ಕಾಂಚ ಐಲಯ್ಯ ಮತ್ತು ಹಿಂದುಳಿದವರ ಆತ್ಮಾವಲೋಕನ

Date:

Advertisements
ಭಾರತದಲ್ಲಿ ದಲಿತ ಬಹುಜನ ದೃಷ್ಟಿಕೋನದ ಸುತ್ತ ಹೊಸ ರಾಜಕೀಯ ಮತ್ತು ಸಾಮಾಜಿಕ ಸಂಕಥನಕ್ಕೆ ಕಾರಣರಾದ; ದಲಿತ ಮತ್ತು ಹಿಂದುಳಿದ ವರ್ಗಗಳ ಅಗ್ರಗಣ್ಯ ಹೋರಾಟಗಾರರಾದ; ರಾಷ್ಟ್ರೀಯ ಮಟ್ಟದ ಬುದ್ಧಿಜೀವಿಗಳಲ್ಲಿ ಒಬ್ಬರಾದ ಪ್ರೊ. ಕಾಂಚ ಐಲಯ್ಯನವರ ಜನ್ಮದಿನ ಅ.5. ಈಗ ರಾಜಕಾರಣ, ಸಂಘಟನೆಯಿಂದ ದೂರ ಸರಿದು ಬರವಣಿಗೆಗಷ್ಟೇ ಸೀಮಿತರಾಗಿ, ವಿಶ್ರಾಂತ ಬದುಕಿನಲ್ಲಿರುವ ಐಲಯ್ಯನವರು, ಹಿಂದೊಮ್ಮೆ ಬೆಂಗಳೂರಿನ ಸಭೆಯಲ್ಲಿ ಆಡಿದ ಮಾತುಗಳು ಇವತ್ತಿಗೂ ಮುಖ್ಯ ಅನ್ನಿಸಿದ್ದರಿಂದ...

‘ರಾಮ ಕಿಲ್ಡ್ ರಾವಣ’, ‘ಕೃಷ್ಣ ಸ್ಟೀಲ್ಸ್ ಬಟರ್’ ಈ ರಾಮ, ಕೃಷ್ಣ ಯಾರು, ದೇವರು. ಅವರೇನು ಮಾಡ್ತಿದಾರೆ, ಒಬ್ಬರು ಕೊಲ್ತಿದಾರೆ, ಮತ್ತೊಬ್ಬರು ಕದೀತಿದಾರೆ. ಕೊಲ್ಲೋದು, ಕದಿಯೋದು ದೇವರ ಕೆಲಸವೆ? ಇವರು ನಮ್ಮ ದೇವರುಗಳೆ? ಇದನ್ನು ನಾವು ನಮ್ಮ ಮಕ್ಕಳಿಗೆ ಹೇಳಿಕೊಡಬೇಕೆ?

-ಹೀಗೆ ಹೇಳಿದವರು ಪ್ರೊಫೆಸರ್ ಕಾಂಚ ಐಲಯ್ಯ. 71ರ ಪ್ರಾಯದ ಐಲಯ್ಯನವರು ಸದ್ಯಕ್ಕೆ ಅಧ್ಯಾಪನ ವೃತ್ತಿಯಿಂದ ನಿವೃತ್ತರಾಗಿ, ರಾಜಕಾರಣ ಹಾಗೂ ಸಂಘಟನೆಗಳಿಂದ ದೂರವಾಗಿ, ತಮಗೆ ಇಷ್ಟ ಬಂದದ್ದನ್ನು ಬರೆದುಕೊಂಡು ವಿಶ್ರಾಂತ ಬದುಕಿನಲ್ಲಿದ್ದಾರೆ. ಇವರು ಒಂದು ಕಾಲದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಆಂದೋಲನವನ್ನು ಮುನ್ನಡೆಸುತ್ತಿದ್ದ ಅಗ್ರಗಣ್ಯ ಹೋರಾಟಗಾರ ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು. ಭಾರತದಲ್ಲಿ ದಲಿತ ಬಹುಜನ ದೃಷ್ಟಿಕೋನದ ಸುತ್ತ ಹೊಸ ರಾಜಕೀಯ ಮತ್ತು ಸಾಮಾಜಿಕ ಸಂಕಥನವೊಂದು ಉದಯವಾಗಲು ಕಾರಣಕರ್ತರಾಗಿದ್ದರು. ಇಂತಹ ಪ್ರಖರ ಚಿಂತನೆಗಳ ಪ್ರೊ. ಕಾಂಚ ಐಲಯ್ಯನವರು, ಹಿಂದೊಮ್ಮೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಡ್ಡರ್ಸೆ ರಘುರಾಮಶೆಟ್ಟರ ಪ್ರತಿಷ್ಠಾನ, ತನ್ನ ಮೊಟ್ಟ ಮೊದಲ ಕಾರ್ಯಕ್ರಮವಾಗಿ ”ಹಿಂದುಳಿದ ವರ್ಗಗಳು ಸಾಮಾಜಿಕ ಕ್ರಾಂತಿಗೆ ಸಿದ್ಧವಾಗಿವೆಯೆ? ಮತ್ತು ಹಿಂದುಳಿದ ವರ್ಗಗಳು: ಸಮಕಾಲೀನ ಪ್ರಶ್ನೆಗಳು, ಪರ್ಯಾಯಗಳು” ಎಂಬ ವಿಷಯವನ್ನಿಟ್ಟುಕೊಂಡು ಸಂವಾದಗೋಷ್ಠಿಯನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂವಾದಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಐಲಯ್ಯನವರು, ಮಾತಿನುದ್ದಕ್ಕೂ ಬ್ರಾಹ್ಮಣ್ಯವನ್ನು, ಪುರೋಹಿತಶಾಹಿ ವ್ಯವಸ್ಥೆಯನ್ನು ತಮ್ಮದೇ ಆದ ತರ್ಕಬದ್ಧ ಚಿಂತನೆಗಳ ಮೂಲಕ ಬಿಚ್ಚಿಡುತ್ತಾ ಹೋದರು. ಅವರ ಭಾಷಣದ ಬೆಂಕಿ ಕಿಡಿಗಳಿವು…

Advertisements

ಶಂಕರಾಚಾರ್ಯರಿಂದ ಹಿಡಿದು ಇಲ್ಲಿಯವರೆಗೆ ಈ ದೇಶದ ಬಹುಸಂಸ್ಕೃತಿ ಮತ್ತು ಬಹುಆಹಾರ ಪದ್ಧತಿಯ ಮೇಲೆ ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಇತ್ತೀಚೆಗೆ ನಾವು ಹೈದರಾಬಾದಿನ ಉಸ್ಮಾನಿಯಾ ಯೂನಿವರ್ಸಿಟಿಯಲ್ಲಿ ಗೋಮಾಂಸ ಮೇಳ ಆಯೋಜಿಸಿದ್ದವು. ಇದಕ್ಕೆ ಎಲ್ಲಾ ವರ್ಗದ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ನನಗೆ ಆಶ್ಚರ್ಯವಾಗಿದ್ದು, ಸಮೂಹಮಾಧ್ಯಮಗಳು ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸದೆ ಪುರೋಹಿತರ ವಕ್ತಾರರಂತಾಡಿದ್ದು. ಇನ್ನೊಬ್ಬರು ಟಿವಿ ಸ್ಟುಡಿಯೋದಲ್ಲಿ ಕೂತು, ಕಾಂಚಾ ಐಲಯ್ಯನವರು ಸುಮ್ಮನೆ ಸಮಸ್ಯೆ ಕ್ರಿಯೇಟ್ ಮಾಡ್ತಿದಾರೆ ಅಂದರು. ಅರೆ, ಗೋಮಾಂಸ ತಿನ್ನುವುದು ಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಕ್ಕು. ನೀವು ಗಣೇಶನ ಹಬ್ಬವನ್ನು ಆಚರಿಸುವುದಿಲ್ಲವೇ ಹಾಗೆಯೇ ನಾವು ಗೋಮಾಂಸದ ಹಬ್ಬವನ್ನು ಆಚರಿಸುತ್ತೇವೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ.

”ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 70ಕ್ಕೆ ಏರಿಸಬೇಕೆಂದು ಒಂದು ಕಮಿಟಿ ತೀರ್ಮಾನಿಸಿತ್ತು. ಆ ಕಮಿಟಿಯಲ್ಲಿ ನಾನೂ ಇದ್ದೆ. ನಿಮ್ಮ ವೀರಪ್ಪ ಮೊಯ್ಲಿಯವರು ಅದಕ್ಕೆ ಹೆಡ್ಡು. ಟ್ಯಾಲೆಂಟಿನ ಕೊರತೆಯಿದೆ, ಹಾಗಾಗಿ ಇರುವ ಟ್ಯಾಲೆಂಟುಳ್ಳ ನೌಕರರ ನಿವೃತ್ತಿ ಮಿತಿಯನ್ನು 70ಕ್ಕೆ ಏರಿಸುವುದು ಸೂಕ್ತ ಎಂದು ಅಲ್ಲಿ ಬಹುಸಂಖ್ಯೆಯಲ್ಲಿದ್ದ ಬ್ರಾಹ್ಮಣರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಅದನ್ನು ಶಾಸನವನ್ನಾಗಿ ಮಾಡಲು ಒತ್ತಡ ಹಾಕುತ್ತಿದ್ದರು. ಅದಕ್ಕೆ ಮೊಯ್ಲಿಯವರು ಮರುಮಾತಾಡದೆ ಒಪ್ಪುವ ಸ್ಥಿತಿಯಲ್ಲೂ ಇದ್ದರು. ಆಗ ನಾನು, ಸ್ವಾಮಿ ನಿಮ್ಮ ಪ್ರಕಾರ ನೀವು ಟ್ಯಾಲೆಂಟುಳ್ಳ ನೌಕರರು, ಈಗ ನೀವು ಸತ್ತರೆ ಟ್ಯಾಲೆಂಟ್ ಸತ್ತುಹೋಗಿಬಿಡುತ್ತ, ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡಬೇಕು. ಟ್ಯಾಲೆಂಟ್ ಯಾವುದು? ಕರಕುಶಲಕರ್ಮಿಗಳು, ಇವರೆಲ್ಲ ಹಿಂದುಳಿದ ವರ್ಗದ ಜನರು. ಇವರು ನಿಜವಾದ ಸೋಲಿಷಲ್ ಎಂಜಿನಿಯರ್‌ಗಳು. ಆದರೆ ಇಂದು ಇವರನ್ನೆಲ್ಲ ತಮ್ಮ ಕುಲಕಸುಬುಗಳಿಂದ ವಂಚಿಸಲಾಗುತ್ತಿದೆ. ಈ ವರ್ಗದ ಬುದ್ಧಿವಂತಿಕೆಯನ್ನು ಐಐಟಿ, ಐಐಎಂನಲ್ಲಿ ಬಳಸಿಕೊಳ್ಳಲು, ಅಲ್ಲಿ ಮೀಸಲಾತಿ ನೀಡಿ ಪ್ರೋತ್ಸಾಹಿಸಲು ಬ್ರಾಹ್ಮಣಶಾಹಿ ವ್ಯವಸ್ಥೆ ವಿರೋಧ ವ್ಯಕ್ತಪಡಿಸುತ್ತಿದೆ.

ಇದನ್ನು ಓದಿದ್ದೀರಾ?: ಅಂಚಿಗೆ ಸರಿದ ಗಾಂಧಿ ; ಕ್ಷಯಪೀಡಿತ ಗ್ರಾಮ ಭಾರತ : ಕೆ ಪಿ ಸುರೇಶ್ ಬರೆಹ

”ಸರಸ್ವತಿಯನ್ನು ವಿದ್ಯಾದೇವತೆ ಎಂದು ಪೂಜಿಸಲಾಗುತ್ತದೆ. ಸರಸ್ವತಿ ಎಷ್ಟು ಪುಸ್ತಕ ಬರೆದಿದ್ದಾರೆಂದು ನಾನು ಲೈಬ್ರರಿಯನ್ನೆಲ್ಲ ಹುಡುಕಾಡಿದೆ, ಒಂದೂ ಸಿಗಲಿಲ್ಲ. ಈಕೆಯನ್ನು ವಿದ್ಯಾದೇವತೆ ಎಂದು ನಂಬಿಸಲಾಗಿದೆ, ಪೂಜಿಸುವಂತೆ ಪ್ರೇರೇಪಿಸಲಾಗುತ್ತಿದೆ. ಹಿಂದುಳಿದ ವರ್ಗದ ಬಹುಸಂಖ್ಯಾತರ ಬೌದ್ಧಿಕ ತಿಳಿವಳಿಕೆ, ವೈಚಾರಿಕ ಶಕ್ತಿಯ ಕೊರತೆಯೇ ಇದಕ್ಕೆಲ್ಲ ಕಾರಣ. ಯಾಕೆಂದರೆ, ಈ ದೇಶದಲ್ಲಿ ತುಳಿತಕ್ಕೊಳಗಾದವರಿಗೆ ಮೊದಲ ಬಾರಿಗೆ ವಿದ್ಯೆಯನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ಬಯಸಿದವರು, ಶ್ರಮಿಸಿದವರು ಸಾವಿತ್ರಿ ಬಾಯಿ ಫುಲೆ. ಇವರನ್ನು ವಿದ್ಯಾದೇವತೆಯನ್ನಾಗಿ ಪೂಜಿಸದೆ ಸರಸ್ವತಿಯನ್ನು ಪೂಜಿಸುವುದು ಈ ದೇಶದ ದುರಂತ. ನನಗೆ, ನನ್ನ ಎಂಟನೇ ವರ್ಷದಲ್ಲಿರುವಾಗಲೇ ನನ್ನಜ್ಜಿ ಮತ್ತು ನನ್ನಮ್ಮ ಸರಸ್ವತಿ ಎಂದರೆ ದುಷ್ಟದೇವತೆ ಎಂದು ಹೇಳಿಕೊಟ್ಟಿದ್ದರು. ಅದಕ್ಕೆ ಅವರದೇ ಆದ ಮಾಸಮ್ಮನನ್ನು ನನಗೆ ಪರಿಚಯಿಸಿದ್ದರು.

”ಇನ್ನು ಸಂಪನ್ಮೂಲ… ಈ ದೇಶದ ಸಂಪನ್ಮೂಲ ಸೃಷ್ಟಿಯಲ್ಲಿ ಹಿಂದುಳಿದ ವರ್ಗದ ಜನರ ಶ್ರಮ ಅಪಾರವಾದುದು. ಆದರೆ ಆ ಸಂಪತ್ತು ಇಂದು ಬ್ರಾಹ್ಮಣರು ಮತ್ತು ಬನಿಯಾಗಳ ಕೈಯಲ್ಲಿದೆ. ಈ ಬನಿಯಾಗಳಿದ್ದಾರಲ್ಲ, ಇವರು ಸೋಷಿಯಲ್ ಸ್ಮಗ್ಲರ್‌ಗಳು. ಸಾವಿರಾರು ವರ್ಷಗಳಿಂದ ಹಿಂದುಳಿದ ವರ್ಗಗಳು ಸೃಷ್ಟಿಸಿದ ಸಂಪತ್ತನ್ನು ಇವತ್ತು ಈ ಬನಿಯಾಗಳು ತಿಂದು ತೇಗುತ್ತಿದ್ದಾರೆ. ಇವರು ಮಾರುಕಟ್ಟೆಯನ್ನು ಹಿಡಿತದಲ್ಲಿಟ್ಟುಕೊಂಡು ದೇವಸ್ಥಾನ, ಮಠಗಳನ್ನು ಬ್ಲಾಕ್ ಮನಿಯನ್ನು ಸಂಗ್ರಹಿಸಿಡಲು ಬಳಸಿಕೊಳ್ಳುತ್ತಿದ್ದಾರೆ. ಈಗ, ಸಂಪನ್ಮೂಲ ಸೃಷ್ಟಿಸಿದ ಹಿಂದುಳಿದ ವರ್ಗಗಳನ್ನೇ ನಾಶ ಮಾಡಲು ಹೊರಟಿದ್ದಾರೆ.

”ಶ್ರೇಣೀಕೃತ ಹಿಂದೂ ಧರ್ಮದಲ್ಲಿ ಶೂದ್ರ ಸಮುದಾಯವನ್ನು ಪ್ರತಿನಿಧಿಸುವ ಹಿಂದುಳಿದ ವರ್ಗದ ಜನ ಇಂದೂ ಕೂಡ ಬ್ರಾಹ್ಮಣರ ಕಾಲಕೆಳಗೇ ಇದ್ದಾರೆ. ಕೋಲ್ಕತ್ತಾದ ದುರ್ಗಾ ದೇವಿಯ ಕಾಲ ಕೆಳಗಿರುವವರು ಯಾರು? ಜನರ ಬಗ್ಗೆ ಕರುಣೆಯೇ ಇಲ್ಲದೆ ಹಾಗೆ ತುಳಿಯುವವಳನ್ನು ದೇವಿ ಎಂದು ಪೂಜಿಸಬೇಕೆ? ಹಿಂದೆ ನಮ್ಮನ್ನು ಬ್ರಿಟಿಷರು, ಮುಸ್ಲಿಮರು, ದೊರೆಗಳು, ಚಕ್ರವರ್ತಿಗಳು ಆಳುತ್ತಿದ್ದರು. ಅದೇ ರೀತಿ ಇಂದು ನಮ್ಮನ್ನು ಮೇಲ್ವರ್ಗದ ಜನ ಆಳುತ್ತಿದ್ದಾರೆ. ನಿಮಗಿದು ಗೊತ್ತಾ… ಮೇಲ್ಜಾತಿಯ ಜನ ಈ ನೆಲದವರಲ್ಲ. ನಾನು ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಅವರು ಶವಸಂಸ್ಕಾರ ಮಾಡುವಾಗ ಹೆಣವನ್ನು ಹೂಳುವುದಿಲ್ಲ, ಸುಡುತ್ತಾರೆ. ಅಂದರೆ ಅವರು ಬಂದಲ್ಲಿಗೇ ಹೋಗಬೇಕೆಂದು. ಅವರು ನಂಬುವುದು ಗಾಳಿಯನ್ನು, ನಾವು ನಂಬುವುದು ಈ ಭೂಮಿಯನ್ನು. 1910ರಲ್ಲಿ ಬ್ರಿಟಿಷರು ನಡೆಸಿದ ಜನಗಣತಿಯಲ್ಲಿ ದಲಿತರನ್ನು ಹೊರಗಿಟ್ಟು, ಹಿಂದುಳಿದ ವರ್ಗದ ಜನರನ್ನು ಹಿಂದೂ ಧರ್ಮದ ಭಾಗವನ್ನಾಗಿ ಸೇರಿಸಿಕೊಂಡಿದ್ದರು. ಆದರೆ ಇಂದಿಗೂ ಹಿಂದೂ ಧರ್ಮದಲ್ಲಿ ಹಿಂದುಳಿದ ವರ್ಗದ ಜನರಿಗೆ ಸಾವಿನ ನಂತರದ ಸಂಸ್ಕಾರದಲ್ಲೂ ಸಮಾನತೆ ಸಿಕ್ಕಿಲ್ಲ.

”ದೇವಸ್ಥಾನಗಳಲ್ಲಿ ಶ್ಲೋಕವನ್ನು ಸಂಸ್ಕೃತದಲ್ಲಿಯೇ ಯಾಕೆ ಹೇಳಬೇಕು? ದೇವಸ್ಥಾನಕ್ಕೆ ಹೋಗುವ ಜನ ಯಾರು? ಹಿಂದುಳಿದ ವರ್ಗಗಳ ಬಹುಸಂಖ್ಯಾತರು. ಇವರು ಯಾಕೆ ನಮಗೆ ಗೊತ್ತಿರುವ ಭಾಷೆಯಲ್ಲಿ ಪೂಜೆ ಪುನಸ್ಕಾರ ಮಾಡಿ ಎಂದು ಕೇಳುವುದಿಲ್ಲ? ನನ್ನ ಕೆಲವರು ಪ್ರಾಬ್ಲಂ ಕ್ರಿಯೇಟ್ ಮಾಡುವ ವ್ಯಕ್ತಿ ಅಂತಾರೆ. ನಾನು ತಿರುಪತಿ ದೇವಸ್ಥಾನದಲ್ಲಿ ಪೂಜೆ ಮಾಡುವ 8 ಸಾವಿರ ಪುರೋಹಿತರಲ್ಲಿ ಮೀಸಲಾತಿಯನ್ನು ಜಾರಿಗೆ ತನ್ನಿ ಎನ್ನುತ್ತೇನೆ. ಈ ಪೂಜೆ ಮಾಡುವ ಪುರೋಹಿತರ ತಿಂಗಳ ಸಂಬಳ ಎಷ್ಟು ಗೊತ್ತಾ? ಐದು ಸಾವಿರದಿಂದ ಹಿಡಿದು ಒಂದೂವರೆ ಲಕ್ಷದವರೆಗೂ ಇದೆ. ದೇವಸ್ಥಾನಗಳ ಪುರೋಹಿತರ ಅಪಾಯಿಂಟ್‌ಮೆಂಟ್‌ಗಳಲ್ಲಿ ಯಾಕೆ ಮೀಸಲಾತಿ ಕ್ರಮವನ್ನು ಅನುಸರಿಸಬಾರದು? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ.

”ಬುದ್ಧನ ನೀತಿಬೋಧೆಯನ್ನು ತಿಳಿಯದ; ಜ್ಯೋತಿಬಾ ಫುಲೆ, ಪೆರಿಯಾರ್, ನಾರಾಯಣಗುರುಗಳಂತಹ ಸಂತರ ನಡೆ-ನುಡಿಯನ್ನು ಅರಿಯದ; ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಸರಿಯಾಗಿ ಓದಿಕೊಳ್ಳದ ಹಿಂದುಳಿದ ವರ್ಗಗಳು ಇಂದು ಅನಾಥಪ್ರಜ್ಞೆಯನ್ನು ಅನುಭವಿಸುತ್ತಿವೆ. ಈ ವರ್ಗಗಳಿಂದ ಬಂದು ಅಧಿಕಾರ ಹಿಡಿದ ನಾಯಕರು, ಬಂದಷ್ಟೇ ಬೇಗ ಭ್ರಷ್ಟರಾಗಿ ಜೈಲು ಪಾಲಾಗುತ್ತಿದ್ದಾರೆ. ಹಿಂದುಳಿದ ವರ್ಗದ ಜನ ತಮ್ಮದೇ ಆದ ಒಂದು ಸಾಮಾಜಿಕ ಮತ್ತು ಸೈದ್ಧಾಂತಿಕ ಚೌಕಟ್ಟಿಗೆ ಒಳಪಡದೆ ಹೋದರೆ ಸಾಮಾಜಿಕ ಕ್ರಾಂತಿ ಎನ್ನುವುದು ಅಸಾಧ್ಯ” ಎಂದರು.

ಪ್ರೊ. ಕಾಂಚ ಐಲಯ್ಯನವರ ಬೆಂಕಿಯಂಥ ಭಾಷಣವನ್ನು ಕೇಳಿದ ಕನ್ನಡ ಮನಸ್ಸುಗಳು ಆ ತಕ್ಷಣವೇ ಕೆಲವೊಂದು ವಿಚಾರಗಳನ್ನು ಕುರಿತು ಅಪಸ್ವರ ಎತ್ತಿದವು. ಕೆಲವರು ಲೋಹಿಯಾ ಬಗೆಗಿನ ನಿಲುವು ಸರಿ ಇಲ್ಲ ಎಂದರೆ, ಮತ್ತೊಬ್ಬರು ಕೇವಲ ಧರ್ಮವನ್ನೇಕೆ ತೆಗಳುತ್ತೀರಿ ಜೀವನಧರ್ಮವನ್ನು ಅರಿಯುವ ಕಡೆ ಗಮನ ಹರಿಸಿ ಎಂದರು. ಐಲಯ್ಯನವರು, ‘ಇದೂ ಮುಖ್ಯ, ಪ್ರಶ್ನಿಸುವ ಮನಸ್ಸುಗಳಿರಬೇಕು, ಸಂವಾದಿಸುವ ವಾತಾವರಣವಿರಬೇಕು’ ಎಂದು ಅವರಿಗೆ ವಿನಯದಿಂದಲೇ ಉತ್ತರಿಸಿದರು.

ಒಟ್ಟಾರೆ ಹಿಂದುಳಿದ ವರ್ಗಗಳ ಏಳಿಗೆಗಾಗಿ ಜೀವನಪರ್ಯಂತ ಶ್ರಮಿಸಿದ ವಡ್ಡರ್ಸೆ ರಘುರಾಮಶೆಟ್ಟರ ನೆನಪಿನಲ್ಲಿ ಒಂದಷ್ಟು ಚರ್ಚೆ, ಸಂವಾದಗಳ ಮೂಲಕ ಚಿಂತನೆಯನ್ನು ಹಂಚಿಕೊಂಡಿದ್ದು; ಹಿಂದುಳಿದ ವರ್ಗಗಳು ಗಮನ ಹರಿಸಬೇಕಾದಂತಹ ಪರ್ಯಾಯ ಮಾರ್ಗಗಳತ್ತ ನೋಟ ಹರಿಸಿದ್ದು ಚಿಂತನೆಗೆ ಯೋಗ್ಯವಾಗಿತ್ತು. ಒಳಿತು ಬಯಸುವ ಮನಸುಗಳಿಗೆ ಸಣ್ಣ ಸಮಾಧಾನ ತಂದಿತ್ತು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X