ಕೆಎಸ್‌ಆರ್‌ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಗೃಹ ಇಲಾಖೆ ಮೂಲಕ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸದನಕ್ಕೆ ಭರವಸೆ ನೀಡಿದರು.
16ನೇ ವಿಧಾನಸಭೆಯ ನಾಲ್ಕನೇ ದಿನದ ಕಲಾಪದಲ್ಲಿ ಇಡೀ ದಿನದ ಚರ್ಚೆ ಬಹುತೇಕವಾಗಿ ಸಾರಿಗೆ ಇಲಾಖೆ ನೌಕರನ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಮೀಸಲಾಯಿತು.
ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿಗೂ ಇಂದಿನ ಸದನ ಸಾಕ್ಷಿಯಾಯಿತು. ಎರಡು ಬಾರಿ ಸಭಾಧ್ಯಕ್ಷರು ಈ ವಿಚಾರದಲ್ಲಿ ಸದನ ಮುಂದೂಡಿದ್ದು ನಡೆಯಿತು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಾರಿಗೆ ಇಲಾಖೆ ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿರುವ ಪ್ರಕರಣ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಬೇಕು ಅಷ್ಟೇ ನಮ್ಮದು ಆಗ್ರಹ ಎಂದು ಸದನದ ಮುಂದೆ ಬೇಡಿಕೆ ಇಟ್ಟರು.
ಗೃಹ ಸಚಿವರು ಪ್ರತಿಕ್ರಿಯಿಸಿ, “ಸಾರಿಗೆ ಇಲಾಖೆ ಸೇರಿದಂತೆ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಸದನಕ್ಕೆ ಭರವಸೆ ನೀಡಿದರು.
ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹ
ಮಂಡ್ಯ ಜಿಲ್ಲೆಯ ನಾಗಮಂಗಲ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಚಾಲಕ ಕಂ ನಿರ್ವಾಹಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಆರಂಭಿಸಿದ್ದರು. ಗದ್ದಲ ಹೆಚ್ಚಾಗಿದ್ದರಿಂದ ಸದನದ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದ್ದರು.