ರದೇಶಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ.
ಈ ಜಾಗತಿಕ ಧೋರಣೆಗಳ ಹಿನ್ನೆಲೆಯಲ್ಲೇ, ಭಾರತದಲ್ಲಿಯೂ ಅರಾವಳಿ ಪ್ರದೇಶದ ವ್ಯಾಖ್ಯಾನ ಮತ್ತು ನಿಯಂತ್ರಣದ ಬಗ್ಗೆ ಒಕ್ಕೂಟ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲು ಮುಂದಾಗಿದೆ. ಒಕ್ಕೂಟ ಸರ್ಕಾರದ ಹೇಳಿಕೆಯ ಪ್ರಕಾರ, ಈ ಹೊಸ ವ್ಯಾಖ್ಯಾನ ಅಕ್ರಮ ಗಣಿಗಾರಿಕೆ ನಿಯಂತ್ರಿಸಲು, ಮತ್ತು “ಸುಸ್ಥಿರ ಗಣಿಗಾರಿಕ ನೀತಿಯನ್ನು” ರೂಪಿಸಲು ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಲಾಗುತ್ತಿದೆ. ಈ ಸ್ಪಷ್ಟನೆ ವಾಸ್ತವಕ್ಕೆ ತುಂಬಾ ದೂರವಾಗಿದೆ ಎಂದು ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಹೇಳುತ್ತಿದ್ದಾರೆ. ಕಳೆದ ವರ್ಷ, 2025ರ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜನರು, ಪರಿಸರ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಂಘಟನೆಗಳು #SaveAravalli ಎಂಬ ಘೋಷಣೆಯಡಿ ಪ್ರತಿಭಟನೆ ನಡೆಸಿದವು. ರಾಜಸ್ಥಾನದಲ್ಲಿ ಸಾವಿರಾರು ಮಂದಿ ಹೋರಾಟ ನಡೆಸಿದರು, ಮತ್ತು ಸರ್ಕಾರ ನೀಡಿರುವ ಸೀಮಿತ ವ್ಯಾಖ್ಯಾನದ ವಿರೋಧವಾಗಿ ಮೆರವಣಿಗೆಯನ್ನೂ ನಡೆಸಿದರು. ಈಗ ಇರುವ 100 ಮೀಟರ್ ಎಂಬ ವ್ಯಾಖ್ಯಾನದಡಿಯಲ್ಲಿ, ಸಾವಿರಾರು ಸಂರಕ್ಷಿತ ಪ್ರದೇಶಗಳು ಗಣಿಗಾರಿಕೆಗೆ ತೆರೆದುಕೊಳ್ಳುವುದು. ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಮರಳಿನ ವಿಸ್ತರಣೆ, ವಾಯುಮಾಲಿನ್ಯ ತೀವ್ರವಾಗುವುದು, ನೀರಿನ ಕೊರತೆ ಹೀಗೆ – ಇಡೀ ಉತ್ತರ ಭಾರತದ ಪರಿಸರಕ್ಕೆ ದೊಡ್ಡ ಹೊಡೆತ ಉಂಟಾಗುವುದರಲ್ಲಿ ಸಂಶಯವಿಲ್ಲ.
ಇಂದು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯ ಅರ್ಥ ಮತ್ತು ದಿಕ್ಕು ಬದಲಾಗುತ್ತಿದೆ. ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು (Sustainable Development Goals) ಮತ್ತು ಪ್ಯಾರಿಸ್ ಒಪ್ಪಂದ (Paris Climate Agreement – 2015) ಗಳು ಕೇವಲ ಪರಿಸರ ಸಂರಕ್ಷಣೆಯ ಘೋಷಣೆಗಳಲ್ಲ; ಅವು ಆರ್ಥಿಕತೆ, ಉದ್ಯಮ, ನಗರೀಕರಣ ಮತ್ತು ಸಂಪನ್ಮೂಲ ಬಳಕೆಯ ಪ್ರತಿಯೊಂದು ನಿರ್ಧಾರದಲ್ಲೂ ಪರಿಸರದ ಮಿತಿಗಳನ್ನು ಒಳಗೊಳ್ಳಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತವೆ. ಬಹಳಷ್ಟು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ – ಪರಿಸರ ವ್ಯವಸ್ಥೆ ಆಧಾರಿತ ನೀತಿಗಳು, ಮಾಲಿನ್ಯಕಾರರೇ ಹೊಣೆಗಾರಿಕೆ (polluter pays) ಹೊರುವಂತಹ ನಿಯಮಗಳನ್ನು ಕಾನೂನು ಮಟ್ಟದಲ್ಲಿ ಕಟ್ಟುಮತ್ತಾಗಿ ಜಾರಿಗೆ ತಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸಂಚಿತ ಪರಿಸರ ಪ್ರಭಾವದ ಮೌಲ್ಯಮಾಪನ (cumulative environmental impact assessment) ಕಡ್ಡಾಯವಾಗಿದ್ದು, ಚೀನಾದಲ್ಲಿ ಪರಿಸರ ಲಕ್ಷ್ಮಣ ರೇಖೆ (ecological red lines) ಎಂಬ ತತ್ವದ ಮೂಲಕ ಸಂವೇದನಾಶೀಲ ಪರಿಸರ ವಲಯಗಳಲ್ಲಿ ಯಾವುದೇ ಕೃತಕ ಅಭಿವೃದ್ಧಿಗೆ ನಿರ್ಬಂಧ ಹೇರಲಾಗಿದೆ.
ಆದರೆ ಸದ್ಯಕ್ಕೆ ಭಾರತದ ಪರಿಸ್ಥಿತಿ ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ಗಂಭೀರ ಚಿಂತೆಯ ವಿಷಯ. ಇಲ್ಲಿ ಅನೇಕ ನೀತಿ ನಿರ್ಧಾರಗಳು ಇನ್ನೂ ಅಭಿವೃದ್ಧಿ ಮೊದಲು ಅಥವಾ ವ್ಯಾವಹಾರಿಕ ಸುಲಭತೆ (ease of doing business) ಎಂಬ ಸಂಕುಚಿತ ದೃಷ್ಟಿಕೋನದಿಂದ ರೂಪುಗೊಳ್ಳುತ್ತಿವೆ. ಪರಿಸರಕ್ಕೆ ಸಂಬಂಧಿಸಿದ ನಿಯಮಗಳು ಸಂಖ್ಯಾತ್ಮಕ ಮಾನದಂಡಗಳ (ಉದಾಹರಣೆಗೆ, 25 ಹೆಕ್ಟೇರ್ಗಿಂತ ಕಡಿಮೆ ಪ್ರದೇಶ, ಅಥವಾ ನಿರ್ದಿಷ್ಟ ಟನ್ ಉತ್ಪಾದನೆಯೊಳಗೆ) ಒಳಗೆ ಬಂದರೆ ಪರಿಸರ ಪರಿಣಾಮ ಮೌಲ್ಯಮಾಪನ (EIA) ನಿಂದ ವಿನಾಯಿತಿ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಜಲ ಸಂಪನ್ಮೂಲ, ಗಾಳಿಯ ಗುಣಮಟ್ಟ, ಮಣ್ಣಿನ ಆರೋಗ್ಯ ಮತ್ತು ಜೀವವೈವಿಧ್ಯ ಎಂಬ ಮೂಲಭೂತ ಪರಿಸರ ಸೇವೆಗಳು ನಿಧಾನವಾಗಿ ಆದರೆ ಗಂಭೀರವಾಗಿ ಹಾನಿಗೊಳಗಾಗುತ್ತಿವೆ. ಇದರ ಜೊತೆ ಜೊತೆಗೆ ಅತಿಯಾದ ರಾಜಕೀಯ ಪ್ರಭಾವ, ಭೃಷ್ಟಾಚಾರ ಇರುವ ನಿಯಮಗಳೂ ಕೂಡ ಅನುಷ್ಠಾನವಾಗದಂತೆ ಮಾಡುತ್ತಿದೆ.
ಅರಾವಳಿ ಪರ್ವತಶ್ರೇಣಿಗಳ ವಿಚಾರದಲ್ಲಿ ಕೂಡ ಈ ನೀತಿ ವೈರುಧ್ಯ ಇನ್ನೂ ಸ್ಪಷ್ಟವಾಗಿ ಕಾಣಿಸುತ್ತದೆ. ಜಾಗತಿಕ ಮಟ್ಟದಲ್ಲಿ ಇಂತಹ ಪ್ರಾಚೀನ ಹಾಗೂ ಪರಿಸರಾತ್ಮಕವಾಗಿ ಸಂವೇದನಾಶೀಲ ಪರ್ವತ ಶ್ರೇಣಿಗಳನ್ನು no-go zones ಆಗಿ ಘೋಷಿಸುವ ಸಂದರ್ಭದಲ್ಲಿ, ಭಾರತದಲ್ಲಿ ಮಾತ್ರ ವ್ಯಾಖ್ಯಾನ ಬದಲಾವಣೆ, ವರ್ಗೀಕರಣ ತಿದ್ದುಪಡಿ ಮತ್ತು ಕಾನೂನು ಬಿರುಕುಗಳ ಮೂಲಕ ಗಣಿಗಾರಿಕೆ ಹಾಗೂ ನಿರ್ಮಾಣ ಚಟುವಟಿಕೆಗಳಿಗೆ ದಾರಿ ತೆರೆಯಲಾಗುತ್ತಿದೆ. ಇದು ಸುಸ್ಥಿರ ಅಭಿವೃದ್ಧಿಯ ಮೂಲ ತತ್ವಕ್ಕೆ ವಿರುದ್ಧವಾಗಿದ್ದು, ಮುಂದಿನ ಪೀಳಿಗೆಗಳ ಪರಿಸರ ಹಕ್ಕುಗಳನ್ನು ತ್ಯಾಗ ಮಾಡುವ ನೀತಿ ದಿಕ್ಕಿನ ಸೂಚಕವಾಗಿದೆ.
ಅಂತಿಮವಾಗಿ ನಾವು ಅರಿತುಕೊಳ್ಳಬೇಕಾದ ಸತ್ಯ ಸ್ಪಷ್ಟವಾಗಿದೆ – ಅರಾವಳಿ ಪರ್ವತಗಳ ಸಂರಕ್ಷಣೆ ಒಂದು ಕಾಗದದ ಮೇಲಿನ ರಕ್ಷಣೆ ಅಥವಾ ಫೈಲ್ನಲ್ಲಿರುವ ಅಧಿಸೂಚನೆಯ ವಿಷಯವಲ್ಲ. ಇದು ನಮ್ಮ ಬದುಕಿನ, ನಮ್ಮ ಮುಂದಿನ ಜನಾಂಗದ ಬದುಕಿನ ಮೂಲಭೂತ ಹಕ್ಕುಗಳ ಪ್ರಶ್ನೆ. ಇದು ನಮ್ಮ ಕುಡಿಯುವ ನೀರು, ಉಸಿರಾಡುವ ಗಾಳಿ, ಹವಾಮಾನ ಸಮತೋಲನ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಅರಾವಳಿಯ ನಾಶವು ಕೇವಲ ಒಂದು ಭೌಗೋಳಿಕ ಪ್ರದೇಶದ ಸಮಸ್ಯೆಯಲ್ಲ; ಅದು ಉತ್ತರ ಭಾರತದ ಮರುಭೂಮೀಕರಣ, ನೀರಿನ ಕೊರತೆ, ಉಷ್ಣತೆಯ ಏರಿಕೆ ಮತ್ತು ನಗರಗಳ ಅಪಾಯಕಾರಿ ವಾಯುಮಾಲಿನ್ಯಕ್ಕೆ ನೇರ ಕಾರಣವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ನೀತಿ ರೂಪಿಸುವವರು ವೈಜ್ಞಾನಿಕ ಪುರಾವೆ, ಸ್ಥಳೀಯ ಜನರ ಧ್ವನಿ, ಸುಸ್ಥಿರ ಅಭಿವೃದ್ಧಿಯ ತತ್ವಗಳು, ಮತ್ತು ಕಾನೂನು ಹೊಣೆಗಾರಿಕೆಗಳನ್ನು ನಮ್ಮ ದೇಶದ ಪರಿಸರ ನೀತಿಯ ಕೇಂದ್ರಬಿಂದುವನ್ನಾಗಿಸಬೇಕು. ಕೇವಲ ಸಂಖ್ಯಾತ್ಮಕ ಮಾನದಂಡಗಳನ್ನು ಆಧರಿಸಿ ಪರಿಸರದ ಸಂವೇದನಾಶೀಲತೆಯನ್ನು ನಿರ್ಧರಿಸುವುದು ವೈಜ್ಞಾನಿಕವಾಗಿಯೂ , ವೈಚಾರಿಕವಾಗಿಯೂ ಮತ್ತು ನೈತಿಕವಾಗಿಯೂ ತಪ್ಪು. ಒಂದು ಪರಿಸರ ವ್ಯವಸ್ಥೆ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ, ಅದು ಕಾನೂನು ಮಿತಿಯನ್ನು ಮೀರಿತ್ತೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಅಪ್ರಸ್ತುತವಾಗುತ್ತದೆ. ಇಲ್ಲಿ ಪ್ರಶ್ನೆ ಒಂದೇ – ನಾವು ಬಯಸುತ್ತಿರುವ ಅಭಿವೃದ್ಧಿಗೆ ಯಾವ ಬೆಳೆಯನ್ನು ತೆರುತ್ತಿದ್ದೇವೆ?
ಇದರಿಂದ ಮುಂದಿನ ಹಾದಿ ಸ್ಪಷ್ಟವಾಗಬೇಕು. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಎದುರು ಎದುರಾಗಿ ನಿಲ್ಲಿಸುವ ಮನೋಭಾವವನ್ನು ತ್ಯಜಿಸಿ, ಎರಡರ ನಡುವೆ ಸಮತೋಲನ ಸಾಧಿಸುವ ಧೋರಣೆಯೇ ಸರಿಯಾದ ದಾರಿ ಎಂದು ಇತಿಹಾಸ, ಪ್ರಸ್ತುತ ಹವಾಮಾನ ಬದಲಾವಣೆಯ ಕುರುಹುಗಳು ಹೇಳುತ್ತಿವೆ. ಅರಾವಳಿ ವಿವಾದ ನಮಗೆ ಕಲಿಸುವ ಪಾಠ ಏನೆಂದರೆ ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ಮುಂದಿನ ಜನಾಂಗದಿಂದ ನಮಗೆ ಬಂದಿರುವ ಬಳುವಳಿಕೆ. ಅವುಗಳ ನಾಶವು ಭವಿಷ್ಯದ ನಾಶ. ಅದನ್ನು ತಡೆಯುವ ಸಂಪೂರ್ಣ ಹೊಣೆಗಾರಿಕೆ ಇಂದು ನಮ್ಮ ಮೇಲಿದೆ. ನಾಗರಿಕರಾಗಿ, ನೀತಿ ನಿರ್ಧಾರಕರಾಗಿ ಮತ್ತು ಮುಂದಿನ ಪೀಳಿಗೆಗಳ ಪಾಲಕರಾಗಿ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸರಿಯಾದ ಸಮತೋಲನದ ಹಾದಿಯನ್ನು ಹುಡುಕುವ ಜವಾಬ್ದಾರಿ ನಮ್ಮದು.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.



